'ಪೆರ್ನೆ ದುರಂತಕ್ಕೆ ತೈಲ ಕಂಪನಿ ಹೊಣೆಗಾರ ಅಲ್ಲ'
ಉಪ್ಪಿನಂಗಡಿ: ವಾರದ ಹಿಂದೆ ರಾ.ಹೆ. 75ರ ಪೆರ್ನೆ ಎಂಬಲ್ಲಿ ಸಂಭವಿಸಿದ ಅಡುಗೆ ಅನಿಲ ಸಾಗಾಟದ ಟ್ಯಾಂಕರ್ ಅಪಘಾತದಲ್ಲಿ ಹತ್ತು ಮಂದಿ ಸಾವನ್ನಪ್ಪಿ ಹಲವಾರು ಮಂದಿ ನಿರ್ಗತಿಕರಾದ ಪ್ರದೇಶಕ್ಕೆ ಕೇಂದ್ರ ಪೆಟ್ರೋಲಿಯಂ ಸಚಿವ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆದ್ದಾರಿಯಲ್ಲಿ ಉಂಟಾದ ಟ್ಯಾಂಕರ್ ಅಪಘಾತದಲ್ಲಿ ತೈಲ ಕಂಪನಿಗಳನ್ನು ಹೊಣೆಗಾರರನ್ನಾಗಿ ಮಾಡಲು ಅಸಾಧ್ಯ. ಇದಕ್ಕೆ ಸಾಗಾಟಗಾರರು ಮತ್ತು ವಿಮಾ ಕಂಪೆನಿಗಳು ಕಾನೂನುಬದ್ಧ ಹೊಣೆಗಾರರಾಗಿರುತ್ತಾರೆ. ಆದಾಗ್ಯೂ ಮಾನವೀಯ ನೆಲೆಯಲ್ಲಿ ತೈಲ ಕಂಪೆನಿಗಳು ನತದೃಷ್ಟರ ಬವಣೆ ನೀಗಿಸಲು ಮುಂದಾಗುವಂತೆ ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಘಟನೆ ನಡೆದ ಬಳಿಕ ಪರಿಹಾರ ಕಾರ್ಯದತ್ತ ಜಿಲ್ಲಾಡಳಿತ ಉತ್ತಮ ರೀತಿಯಲ್ಲಿ ಗಮನ ಹರಿಸಿದ್ದು, ಸಂತ್ರಸ್ತರ ಪುನರ್ವಸತಿ ಕಾರ್ಯವನ್ನೂ ಜಿಲ್ಲಾಡಳಿತವೇ ನಡೆಸಲಿದೆ ಎಂದು ಹೇಳಿದರು.
ಮುಂದಿನ ಹತ್ತು ದಿನಗಳ ಅವಧಿಯಲ್ಲಿ ಸಮರ್ಪಕ ರೀತಿಯ ಪರಿಹಾರ ಕಾರ್ಯ ಅನಾವರಣಗೊಳ್ಳಲಿದೆ ಎಂದು ಮೊಯ್ಲಿ ತಿಳಿಸಿದರು.
ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ತಾನು ಈ ಬಗ್ಗೆ ಯಾವುದೇ ಹೇಳಿಕೆ ನೀಡುವಂತಿಲ್ಲ ಎಂದು ತಿಳಿಸಿದರು.
ಸಚಿವರೊಂದಿಗೆ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ, ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಕುಂತಲಾ ಶೆಟ್ಟಿ, ಮುಂದಾಳುಗಳಾದ ಜೋಹರಾ ನಿಸಾರ್ ಅಹಮ್ಮದ್, ಎಂ.ಎಸ್. ಮಹಮ್ಮದ್, ಸಾಹುಲ್ ಹಮೀದ್, ಅಸ್ಕರಾಲಿ, ಸಂತ್ರಸ್ತರ ಪರಿಹಾರ ಸಮಿತಿ ಮುಂದಾಳು ಅಶೋಕ್ ರೈ, ತೋಯಜಾಕ್ಷ ಶೆಟ್ಟಿ ಮೊದಲಾದವರು ಇದ್ದರು.
ಪರಿಹಾರ ನೀಡಲು 12 ದಿನ ಗಡುವು
ಅಗ್ನಿ ದುರಂತದಿಂದ ನತದೃಷ್ಟರ ಕುಟುಂಬಕ್ಕೆ ಇನ್ನು ಹನ್ನೆರಡು ದಿನಗಳ ಒಳಗೆ ಬೇಕಾದ ಪರಿಹಾರವನ್ನು ಎಚ್ಪಿಸಿಎಲ್ ಕಂಪನಿ ಕೊಡದೇ ಇದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಪೆರ್ನೆ ಅನಿಲ ದುರಂತ ಸಂತ್ರಸ್ತರ ಪರಿಹಾರ ಸಮಿತಿ ಹೇಳಿದೆ.
ಸಮಿತಿ ಅಧ್ಯಕ್ಷ ಕೋಡಿಂಬಾಡಿ ಅಶೋಕ್ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಚ್ಪಿಸಿಎಲ್ ನಿರ್ಲಕ್ಷ್ಯಅಕ್ಷಮ್ಯ. ಅದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಮೃತಪಟ್ಟ ಪ್ರತಿ ಕುಟುಂಬಕ್ಕೆ ಕನಿಷ್ಠ ತಲಾ ರು. 25 ಲಕ್ಷ ಪರಿಹಾರ, ಗಾಯಗೊಂಡವರಿಗೆ ರು. 10-12 ಲಕ್ಷ ಪರಿಹಾರ, ಮನೆ ಕಳೆದುಕೊಂಡವರಿಗೆ ಮನೆಗಳ ನಿರ್ಮಾಣ, ಅನಾಥರಾದ ಮಕ್ಕಳ ವಿದ್ಯಾಭ್ಯಾಸ, ಮೃತ ಕುಟುಂಬದ ನೌಕರರ ಕುಟುಂಬಕ್ಕೆ ಉದ್ಯೋಗ ನೀಡಬೇಕು. ಅದನ್ನು ಪೂರೈಸಿಕೊಡಲು 12 ದಿನಗಳ ಗಡುವು ನೀಡಿದ್ದೇವೆ. ವಿಫಲವಾದರೆ ಎಚ್ಪಿಸಿಎಲ್ಗೆ ಮುತ್ತಿಗೆ, ಹೆದ್ದಾರಿಯಲ್ಲಿ ಟ್ಯಾಂಕರ್ಗಳಿಗೆ ನಿರ್ಬಂಧದಂಥ ಹೋರಾಟಕ್ಕೆ ಮುಂದಾಗಲೇ ಬೇಕಾಗುತ್ತದೆ ಹೇಳಿದರು.
ಪರಿಹಾರ ಸಮಿತಿ ಈಗಾಗಲೇ ರು. ಆರು ಲಕ್ಷ ಪರಿಹಾರ ನಿಧಿ ಸಂಗ್ರಹಿಸಿದೆ. ರು. 30 ಲಕ್ಷ ಗುರಿ ಹೊಂದಿದ್ದೇವೆ. ಜನರ ಸ್ಪಂದನೆ ಮುಂದುವರಿದಿದೆ ಎಂದರು.
ತೋಯಜಾಕ್ಷ ಶೆಟ್ಟಿ, ಉಮ್ಮಪ್ಪ ಪೂಜಾರಿ, ಸುಲೈಮಾನ್ ಕಡುಂಬು, ಆಸ್ಕರ್ ಆಲಿ, ಮುರಳೀಧರ ರೈ ಮಠಂತಬೆಟ್ಟು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

