ಚಿಕ್ಕಮಗಳೂರು

ರೈತರಿಗೆ ಬೇಡಿಕೆಗನುಗುಣವಾಗಿ ಸಸಿ ವಿತರಿಸಿ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜ. 9
ಪ್ರೋತ್ಸಾಹ ಸ್ವರೂಪದಲ್ಲಿ ರೈತರಿಗೆ ನೀಡುತ್ತಿರುವ ಸಸಿ ವಿತರಣೆ ಅವರ ಬೇಡಿಕೆಗೆ ಅನುಗುಣವಾಗಿರಬೇಕು ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ವನ್ಯಜೀವಿ ವಿಭಾಗದ ಕಚೇರಿಯಲ್ಲಿ ನಡೆದ ಅರಣ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿ, ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ ರೈತರಿಗೆ ಸಸಿ ವಿತರಿಸಲಾಗುತ್ತಿದ್ದು, ರೈತರ ಹಾಗೂ ಸಾರ್ವಜನಿಕ ಬೇಡಿಕೆಗೆ ಪೂರಕವಾಗಿ ಸಸಿಗಳನ್ನು ಬೆಳೆಸಿ ನೀಡಬೇಕು ಎಂದರು.
ಪ್ರಸಕ್ತ ಸಾಲಿನ ರೈತರ ನೋಂದಣಿ ಕಾರ್ಯವು ಪ್ರಗತಿಯಲ್ಲಿದೆ. ಇದು, ಶೀಘ್ರದಲ್ಲಿ  ಪೂರ್ಣಗೊಳಿಸಬೇಕು. ಈ ಯೋಜನೆಯ ಬಗ್ಗೆ  ರೈತರಲ್ಲಿ ಜಾಗೃತಿ ಮೂಡಿಸಿ ಸಸಿ ನೆಡಲು ಪ್ರೇರೇಪಿಸಬೇಕು. ಕಳೆದ ಸಾಲಿನಲ್ಲಿ ವಿತರಿಸಿದ ಸಸಿಗಳಿಗೆ ಪ್ರಸ್ತುತ ವರ್ಷದ ಪ್ರೋತ್ಸಾಹಧನ ನೀಡಲು ಬದುಕುಳಿದ ಸಸಿಗಳ ಸರ್ವೆ ಕಾರ್ಯ ತ್ವರಿತಗೊಳಿಸಬೇಕೆಂದರು.
ಚಿಕ್ಕಮಗಳೂರು ವೃತ್ತದ ವ್ಯಾಪ್ತಿಯಲ್ಲಿ ಮಾನವ- ಕಾಡು ಪ್ರಾಣಿಗಳ ಸಂಘರ್ಷಗಳಿದ್ದು, ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಅರಣ್ಯ ಸಂರಕ್ಷಣೆಗೆ ಅವಶ್ಯವಿರುವ ವಾಹನಗಳ ಮತ್ತು ಸಶಸ್ತ್ರ ಪೂರೈಕೆಗೆ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಗ್ರಾಮ ಅರಣ್ಯ ಸಮಿತಿ ರಚನೆ ಮಾಡಬೇಕು ಎಂದು ತಿಳಿಸಿದರು.
ಫಾರೆಸ್ಟ್ ಕಾಲೇಜ್: ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ, ಕುದುರೆಮುಖ ಅದಿರು ಕಂಪನಿ ಸ್ಥಗಿತದಿಂದಾಗಿ ಅಲ್ಲಿನ ಪಟ್ಟಣ ಪ್ರದೇಶ ಖಾಲಿಯಿದ್ದು, ಈ ಜಾಗದಲ್ಲಿ ಇಕೋ ಟ್ಯೂರಿಜಂ ಅಥವಾ ಫಾರೆಸ್ಟ್ ಕಾಲೇಜ್ ಸ್ಥಾಪನೆ ಮಾಡುವುದು ಸೂಕ್ತ ಎಂದರು.
ವಿಧಾನ ಪರಿಷತ್ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ ಮಾತನಾಡಿ, ಅರಣ್ಯ ಕಾಯ್ದೆಯಿಂದ ಸಾರ್ವಜನಿಕ ಉದ್ದೇಶದ ಕಾಮಗಾರಿ ಕೈಗೊಳ್ಳಲು ತೊಂದರೆಯಾಗುತ್ತಿದೆ ಎಂದರು.
ಅರಣ್ಯ ಕಾರ್ಯಪಡೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೂಗುರು, ವನ್ಯಜೀವಿ ಸಂರಕ್ಷಣಾ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿನಯ್ ಲೂತ್ರ, ಚಿಕ್ಕಮಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಾದವ್ ಹಾಗೂ ಮತ್ತಿತರ ಅರಣ್ಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.