ಇನ್ನೊಬ್ಬರ ಶ್ರೇಯಸ್ಸಿಗೆ ಶ್ರಮಿಸೋದೇ ಧರ್ಮ
ಬಾಳೆಹೊನ್ನೂರು: ಸಾಧನೆಯ ಹಾದಿಯಲ್ಲಿ ಸಂಕಷ್ಟ ಸಹಜ. ಬೆಳೆದ ಬೆಳೆ ಯಾವುದೆಂದು ನೋಡುವುದಕ್ಕಿಂತ ಬಿತ್ತಿದ ಬೀಜ ಯಾವುದೆಂದು ತಿಳಿಯುವುದು ಮುಖ್ಯವೆಂದು ತಿಳಿದು ಸಮಾಜ ಪರಿವರ್ತನೆಯ ಕನಸನ್ನು ನನಸಾಗಿಸಿದ ಕೀರ್ತಿ ಯುಗಪುರುಷ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದ್ದಾರೆ.
ರಂಭಾಪುರಿ ಪೀಠದಲ್ಲಿ ಶುಕ್ರವಾರ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾ ರಥೋತ್ಸವದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜೀವನದಲ್ಲಿ ಅಡೆತಡೆ ಬಂದಾಗ ದಾರಿ ಬದಲಿಸಬೇಕೆ ವಿನಃ ಮಹತ್ತರ ಗುರಿಯನ್ನಲ್ಲ. ಉನ್ನತಿಯ ಹಾದಿಯಲ್ಲಿ ಸಭ್ಯತೆಯ ಅವಶ್ಯಕತೆ ಇದೆ. ಹೂವು ಮತ್ತು ಗಂಧ ಇವು ಸುಗಂಧ ಸೂಸುವಂತೆ ಮಹಾತ್ಮರು ಸಂಕಷ್ಟ ಕಾಲದಲ್ಲಿಯೂ ಒಳಿತನ್ನು ಬಯಸುತ್ತಾರೆ. ಇನ್ನೊಬ್ಬರ ಶ್ರೇಯಸ್ಸಿಗಾಗಿ ಶ್ರಮಿಸುವುದೇ ನಿಜವಾದ ಧರ್ಮ. ಅಖಂಡತೆಯಲ್ಲಿ ಬಲವಿದೆ.
ವಿಘಟನೆಯಲ್ಲಿ ವಿನಾಶವಿದೆ ಎಂಬುದನ್ನು ವಿಶ್ವವಿಭೂತಿ ಜಗದ್ಗುರು ರೇಣುಕಾಚಾರ್ಯರು ಎಚ್ಚರಿಸಿದ್ದನ್ನು ಮರೆಯಲಾಗದು. ಜಾತಿಯ ಗೋಡೆಗಳನ್ನು ಕಿತ್ತು ಭಾವೈಕ್ಯತೆಯ ಮತ್ತು ಸಾಮರಸ್ಯ ಸೌಹಾರ್ದತೆಯ ಸೌಧ ನಿರ್ಮಿಸಿದ ಶ್ರೇಯಸ್ಸು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದು ಹೇಳಿದರು.
ಜಗದ್ಗುರು ರೇಣುಕಾಚಾರ್ಯರು ಮಾಡದೆ ಇರುವ ಕೆಲಸಗಳಿಲ್ಲ. ಎಲ್ಲ ರಂಗಗಳಲ್ಲಿ ಎಲ್ಲ ಸಮುದಾಯದ ಜನಸಮೂಹಕ್ಕೆ ಉತ್ಕೃಷ್ಟವಾದ ಧರ್ಮದ ಹೊಂಬೆಳಕಿನ ದಾರಿ ತೋರಿ ಮುನ್ನಡೆಸಿದ್ದಾರೆ.
ಆ ದಾರಿಯಲ್ಲಿ ಸೇರಿ ಆರೋಗ್ಯಪೂರ್ಣ ಸಮಾಜ ನಿರ್ಮಿಸೋಣ. ವೀರಭದ್ರ ಪರಂಪರೆ ಮತ್ತು ಸಂಸ್ಕೃತಿ ನಾಮಾಂಕಿತ ಶ್ರೇಷ್ಠ ಕೃತಿ ಲೋಕಾರ್ಪಣೆಗೊಳ್ಳುತ್ತಿರುವುದು ತಮಗೆ ಅಪಾರ ಸಂತಸ ತಂದಿದೆ ಎಂದ ಅವರು, ಇದಕ್ಕಾಗಿ ಶ್ರಮಿಸಿದ ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಮತ್ತು ಡಾ. ಸಂಗಮೇಶ ಸವದತ್ತಿಮಠರ ಸೇವೆಗೆ ಸಂತಸ ವ್ಯಕ್ತಪಡಿಸಿದರು.
ನೇರ ನುಡಿ: ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ರಂಭಾಪುರಿ ಶ್ರೀಗಳು ಸಮಾಜ ಸುಧಾರಣೆಯ ಕಾರ್ಯನಿರ್ವಹಿಸುತ್ತಿದ್ದು, ಸಮಾಜದಲ್ಲಿ ಬದಲಾವಣೆ ತರಲು ನೇರ ನುಡಿ ಆಡುತ್ತಾರೆ ಎಂದರು.
ವೀರಭದ್ರ ಪರಂಪರೆ ಮತ್ತು ಸಂಸ್ಕೃತಿ ಕೃತಿಯನ್ನು ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಬಿಡುಗಡೆ ಮಾಡಿದರು. ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಕೃತಿ ಪರಿಚಯ ಮಾಡಿದರು.
ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ ಶ್ರೀಪೀಠದ ಪ್ರತಿಷ್ಠಿತ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಯನ್ನು ಖ್ಯಾತ ನೀರಾವರಿ ತಜ್ಞ ಡಾ. ಜಿ.ಎಸ್. ಪರಮಶಿವಯ್ಯನವರಿಗೆ ಮರಣೋತ್ತರವಾಗಿ ನೀಡಲಾಗಿದ್ದನ್ನು ಅವರ ಹಿರಿಯ ಪುತ್ರರಾದ ಜಿ.ಎಸ್. ಓಹಿಲೇಶ್ವರ ಮತ್ತು ಕುಟುಂಬದ ಸದಸ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹೆಮ್ಮೆಯ ಸಂಗತಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ಈ ವರ್ಷದ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಗೆ ಒಬ್ಬ ನೀರಾವರಿ ತಜ್ಞರನ್ನು ಆಯ್ಕೆ ಮಾಡಿದ್ದು ಹೆಮ್ಮೆಯ ಸಂಗತಿ, ಮಾತ್ರವಲ್ಲ ಸಾಮಾಜಿಕ ಸಂಗತಿಗಳಲ್ಲಿ ಶ್ರೀಪೀಠ ಹೊಂದಿರುವ ಆಸಕ್ತಿತೋರಿಸುತ್ತದೆ ಎಂದರು.
ಶಾಸಕ ಸಿ.ಟಿ. ರವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬೆಂಗಳೂರಿನ ಅಧ್ಯಾತ್ಮ ಚಿಂತಕರಾದ ರವಿಶಂಕರ ಗುರೂಜಿ, ಶ್ರೀಮದ್ವೀರಶೈವ ಸ.ಸಂ. ಪ್ರಸಾರಾಂಗ ನಿರ್ದೇಶಕ ಡಾ. ಸಂಗಮೇಶ ಸವದತ್ತಿಮಠ, ಗದಗಿನ ಬಾಬಣ್ಣ ಶಾಬಾದಿಮಠ ಹಾಗೂ ವಿಶೇಷ ಸೇವಾಕರ್ತರಿಗೆ ರಂಭಾಪುರೀ ಜಗದ್ಗುರು ಗುರುರಕ್ಷೆ ನೀಡಿ ಆಶೀರ್ವದಿಸಿದರು.
ಜಮಖಂಡಿಯ ಜಗದೀಶ ಗುಡಗುಂಟಿ, ಎಸ್.ಆರ್. ರವಿ, ಸಿ. ವೀರಭದ್ರಯ್ಯ, ಜಯಶ್ರೀ ಮಲ್ಲಿಕಾರ್ಜುನ ಹೊಸಮನಿ, ಅಖಿಲ ಭಾ.ವೀ.ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು, ಉಪಾಧ್ಯಕ್ಷರಾದ ಕಲಾದಗಿಯ ಚಂದ್ರಶೇಖರ ಶಿವಾಚಾರ್ಯರು ಸೇರಿದಂತೆ ಎಸಳೂರು, ಮುಕ್ತಿಮಂದಿರ, ಮಳಲಿ, ಕಣ್ವಕುಪ್ಪಿ, ಹುಲಿಕೆರೆ, ಬಿಳಕಿ, ತಾವರೆಕೆರೆ, ಶಿರಕೋಳ ಮತ್ತು ಇನ್ನಿತರ ಮಠಗಳ ಶಿವಾಚಾರ್ಯರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

