ಬ್ರಹ್ಮರಕೂಟ್ಲು ಟೋಲ್ ಸಂಗ್ರಹಕ್ಕೆ ವ್ಯಾಪಕ ವಿರೋಧ
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಬ್ರಹ್ಮರಕೂಟ್ಲುವಿನ ಟೋಲ್ ಫ್ಲಾಝಾಕ್ಕೆ ಆರಂಭದಲ್ಲೇ ವಿಘ್ನಗಳು ಅಂಟಿಕೊಂಡಿದ್ದು, ವಿವಿಧ ರಾಜಕೀಯ ಪಕ್ಷಗಳು ಸಂಘಟನೆಗಳು ಟೋಲ್ ವಿರುದ್ಧ ಧ್ವನಿಯೆತ್ತಿದ್ದು, ಗುರುವಾರ ಟೋಲ್ ವಿರುದ್ಧ ಪ್ರತಿಭಟನೆಗಳು ನಡೆಯಲಿವೆ.
ಹೆದ್ದಾರಿ ಇಲಾಖೆ ನಿಯಮದಂತೆ ಬ್ರಹ್ಮರಕೂಟ್ಲಿನಲ್ಲಿ ಬುಧವಾರ ಮಧ್ಯರಾತ್ರಿಯಿಂದಲೇ ಟೋಲ್ ಆರಂಭಗೊಂಡಿದೆ. ಇದರಿಂದಾಗಿ ಬುಧವಾರದಿಂದ ಪಾಣೆಮಂಗಳೂರು ನೇತ್ರಾವತಿ ಸೇತುವೆವರೆಗಿನ 4 ಕಿ.ಮೀ. ಅಂತರದಲ್ಲಿ ವಾಹನ ಚಾಲಕರು 2 ಕಡೆ ಟೋಲ್ ಪಾವತಿಸಬೇಕಾಗಿದೆ. ಕಳೆದ 10 ವರ್ಷಗಳಿಂದ ಸುಂಕ ವಸೂಲಿ ಮಾಡುತ್ತಿರುವ ಪಾಣೆಮಂಗಳೂರಿನ ಟೋಲ್ ಈ ಮೊದಲಿನಂತೆಯೇ ಮುಂದುವರಿಯಲಿದೆ.
ಬದಲಿದೆ ರಾಗ: ಬ್ರಹ್ಮರಕೂಟ್ಲಿನಲ್ಲಿ ಟೋಲ್ ಫ್ಲಾಝಾ ಆರಂಭಗೊಂಡ ನಂತರ ಪಾಣೆಮಂಗಳೂರು ಟೋಲ್ ಸಂಗ್ರಹ ಸ್ಥಗಿತಗೊಳ್ಳುತ್ತದೆ ಎಂದಿದ್ದ ಹೆದ್ದಾರಿ ಇಲಾಖೆ ಇದೀಗ ರಾಗ ಬದಲಿಸಿ, ಎರಡೂ ಟೋಲ್ಗಳಲ್ಲಿಯೂ ಟೋಲ್ ಸಂಗ್ರಹಕ್ಕೆ ಮುಂದಾಗಿರುವುದು ವಿವಿಧ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸುರತ್ಕಲ್-ಬಿ.ಸಿ. ರೋಡ್ ಚತುಷ್ಪಥ ರಸ್ತೆಯಲ್ಲಿ ಇನ್ನೂ ಸಮರ್ಪಕ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಟೋಲ್ ಸಂಗ್ರಹಕ್ಕೆ ಮುಂದಾಗಿರುವುದೂ ಕೂಡ ವಾಹನ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೆದ್ದಾರಿ ಇಲಾಖೆ ಬೆಳಗಾವಿಯಿಂದ ವಿಶೇಷ ತಂತ್ರಜ್ಞರನ್ನು ಕರೆಯಿಸಿ ಕಂಪ್ಯೂಟರ್ಗಳನ್ನು ಅಳವಡಿಸಿದೆ. ಟೋಲ್ ಫ್ಲಾಝಾ ಬಳಿಯಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ರಸ್ತೆ ಉಬ್ಬುಗಳನ್ನು ನಿರ್ಮಿಸಿದೆ.
ಟೋಲ್ ಸಂಗ್ರಹಕ್ಕೆ ಯುವಕರ ಪಡೆಯೇ ಸಿದ್ಧಗೊಂಡಿದ್ದು, ಬುಧವಾರ ಅವರಿಗೆ ಈ ಬಗ್ಗೆ ಸೂಕ್ತಮಾರ್ಗದರ್ಶನ ನೀಡಲಾಗಿದೆ. ಟೋಲ್ ಫ್ಲಾಝಾದ ಕೆಳಗಿನ ರಸ್ತೆ ಪಕ್ಕದಲ್ಲಿಯೇ ಮೂರು ಕಂಟೈನರ್ಗಳನ್ನು ಇಡಲಾಗಿದ್ದು, ಒಂದರಲ್ಲಿ ಟೋಲ್ ಫ್ಲಾಝಾದ ಕಚೇರಿ ಹಾಗೂ ಉಳಿದೆರಡರಲ್ಲಿ ಮಹಿಳೆಯರ ಹಾಗೂ ಪುರುಷರ ಶೌಚಾಲಯ ನಿರ್ಮಿಸಲಾಗಿದೆ.
ವಿರೋಧಗಳ ಸರಮಾಲೆ: ಟೋಲ್ ಸಂಗ್ರಹ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದ ಬೆನ್ನಲ್ಲೇ ಬಂಟ್ವಾಳ ಬಿಜೆಪಿ, ಎಸ್ಡಿಪಿಐ ಹಾಗೂ ದ.ಕ. ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನ್ ಚಾಲಕರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಟೋಲ್ ಸಂಗ್ರಹದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಹೇಳಿಕೊಂಡಿದ್ದಾರೆ.
ಬ್ರಹ್ಮರಕೂಟ್ಲು ಟೋಲ್ ಸಂಗ್ರಹ ಆರಂಭದ ದಿನದಂದೇ ಜಿ.ಪಂ. ಮಾಜಿ ಉಪಾಧ್ಯಕ್ಷ ತುಂಗಪ್ಪ ಬಂಗೇರ, ಎರಡು ಕಡೆ ಟೋಲ್ ಸಂಗ್ರಹ ಸರಿಯಲ್ಲ. ಹೀಗಾಗಿ ಪಾಣೆಮಂಗಳೂರು ಟೋಲ್ ಸಂಗ್ರಹಕ್ಕೆ ವಿರೋಧ ವ್ಯಕ್ತಪಡಿಸುವುದಾಗಿ ತಿಳಿಸಿದ್ದು, ಗುರುವಾರ ಪಾಣೆಮಂಗಳೂರಿನಲ್ಲಿ ಪ್ರತಿಭಟನಾ ಧರಣಿ ನಡೆಸಲು ನಿರ್ಧರಿಸಿದ್ದಾರೆ.
ಎರಡೂ ಪ್ರತ್ಯೇಕ ಹೆದ್ದಾರಿ
ಬ್ರಹ್ಮರಕೂಟ್ಲಿನಲ್ಲಿ ಟೋಲ್ ಸಂಗ್ರಹ ಪ್ರಾರಂಭದ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿಯ ಸಂಖ್ಯೆಯೂ ಬದಲಾವಣೆಯಾಗಲಿದೆ. ಸುರತ್ಕಲ್-ಬಿ.ಸಿ. ರೋಡು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ- 75 ಹಾಗೂ ಬಿ.ಸಿ. ರೋಡು- ಹಾಸನ ನೂತನ ರಸ್ತೆ ನಿರ್ಮಾಣಗೊಂಡ ಬಳಿಕ ರಾಷ್ಟ್ರೀಯ ಹೆದ್ದಾರಿ- 73 ಸಂಖ್ಯೆ ಎಂದು ನಮೂದಿಸಲಾಗುತ್ತಿದೆ. ಈ ಕುರಿತಂತೆ ಈಗಾಗಲೇ ಬ್ರಹ್ಮರಕೂಟ್ಲು ಟೋಲ್ ಸಂಗ್ರಹದ ಬಳಿ ಫಲಕವನ್ನೂ ಹಾಕಲಾಗಿದೆ. ಈ ಎರಡೂ ಹೆದ್ದಾರಿಗಳ ಸಂಖ್ಯೆ ಪ್ರತ್ಯೇಕವಾಗಿರುವುದರಿಂದ ಈ ಎರಡೂ ಟೋಲ್ ಸಂಗ್ರಹ ಕೇಂದ್ರಗಳು ಕೂಡಾ ಪ್ರತ್ಯೇಕವಾಗಿ ವಸೂಲಿ ಕಾರ್ಯ ನಡೆಸಲಿವೆ.
10ರಂದು ಪ್ರತಿಭಟನೆ
ಎರಡು ಕಡೆ ಟೋಲ್ ಸಂಗ್ರಹಕ್ಕೆ ಮುಂದಾಗಿರುವ ಇಲಾಖೆಯ ಕ್ರಮವನ್ನು ಖಂಡಿಸಿರುವ ಟೂರಿಸ್ಟ್ ಕಾರು ಮತ್ತು ವ್ಯಾನ್ ಚಾಲಕರ ಸಂಘ ಪಾಣೆಮಂಗಳೂರು ಟೋಲ್ಗೇಟನ್ನು ತೆರವುಗೊಳಿಸಬೇಕು, ಒಂದೇ ಕಡೆ ಟೋಲ್ ಸಂಗ್ರಹಿಸಬೇಕು ಎಂದು ಒತ್ತಾಯಿಸಿ 10 ರಂದು ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ.
ಪಾಣೆಮಂಗಳೂರು ಟೋಲ್ ಸ್ಥಗಿತ
ಈ ವಿವಾದಗಳ ಮಧ್ಯೆ ಪಾಣೆಮಂಗಳೂರು ಟೋಲ್ಗೇಟ್ನಲ್ಲಿ ಗುರುವಾರದಿಂದ ಸುಂಕ ವಸೂಲಿ ಸ್ಥಗಿತಗೊಳಿಸುವುದಾಗಿ ಗುತ್ತಿಗೆದಾರ ಗೋಪಾಲಕೃಷ್ಣ ಮೆಲಾಂಟ ತಿಳಿಸಿದ್ದಾರೆ.
'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅವರು, ಬ್ರಹ್ಮರಕೂಟ್ಲು ಟೋಲ್ ಪ್ಲಾಝಾವನ್ನೂ ತಾನೇ ನಿರ್ವಹಿಸಲಿದ್ದೇನೆ, ಪಾಣೆಮಂಗಳೂರಿನ ಟೋಲ್ ನಿರ್ವಹಣೆಗೆ ಹೆದ್ದಾರಿ ಇಲಾಖೆಯೊಂದಿಗಿನ ಒಪ್ಪಂದ ಡಿ.15ಕ್ಕೆ ಮುಗಿಯಲಿದೆ. ಹೀಗಾಗಿ ತಾನು 10 ದಿನ ಮೊದಲಾಗಿ ಟೋಲ್ ಸಂಗ್ರಹ ಸ್ಥಗಿತಗೊಳಿಸುವ ಬಗ್ಗೆ ಇಲಾಖೆಗೆ ತಿಳಿಸಿದ್ದೇನೆ, ಆದರೆ ಇದಕ್ಕೆ ಅವರು ಒಪ್ಪಿಗೆ ಸೂಚಿಸಿಲ್ಲ, ಬದಲಿ ವ್ಯವಸ್ಥೆ ಮಾಡಿ ಮುನ್ನಡೆಸುವುದಾಗಿ ಪ್ರತಿಕ್ರಿಯಿಸಿದ್ದಾರೆ.
ಏನಿದ್ದರೂ ನಾಳೆ(ಡಿ.5) ಈ ಬಗ್ಗೆ ಅಂತಿಮ ನಿರ್ಧಾರವಾಗಲಿದೆ ಎಂದು ಮೇಲಾಂಟ ತಿಳಿಸಿದ್ದಾರೆ.
80 ಸಿಬ್ಬಂದಿ: ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದಲ್ಲಿ ಸುಮಾರು 80 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದು, ಮೂರು ಶಿಫ್ಟ್ಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

