ದಕ್ಷಿಣ ಕನ್ನಡ

ಸಾಧಾರಣ ಮಳೆ

Published On :

ಮಂಗಳೂರು: ಜಿಲ್ಲೆಯಲ್ಲಿ ಗುರುವಾರ ಸಾಧಾರಣ ಮಳೆಯಾಗಿದೆ. ಮಧ್ಯಾಹ್ನದವರೆಗೆ ಬಿಸಿಲು ಕಾಣಿಸಿದ್ದು, ಆಗಾಗ ಜೋರಾದ ಮಳೆ ಸುರಿದು ನಾಪತ್ತೆಯಾಗುತ್ತಿತ್ತು. ಗುರುವಾರ ಬೆಳಗ್ಗಿನವರೆಗೆ ಜಿಲ್ಲೆಯ ಕಡಬದಲ್ಲಿ 79.0 ಮಿ.ಮೀ. ಗರಿಷ್ಠ ಮಳೆಯಾಗಿದೆ.

'ಕನ್ನಡದ ಭೀಷ್ಮಾಚಾರ್ಯ' ಡಾ. ಸಂಜೀವ ಶೆಟ್ಟಿ ನಿಧನ
ಉಡುಪಿ: ಮುಂಬೈನಲ್ಲಿ ಕನ್ನಡದ ಭೀಷ್ಮಾಚಾರ್ಯ ಬಿರುದಾಂಕಿತ ಶಿಕ್ಷಕ ಡಾ.ಕೆ. ಸಂಜೀವ ಶೆಟ್ಟಿ ಅವರು ಗುರುವಾರ ಮುಂಜಾನೆ ಮುಂಬೈನ ಆಸ್ಪತ್ರೆಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು. ಮಂಗಳೂರಿನ ಮೂಲ್ಕಿ ಸೀಮೆಯ ಕುಬೆವೂರು ಗ್ರಾಮದ ರಾಯರಬೆಟ್ಟು ಮನೆಯಲ್ಲಿ 1945ರಲ್ಲಿ ಜನಿಸಿದ ಅವರು ಸ್ಥಳೀಯ ಕಿಲ್ಪಾಡಿ ಶಾಲೆಯಲ್ಲಿ ಮತ್ತು ಮೂಲ್ಕಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದು, ಮುಂಬೈಗೆ ತೆರಳಿ ಹಗಲು ಹೊಟೇಲ್‌ನಲ್ಲಿ ದುಡಿದು ರಾತ್ರಿ ಶಾಲೆಯಲ್ಲಿ ಶಿಕ್ಷಣ ಪಡೆದು ಬಳಿಕ ಮುಂಬೈ ವಿವಿಯಲ್ಲಿ ಎಂಎ ಮತ್ತು ಡಿಎಚ್‌ಇ ಪದವಿಗಳನ್ನು ಗಳಿಸಿ ಘನ ವಿದ್ವಾಂಸರೆನಿಸಿದ್ದರು.
ಲಕ್ಷ್ಮೀಶನ ಚೈಮಿನಿ ಭಾರತ ಕಥಾವಸ್ತು ವಿವೇಚನೆ ಎಂಬ ಮಹಾಪ್ರಬಂಧಕ್ಕೆ ಮುಂಬಯಿ ವಿಶ್ವವಿದ್ಯಾಲಯದ ಪಿಎಚ್‌ಡಿ ಪದವಿ ಪಡೆದು, ಕೆ.ಜೆ. ಸೋಮೈಯಾ ಕಾಲೇಜಿನ ಕನ್ನಡ ವಿಭಾಗದಲ್ಲಿ 1973ರಲ್ಲಿ ಪ್ರಾಧ್ಯಾಪಕರಾಗಿ ಸೇರಿ, ವಿಭಾಗ ಮುಖ್ಯಸ್ಥರಾಗಿ 32 ವರ್ಷ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದರೂ ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದರು.
ಅವಿವಾಹಿತರಾಗಿದ್ದ ಶೆಟ್ಟರು ಮುಂಬೈಯ ನೂರಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿ, ಸದಸ್ಯ, ಮಾರ್ಗದರ್ಶಕರಾಗಿ ಸಕ್ರಿಯರಾಗಿದ್ದರು, ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿ, ಸನ್ಮಾನ, ಪ್ರಶಸ್ತಿಗಳನ್ನು ಪಡೆದು ಸಾರಸ್ವತ ಲೋಕಕ್ಕೆ ಪರಿಚಿತರಾಗಿದ್ದಾರೆ.

ಶ್ಯಾಮಲಾ ಶೆಣೈ ನಿಧನ
ಉಡುಪಿ: ಇಲ್ಲಿನ ಚಿಟ್ಪಾಡಿ ಗ್ರಾಮದ ಬೇಳೂರು ರಾಮರಾಯ ಶೆಣೈ ಅವರ ಪತ್ನಿ ಶ್ಯಾಮಲಾ ಆರ್. ಶೆಣೈ (83) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಬೆಳಗ್ಗೆ ನಿಧನರಾದರು. ಅವರು ಪತಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಇಂದು 'ಅನುಸಂಧಾನ ಕಾರ್ಯಕ್ರಮ'
ಮಂಗಳೂರು: ಕಲ್ಕೂರ ಪ್ರತಿಷ್ಠಾನದ ವತಿಯಿಂದ ಆ. 9 ರಂದು ಸಂಜೆ 4ಕ್ಕೆ ಕೊಡಿಯಾಲ್‌ಬೈಲ್ ಶಾರದಾ ವಿದ್ಯಾಲಯದಲ್ಲಿ ಕವಿ ಡಾ. ಬೆಟಗೇರಿ ಕೃಷ್ಣ ಶರ್ಮ 'ಅನುಸಂಧಾನ ಕಾರ್ಯಕ್ರಮ' ನಡೆಯಲಿದೆ. ಕರ್ಣಾಟಕ ಬ್ಯಾಂಕ್ ಮಹಾಪ್ರಬಂಧಕ ಎಂ.ಎಸ್. ಮಹಾಬಲೇಶ್ವರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಏರ್ಯ ಲಕ್ಷ್ಮಿನಾರಾಯಣ ಆಳ್ವ ಕಾರ್ಯಕ್ರಮ ನಿರ್ವಹಿಸುವರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಕವಿನಮನ ಸಲ್ಲಿಸುವರು. ಶಾರದಾ ವಿದ್ಯಾಲಯದ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ಉಪಾಧ್ಯಕ್ಷ ಕೆ.ಎಸ್. ಕಲ್ಲೂರಾಯ ಪಾಲ್ಗೊಳ್ಳುವರು ಎಂದು ಕಲ್ಕೂರ ಪ್ರತಿಷ್ಠಾನ ಪ್ರಕಟಣೆ ತಿಳಿಸಿದೆ.

ಮಂಗಳೂರು-ಕೊಯನಾಡು ಬಸ್
ಮಂಗಳೂರು: ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕೊಯನಾಡಿನಲ್ಲಿ ರಸ್ತೆ ಕುಸಿತದಿಂದ ಸಂಚಾರ ಸ್ಥಗಿತಗೊಂಡ ಹಿನ್ನಲೆಯಲ್ಲಿ ಮಂಗಳೂರು-ಕೊಯನಾಡು ಮಧ್ಯೆ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ 14 ಬಸ್ ಸಂಚಾರ ಪ್ರಾರಂಭಿಸಲಾಗಿದೆ.  ಬೆಳಗ್ಗೆ 6.30ರಿಂದ ಸಂಜೆ 5.30ರ ವರೆಗೆ 14 ಟ್ರಿಪ್ ಹಾಗೂ ಕೊಯನಾಡಿನಿಂದಲೂ ಮಂಗಳೂರಿಗೆ 14 ಟ್ರಿಪ್ ಸಂಚರಿಸಲಿದೆ. ಆ.8 ರಿಂದಲೇ ಬಸ್ ಓಡಾಟ ಪ್ರಾರಂಭಿಸಲಾಗಿದೆ ಎಂದು ಮಂಗಳೂರು ವಿಭಾಗೀಯ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಒಂದು ಅವಧಿ ನಿರ್ವಹಣೆ
ಮಂಗಳೂರು: ದಕ್ಷಿಣ ರೇಲ್ವೆ ವ್ಯಾಪ್ತಿಯಲ್ಲಿ ಕಂಪ್ಯೂಟರೀಕೃತ ರೇಲ್ವೆ ಟಿಕೆಟ್ ಬುಕ್ಕಿಂಗ್ ಸೆಂಟರ್‌ಗಳು ರಮ್ಜಾನ್ ದಿನ ಶುಕ್ರವಾರ ಪ್ರತಿ ಭಾನುವಾರದಂತೆ ಬೆಳಗ್ಗೆ 8ರಿಂದ ಮಧ್ಯಾಹ್ನ 2 ಗಂಟೆ ವರೆಗೆ ದಿನದ ಒಂದು ಅವಧಿ ಕಾರ್ಯನಿರ್ವಹಿಸಲಿವೆ ಎಂದು ಫಾಲ್ಘಾಟ್ ರೇಲ್ವೆ ವಿಭಾಗ ಪ್ರಕಟಣೆ ತಿಳಿಸಿದೆ.

ಅಂಚೆ ಕಾರ್ಡ್‌ನಲ್ಲಿ ಚಿತ್ರ ಸ್ಪರ್ಧೆ
ಪುತ್ತೂರು: ಸ್ವಾತಂತ್ರ್ಯೋತ್ಸವ ಪ್ರಯುಕ್ತ 1ರಿಂದ 10ನೇ ತರಗತಿ ಮಕ್ಕಳಿಗೆ ಅಂಚೆ ಕಾರ್ಡ್‌ನಲ್ಲಿ ರಾಷ್ಟ್ರ ನಾಯಕರ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಬೊಳುವಾರು ಸಾಂಸ್ಕೃತಿಕ ಕಲಾಕೇಂದ್ರ ಏರ್ಪಡಿಸಿದೆ. ಆಸಕ್ತರು ಅಂಚೆ ಕಾರ್ಡ್‌ನ ಒಂದು ಮಗ್ಗುಲಲ್ಲಿ ಪೆನ್ಸಿಲ್‌ನಲ್ಲಿ ರಾಷ್ಟ್ರ ನಾಯಕರ ಚಿತ್ರ ಬಿಡಿಸಿ ಇನ್ನೊಂದು ಮಗ್ಗುಲಲ್ಲಿ ತಮ್ಮ ವಿಳಾಸ, ತರಗತಿ, ದೂರವಾಣಿ ಸಂಖ್ಯೆ ಬರೆದು ಆ.15ರೊಳಗೆ ಕೇಂದ್ರಕ್ಕೆ ಕಳುಹಿಸಬೇಕು. ಪ್ರತಿ ತರಗತಿ ಮಟ್ಟದಲ್ಲಿ ಬಹುಮಾನ ನೀಡಲಾಗುವುದು. ವಿಜೇತರಿಗೆ ಸೆಪ್ಟೆಂಬರ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.