ಚಿಕ್ಕಮಗಳೂರು

ಕುಡಿವ ನೀರಿನ ಕಾಲುವೆಗೆ ಅಡ್ಡಿ: ಮಾರಾಮಾರಿ

Published On :

ಚಿಕ್ಕಮಗಳೂರು: ಕರಗಡ ಕುಡಿಯುವ ನೀರಿನ ಯೋಜನೆಯಡಿ ಕಾಲುವೆ ನಿರ್ಮಿಸಲು ಅಡ್ಡಿಪಡಿಸಿರುವ ಬೇಲೂರು ತಾಲೂಕಿನ ಮಾಳೇನಹಳ್ಳಿ ಗ್ರಾಮಸ್ಥರ ಮೇಲೆ ಚಿಕ್ಕಮಗಳೂರು ತಾಲೂಕಿನ ಕಳಸಾಪುರ, ಬೆಳವಾಡಿ, ಕಡೂರು ತಾಲೂಕಿನ ದೇವನೂರು ಗ್ರಾಮಸ್ಥರು ಶುಕ್ರವಾರ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ತೀವ್ರ ಗಾಯಗೊಂಡವರನ್ನು ಬೇಲೂರಿನ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ. ಮಾಳೇನಹಳ್ಳಿ ಹಾಗೂ ಬೆಳವಾಡಿ, ದೇವನೂರು, ಕಳಾಸಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರ ನಡುವೆ ಘರ್ಷಣೆ ಸಂಭವಿಸುವ ವೇಳೆ ಸ್ಥಳದಲ್ಲಿ ಬೇಲೂರು ಠಾಣೆ ಪೊಲೀಸರು ಇದ್ದರು. ಎರಡೂ ಗುಂಪಿನ ಜನರನ್ನು ಮನವೊಲಿಸುವ ಕೆಲಸ ಮಾಡಿದರು. ಆದರೆ, ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪೊಲೀಸರು ಜನರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು.

ಎಂಇಎಸ್‌ಗೆ ಮುಖಭಂಗ
ಬೆಳಗಾವಿ: ಬೆಳಗಾವಿ ತಾಲೂಕು ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್-ಬಿಜೆಪಿ ಪಾಲಾಗಿದ್ದು, ಮಹಾರಾಷ್ಟ್ರ ಏಕೀಕರಣ ಸಮಿತಿಗೆ ತೀವ್ರ ಮುಖಭಂಗವಾಗಿದೆ. ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಮಲ್ಲವ್ವ ಯಲ್ಲಪ್ಪ ಬುಡ್ರಿ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ಯಲ್ಲಪ್ಪ ಮಲ್ಲಪ್ಪ ಗಾವಡೆ ಚುನಾಯಿತರಾಗಿದ್ದಾರೆ. ತಾಪಂ ಸಭಾಭವನದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.

ಖೋಟಾ ನೋಟು: 3 ಬಂಧನ
ಬಿಜಾಪುರ: ಬಿಜಾಪುರದಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಿಜಾಪುರ ತಾಲೂಕಿನ ಸೋಮದೇವರ ಹಟ್ಟಿ ಗ್ರಾಮದ ಸೋಮನಾಥ ಕೆಂಚಪ್ಪ ಬೆಂಡಲಿ ಉರ್ಫ್ ಕೊಟ್ಟಲಗಿ, ಹನಮಂತರಾಯ ರಾಯಗೊಂಡಪ್ಪ ಬಾಗಲಕೋಟ ಹಾಗೂ ಮಕಣಾಪುರ ತಾಂಡಾದ ಪ್ರಕಾಶ ಭೀಮು ಜಾಧವ ಬಂಧಿತರು. ಇವರಿಂದ 100 ಮುಖಬೆಲೆಯ 33 ಖೋಟಾ ನೋಟು ವಶಪಡಿಸಿಕೊಂಡು, 39,800 ಅಸಲಿ ನೋಟನ್ನು ಜಪ್ತಿ ಮಾಡಲಾಗಿದೆ.

ಗೋಡೆ ಕುಸಿದು ಮಹಿಳೆ ಸಾವು
ಮುಂಡರಗಿ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಭಾರಿ ಮಳೆ ಸುರಿದಿದ್ದು, ಮನೆ ಗೋಡೆ ಕುಸಿದು ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗ್ರಾಮದ ಪಾರ್ವತಮ್ಮ ವೀರಭದ್ರಯ್ಯ ಮಂಡಲಗೇರಿ ಹಿರೇಮಠ (82) ಮೃತ ಮಹಿಳೆ. ಸಂಜೆ 4.30ರಿಂದ 5 ಗಂಟೆವರೆಗೆ ಜೋರಾಗಿ ಮಳೆ ಸುರಿದಿದೆ. ಈ ವೇಳೆ ಪಾರ್ವತಮ್ಮ ಚಹಾ ಕುಡಿದು ಮನೆ ಕಟ್ಟೆಯ ಮೇಲೆ ಕುಳಿತಿದ್ದರು.

ರಕ್ಷಣೆಗಾಗಿ ಗುಂಡು; ಆನೆ ಸಾವು
ಎಚ್.ಡಿ. ಕೋಟೆ: ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅಂತರಸಂತೆ ವನ್ಯಜೀವಿ ವಲಯದಲ್ಲಿ ಅರಣ್ಯ ಸಿಬ್ಬಂದಿ ಸ್ವ ರಕ್ಷಣೆಗಾಗಿ ಆನೆ ಮೇಲೆ ಗುಂಡು ಹಾರಿಸಿದ ಘಟನೆ ಗುರುವಾರ ರಾತ್ರಿ ನಡೆದಿದ್ದು, ಆನೆ ಮೃತಪಟ್ಟಿದೆ. ಅರಣ್ಯ ರಕ್ಷಕ ವಿನಯ್ ಹಾರಿಸಿದ ಗುಂಡು ಆನೆ ಹಣೆಗೆ ತಗುಲಿದ್ದರಿಂದ ಮತ್ತು ಅತೀ ಸನಿಹದಿಂದ ಗುಂಡು ಹಾರಿಸಿದ್ದರಿಂದ 10 ವರ್ಷದ ಗಂಡಾನೆ ಸ್ಥಳದಲ್ಲೇ ಸಾವಿಗೀಡಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.