ಸಿದ್ಧನಂಜಪ್ಪ, ಶ್ರೀಕಂಠಪ್ಪ ಹ್ಯಾಟ್ರಿಕ್ ಹೀರೋಗಳು
-ಆರ್. ತಾರಾನಾಥ್
ಚಿಕ್ಕಮಗಳೂರು: ಕಾಫಿ ಕಣಿವೆ ಚಿಕ್ಕಮಗಳೂರು ಜಿಲ್ಲೆ ರಾಜಕೀಯ ಕ್ಷೇತ್ರದಲ್ಲಿ ಹಲವು ಹೊಸ ದಾಖಲೆಗಳಿಗೆ ಸಾಕ್ಷಿಯಾಗಿದೆ.
1952 ರಿಂದ 2012ರವರೆಗೆ ನಡೆದಿರುವ ಲೋಕಸಭಾ ಚುನಾವಣೆಗಳ ಫಲಿತಾಂಶದ ಒಂದೊಂದು ಪುಟಗಳನ್ನು ತಿರುವಿ ಹಾಕುತ್ತಾ ಹೋದರೆ, ಅಂದಿನ ರಾಜಕೀಯ ಚಿತ್ರಣಕ್ಕೂ, ಈಗಿನ ರಾಜಕಾರಣಕ್ಕೂ ಹೋಲಿಕೆ ಮಾಡಿದರೆ ಇದು ಸಾಧ್ಯವೇ ಎಂಬ ಆಶ್ಚರ್ಯಕರ ಪ್ರಶ್ನೆಗಳ ಸರಮಾಲೆ ನಮ್ಮೆದುರಿಗೆ ಬರುತ್ತವೆ.
1952 ರಿಂದ 2012ರವರೆಗೆ ದೇಶದಲ್ಲಿ ಒಟ್ಟು 15 ಬಾರಿ ಲೋಕಸಭಾ ಚುನಾವಣೆಗಳು ನಡೆದಿವೆ. ಆದರೆ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 17 ಬಾರಿ ಲೋಕಸಭಾ ಚುನಾವಣೆ ನಡೆದಿದೆ.
ಅಂದರೆ ಎರಡು ಬಾರಿ ಉಪಚುನಾವಣೆಗಳು ನಡೆದಿವೆ. ಇವುಗಳ ಫಲಿತಾಂಶ ದೇಶ ಮತ್ತು ರಾಜ್ಯದ ರಾಜಕಾರಣದ ಹಣೆ ಬರಹವನ್ನು ಬದಲಾವಣೆ ಮಾಡಿದ್ದವು.
ಹ್ಯಾಟ್ರಿಕ್ ಹೀರೋಗಳು: ಇಬ್ಬರು ರಾಜಕೀಯ ಮುತ್ಸದಿಗಳು ಹ್ಯಾಟ್ರಿಕ್ ಹೀರೋಗಳಾಗಿದ್ದರು.
ಉತ್ತಮ ನಡೆ, ನುಡಿ, ನಿಸ್ವಾರ್ಥ ಸೇವೆ ಸಲ್ಲಿಸುವ ಮನೋಭಾವನೆ ಇದ್ದರೆ ರಾಜಕೀಯ ಜೀವನದಲ್ಲಿ ಮತದಾರರು ಕೈ ಬಿಡುವುದಿಲ್ಲ ಎಂಬುದನ್ನು ಸಾಬೀತು ಪಡಿಸಿರುವ ವ್ಯಕ್ತಿಗಳು ನಮ್ಮೊಂದಿಗೆ ಇದ್ದು, ಈ ಕ್ಷೇತ್ರದಿಂದ ಗೆದ್ದಿದ್ದರು ಎಂಬ ಆಶ್ಚರ್ಯ ಪಡುವ ವಿಶೇಷವೂ ಇಲ್ಲಿದೆ.
ಜಿಲ್ಲೆಯ ಮತದಾರರು ಒಮ್ಮೆ ಕಾಂಗ್ರೆಸ್ನ ಎಚ್. ಸಿದ್ದನಂಜಪ್ಪ, ಮತ್ತೊಮ್ಮೆ ಬಿಜೆಪಿಯ ಡಿ.ಸಿ. ಶ್ರೀಕಂಠಪ್ಪ ಅವರನ್ನು ಹ್ಯಾಟ್ರಿಕ್ ಹೀರೋ ಪಟ್ಟಕ್ಕೆ ಏರಿಸಿದ್ದರು.
ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಲೋಕಸಭಾ ಚುನಾವಣೆ ನಡೆದಿದ್ದು 1952 ರಲ್ಲಿ. ಆಗ ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕವಾದ ಲೋಕಸಭಾ ಕ್ಷೇತ್ರದ ಸ್ಥಾನಮಾನ ಇರಲಿಲ್ಲ. ಅದುದರಿಂದ ಹಾಸನ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಅಸ್ತಿತ್ವದಲ್ಲಿತ್ತು.
ಈ ಕ್ಷೇತ್ರದಲ್ಲಿ ಇದ್ದ ಮತದಾರರ ಒಟ್ಟು ಸಂಖ್ಯೆ 3,54,206. ಆಗ 1,71,850 ಮಂದಿ ಮತದಾನ ಚಲಾವಣೆ ಮಾಡಿದ್ದರು. ಈ ಚುನಾವಣೆಯಲ್ಲಿ ಹಾಸನದವರಾದ ಕಾಂಗ್ರೆಸ್ನ ಎಚ್. ಸಿದ್ದನಂಜಪ್ಪ ಅವರು 1,16,561 ಮತಗಳನ್ನು ಪಡೆಯುವುದರೊಂದಿಗೆ ಜಯಗಳಿಸಿ ಸಂಸತ್ ಪ್ರವೇಶ ಮಾಡಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದ ಪ್ರಥಮ ವರ್ಷದಲ್ಲಿ ನಡೆದ ಈ ಚುನಾವಣೆಯಲ್ಲಿ ಚಲಾವಣೆಯಾದ 1,71,850 ಮತಗಳಲ್ಲಿ 1,16,561 ಮತಗಳನ್ನು ಪಡೆಯುವುದೆಂದರೆ ಸಾಮಾನ್ಯವಾದ ಕೆಲಸವೆನಲ್ಲ. ನಿಜಕ್ಕೂ ಅಂದಿನ ಕಾಲದಲ್ಲಿ ಇದೊಂದು ದೊಡ್ಡ ಸಾಧನೆ ಎಂದರೆ ತಪ್ಪಾಗಲಾರದು.
ಅವಿರೋಧ ಆಯ್ಕೆ: ಈ ಜನಪ್ರೀಯತೆ 1957ರಲ್ಲಿ ನಡೆದ ಎರಡನೇ ಲೋಕಸಭಾ ಚುನಾವಣೆಯಲ್ಲಿ ಎಚ್. ಸಿದ್ದನಂಜಪ್ಪ ಅವರನ್ನು ಅವಿರೋಧವಾಗಿ ಪುನರಾಯ್ಕೆ ಮಾಡಿತು. 1962 ರಲ್ಲಿ ಮೂರನೇ ಲೋಕಸಭಾ ಚುನಾವಣೆ ನಡೆಯಿತು. ಆಗ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇದ್ದ ಮತದಾರರ ಸಂಖ್ಯೆ 4,33,487, ಇದರಲ್ಲಿ 2,41,184 ಮತಗಳು ಚಲಾವಣೆಯಾಗಿದ್ದವು. ಮೂರನೇ ಬಾರಿಗೆ ಎಚ್. ಸಿದ್ದನಂಜಪ್ಪ ಅವರು ಮತ್ತೆ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದರು. ಆಗ ಅವರು 1,04,898 ಮತಗಳನ್ನು ಪಡೆದು ಜಯಗಳಿಸುವ ಮೂಲಕ ಹ್ಯಾಟ್ರಿಕ್ ಹೀರೋ ಕೀರ್ತಿಗೆ ಪಾತ್ರರಾದರು.
ಕ್ಷೇತ್ರ ಪುನರ್ ವಿಂಗಡನೆಯಿಂದಾಗಿ ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳು ಪ್ರತ್ಯೇಕ ಕ್ಷೇತ್ರಗಳಾದವು. ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದ ನಂತರ 1967ರಲ್ಲಿ 4ನೇ ಲೋಕಸಭೆಗೆ ಚುನಾವಣೆ ನಡೆಯಿತು.
ಶ್ರೀಕಂಠಪ್ಪ ಸಾಧನೆ: ಹಣ ಮತ್ತು ಜಾತಿಯ ಪ್ರಾಬಲ್ಯ ಇಲ್ಲದಿದ್ದರೂ, ಹ್ಯಾಟ್ರಿಕ್ ಸಾಧನೆ ಮಾಡಬಹುದೆಂದು ಡಿ.ಸಿ. ಶ್ರೀಕಂಠಪ್ಪ ಸಾಬೀತುಪಡಿಸಿದರು.
1991ರಲ್ಲಿ ಡಿ.ಸಿ. ಶ್ರೀಕಂಠಪ್ಪ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದರು. ಆಗ ಅವರು, 1,85,347 ಮತಗಳನ್ನು ಪಡೆದುಕೊಂಡಿದ್ದರೂ ಗೆಲುವು ಸಾಧ್ಯವಾಗಲಿಲ್ಲ. 1998ರಲ್ಲಿ ಅವರು ಮತ್ತೆ ಬಿಜೆಪಿಯಿಂದ ಸ್ಪರ್ಧೆ ಮಾಡಿ 3,16,137 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದ್ದರು. ಆಗ ಅವರ ಸಮೀಪದ ಪ್ರತಿಸ್ಪರ್ಧಿ ಎಂ. ವೀರಪ್ಪ ಮೊಯ್ಲಿ 2,63,641 ಮತ ಪಡೆದು ಪರಾಭವಗೊಂಡವರು. ಇದು, ಬಿಜೆಪಿಯ ಮೊದಲು ಗೆಲವು.
ಎರಡನೇ ಬಾರಿ ಗೆಲವು: 1999ರ ಚುನಾವಣೆಯಲ್ಲಿ ಮತ್ತೆ ಡಿ.ಸಿ. ಶ್ರೀಕಂಠಪ್ಪ ಅವರು ಸ್ಪರ್ಧೆ ಮಾಡಿಜಯಗಳಿಸಿದ್ದರು. 2004ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಡಿ.ಸಿ. ಶ್ರೀಕಂಠಪ್ಪ ಹ್ಯಾಟ್ರಿಕ್ ಗೆಲವು ಸಾಧಿಸಿದರು. ಪ್ರತಿ ಚುನಾವಣೆಯಲ್ಲಿ ಡಿ.ಸಿ. ಶ್ರೀಕಂಠಪ್ಪ ಅವರು ಪಡೆದ ಮತಗಳ ಸಂಖ್ಯೆ ಹೆಚ್ಚಳವಾಗುತ್ತಲೇ ಹೋಯಿತು. ಇದಕ್ಕೆ ಕಾರಣ ಅವರಲ್ಲಿದ್ದ ಸರಳತೆಯ ಗುಣ. ಹೀಗೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ಇಬ್ಬರು ರಾಜಕೀಯ ಮುತ್ಸದ್ದಿಗಳು ಹ್ಯಾಟ್ರಿಕ್ ಹೀರೋಗಳಾಗಿದ್ದರು. ಡಿ.ಬಿ. ಚಂದ್ರೇಗೌಡ ಅವರು 1971 ಹಾಗೂ 1977 ರಲ್ಲಿ ಸತತವಾಗಿ ಎರಡು ಬಾರಿ ಗೆಲವು ಸಾಧಿಸಿದ್ದರು. ್ದ ಇಂದಿರಾಗಾಂಧಿಯವರಿಗೆ ಚಿಕ್ಕಮಗಳೂರು ಕ್ಷೇತ್ರವನ್ನು ಬಿಟ್ಟುಕೊಡದೇ ಹೋಗಿದ್ದರೆ, ಚಂದ್ರೇಗೌಡರು ಸಹ ಹ್ಯಾಟ್ರಿಕ್ ಸರದಿಗೆ ಸೇರುತ್ತಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

