ಚಿಕ್ಕಮಗಳೂರು

ರೇಖಾ ಹುಲಿಯಪ್ಪಗೌಡ ರಾಜಿನಾಮೆ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜ.4
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅವರು ತಮ್ಮ ಸ್ಥಾನಕ್ಕೆ ಶನಿವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಕಾರ್ಯದರ್ಶಿಯವರಿಗೆ ತಮ್ಮ ರಾಜಿನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ಪಕ್ಷದಲ್ಲಿನ ಆಂತರಿಕ ಒಪ್ಪಂದದ ಮೇರೆಗೆ ಮುಂದಿನ ಅವಧಿಯನ್ನು ಪದ್ಮ ಚಂದ್ರಪ್ಪ ಅವರಿಗೆ ಬಿಟ್ಟುಕೊಡುವ ಉದ್ದೇಶದಿಂದ ರೇಖಾ ಹುಲಿಯಪ್ಪಗೌಡ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಆಗಸ್ಟ್‌ನಲ್ಲೇ ಮುಕ್ತಾಯ:  ಜಿಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಪ್ರತಿ 20 ತಿಂಗಳಿಗೊಮ್ಮೆ ಮೀಸಲಾತಿಯನ್ನು ಜಾರಿಗೆ ತರಲಾಗುತ್ತಿದೆ. ಅದರಂತೆ ಚಿಕ್ಕಮಗಳೂರು ಜಿಪಂ ಅಧ್ಯಕ್ಷ ಸ್ಥಾನಕ್ಕೆ 15 ತಿಂಗಳ ಹಿಂದೆ ಬಿಸಿಎಂ(ಎ) ಮಹಿಳೆಗೆ ಅವಕಾಶ ನೀಡಲಾಗಿತ್ತು. ಅದರಂತೆ ಅಧ್ಯಕ್ಷ ಸ್ಥಾನಕ್ಕೆ ರೇಖಾ ಹುಲಿಯಪ್ಪಗೌಡ ಹಾಗೂ ಪದ್ಮ ಚಂದ್ರಪ್ಪ ಅವರ ನಡುವೆ ಪೈಪೋಟಿ ನಡೆದಾಗ ತಲಾ 10 ತಿಂಗಳು ಅಧ್ಯಕ್ಷರನ್ನಾಗಲು ಅವಕಾಶ ನೀಡಲಾಯಿತು.
ಅದರಲ್ಲಿ ಪ್ರಥಮದಲ್ಲಿ ರೇಖಾ ಹುಲಿಯಪ್ಪಗೌಡ ಅವರಿಗೆ ಅವಕಾಶ ಸಿಕ್ಕಿತ್ತು. ಅವರ ಅಧಿಕಾರದ ಅವಧಿ ಪಕ್ಷದಲ್ಲಿನ ಆಂತರಿಕ ಒಪ್ಪಂದದ ಪ್ರಕಾರ ಕಳೆದ ಆಗಸ್ಟ್‌ನಲ್ಲಿ ಮುಕ್ತಾಯಗೊಂಡಿತ್ತು. ಆಗ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಪಕ್ಷದ ಜಿಲ್ಲಾ ಕೋರ್ ಕಮಿಟಿಯಲ್ಲಿ ರೇಖಾ ಹುಲಿಯಪ್ಪಗೌಡ ಅವರಿಗೆ ಸೂಚನೆ ನೀಡಲಾಗಿತ್ತು.
ಈ ವಿಚಾರದಲ್ಲಿ ಆತುರದಲ್ಲಿ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ ರೇಖಾ ಅವರನ್ನು ಇನ್ನಷ್ಟು ದಿನ ಮುಂದುವರಿಸಬೇಕೆಂದು ಬಿಜೆಪಿಯ ಜಿಪಂ ಸದಸ್ಯರು ಪಕ್ಷದ ಮುಖಂಡರನ್ನು ಆಗ್ರಹಿಸಿದ್ದರು. ಇದರ ನಡುವೆ ಪದ್ಮ ಚಂದ್ರಪ್ಪ ಅವರು ತಮಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕೆಂದು ಒತ್ತಾಯಿಸಿದ್ದರು. ಹೀಗೆ ರೇಖಾ ಅವರ ಅವಧಿ ಮುಗಿದರೂ ಕೂಡ ಅವರು ಇನ್ನು 5 ತಿಂಗಳವರೆಗೆ ಅಧ್ಯಕ್ಷರಾಗಿ ಮುಂದುವರೆದರು. ಮತ್ತೆ ಮುಂದುವರಿದರೆ ಪಕ್ಷದ ಶಿಸ್ತಿಗೆ ವಿರುದ್ಧವಾಗಿ ನಡೆದುಕೊಂಡಂತಾಗುತ್ತದೆ ಎಂಬ ಉದ್ದೇಶದಿಂದ ಅವರು ಶನಿವಾರದಂದು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಐದೇ ತಿಂಗಳು ಬಾಕಿ:  ಜಿಪಂ ಅಧ್ಯಕ್ಷರ 2ನೇ ಅವಧಿಯ 20 ತಿಂಗಳಲ್ಲಿ ಈಗಾಗಲೇ ರೇಖಾ ಹುಲಿಯಪ್ಪಗೌಡ ಅವರು 15 ತಿಂಗಳು ಅಧ್ಯಕ್ಷರಾಗಿದ್ದರು. ಇನ್ನುಳಿದ 5 ತಿಂಗಳಿಗೆ ಪದ್ಮ ಚಂದ್ರಪ್ಪ ಅವರು ಅಧ್ಯಕ್ಷರಾಗಲಿದ್ದಾರೆ.
ಆದರೆ, ರೇಖಾ ಹುಲಿಯಪ್ಪಗೌಡ ಅವರು ರಾಜಿನಾಮೆ ನೀಡಿದ ತಕ್ಷಣವೇ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವುದಿಲ್ಲ. ಕಾರಣ, ಅಧ್ಯಕ್ಷರು ರಾಜಿನಾಮೆ ನೀಡಿದ ಬಳಿಕ 15 ದಿನಗಳವರೆಗೆ ಕಾಲಾವಕಾಶ ಇರುತ್ತದೆ. 15 ದಿನಗಳ ಕಳೆದ ನಂತರವಷ್ಟೇ ನೂತನ ಅಧ್ಯಕ್ಷರ ಚುನಾವಣೆ ನಡೆಯಲಿದೆ. ಹೀಗೆ ಅಧ್ಯಕ್ಷರ ಚುನಾವಣೆಯ ಪ್ರಕ್ರಿಯೆಯಲ್ಲಿಯೇ ಒಂದು ತಿಂಗಳು ಕಳೆದು ಹೋಗಲಿದೆ. ಅಂದರೆ ಮುಂದಿನ ಅಧ್ಯಕ್ಷರಿಗೆ ಸಿಗುವುದು ಕೇವಲ 4 ತಿಂಗಳು ಮಾತ್ರ.
ಈ ಅತ್ಯಂತ ಕಡಿಮೆ ಅವಧಿಯಲ್ಲಿ ನೂತನ ಅಧ್ಯಕ್ಷರಿಗೆ ಇಲಾಖೆವಾರು ಮಾಹಿತಿ ತಿಳಿದುಕೊಳ್ಳುವುದರಲ್ಲೇ ಕಾಲ ಕಳೆದು ಹೋಗಲಿದೆ. ಇಷ್ಟರ ನಡುವೆ ಲೋಕಸಭಾ ಚುನಾವಣೆಯ ಅಧಿಸೂಚನೆ ಪ್ರಕಟಗೊಂಡರೆ ಮತ್ತೊಂದು ತಿಂಗಳು ಕಳೆದು ಹೋಗಲಿದೆ. ಹೀಗೆ ಮುಂದಿನ 5 ತಿಂಗಳಲ್ಲಿ ಜಿ.ಪಂ. ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುವುದಿಲ್ಲ.
ರೇಖಾ ಹುಲಿಯಪ್ಪಗೌಡ ಅವರು 5 ತಿಂಗಳು ತಡವಾಗಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಮುಂದಿನ ಅವಧಿಗೆ ಪದ್ಮ ಚಂದ್ರಪ್ಪ ಅಧ್ಯಕ್ಷರಾಗುತ್ತಾರೆ. ಆದರೆ, ಜಿಪಂ ಆಡಳಿತವನ್ನು ಹತೋಟಿಯಲ್ಲಿಡಲು ಹೊಸ ಅಧ್ಯಕ್ಷರಿಗೆ ಸಮಯ ಸಾಕಾಗುತ್ತದೆಯೇ ಎಂಬುದು ಇಲ್ಲಿರುವ ಪ್ರಶ್ನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.