ಚಿಕ್ಕಮಗಳೂರು

ಇನಾಂ ಭೂಮಿ ಒತ್ತುವರಿ ತೆರವು ಮಾನವೀಯತೆ ಇಲ್ಲದ ಇಲಾಖೆ

Published On :

ಚಿಕ್ಕಮಗಳೂರು: ಸರ್ಕಾರ ಒಂದೇ, ಇಲಾಖೆಗಳು ಬೇರೆ ಬೇರೆ. ಒಂದು ಇಲಾಖೆಯಲ್ಲಿ ಮಾನವೀಯ ಗುಣ ಹೊಂದಿರುವವರು ಇದ್ದರೆ, ಮತ್ತೊಂದು ಇಲಾಖೆಯಲ್ಲಿ ಮಾನವೀಯತೆ ಇಲ್ಲದವರು ಇದ್ದಾರೆ.
ಸಾಗರದಲ್ಲಿ ಯಾವುದಾದರೂ ದೋಣಿ ಮುಳುಗುತ್ತಿರುವುದು ಕಂಡು ಬಂದರೆ, ಅಲ್ಲಿದ್ದವರನ್ನು ರಕ್ಷಿಸುವುದು ಮಾನವೀಯತೆ ಗುಣ. ಆದರೆ, ಆ ದೋಣಿ ಮುಳುಗಿದರೂ ಪರವಾಗಿಲ್ಲ, ತಾವು ಬದುಕಿದರೆ ಸಾಕೆನ್ನುವವರು ನಮ್ಮಗಳ ನಡುವೆಯೇ ಇದ್ದಾರೆ.
- ಇದು, ಕಳಸದ ಇನಾಂ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಕಂದಾಯ ಮತ್ತು ಅರಣ್ಯ ಇಲಾಖೆಗಳ ನಡುವೆ ಇರುವ ಪರಸ್ಪರ ತದ್ವಿರುದ್ಧದ ಗುಣಗಳು.
ಕಳಸೇಶ್ವರ ಇನಾಂ ಭೂಮಿಯಲ್ಲಿ 624 ಕುಟುಂಬಗಳು 6772 ಎಕರೆ ಮೀಸಲು ಅರಣ್ಯ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ. ಅವರನ್ನು ಖುಲ್ಲಾಗೊಳಿಸಬೇಕೆಂದು ಹೈಕೋರ್ಟ್ 2012ರ ಏಪ್ರಿಲ್ 20 ರಂದು ಅರಣ್ಯ ಇಲಾಖೆಗೆ ಸೂಚನೆ ನೀಡಿತ್ತು. ಅದರಂತೆ ಈಗಾಗಲೇ 30 ಎಕರೆ ಮೇಲ್ಪಟ್ಟ ಒತ್ತುವರಿದಾರರನ್ನು ಅರಣ್ಯ ಇಲಾಖೆ ಖುಲ್ಲಾಗೊಳಿಸಿದೆ.
ಇನ್ನುಳಿದವರನ್ನು ಖುಲ್ಲಾಗೊಳಿಸಲು ಈಗಾಗಲೇ ಸಿದ್ದತೆ ಮಾಡಿಕೊಂಡಿದೆ. ಈ ಪ್ರದೇಶದಲ್ಲಿ ವಾಸವಾಗಿರುವ 2000 ಜನರನ್ನು ಖುಲ್ಲಾಗೊಳಿಸಿದ್ದೆಯಾದರೆ ಆಂತರಿಕವಾಗಿ ಕಾನೂನು ಸುವ್ಯವಸ್ಥೆ ಹದಗೆಡಲಿದೆ.ಇಷ್ಟೇ ಅಲ್ಲ  ದಶಕಗಳಿಂದ ವಾಸವಾಗಿರುವವರು ತಮ್ಮ ಭವಿಷ್ಯ ಕಳೆದುಕೊಳ್ಳಲಿದ್ದಾರೆ. ಇದರಿಂದಾಗಿ ಇಲ್ಲಿನ ಜನರು ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ.
ಪರ್ಯಾಯ: ಇಲ್ಲಿನ ಜನರನ್ನು ದಿಢೀರನೆ ತೆರವುಗೊಳಿಸಿದರೆ ತುಂಬಾ ತೊಂದರೆಯಾಗಲಿದೆ. ಅವರಿಗೆ ಪರ್ಯಾಯ ವ್ಯವಸ್ಥೆ ಹಾಗೂ ವಿಶೇಷ ಪ್ಯಾಕೇಜ್ ನೀಡಲು ಕಾಲಾವಕಾಶ ಬೇಕು. ಒತ್ತುವರಿ ತೆರವಿಗೆ ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ಅಡ್ವೋಕೇಟ್ ಜನರಲ್ ಹೈಕೋರ್ಟ್‌ಗೆ ಮನವರಿಕೆ ಮಾಡಿದ್ದಾರೆ.
ಇಲ್ಲಿನ ಜನರಿಗೆ ವಿಶೇಷ ಪ್ಯಾಕೇಜ್ ನೀಡಲು ಸುಮಾರು ರು. 417 ಕೋಟಿ ಬೇಕಾಗಿದ್ದು, ಈ ಪ್ಯಾಕೇಜ್ ನೀಡಲು ಈಗಾಗಲೇ ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆಯನ್ನು ಸಹ ನಡೆಸಿದೆ.
ಇಲ್ಲಿನ ನಿವಾಸಿಗರಿಗೆ ಪ್ಯಾಕೇಜ್ ನೀಡಿ ತೆರವುಗೊಳಿಸಿದರೆ ಭಾಗಶ: ಈ ಪ್ರದೇಶದ ಜನರು ಒಪ್ಪಿಕೊಳ್ಳಲಿದ್ದಾರೆ ಎಂಬ ಉದ್ದೇಶದಿಂದ ಸರ್ಕಾರ ಪ್ಯಾಕೇಜ್ ಸಿದ್ಧಪಡಿಸಿದೆ. ಇದರ ಜತೆಗೆ ಕುದುರೆಮುಖ ಅದಿರು ಕಂಪನಿಗೆ ನೀಡಿದ್ದ ಕಂದಾಯ ಭೂಮಿಯನ್ನು ಸರ್ಕಾರ ವಶಕ್ಕೆ ತೆಗೆದುಕೊಂಡಿದೆ.
ಇನಾಂ ಭೂಮಿಯಲ್ಲಿರುವ ಜನರನ್ನು ಒಕ್ಕಲೆಬ್ಬಿಸದೆ, ಇಲ್ಲಿನ 6772 ಎಕರೆಗೆ ಪರ್ಯಾಯವಾಗಿ ಕುದುರೆಮುಖದಲ್ಲಿರುವ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲು ಸರ್ಕಾರ ಉದ್ದೇಶಿಸಿದೆ. ಹೀಗೆ ಕಂದಾಯ ಇಲಾಖೆ ಇಲ್ಲಿನ ಜನರನ್ನು ಮಾನವೀಯತೆ ದೃಷ್ಟಿಯಿಂದ ನೋಡಿಕೊಳ್ಳುತ್ತಿದೆ.
ಅರಣ್ಯ ಇಲಾಖೆ: ಕುದುರೆಮುಖ ಮೀಸಲು ಅರಣ್ಯದೊಳಗಿರುವ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿ, ಇನಾಂ ಭೂಮಿಯಲ್ಲಿರುವ ಜನರನ್ನು ಅಲ್ಲೆ ಉಳಿಸಿಕೊಳ್ಳುವ ಸಂಬಂಧ ಕಂದಾಯ ಇಲಾಖೆ ನೀಡಿರುವ ವರದಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯಿಂದ ಸರ್ಕಾರ ಅಭಿಪ್ರಾಯ ಕೇಳಿತ್ತು. ಕಂದಾಯ ಇಲಾಖೆಯ ಕಡತ ಸಂಖ್ಯೆ ಕಂಇ 159 ಆರ್.ಇ. 2013 (ಭಾಗ-3) ಕಡತದ ಕಂಡಿಕೆ 195ರಲ್ಲಿ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಭಿಪ್ರಾಯ ಸರ್ಕಾರಕ್ಕೆ ನೀಡಿದ್ದಾರೆ.
2012ರ ಏಪ್ರಿಲ್ 20 ರಂದು ಹೈಕೋರ್ಟ್ ಇನಾಂ ಭೂಮಿಯಲ್ಲಿರುವವರನ್ನು ತೆರವುಗೊಳಿಸಲು ಸೂಚನೆ ನೀಡಿದೆ. ಇಲ್ಲಿನ ಜನರಿಗೆ ಪುನರ್ವಸತಿ ಪ್ಯಾಕೇಜ್ ನೀಡುವುದು ಕಂದಾಯ ಇಲಾಖೆಗೆ ಸಂಬಂಧಪಟ್ಟ ವಿಷಯ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗಿರುವ ಕಂದಾಯ ಭೂಮಿ, ಹೊಸದಾಗಿ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡುವ ಅಗತ್ಯವಿಲ್ಲ. ಕಾರಣ, ಈ ಭೂಮಿ ಉದ್ಯಾನವನದೊಳಗೆ ಇರುವುದರಿಂದ ಅದು ಅರಣ್ಯ ಇಲಾಖೆಗೆ ಸೇರಿದ್ದಾಗಿದೆ. ಆದುದರಿಂದ ಕುದುರೆಮುಖದಲ್ಲಿರುವ ಕಂದಾಯ ಭೂಮಿಯನ್ನು ಹಸ್ತಾಂತರ ಮಾಡಲು ನ್ಯಾಯಾಲಯ ಒಪ್ಪುವುದಿಲ್ಲ. ಕಳಸೇಶ್ವರ ಇನಾಂ ಭೂಮಿಯಲ್ಲಿರುವ ಜನರಿಗೆ ಪುನರ್ವ್‌ಸತಿ ಕಲ್ಪಿಸುವ ಬಗ್ಗೆ ಪ್ರತ್ಯೇಕವಾದ ತೀರ್ಮಾನ ತೆಗೆದುಕೊಳ್ಳಬೇಕು.
2014ರ ಜನವರಿ 19 ರಂದು ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅಡ್ವೋಕೇಟ್ ಜನರಲ್ ಅವರಿಗೆ ಈ ವಿಷಯ ಗಮನಕ್ಕೆ ತರಲಾಗಿದೆ. ಹಾಲಿ ಇನಾಂ ಭೂಮಿಯಲ್ಲಿರುವ ಜನರನ್ನು ಅಲ್ಲೇ ಉಳಿಸಿ, ಅಷ್ಟೇ ಪ್ರಮಾಣದ ಭೂಮಿಯನ್ನು ಕುದುರೆಮುಖದಲ್ಲಿ ನೀಡುವ ಪ್ರಸ್ತಾಪ ಸೂಕ್ತವಲ್ಲ. ಆದುದರಿಂದ ಅಲ್ಲಿನ ಜನರಿಗೆ ಪ್ರತ್ಯೇಕ ಪುನರ್ವಸತಿ ಪ್ಯಾಕೇಜ್ ನೀಡಲು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಬೇಕೆಂದು ವರದಿಯಲ್ಲಿ ತಿಳಿಸಿದ್ದಾರೆ.
ಇನಾಂ ಭೂಮಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ತನ್ನ ನಿಲುವು ಸ್ಪಷ್ಟಪಡಿಸಿದ್ದು, ಆ ಮೂಲಕ ಬೇರೆ ಭೂಮಿ ಹಸ್ತಾಂತರ ಪ್ರಸ್ತಾಪಕ್ಕೆ ಎಳ್ಳು ನೀರು ಬಿಟ್ಟಂತಾಗಿದೆ. ಅದ್ದರಿಂದ ಸರ್ಕಾರದ ಮುಂದೆ ಇಲ್ಲಿನ ಜನರಿಗೆ ಪನರ್ವಸತಿ ಪ್ಯಾಕೇಜ್ ನೀಡುವುದು ಬಿಟ್ಟರೆ ಬೇರೆ ಯಾವುದೇ ದಾರಿಗಳಿಲ್ಲ.
ಸಿಎಂ ಅಧ್ಯಕ್ಷತೆಯಲ್ಲಿ ಸಭೆ ಇಂದು
ಕಳಸದ ಇನಾಂ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ಸಭೆ ಕರೆಯಲಾಗಿದೆ.
ಸಭೆಯಲ್ಲಿ ಕಂದಾಯ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಚಿಕ್ಕಮಗಳೂರು ಜಿಲ್ಲಾಧಿಕಾರಿ, ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಇನಾಂ ಭೂಮಿಯ ಹೋರಾಟ ಸಮಿತಿ ಮುಖಂಡರು ಭಾಗವಹಿಸಲಿದ್ದಾರೆ. ಇನಾಂ ಭೂಮಿಯಲ್ಲಿರುವವರು ಒತ್ತುವರಿದಾರರು, ಅವರನ್ನು ಖುಲ್ಲಾಗೊಳಿಸುವಂತೆ ನ್ಯಾಯಾಲಯ ಸೂಚನೆ ನೀಡಿದ್ದರಿಂದ ಗುರುವಾರದ ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನವನ್ನು ಇಲ್ಲಿನ ಜನರು ಎದುರು ನೋಡುತ್ತಿದ್ದಾರೆ. ಗುರುವಾರ ಮುಖ್ಯಮಂತ್ರಿಯವರು ಸಭೆ ಕರೆದಿದ್ದರಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಇನಾಂ ಭೂಮಿಯಲ್ಲಿ ವಾಸವಾಗಿರುವವರು ಹಮ್ಮಿಕೊಂಡಿದ್ದ ಅನಿರ್ಧಿಷ್ಟಾವಧಿಯ ಧರಣಿಯನ್ನು ತಾತ್ಕಾಲಿಕವಾಗಿ ಬುಧವಾರ ಮೊಟಕುಗೊಳಿಸಿದರು.


- ಆರ್. ತಾರಾನಾಥ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.