ಕಾರ್ಕಳ ಅನಂತಶಯನ ಗರ್ಭಗುಡಿ ದಾರಂದ ಕಾಷ್ಠ ಶಿಲ್ಪ ನಾಶ
ಮಂಗಳೂರು: ಕಾರ್ಕಳ ಅನಂತಶಯನ ದೇವಸ್ಥಾನದ ಗರ್ಭಗುಡಿ ಮಹಾದ್ವಾರದ ದಾರಂದ ಮೂಲೆಗಳು ಗೆದ್ದಲು ಹಿಡಿದು ತುಂಡಾಗಿ ಬಿದ್ದಿವೆ. 4 ಶತಮಾನಗಳ ಹಿಂದಿನ ಅಪರೂಪದ ಕಾಷ್ಠ ಶಿಲ್ಪ ನಷ್ಟವಾಗಿದೆ.
ಗರ್ಭಗುಡಿಯ ದ್ವಾರವೇ ಹತ್ತು ಅಡಿ ಎತ್ತರ, 7 ಅಡಿ ಅಗಲವಿದೆ. ದಾರಂದ ಮೇಲ್ಭಾಗದಲ್ಲಿ ನಿರ್ಮಿಸಲಾಗಿದ್ದ ಅಪರೂಪದ ನೃತ್ಯ ಭಂಗಿಯ ಶಿಲ್ಪಗಳು ನಾಶವಾಗಿದೆ.
ದಾರಂದಕ್ಕೆ ಗೆದ್ದಲು ಹಿಡಿದಿರುವ ಬಗ್ಗೆ ಹಲವು ವರ್ಷಗಳ ಹಿಂದೆಯೇ ಪುರಾತತ್ವ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಆದರೆ ಇಲಾಖೆಗೇ ಗೆದ್ದಲು ಹಿಡಿದಿತ್ತು. ಒಳಭಾಗದಲ್ಲಿ ಗೆದ್ದಲು ಹಿಡಿದು ಮರ ಸಂಪೂರ್ಣವಾಗಿ ಮಣ್ಣಾಗಿ ಪರಿವರ್ತನೆಯಾಗಿತ್ತು.
ಭಾನುವಾರ ಗೆದ್ದಲು ನಿಯಂತ್ರಣ ಮಿಶ್ರಣ ಹಾಕಲು ಪರಿಶೀಲಿಸುತ್ತಿದ್ದ ವೇಳೆ ಕಾಷ್ಠಶಿಲ್ಪಗಳು ಹಾಳಾಗಿರುವುದು ಗಮನಕ್ಕೆ ಬಂದಿದೆ. ಸೋಮವಾರ ಬೆಳಗ್ಗೆ ದಾರಂದದ ಮೂಲೆಗಳೇ ಕುಸಿದು ಬಿದ್ದಿವೆ.
ದೇವಸ್ಥನ ಆಡಳಿತ ಮೊಕ್ತೇಸರ ಪ್ರಶಾಂತ್ ಭಟ್ ಹೇಳುವುದು ಹೀಗೆ: ಗರ್ಭಗುಡಿ ಒಳಭಾಗದ ಮರದ ಕುಸುರಿ ಕೆತ್ತನೆಗಳು ಗೆದ್ದಲು ಹಿಡಿದಿರುವುದನ್ನು ತೆಗೆಯುವಂತೆ ಎರಡು ವರ್ಷಗಳಿಂದ ನಾವು ಹೇಳುತ್ತಿದ್ದೇವೆ. ಆದರೆ ಅವರು ಗಮನವೇ ಹರಿಸಿಲ್ಲ. ನಾವಾದರೂ ಗೆದ್ದಲು ತೆಗೆಯೋಣ ಎಂದು ತೀರ್ಮಾನಿಸಿದೆವು. ಭಾನುವಾರ ಪೆಸ್ಟ್ ಕಂಟ್ರೋಲ್ ಹಾಕಲು ಹೋಗುತ್ತಿದ್ದ ವೇಳೆ ದಾರಂದ ಪೂರ್ತಿ ಹಾಳಾಗಿರುವುದು ಗಮನಕ್ಕೆ ಬಂತು.
ಆವರಣ ಗೋಡೆ 4 ತಿಂಗಳಲ್ಲಿ ಬಿತ್ತು!: ಅನಂತಶಯನ ದೇವಸ್ಥಾನದ ಆವರಣ ಗೋಡೆಯನ್ನು 36 ಲಕ್ಷ ವೆಚ್ಚದಲ್ಲಿ ನವೀಕರಿಸಲಾಗಿತ್ತು. ಜನವರಿಯಲ್ಲಿ ನಿರ್ಮಾಣಗೊಂಡ ಗೋಡೆ ಜೂನ್ ಆರಂಭದ ಮೊದಲ ಮಳೆಗೆ ಕುಸಿದು ಬಿದ್ದಿತ್ತು. ರಸ್ತೆ ಪಕ್ಕ ಪಾರ್ಕ್ ಮಾಡಿದ ಕಾರುಗಳು ಜಖಂಗೊಂಡಿದ್ದವು.
400 ವರ್ಷಗಳ ಹಿಂದೆ ನಿರ್ಮಾಣಗೊಂಡ ಆವರಣಗೋಡೆ ಎರಡು ಕಡೆಗಳಲ್ಲಿ ಗಟ್ಟಿಮುಟ್ಟಾಗಿದೆ. ಆದರೆ ಪುರಾತತ್ವ ಇಲಾಖೆ ಟೆಂಡರು ಕರೆದು ನಿರ್ಮಿಸಿದ ಹೊಸ ಆವರಣ ಗೋಡೆ ನಾಲ್ಕೇ ತಿಂಗಳಲ್ಲಿ ಬಿದ್ದು ಹೋಗಿದೆ. ಇದೀಗ ಮತ್ತೆ ಆವರಣಗೋಡೆ ನಿರ್ಮಾಣ ಕಾರ್ಯ ಆರಂಭವಾಗಿದೆ.
'ಕಳಪೆ ಕಾಮಗಾರಿ ತಪ್ಪಿಸಲು ಪುರಾತತ್ವ ಇಲಾಖೆಯೇ ಕಾರ್ಮಿಕರಿಂದ ಕೆಲಸ ಮಾಡುತ್ತಿದೆ. ಆವರಣಗೋಡೆಗೆ ಆಗುವ ಖರ್ಚನ್ನು ಗುತ್ತಿಗೆದಾರ ನೀಡುವಂತೆ ಸೂಚಿಸಿದ್ದಾರೆ' ಎಂದು ಆಡಳಿತ ಮೊಕ್ತೇಸರ ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಬಸದಿ ದೇವಸ್ಥಾನವಾಯಿತು!: 1567ರಲ್ಲಿ ಅನಂತಶಯನ ದೇವಸ್ಥಾನ ನಿರ್ಮಾಣಗೊಂಡಿದೆ. ಶೃಂಗೇರಿ ನರಸಿಂಹ ಭಾರತಿ ಸ್ವಾಮೀಜಿ ಕಾರ್ಕಳಕ್ಕೆ ಬಂದಾಗ ಸ್ವಾಗತಿಸಿದ ಜೈನರಸ, ತಮ್ಮ ಊರಿನಲ್ಲಿಯೇ ತಂಗುವಂತೆ ವಿನಂತಿಸುತ್ತಾರೆ. ಆಗ ಸ್ವಾಮೀಜಿ ದೇವಸ್ಥಾನ ಇಲ್ಲದ ಊರಲ್ಲಿ ನಾನು ತಂಗಲಾರೆ ಎಂದು ಪ್ರತಿಕ್ರಿಯಿಸುತ್ತಾರೆ. ಇದರಿಂದ ಭೈರವರಸ ಬಸದಿಗೆಂದು ನಿರ್ಮಿಸಿದ್ದ ಕಟ್ಟೋಣವನ್ನು ದೇವಾಲಯಕ್ಕೆಂದು ನೀಡುತ್ತಾರೆ. ಬೃಹತ್ ಸರೋವರದಲ್ಲಿ ಅಡಗಿಸಿಟ್ಟಿದ್ದ ಅನಂತಪದ್ಮನಾಭನ ಬೃಹತ್ ವಿಗ್ರಹವನ್ನು ಸ್ವಾಮೀಜಿ ಪ್ರತಿಷ್ಠಾಪಿಸಿರುವುದು ಇತಿಹಾಸ.
ಶ್ರೀದೇವಿ, ಭೂದೇವಿ ಸಹಿತ ಮಲಗಿ ತಲೆ ಎತ್ತಿರುವ ಅಪರೂಪದ ಭಂಗಿಯಲ್ಲಿ ಅನಂತಪದ್ಮನಾಭನ ವಿಗ್ರಹ ಇದೆ. ನಾಭಿಯಿಂದ ಹೊರಬಂದ ಬ್ರಹ್ಮನ ಮೂರ್ತಿ ಮನಮೋಹಕವಾಗಿದೆ.
-ಜಿತೇಂದ್ರ ಕುಂದೇಶ್ವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

