ಔಷಧ ಬಾಟಲ್ನಲ್ಲೂ ಕಸ!
ಆರ್. ತಾರಾನಾಥ್
ಚಿಕ್ಕಮಗಳೂರು: ಮೆಡಿಕಲ್ ಸ್ಟೋರ್ನಿಂದ ಸಿರಪ್ ತಂದಿರುತ್ತೀರಿ. ಔಷಧವನ್ನು ಬಾಯಿಗೆ ಹಾಕಿಕೊಳ್ಳುವ ಮುನ್ನ ಬಾಟಲಿಯನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ. ಏಕಂದರೆ ಸಿರಪ್ ಸೀಸೆಗಳಲ್ಲೂ ಕಸ ಇದ್ದಿರಬಹುದು!
ತಂಪುಪಾನೀಯದ ಬಾಟಲಿಯಲ್ಲಿ ಕ್ರಿಮಿಕೀಟಗಳು ಪತ್ತೆಯಾಗಿದ್ದನ್ನು ಕೇಳಿದ್ದಿರಿ. ಸಿರಪ್ ಸೀಸೆಯಲ್ಲ ಕಸ, ಪ್ಲಾಸ್ಟಿಕ್ ಇದ್ದುದು ಚಿಕ್ಕಮಗಳೂರಿನಲ್ಲಿ ಪತ್ತೆಯಾಗಿದೆ. ಬೆಂಗಳೂರಿನ ಹಿಂದೂಸ್ತಾನ ಬಯೋಲಾಜಿಕಲ್ ಕಂಪನಿಯಲ್ಲಿ ತಯಾರಾಗಿರುವ 'ಪ್ರೋನೆಕ್ಸ್' ಸಿರಪ್ ಬಾಟಲಿಯ ಒಳಭಾಗದಲ್ಲಿ ಕಸ, ತೆಳುವಾದ ಪ್ಲಾಸ್ಟಿಕ್ ಇದ್ದುದು ಕಂಡುಬಂದಿದೆ. ಅದನ್ನು ತೋರಿಸಿದಾಗ ಮೆಡಿಕಲ್ ಸ್ಟೋರ್ ಮಾಲೀಕರು ಬದಲಿಸಿ ಕೊಟ್ಟ ಮತ್ತೊಂದು ಸೀಸೆಯಲ್ಲೂ ಕಸ, ಪ್ಲಾಸ್ಟಿಕ್ ಇತ್ತು. ಇದಕ್ಕಿಂತ ವ್ಯಂಗ್ಯ ಎಂದರೆ ಇಂಥ ಪ್ರಸಂಗಗಳಲ್ಲಿ ದೂರು ಸ್ವೀಕರಿಸಲು ಸರ್ಕಾರದ ಯಾವ ಇಲಾಖೆಯೂ ಸಿದ್ಧವಿಲ್ಲ ಎನ್ನುವುದು.
ಔಷಧದೊಂದಿಗೆ ಕಸ ಇರುವ ಸಿರಪ್ ಪಡೆದಿದ್ದ ಗ್ರಾಹಕ ಈ ಸಂಬಂಧ ಕಂಪನಿ ವಿರುದ್ಧ ದೂರು ನೀಡಲು ಜಿಲ್ಲಾಧಿಕಾರಿ ಕಚೇರಿಗೆ ಹೋದಾಗ ಅವರು ಆಹಾರ ಇಲಾಖೆಗೆ ಹೋಗುವಂತೆ ತಿಳಿಸಿದರು. ಅವರಲ್ಲಿ ಕೇಳಿದಾಗ ಡ್ರಗ್ಸ್ ಕಂಟ್ರೋಲರ್ಗೆ ದೂರು ನೀಡುವಂತೆ ತಿಳಿಸಿದರು. ಅಲ್ಲಿಗೆ ಹೋದಾಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹೋಗಿ ದೂರು ನೀಡುವಂತೆ ಸೂಚಿಸಿದರು. ಯಾರಿಗೆ ದೂರು ನೀಡಬೇಕು ಎನ್ನುವುದು ಕೊನೆಗೂ ಬಗೆಹರಿಯಲಿಲ್ಲ.
ಮೈಯಲ್ಲಿ ಜ್ವರ ಇತ್ತು, ಸುಸ್ತಾಗುತ್ತಿತ್ತು. ಆದುದರಿಂದ ಏ.19 ರಂದು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಹೋಗಿದ್ದೆ. ಇಲ್ಲಿನ ವೈದ್ಯರು ಸಿರಪ್ ಬರೆದುಕೊಟ್ಟಿದ್ದು, ಅದನ್ನು ಮೆಡಿಕಲ್ನಲ್ಲಿ ಖರೀದಿ ಮಾಡಿದಾಗ ಅದರಲ್ಲಿ ಕಸ ಮತ್ತು ಪ್ಲಾಸ್ಟಿಕ್ ವಸ್ತುಗಳು ಇರುವುದು ಗಮನಕ್ಕೆ ಬಂದಿತು. ಅದನ್ನು ಮೆಡಿಕಲ್ನವರಿಗೆ ತೋರಿಸಿದಾಗ ಅವರು ಬೇರೊಂದು ಸಿರಪ್ ಬಾಟಲಿ ಕೊಟ್ಟರು. ಅದರಲ್ಲೂ ಕಸ ಇತ್ತು. ಕಳಪೆ ಔಷಧಿ ಮಾರಾಟ ಆಗುತ್ತಿರುವುದು ಗಮನಕ್ಕೆ ಬಂದಾಗ ಯಾರಿಗೆ ದೂರು ನೀಡಬೇಕೆಂಬ ಸ್ಪಷ್ಟವಾದ ಮಾಹಿತಿ ಇಲ್ಲ. ನಗರದ ಪ್ರದೇಶದಲ್ಲಿ ಇರುವ ನಮ್ಮಂಥವರಿಗೆ ಈ ಕುರಿತು ಮಾಹಿತಿ ಇಲ್ಲವೆಂದರೆ ಗ್ರಾಮಾಂತರ ಪ್ರದೇಶದವರಿಗೆ ಗೊತ್ತಾಗುವುದಾದರೂ ಹೇಗೆ?
ಟಿ ಎಂ.ಅಮಿತ್, ಚಿಕ್ಕಮಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

