ದಕ್ಷಿಣ ಕನ್ನಡ

ಜಾಗತಿಕ ಕೊಂಕಣಿ ಪುರಸ್ಕಾರಕ್ಕೆ ಆಹ್ವಾನ

Published On :

ಮಂಗಳೂರು: ಮಾಂಡ್ ಸೋಭಾಣ್ ಆಶ್ರಯದಲ್ಲಿ 5ನೇ ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರ ಹಾಗೂ ಜೀವಮಾನ ಸಾಧನೆ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಡಿ.8ರಂದು ಸಂಜೆ 6.30ಕ್ಕೆ ಕಲಾಂಗಣ್‌ನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಸೆ.30ರಂದು ಅರ್ಜಿ ಸಲ್ಲಿಸಲು ಕೊನೆ ದಿನ. ಶ್ರೇಷ್ಠ ಗಾಯಕಿ, ಶ್ರೇಷ್ಠ ಗಾಯಕ, ಶ್ರೇಷ್ಠ ಗೀತೆ ರಚನೆ, ಶ್ರೇಷ್ಠ ಸಂಗೀತ ರಚನೆ, ಶ್ರೇಷ್ಠ ಸಂಗೀತ ಸಂಯೋಜನೆ, ಶ್ರೇಷ್ಠ ಸಂಗೀತ ಆಲ್ಬಮ್‌ಗಳಿಗೆ ಪುರಸ್ಕಾರ ಲಭಿಸಲಿದೆ. ಪ್ರತಿ ಪುರಸ್ಕಾರಕ್ಕೆ 25 ಸಾವಿರ, ಜೀವಮಾನ ಸಾಧನೆಗೆ 1 ಲಕ್ಷ ನಗದು ನೀಡಿ ಪುರಸ್ಕರಿಸಲಾಗುವುದು. ಹೆಚ್ಚಿನ ಮಾಹಿತಿಗೆ ದೂ.0824-2230489, 2232239ನ್ನು ಸಂಪರ್ಕಿಸಬಹುದು. ಅರ್ಜಿಯನ್ನು ಕಲಾಂಗಣ್, ಮಕಾಳೆ, ಶಕ್ತಿನಗರ, ಮಂಗಳೂರು-575016 ವಿಳಾಸಕ್ಕೆ ಕಳುಹಿಸಬಹುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಂಡ್ ಸೋಭಾಣ್ ಗುರಿಕ್ಕಾರ ಎರಿಕ್ ಒಝಾರಿಯೊ ತಿಳಿಸಿದ್ದಾರೆ.

ಬಳ್ಳಾರಿ ಜಿಪಂನಲ್ಲಿ 'ಕೈ'ಚಳಕ!
ಬಳ್ಳಾರಿ: ಬಳ್ಳಾರಿ ಜಿಪಂ ಅಧ್ಯಕ್ಷೆ ಬಿಜೆಪಿಯ ಸುಮಂಗಳಮ್ಮ ಗುಬಾಜಿ ವಿರುದ್ಧ ಅವಿಶ್ವಾಸ ಮಂಡಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಬಿಜೆಪಿ ತೆಕ್ಕೆಯಲ್ಲಿದ್ದ ಅಧ್ಯಕ್ಷಗಿರಿಯನ್ನು ಕಾಂಗ್ರೆಸ್ ಒಲಿಸಿಕೊಂಡಿದ್ದು ನೂತನ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ಬಾಕಿ ಇದೆ. ಇದರಿಂದ ಬಿಜೆಪಿ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಕಾರ್ಯಕರ್ತರಿಗೆ ಮುಖಭಂಗವಾಗಿದೆ. 35 ಸದಸ್ಯ ಬಲದ ಬಳ್ಳಾರಿ ಜಿಪಂನಲ್ಲಿ ಕಾಂಗ್ರೆಸ್‌ನ 16, ಬಿಜೆಪಿ 17 ಹಾಗೂ ಜೆಡಿಎಸ್ 1 ಸದಸ್ಯ ಬಲ ಹೊಂದಿದ್ದವು. ಬುಧವಾರ ಅವಿಶ್ವಾಸ ಮಂಡನೆಯಾದ ವೇಳೆ ಕಾಂಗ್ರೆಸ್ ಪರ ಜೆಡಿಎಸ್‌ನ ಹಚ್ಚೊಳ್ಳಿ ಕ್ಷೇತ್ರದ ಸದಸ್ಯೆ ಸರಸ್ವತಿ ಹಾಗೂ ಬಿಜೆಪಿಯ ಕೋಗಳಿ ಕ್ಷೇತ್ರದ ಸದಸ್ಯೆ ಕರಿಬಸವನಗೌಡರ ರತ್ನಮ್ಮ ಮತ ಹಾಕಿದರು. ಇದರಿಂದಾಗಿ ಬಿಜೆಪಿಯ ಹಾಲಿ ಜಿಪಂ ಅಧ್ಯಕ್ಷೆ ಸುಮಂಗಳಮ್ಮ ಗುಬಾಜಿ ವಿರುದ್ಧ ಅವಿಶ್ವಾಸ ಮಂಡನೆ ಯಶಸ್ವಿಯಾದಂತಾಗಿದೆ. ಜಿಪಂ ಅಧ್ಯಕ್ಷೆ ಸುಮಂಗಳಮ್ಮ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಸರಿಯಾಗಿ ಮಾಡುತ್ತಿಲ್ಲ ಹಾಗೂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಕಾರಣ ನೀಡಿ, ಅವಿಶ್ವಾಸ ಮಂಡನೆಯ 18 ಜನ ಸದಸ್ಯರ ಸಹಿಯುಳ್ಳ ಪತ್ರವನ್ನು ಆ.5ರಂದು ನೀಡಿದ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿತ್ತು. ನೂತನ ಅಧ್ಯಕ್ಷರು ಆಯ್ಕೆಯಾಗುವವರೆಗೆ ಉಪಾಧ್ಯಕ್ಷೆ ಮಮತಾ ಸುರೇಶ್ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.

ಸೆ.1ರಂದು ಕಯ್ಯಾರ ಕಿಂಞ್ಞಣ್ಣ ರೈಗೆ ಸುಂದರರಾಮ ಶೆಟ್ಟಿ ಪ್ರಶಸ್ತಿ
ಮೂಲ್ಕಿ: ಹಿರಿಯ ಸಾಹಿತಿ ನಾಡೋಜ ಡಾ. ಕಯ್ಯಾರ ಕಿಂಞ್ಞಣ್ಣ ರೈ ಅವರಿಗೆ ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಸಮಾರಂಭ ಸೆ.1ರಂದು ಬೆಳಗ್ಗೆ ಕಿನ್ನಿಗೋಳಿಯ ರಾಜಾಂಗಣದಲ್ಲಿ ನಡೆಯಲಿದೆ.
ಇಲ್ಲಿನ ಸುಂದರರಾಮ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮತ್ತು ಮೂಲ್ಕಿ ಬಂಟರ ಸಂಘ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದವರಿಗೆ ಪ್ರತಿವರ್ಷ ನಗದು ಸಹಿತ ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ನೀಡಲಾಗುತ್ತಿದೆ. ಸೆ.1ರಂದು ನಡೆಯಲಿರುವ ಮೂಲ್ಕಿ ಬಂಟರ ಸಂಘದ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಡಾ. ಕಯ್ಯಾರ ಕಿಂಞ್ಞಣ್ಣ ರೈ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಮನೋಹರ್ ಶೆಟ್ಟಿ ಹಾಗೂ ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.