ಬಂಟ್ವಾಳ ಪುರಸಭೆಯಲ್ಲಿ ಮತ್ತೆ ಕಸ ವಿಲೇ'ವರಿ' ಚರ್ಚೆ
ಬಂಟ್ವಾಳ: ಇಲ್ಲಿನ ಪುರಸಭೆಯಲ್ಲಿ ಕಸ'ಕಸಿವಿಸಿ' ಮತ್ತೆ ಮುಂದುವರಿದಿದೆ. ಪುರಸಭಾ ವ್ಯಾಪ್ತಿಯಲ್ಲಿನ ಅಸಮರ್ಪಕ ಕಸ ವಿಲೇವಾರಿ ಪ್ರಶ್ನಿಸಿ ಆಡಳಿತ ಪಕ್ಷದ ಸದಸ್ಯರೇ ಪುರಸಭಾಧ್ಯಕ್ಷೆಯನ್ನು ತರಾಟೆಗೆ ತೆಗೆದುಕೊಂಡ ಘಟನೆಗೂ ಮಂಗಳವಾರದ ಸಾಮಾನ್ಯ ಸಭೆ ಸಾಕ್ಷಿಯಾಯಿತು.
ಪುರಸಭೆ ಅಧ್ಯಕ್ಷೆ ವಸಂತಿ ಚಂದಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಪಕ್ಷ ಸದಸ್ಯರ ವಾಗ್ದಾಳಿಗೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಸದಸ್ಯರು ತ್ಯಾಜ್ಯವಿಲೇ ಸಮಸ್ಯೆ ತಕ್ಷಣ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.
ವಿಪಕ್ಷ ಸದಸ್ಯ ದೇವದಾಸ್ ಶೆಟ್ಟಿ ಕಸವಿಲೇವಾರಿಯ ಅಸಮಪರ್ಕತೆಯ ಬಗ್ಗೆ ನಾಗರಿಕರು, ಪತ್ರಿಕೆಗಳು ಪುರಸಭೆಗೆ ಛೀಮಾರಿ ಹಾಕುತ್ತಿದ್ದರೂ ಇಲ್ಲಿನ ಕಸದ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅಧ್ಯಕ್ಷರು ಈ ಬಗ್ಗೆ ನಿರ್ಲಕ್ಷ ವಹಿಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತೀ ಬಾರಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತದೆ. ನಿರ್ಣಯ ಕೈಗೊಳ್ಳಲಾಗುತ್ತಿದೆಯಾದರೂ ಸಮಸ್ಯೆ ಇನ್ನೂ ಸಮಸ್ಯೆಯಾಗಿಯೇ ಉಳಿದಿದೆ ಎಂದು ಸದಸ್ಯ ಗೋವಿಂದ ಪ್ರಭು ಖಾರವಾಗಿ ಪ್ರತಿಕ್ರಿಯಿಸಿದರು.
ವಿಪಕ್ಷದವರ ಟೀಕೆಗೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಸದಸ್ಯ ಸದಾಶಿವ ಬಂಗೇರ ಕಸವಿಲೇ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಪ್ರತಿ ಸಭೆಯಲ್ಲಿಯೂ ಇದೇ ವಿಚಾರದ ಚರ್ಚೆ ನಡೆಯುತ್ತಿದ್ದರೆ ಹೇಗೇ? ಅಧ್ಯಕ್ಷರು ತ್ಯಾಜ್ಯವಿಲೇವಾರಿಗೆ ಹೆಚ್ಚಿನ ಗಮನಕೊಡಬೇಕು ಎಂದರು.
ಸ್ವಪಕ್ಷೀಯರಿಂದಲೇ ಟೀಕೆಗೆ ಗುರಿಯಾದ ಅಧ್ಯಕ್ಷೆ ವಸಂತಿ ಚಂದಪ್ಪ ಸದಸ್ಯರ ಪ್ರಶ್ನೆಗೆ ಉತ್ತರಿಸಲು ವಿಫಲರಾದರು. ಸುದೀರ್ಘ ಚರ್ಚೆಯ ಬಳಿಕ ಪುರಸಭಾ ವ್ಯಾಪ್ತಿಯ ಮೂರು ಗ್ರಾಮಗಳಲ್ಲಿ ಸಂಗ್ರಹವಾಗುವ ಕಸವನ್ನು 3 ಪ್ರತ್ಯೇಕ ವಾಹನದಲ್ಲಿ ಸಂಗ್ರಹಿಸಿ ವಿಲೇ ಮಾಡುವಂತೆ ಸದಸ್ಯರು ಸೂಚಿಸಿದರು. ಅದರಂತೆ ನಿರ್ಣಯ ಕೈಗೊಳ್ಳಲಾಯಿತು.
ಸಭಾತ್ಯಾಗ: 13ನೇ ಹಣಕಾಸಿನ ಎಸ್ಎಫ್ಸಿ ಯೋಜನೆಯ ಅನುದಾನ ಹಂಚಿಕೆಯಲ್ಲಿ ಪಕ್ಷಪಾತಿ ಧೋರಣೆ ಅನುಸರಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದ ಘಟನೆಯೂ ನಡೆಯಿತು.
'ಕನ್ನಡಪ್ರಭ' ವರದಿ ಪ್ರಸ್ತಾಪ...
ಬಿ.ಸಿ. ರೋಡ್ ಚತುಷ್ಪಥ ಮೇಲ್ಸೇತುವೆ ಅಡಿಭಾಗದಲ್ಲಿರುವ ಮಿನಿಬಜಾರ್ ಕುರಿತಾಗಿ ಮಂಗಳವಾರ 'ಕನ್ನಡಪ್ರಭ'ದಲ್ಲಿ ಪ್ರಕಟವಾದ ವರದಿ ಸಭೆಯಲ್ಲಿ ಪ್ರಸ್ತಾಪವಾಯಿತು. ಇತರ ವಿಷಯಗಳ ಚರ್ಚೆ ವೇಳೆ ಸದಸ್ಯ ಮಹಮ್ಮದ್ ಇಕ್ಬಾಲ್ ವಿಷಯ ಪ್ರಸ್ತಾಪಿಸಿ, ಬಿ.ಸಿ.ರೋಡ್ನ ಫಾಸ್ಟ್ಫುಡ್ ಸೆಂಟರ್ಗಳು ಹಾಗೂ ಚತುಷ್ಪಥ ಮೇಲ್ಸೇತುವೆ ಅಡಿಭಾಗದ ಅಕ್ರಮ ಅಂಗಡಿಗಳ ವಿರುದ್ಧ ಯಾವಾಗ ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿ, ಈ ದಿನದ 'ಕನ್ನಡಪ್ರಭ'ದಲ್ಲೂ ಈ ಬಗ್ಗೆ ವರದಿ ಇದೆ ಎಂದು ಸಭೆಯ ಗಮನ ಸೆಳೆದರು.
ಸಭಾಧ್ಯಕ್ಷರು ಹಾಗೂ ಅಧಿಕಾರಿಗಳು ಇದಕ್ಕೆ ಉತ್ತರಿಸದೇ ಇದ್ದಾಗ, ಧ್ವನಿಗೂಡಿಸಿದ ಇತರ ಸದಸ್ಯರು, ಪ್ರತಿ ಬಾರಿಯೂ ನಿರ್ಣಯ ಕೈಗೊಳ್ಳುವುದೇ ನಮ್ಮ ಕೆಲಸವಾಗಬಾರದು. ನಿರ್ಣಯಗಳ ಅನುಷ್ಠಾನವಾದಾಗ ಸಭೆ ನಡೆಸಿದ್ದಕ್ಕೂ ಸಾರ್ಥಕತೆ ಬರುತ್ತದೆ ಎಂದಾಗ, ಮುಖ್ಯಾಧಿಕಾರಿ ಮತ್ತಡಿ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಸಭೆಗೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

