ಭರವಸೆ ಈಡೇರಿಸಿದ ತೃಪ್ತಿ: ಶಾಸಕ ದತ್ತ
ಕಡೂರು: ತಾವು ಶಾಸಕರಾದ ಪ್ರಥಮ ವರ್ಷದಲ್ಲಿಯೇ ಜನರಿಗೆ ನೀಡಿದ ಭರವಸೆಯಂತೆ ಭದ್ರಾ ಡ್ಯಾಂನಿಂದ ಕಡೂರು ಹಾಗೂ ಬೀರೂರು ಪಟ್ಟಣದ ಜನರಿಗೆ ಶಾಶ್ವತ ಕುಡಿಯುವ ನೀರು ಕಲ್ಪಿಸುವ ಮೂಲಕ ನನ್ನ ಪ್ರಯತ್ನ ಫಲಕಾರಿಯಾಗಿದೆ. ಈ ಬಗ್ಗೆ ತಮಗೆ ಆತ್ಮ ಸಂತೋಷವಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದ್ದಾರೆ.
2008ರಲ್ಲಿ ಪ್ರಾರಂಭವಾದ ಭದ್ರಾ ಕುಡಿಯುವ ನೀರಿನ ಯೋಜನೆಯು ಅಂದಿನ ಶಾಸಕರಾದ ಕೆ.ಎಂ. ಕೃಷ್ಣಮೂರ್ತಿಯವರು ಮತ್ತು ಸಂಸತ್ ಸದಸ್ಯರಾಗಿದ್ದ ಡಿ.ಸಿ. ಶ್ರೀಕಂಠಪ್ಪ ಅವರ ಅವಧಿಯಲ್ಲಿ ಆರಂಭವಾಯಿತು. ನಿಗದಿತ ಅವಧಿಯಂತೆ ಪ್ರಾರಂಭಗೊಂಡ ಯೋಜನೆಯು 2012ಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ ಯೋಜನೆ ಜಾರಿಗೆ ಅಲ್ಲಲ್ಲಿ ನೂರೆಂಟು ವಿಘ್ನ ಉಂಟಾಯಿತು. 2011 ರಲ್ಲಂತೂ ಈ ಯೋಜನೆ ಎರಡು ವರ್ಷ ಕಾಲ ಮಲಗಿತು. 2 ದೊಡ್ಡ ಪ್ರಮಾಣದ ಅಡ್ಡಿಗಳು ಉಂಟಾಗಿ ಯೋಜನೆಯ ಕಾಮಗಾರಿ ಕೆಲಸ ಸಂಪೂರ್ಣ ನಿಷ್ಕ್ರಿಯವಾಗಿತ್ತು. 2013ರ ಮೇ 29 ರಂದು ನಾನು ಕಡೂರು ವಿಧಾನಸಕಭಾ ಕ್ಷೇತ್ರದ ಶಾಸಕನಾಗಿ ಪ್ರಮಾಣ ವಚನ ಸ್ವೀಕರಿದೆ. ಅಂದಿನಿಂದಲೇ ಸ್ಥಗಿತವಾಗಿದ್ದ ಈ ಭದ್ರಾ ಯೋಜನೆಗೆ ಚಾಲನೆ ನೀಡಿ ಶತಾಯ ಗತಾಯ ಶೀಘ್ರವಾಗಿಯೇ ಕಾಮಗಾರಿ ಮುಗಿಸುವ ಹಂತಕ್ಕೆ ನನ್ನ ಪ್ರಯತ್ನ ಸಾಗಿತು ಎಂದರು.
ಭದ್ರಾ ನದಿಯಿಂದ ಕಡೂರು, ಬೀರೂರು ಸೇರಿದಂತೆ ಮಾರ್ಗ ಮಧ್ಯದ 34 ಹಳ್ಳಿಗಳಿಗೆ ಈ ಯೋಜನೆ ಶಾಶ್ವತ ನೀರು ಒದಗಿಸಲಿದೆ ಎಂದಿದ್ದಾರೆ.
ಬಾವಿಗೆ ಬಿದ್ದು ಸಾವು
ಚಿಕ್ಕಮಗಳೂರು: ತೋಟದ ಬಾವಿಯಲ್ಲಿ ಬಾಟಲಿಯಲ್ಲಿ ನೀರು ತುಂಬಿಸಲು ಹೋಗಿದ್ದ ಬಾಲಕ ಸುನೀಲ್ (11) ನೀರು ಪಾಲಾದ ಘಟನೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಮೋಹನಗೌಡರ ಕಾಫಿ ತೋಟದ ಕೂಲಿ ಲೈನಿನಲ್ಲಿ ವಾಸವಾಗಿರುವ ನಾಗರಾಜು ಎಂಬವರ ಮಗನಾಗಿರುವ ಸುನಿಲ್, ಪಕ್ಕದ ಮನೆಯ ಹುಡುಗನೊಂದಿಗೆ ಶುಕ್ರವಾರ ತೋಟದ ಒಳಗೆ ಇರುವ ಬಾವಿಯ ಹತ್ತಿರ ನೀರಿನ ಬಾಟಲಿಯನ್ನು ತುಂಬಿಕೊಳ್ಳಲು ಹೋಗಿದ್ದ. ಈ ಸಂದರ್ಭ ನೀರಿನಲ್ಲಿ ಪ್ಲಾಸ್ಟಿಕ್ ಬಾಟಲಿ ತೇಲಿ ಮುಂದೆ ಹೋದಾಗ ಅದನ್ನು ಹಿಡಿಯುವ ಪ್ರಯತ್ನ ನಡೆಸಿದಾಗ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ. ಆಲ್ದೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೆಕ್ಕೆಜೋಳ ಕುರಿತು ತರಬೇತಿ
ಶಿವಮೊಗ್ಗ: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಕೃಷಿ ಇಲಾಖೆ, ಆಶ್ರಯದಲ್ಲಿ ಮೇ 26ರಂದು ಬೆಳಗ್ಗೆ 10 ಗಂಟೆಗೆ ಕೃಷಿ ವಿವಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮೆಕ್ಕೆಜೋಳದಲ್ಲಿ ಸುಸ್ಥಿರ ಉತ್ಪಾದನಾ ತಾಂತ್ರಿಕತೆಗಳು ಈ ವಿಷಯ ಕುರಿತು ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ತರಬೇತಿಯನ್ನು ಅಂತಾರಾಷ್ಟ್ರೀಯ ಮೆಕ್ಕೆಜೋಳ ಮತ್ತು ಗೋದಿ ಸಂಶೋಧನಾ ಸಂಸ್ಥೆ, ಪ್ರಾದೇಶಿಕ ಕೇಂದ್ರ ಇಕ್ರಿಸ್ಯಾಟ್, ಹೈದರಾಬಾದ್‌ನ ವಿಜ್ಞಾನಿಯಾದ ಡಾ. ಎ.ಆರ್. ಸದಾನಂದ ಉದ್ಘಾಟಿಸುವರು. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ. ವಾಸುದೇವಪ್ಪ ಅಧ್ಯಕ್ಷತೆ ವಹಿಸುವರು. ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಡಾ. ಮಧುಸೂದನ, ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಪಿ. ನಾರಾಯಣಸ್ವಾಮಿ ಇತರರು ಭಾಗವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

