ಚಿಕ್ಕಮಗಳೂರು

ಆಹ್ವಾನ ನೀಡದಿರುವುದನ್ನು ಖಂಡಿಸಿ ಪ್ರತಿಭಟನೆ

Published On :

ಚಿಕ್ಕಮಗಳೂರು: ಇಂದಾವರದ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಂಡ್ರೋ ಪ್ಲಾಟ್ ಫಾರಂ ನಿರ್ಮಾಣ ಕಾಮಗಾರಿಗೆ ಚಾಲನೆ ಕೊಡುವ ಕಾರ್ಯಕ್ರಮಕ್ಕೆ ಆಹ್ವಾನ ನೀಡದಿರುವ ನಗರಸಭೆ ಅಧ್ಯಕ್ಷರು ಮತ್ತು ಆಯುಕ್ತರ ಕ್ರಮ ಖಂಡಿಸಿ ವಿರೋಧ ಪಕ್ಷ ಕಾಂಗ್ರೆಸ್‌ನ ಸದಸ್ಯರು ಶುಕ್ರವಾರ ಇಲ್ಲಿನ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
13ನೇ ಹಣಕಾಸು ಯೋಜನೆಯಡಿ 39.25 ಲಕ್ಷ ವೆಚ್ಚದಲ್ಲಿ ವಿಂಡ್ರೋ ಫ್ಲಾಟ್ ಫಾರಂ ರೂಫಿಂಗ್ ಮತ್ತು ನೀರು ಸಂಗ್ರಹಾಗಾರ ತೊಟ್ಟಿ ನಿರ್ಮಾಣ ಕಾಮಗಾರಿ ಚಾಲನೆ ಕಾರ್ಯಕ್ರಮಕ್ಕೆ ನಗರಸಭೆಯ ವಿರೋಧ ಪಕ್ಷವಾದ ಕಾಂಗ್ರೆಸ್‌ನ ಸದಸ್ಯರಿಗೆ ಆಹ್ವಾನ ನೀಡದೆ ನಿರ್ಲಕ್ಷ್ಯ ಅನುಸರಿಸಿದ ಅಧ್ಯಕ್ಷರು ಮತ್ತು ಆಯುಕ್ತರ ಕ್ರಮ ಖಂಡಿಸಿ ಸದಸ್ಯರು ಪ್ರತಿಭಟಿಸಿದರು.
ಅಧ್ಯಕ್ಷರು ಮತ್ತು ಆಯುಕ್ತರ ವಿರುದ್ಧ ಘೋಷಣೆ ಕೂಗಿದ ಸದಸ್ಯರು, ಅಭಿವೃದ್ಧಿ ಕಾರ್ಯದಲ್ಲಿ ಆಡಳಿತ ಪಕ್ಷ ರಾಜಕೀಯ ಮಾಡುತ್ತಿದೆ. ಅಧ್ಯಕ್ಷರು ಮತ್ತು ಪೌರಾಯುಕ್ತರ ವರ್ತನೆ ವಿರೋಧಿಸುವುದಾಗಿ ಪ್ರತಿಭಟನಾನಿರತ ಸದಸ್ಯರು ಹೇಳಿದರು.
ಉದ್ದೇಶಪೂರ್ವಕವಲ್ಲ: ಸ್ಥಳಕ್ಕಾಗಮಿಸಿದ್ದ ಅಧ್ಯಕ್ಷ ಪುಷ್ಪರಾಜ್, ನಾವು ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿಲ್ಲ. ಸ್ಥಳ ಪರಿಶೀಲನೆಗೆ ತೆರಳಿದ್ದ ಸಂದರ್ಭದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಇದು ತಪ್ಪಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗುತ್ತದೆ ಎಂದು ಹೇಳಿದರು.
ಸರ್ವಾಧಿಕಾರಿ ಧೋರಣೆ: ನಗರದ ಅಭಿವೃದ್ಧಿಗೆ ಪಕ್ಷಭೇದ ಮರೆತು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಆದರೆ, ವಿರೋಧ ಪಕ್ಷವನ್ನು ಕಡೆಗಣಿಸಿ ಈ ರೀತಿ ಮಾಡಿರುವುದನ್ನು ನೋಡಿದರೆ ಆಡಳಿತ ಪಕ್ಷ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂಬುದು ತಿಳಿಯುತ್ತದೆ. ಸರ್ವಾಧಿಕಾರಿ ಧೋರಣೆ ಕೈಬಿಡಬೇಕು. ಇಲ್ಲವಾದಲ್ಲಿ ಚಳವಳಿ ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಸದಸ್ಯರಾದ ಹಿರೇಮಗಳೂರು ಪುಟ್ಟಸ್ವಾಮಿ, ರೂಬೆನ್ ಮೊಸೆಸ್, ಸುರೇಖಾ ಸಂಪತ್‌ರಾಜ್, ಸಿ.ಪಿ. ಲಕ್ಷ್ಮಣ್, ಜಗದೀಶ್, ಅನು ಮಧುಕರ್, ಯಶೋಧಾ ಗಂಗಾಧರ್, ಜುಬೇದಾಬಾನು, ತೇಜಕುಮಾರ್, ಮುಖಂಡರಾದ ಗಂಗಾಧರ್, ಮಧುಕರ್, ಬದ್ರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.