ಚಿಕ್ಕಮಗಳೂರು

ಖಾಲಿ ಕೊಡಗಳೊಂದಿಗೆ ಗ್ರಾಪಂ ಮುತ್ತಿಗೆ

Published On :

ಕನ್ನಡಪ್ರಭ ವಾರ್ತೆ  ಶಹಾಪುರ  ಮೇ 24
ಶುದ್ಧ ಕುಡಿಯುವ ನೀರು, ಮತ್ತು ಮಹಿಳೆಯರ ವಿಶೇಷ ಶೌಚಾಲಯ ಹಾಗೂ ಗ್ರಾಮಕ್ಕೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಯಾದಗಿರಿ ಮತಕ್ಷೇತ್ರ ವ್ಯಾಪ್ತಿಯ ಟಿ.ವಡಿಗೇರಿ ಗ್ರಾಮ ಪಂಚಾಯಿತಿಗೆ ಟೋಕರಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ನೇತೃತ್ವದಲ್ಲಿ ಗ್ರಾಮಸ್ಥರು ಮತ್ತು ಮಹಿಳೆಯರು ಮುತ್ತಿಗೆ ಹಾಕಿದ್ದರು.
  ಗ್ರಾಮದ ನಿವಾಸಿಗಳು, ಮಹಿಳೆಯರು ಖಾಲಿ ಕೊಡ ಹಿಡಿದು ಶನಿವಾರ ಸುಮಾರು 2 ಘಂಟೆಗಳ ಕಾಲ ಪಂಚಾಯಿತಿಯಲ್ಲಿ ಧರಣಿ ಕುಳಿತು ಗ್ರಾಮಕ್ಕೆ ಸೌಲಭ್ಯ ಒದಗಿಸಲು ಆಗ್ರಹಿಸಿದರು. ನಂತರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶುದ್ಧ ಕುಡಿಯುವ ನೀರು, ಮೂಲಭೂತ ಸೌಕರ್ಯ ಒದಗಿಸುವುದಾಗಿ ಭರವಸೆ ನೀಡಿದರು.
  ಸಾರ್ವಜನಿಕರು ಧರಣಿ ಹಿಂಪಡೆದ ನಂತರ ಗ್ರಾಮದಲ್ಲಿ ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡಲಾಗಿದೆ.
ಪಾದಯಾತ್ರೆ: ನಂತರ ಉಮೇಶ ಮುದ್ನಾಳ ಮತ್ತು ಪಿಡಿಒ ಹಾಗೂ ಸಾರ್ವಜನಿಕರು ಪಾದಯಾತ್ರೆ ಮೂಲಕ ವಿವಿಧ ಓಣಿಗಳಲ್ಲಿ ನಿಂತಿರುವ ಚರಂಡಿ ನೀರು, ಗಬ್ಬೆದ್ದು ನಾರುತ್ತಿರುವ ಓಣಿಗಳನ್ನು ವೀಕ್ಷಿಸಿದರು. ಈ ಸಮಸ್ಯೆ ನಿವಾರಣೆಗೆ  ಅಗತ್ಯ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ, ಬೃಹತ್ ಪ್ರತಿಭಟನೆ ರ್ಯಾಲಿ ಹಮ್ಮಿಕೊಳ್ಳಲಾಗುವುದೆಂದು ಮುದ್ನಾಳ ಎಚ್ಚರಿಕೆ ನೀಡಿದರು.
ಅಧಿಕಾರಿಗಳು ಶೀಘ್ರದಲ್ಲೆ ಭೇಟಿ ನೀಡಬೇಕು: ವಿಶೇಷವಾಗಿ ಈ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿರುವುದರಿಂದ ಪ್ರತಿ ಮನೆಗೆ ಸೈಕಲ್  ಬಂಡಿಗಳನ್ನು ಮಾಡಿಸಿಕೊಂಡಿದ್ದಾರೆ. ಸ್ವಾತಂತ್ರ್ಯ ಬಂದು 67 ವರ್ಷ ಕಳೆದರೂ ಈ ಗ್ರಾಮ ಇನ್ನೂ ಕುಗ್ರಾಮವಾಗಿಯೇ ಉಳಿದಿದೆ. ಈಗಲಾದರೂ ಜಿಲ್ಲಾ ಮಟ್ಟದ ಅಧಿಕಾರಿಗಳು ಟಿ.ವಡಿಗೆರಿ ಗ್ರಾಮಕ್ಕೆ ಅತಿ ಶೀಘ್ರದಲ್ಲೆ ಭೇಟಿ ನೀಡಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿ ಕೊಡಬೇಕೆಂದು ಅಂಬಿಗರ ಚೌಡಯ್ಯ ಮತ್ತು ವಿಠ್ಠಲ್ ಹೇರೂರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಕುಡಿಯುವ ನೀರಿಗಾಗಿ ನೀರೆಯರ ಹೋರಾಟ
ಕ.ಪ್ರ. ವಾರ್ತೆ  ಗುರುಮಠಕಲ್  ಮೇ 24
ಬೇಸಿಗೆ ಪ್ರಾರಂಭವಾಗಿ ಇದೀಗ ಮುಗಿಯುವ ಹಂತಕ್ಕೆ ತಲುಪುತ್ತಿದೆ. ಆದರೆ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿ ಕುಡಿಯುವ ನೀರಿಗಾಗಿ ನೀರೆಯರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
  ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತಕ್ಷೇತ್ರದಲ್ಲಿ ಎಲ್ಲಿಯೂ ನೀರಿಗೆ ಸಮಸ್ಯೆಯಿಲ್ಲ. ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸಲಾಗಿದೆ. ಈ ಬಾರಿ ಅಷ್ಟೇನೂ ನೀರಿನ ಸಮಸ್ಯೆ ಇಲ್ಲ ಎನ್ನುವುದು ಅಧಿಕಾರಿಗಳ ವಾದ. ಆದರೆ ಇಲ್ಲಿ ಮಾತ್ರ ನೀರಿಗಾಗಿ ನೀರೆಯರು ಪರದಾಡುವುದು ತಪ್ಪಿಲ್ಲ.
ನೀರು ತರುವುದೇ ದಿನದ ಕಾಯಕ: ಅದರಲ್ಲೂ ಪ್ರಮುಖವಾಗಿ ಗಡಿಭಾಗಕ್ಕೆ ಹೊಂದಿಕೊಂಡಿರುವ ಗ್ರಾಮಗಳ ಪರಿಸ್ಥಿತಿಯಂತೂ ಹೇಳತೀರದಷ್ಟು ಹದಗೆಟ್ಟಿದ್ದು ನೀರೆಯರು ಸುಮಾರು ಎರಡು ಮೂರು ಕಿ.ಮೀ. ದೂರದವರೆಗೆ ಕ್ರಮಿಸಿ ನೀರು ತರುವ ಸ್ಥಿತಿ ಉಂಟಾಗಿದೆ. ಕುಡಿಯುವ ನೀರಿಗಾಗಿ ಗ್ರಾಮದಿಂದ ಹೊರಗಡೆಯಿರುವ ದೊಡ್ಡ ಬಾವಿ ಮತ್ತು ಹೊಲಗಳಲ್ಲಿ ಹಾಕಿದ ಕೊಳವೆಬಾವಿಗಳಿಗೆ ಹೋಗಿ ನೀರು ತರುವ ಸ್ಥಿತಿ ಇದೆ. ಇಲ್ಲಿನ ಮಹಿಳೆಯರಿಗೆ ನೀರು ತರುವುದೇ ದಿನದ ಕಾಯಕವಾಗಿದೆ. ಅದರೆ ಈ ಸಂಬಂಧಪಟ್ಟ ತಾಪಂ ಹಾಗೂ ಗ್ರಾಪಂಗಳ ಅಧಿಕಾರಿಗಳಿಗೆ ಮಾತ್ರ ಇದರ ಬಗ್ಗೆ ಗಮನವೇ ಇಲ್ಲವಾಗಿರುವುದು ಕೂಡ ಅಷ್ಟೇ ವಿಚಿತ್ರ ಸಂಗತಿಯಾಗಿದೆ.
ಸರ್ಕಾರದ ಯೋಜನೆಗಳು ಎಲ್ಲಿ? ಸರ್ಕಾರವು ಗ್ರಾಮಾಂತರ ಪ್ರದೇಶದಲ್ಲಿನ ಜನತೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಒಳಗಾಗದಿರಲಿ ಎಂದು ಹಣದ ರಾಶಿಯನ್ನೇ ಹರಿಸುತ್ತದೆ. ಅದರೆ ಅದು ಸರಿಯಾದ ರೀತಿಯಲ್ಲಿ ಬಳಕೆಯಾಗದೆ ಇರುವ ಕಾರಣ ಇಲ್ಲಿ ಪ್ರತಿವರ್ಷ ಕುಡಿಯುವ ನೀರಿಗಾಗಿ ಪರದಾಟ ತಪ್ಪಿಲ್ಲ.
ಗ್ರಾಮದ ಜನತೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ  ಎಂದು ಜಿಲ್ಲಾಡಳಿತ ಹೇಳುತ್ತದೆ. ಆದರೆ ಯಾವ ಗ್ರಾಮಗಳಲ್ಲಿ ಈ ಸೌಲಭ್ಯ ಒದಗಿಸಲಾಗಿದೆ ಎನ್ನುವ ಪ್ರಶ್ನೆ ಇದೀಗ ಎದುರಾಗುತ್ತದೆ.
ಕೈಗೆ ಸಿಗದ ಪಿಡಿಒಗಳು: ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ನೀರಿನ ಸಮಸ್ಯೆಯಿಂದ ಜನತೆ ಪರದಾಡುತ್ತಿದ್ದಾರೆ.ನೀರಿನ ಸಮಸ್ಯೆಯನ್ನು ಪರಿಹರಿಸಬೇಕಾದ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳ ಪತ್ತೆ ಇಲ್ಲ. ತಮ್ಮ
  ಮೊಬೈಲ್ ಪೋನ್‌ಗಳನ್ನು ಸಹ ಸ್ವಿಚ್ ಆಫ್ ಮಾಡಿಟ್ಟುಕೊಳ್ಳುವ ಇವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇಂತಹ ಅಧಿಕಾರಿಗಳನ್ನು ನಾವು ಎಲ್ಲಿ ಹುಡುಕಾಡುವುದು ಎನ್ನುತ್ತಾರೆ ಜನತೆ.
  ಒಟ್ಟಾರೆಯಾಗಿ ಎಲ್ಲೆಡೆಯಲ್ಲಿ ಬೇಸಿಗೆಯ ಬಿಸಿಲಿನ ತಾಪಕ್ಕೆ ಕೆರೆ-ಬಾವಿಗಳ ನೀರು ಬತ್ತಿ ಹೋಗಿದೆ. ಇಲ್ಲಿ ಮಾತ್ರ ನೀರು ಇದ್ದರೂ ಬಳಸಿಕೊಳ್ಳಲು ಆಗದಂತಾಗಿದೆ. ಗ್ರಾಮಸ್ಥರು ಮತ್ತು ಮಹಿಳೆಯರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲಾದರೂ ಸಂಬಂಧಪಟ್ಟ ಜಿಲ್ಲಾಡಳಿತ ಈ ಕಡೆ ಗಮನ ಹರಿಸಿ ತ್ವರಿತವಾಗಿ ನೀರಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ.

ನೀರು ಪೋಲು
ಶಹಾಪುರ: ಪಟ್ಟಣದ ವಿವಿಧ ಬಡಾವಣೆಗಳಲ್ಲಿನ ಸಾರ್ವಜನಿಕ ನಲ್ಲಿಗಳಿಗೆ ಸೂಕ್ತ ರಕ್ಷಣೆಯಿಲ್ಲದೆ ವ್ಯರ್ಥವಾಗಿ ನೀರು ಚರಂಡಿಗೆ ಸೇರುತ್ತಿದೆ. ಫಿಲ್ಟರ್‌ಬೆಡ್ ನೀರು ಸಂಗ್ರಹ ಕೆರೆಯಲ್ಲಿ ನೀರಿನ ಪ್ರಮಾಣ ನೋಡಿಕೊಂಡು ಇನ್ನು 2 ತಿಂಗಳು ನೀರಿನ  ಕಾಳಜಿ ಮಾಡುವುದು ಅಗತ್ಯ. ಆದರೆ ಪಟ್ಟಣದ ಹಲವು ಬಡಾವಣೆಗಳಲ್ಲಿ ನೀರಿನ ಸದ್ಬಳಕೆಯಾಗದಿರುವುದು, ಕೆಲವೆಡೆ ನೀರೇ ಬರದಂತಹ ಸ್ಥಿತಿ ಇದ್ದು, ನೀರು ನಿರ್ವಹಣೆಯಲ್ಲಿ ಪುರಸಭೆ ಸಕಾರಾತ್ಮಕ ಕಾಳಜಿ ತೋರುತ್ತಿಲ್ಲ. ದಿನನಿತ್ಯ ಹೆಚ್ಚಿನ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಹಲವು ಬಡಾವಣೆಗಳಲ್ಲಿ ಕೆಲವು ಮನೆಗಳಲ್ಲಿ ನೀರು ಮನೆ ಬಳಕೆಗೆ ಸಾಕಾದಾಗ ಅದನ್ನು ಬಂದ್ ಮಾಡದೆ ಹಾಗೇ ಬಿಡುವುದೂ ಕಂಡುಬರುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.