ಏಷ್ಯನ್ ಯೂತ್ ಗೇಮ್ಸ್ಗೆ ಸುಳ್ಯದ ಹಳ್ಳಿ ಹುಡುಗಿ
ಸುಳ್ಯ: ಸುಳ್ಯ ತಾಲೂಕಿನ ಹಳ್ಳಿ ಹುಡುಗಿಯೋರ್ವಳು ಆ.16ರಿಂದ 25ರ ವರೆಗೆ ಚೀನಾದ ನಾನ್ಜಂಗ್ನ ಒಲಿಂಪಿಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಏಷ್ಯನ್ ಯೂತ್ ಗೇಮ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಾಳೆ.
ತೀರಾ ಗ್ರಾಮೀಣ ಪ್ರದೇಶ ಕೊಲ್ಲಮೊಗ್ರದ ಕ್ರೀಡಾ ಪ್ರತಿಭೆ ನಮಿತಾ ಗೋಳ್ಯಾಡಿ ಗುಂಡೆಸೆತ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ. ಬಡ ಕುಟುಂಬದಿಂದ ಬಂದಿರುವ ಈ ಯುವತಿಗೆ ಮುಂದಿನ ಸಾಧನೆಗೆ ಸಹೃದಯರ ಸಹಕಾರ ಬೇಕಿದೆ.
ಆಳ್ವಾಸ್ ವಿದ್ಯಾರ್ಥಿನಿ: ಮೂಡುಬಿದಿರೆ ಆಳ್ವಾಸ್ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿ ನಮಿತಾ ಕೇರಳದಲ್ಲಿ ನಡೆದ ರಾಷ್ಟ್ರೀಯ ಯೂತ್ ಗೇಮ್ಸ್ನಲ್ಲಿ ಮಾಡಿದ 13.56 ಮೀಟರ್ ಸಾಧನೆ ಆಧಾರದಲ್ಲಿ ಈ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ.
ದಾಖಲೆಗಳು ಬಗಲಿಗೆ: ಕೊಲ್ಲಮೊಗ್ರು ಗ್ರಾಮದ ಗೋಳ್ಯಾಡಿಯ ಕುಶಾಲಪ್ಪ ಗೌಡ-ಪುಷ್ಪಾವತಿ ದಂಪತಿಯ ಪ್ರಥಮ ಪುತ್ರಿ ನಮಿತಾ ಕಳೆದ ಐದಾರು ವರ್ಷಗಳಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದ ಗುಂಡೆಸೆತ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾಳೆ.
14 ಮತ್ತು 16ನೇ ವಯಸ್ಸಿನ ಗುಂಡೆಸೆತ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಎರಡು ದಾಖಲೆ ಈಕೆಯ ಹೆಸರಿನಲ್ಲಿದೆ. 14ನೇ ವರ್ಷದೊಳಗಿನ ವಿಭಾಗದಲ್ಲಿ 9.47 ಮೀಟರ್, 16ನೇ ವಯಸ್ಸಿನ ವಿಭಾಗದಲ್ಲಿ 13.29 ಮೀಟರ್ ದಾಖಲೆಯ ಸಾಧನೆಯ ಮಾಡಿರುವ ಈಕೆ ಇತ್ತೀಚೆಗಷ್ಟೇ ಶಿವಮೊಗ್ಗದಲ್ಲಿ ನಡೆದಿರುವ 18ನೇ ವಯಸ್ಸಿನ ಕ್ರೀಡಾ ಕೂಟದಲಿ13.13 ಮೀಟರ್ನ ಮತ್ತೊಂದು ದಾಖಲೆ ಬರೆದಿದ್ದಾಳೆ.
ನಿರಂತರ ಸಾಧಕಿ: ಚಿಕ್ಕಂದಿನಿಂದಲೇ ಕ್ರೀಡಾ ಕ್ಷೇತ್ರದ ಉಜ್ವಲ ಪ್ರತಿಭೆಯಾಗಿ ಹೊರಹೊಮ್ಮಿದ ಈಕೆ ಒಂದರಿಂದ ಏಳನೇ ತರಗತಿವರೆಗೆ ಪ್ರಾಥಮಿಕ ಶಿಕ್ಷಣವನ್ನು ಕೊಲ್ಲಮೊಗ್ರ ಸ.ಹಿ.ಪ್ರಾ.ಶಾಲೆಯಲ್ಲಿ ಪೂರೈಸಿದ್ದು, ಅಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಗೋಪಾಲ್ ಏನೆಕಲ್ ಮಾರ್ಗದರ್ಶನ ಹಾಗೂ ತರಬೇತಿಯೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಾ ಮುನ್ನಡೆದಳು.
ಎಂಟನೇ ತರಗತಿಯಿಂದಲೇ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕ್ರೀಡಾ ಕೋಟಾದಲ್ಲಿ ಅವಕಾಶ ಪಡೆದ ಈಕೆ ಈಗಲೂ ಅಲ್ಲಿ ಶಿಕ್ಷಣ ಮುಂದುವರಿಸುತ್ತಿದ್ದಾಳೆ. ದೈಹಿಕ ಶಿಕ್ಷಕ ರಾಜೀವ್ ಮಾರ್ಗದರ್ಶನ ಮಾಡುತ್ತಿದ್ದಾರೆ.
ಗುಂಡೆಸೆತ ವಿಭಾಗದಲ್ಲಿ ಅಂತಾರಾಷ್ಟ್ರೀಯ ಸಾಧನೆ ಮಾಡಿರುವ ನಮಿತಾ ಇದಲ್ಲದೆ ಕಬಡ್ಡಿ, ವಾಲಿಬಾಲ್, ತ್ರೋಬಾಲ್, ಡಿಸ್ಕಸ್ ಎಸೆತ ವಿಭಾಗಗಳಲ್ಲೂ ಸಾಧನೆ ಮಾಡಿದ್ದಾಳೆ.
ಬೇಕಿದೆ ಸಹಾಯ ಹಸ್ತ: ಹಳ್ಳಿ ಹುಡುಗಿ ನಮಿತಾ ಗೋಳ್ಯಾಡಿ ಬಡಕುಟುಂಬದಿಂದ ಬಂದ ಕ್ರೀಡಾ ಪ್ರತಿಭೆ. ಕುಶಾಲಪ್ಪ ಗೌಡ-ಪುಷ್ಪಾವತಿ ದಂಪತಿ ಪುತ್ರಿಯರ ಪೈಕಿ ಈಕೆ ಹಿರಿಯವಳು. ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿ ಈಗ ಭಾರತವನ್ನು ಪ್ರತಿನಿಧಿಸುವ ಮೂಲಕ ದೇಶದ ಗೌರವಕ್ಕೆ ಪಾತ್ರಳಾಗಿರುವ ಈಕೆಯ ಕ್ರೀಡಾ ಬದುಕಿಗೆ ಕ್ರೀಡಾಭಿಮಾನಿಗಳ ಸಹಾಯಹಸ್ತ ಬೇಕಾಗಿದೆ.
ಈಕೆಗೆ ಸಹಾಯಧನ ನೀಡುವವರು ತಾಯಿ ಪುಷ್ಪಾವತಿ ಹೆಸರಿಗೆ (ಐಎಫ್ಎಸ್ಸಿ ಕೋಡ್: ಗಐಒಇ0001311) ಡಿ.ಡಿ. ಅಥವಾ ವಿಜಯ ಬ್ಯಾಂಕ್ ಕೊಲ್ಲಮೊಗ್ರು ಖಾತೆ ಸಂಖ್ಯೆ: 131101011000363ಗೆ ಕಳುಹಿಸಿ ಕೊಡಬಹುದು.
ಸಂಪರ್ಕ: 8861925625 (ನಮಿತಾರ ಶಿಕ್ಷಕ ಗೋಪಾಲ್ ಅವರ ಸಂಖ್ಯೆ).
ಸರ್ಕಾರದ ನೆರವು ನಿರೀಕ್ಷೆಯಲ್ಲಿ...
ಶಿವಮೊಗ್ಗದಲ್ಲಿ ನಡೆಯುತ್ತಿರುವ ಜೂನಿಯರ್ ಅಥ್ಲೆಟಿಕ್ಸ್ ಸ್ಪೋರ್ಟ್ಸ್ನಲ್ಲಿ ಭಾಗವಹಿಸುತ್ತಿದ್ದ ನಮಿತಾ 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಭಾರತವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದಿದ್ದಾಳೆ. ಗ್ರಾಮೀಣ ಪ್ರದೇಶದಿಂದ ಬಂದ ತಾನು ಈ ಸಾಧನೆ ಮಾಡಬಹುದೆಂದು ನಿರೀಕ್ಷಿಸಿರಲಿಲ್ಲ. ತನ್ನ ಕ್ರೀಡಾ ಬದುಕಿಗೆ ಸರ್ಕಾರದಿಂದ ಈವರೆಗೂ ಯಾವುದೇ ಸಹಾಯ ಸಿಕ್ಕಿಲ್ಲ. ಎಲ್ಲ ಸಹಾಯವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯವರೇ ನೀಡಿದ್ದಾರೆ. ಸರ್ಕಾರ ತನ್ನಂತಹ ಕ್ರೀಡಾ ಪಟುಗಳಿಗೆ ಸಹಾಯ ನೀಡಬೇಕು ಎಂದು ಅಪೇಕ್ಷಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

