ನಿರುಪಯುಕ್ತ ಪ್ಲಾಸ್ಟಿಕ್ ನೀಡಿ ರೊಕ್ಕ ಪಡೆಯಿರಿ!
ಮಂಗಳೂರು: ನಿರುಪಯುಕ್ತ ಪ್ಲಾಸ್ಟಿಕ್ ವಿಲೇವಾರಿಗೆ ಪ್ಲಾಸ್ಟಿಕ್ ತಯಾರಕರ ಸಂಘ ಮಹಾನಗರ ಪಾಲಿಕೆ ಜತೆ ಕೈಜೋಡಿಸಲು ಮುಂದೆ ಬಂದಿದೆ. ಇನ್ನು ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ಗಳನ್ನು ಸಂಘ ಖರೀದಿಸಲಿದ್ದು, ಅದನ್ನು ಪರ್ಯಾಯ ಉಪಯೋಗಕ್ಕೆ ಬಳಸಿಕೊಳ್ಳಲಿದೆ.
ಶನಿವಾರ ಪಾಲಿಕೆ ಸಭಾಂಗಣದಲ್ಲಿ ಆಯುಕ್ತ ಡಾ.ಹರೀಶ್ ಕುಮಾರ್, ಕೆನರಾ ಪ್ಲಾಸ್ಟಿಕ್ ತಯಾರಕರ ಮತ್ತು ವ್ಯಾಪಾರಸ್ಥರ ಸಂಘಟನೆ ಅಧ್ಯಕ್ಷ ಬಿ.ಎ.ನಝೀರ್ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಲಕ್ಷ್ಮಣ್ ಜಂಟಿ ಸುದ್ದಿಗೋಷ್ಠಿಯಲ್ಲಿ ಇದನ್ನು ತಿಳಿಸಿದರು.
ಪಾಲಿಕೆಯ 60 ವಾರ್ಡ್ಗಳ ಮನೆ ಮನೆಯಿಂದ ಕಸ ಸಂಗ್ರಹ ಪ್ರಾರಂಭಿಸಲಾಗಿದೆ. ಮಣ್ಣಗುಡ್ಡೆ ಮತ್ತು ಕೋರ್ಟ್ ವಾರ್ಡ್ನಿಂದ ಪ್ರಾಯೋಗಿಕವಾಗಿ ಕಸವಿಲೇವಾರಿ ನಡೆಸಲಾಗುತ್ತಿದೆ. ಇಲ್ಲಿನ ಪ್ರತಿ ಮನೆಗೆ ಒಣ ಹಾಗೂ ಹಸಿ ಕಸ ಸಂಗ್ರಹಕ್ಕೆ ಬಿನ್ಗಳನ್ನು ನೀಡಲಾಗಿದ್ದು, ಇಲ್ಲಿ ಯಶಸ್ವಿಯಾದರೆ ಎಲ್ಲ ವಾರ್ಡ್ಗಳ ಮನೆಗಳಿಗೆ ಬಿನ್ ಪೂರೈಸಲಾಗುವುದು ಎಂದು ಹೇಳಿದರು.
ಕಸವಿಲೇವಾರಿ ವೇಳೆ ಪ್ಲಾಸ್ಟಿಕ್ನ್ನು ಪ್ರತ್ಯೇಕವಾಗಿ ಬೇರ್ಪಡಿಸಿ ಕೊಡುವಂತೆ ಎಲ್ಲ ಮನೆಗಳನ್ನು ಕೋರಲಾಗಿದೆ. ಈ ಪ್ಲಾಸ್ಟಿಕ್ನ್ನು ಮೊತ್ತ ನೀಡಿ ವಾರಕ್ಕೊಮ್ಮೆ ಸಂಗ್ರಹಿಸಿ ಪಚ್ಚನಾಡಿ ಡಂಪಿಂಗ್ ಯಾರ್ಡ್ನಿಂದ ಪ್ಲಾಸ್ಟಿಕ್ ತಯಾರಕರ ಸಂಘ ಬೆಂಗಳೂರಿಗೆ ಮರು ಬಳಕೆಗೆ ರವಾನಿಸಲಿದೆ.
ಮತ್ತೆ ಕಾರ್ಯಾಚರಣೆ: ನಿರುಪಯುಕ್ತ ಪ್ಲಾಸ್ಟಿಕ್ ನಿರ್ವಹಣಾ ಕಾಯ್ದೆ 2011ಪ್ರಕಾರ 40 ಮೈಕ್ರಾನ್ಗಿಂತ ಕಡಿಮೆ ತೆಳು ಹಾಗೂ ಮುದ್ರಕರ ಹೆಸರಿಲ್ಲದೆ ಮಾರುಕಟ್ಟೆಗೆ ಬರುವ ಬಣ್ಣದ ಪ್ಲಾಸ್ಟಿಕ್ ವಿರುದ್ಧ ಪಾಲಿಕೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿಸಿದರು.
ಗ್ರಾಹಕರು ಮುದ್ರಿತ ಪ್ಲಾಸ್ಟಿಕ್ಗಳನ್ನೇ ಖರೀದಿಸಬೇಕು. ತಪ್ಪಿದಲ್ಲಿ ಗ್ರಾಹಕರು ಹಾಗೂ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇದರ ವಿರುದ್ಧ ಪ್ರತ್ಯೇಕ ಕಾರ್ಯಾಚರಣೆ ನಡೆಸಲಾಗುವುದು.
ಕಸ ವಿಲೇವಾರಿ ಶುಲ್ಕ: ಪಾಲಿಕೆಯ ಕೆಲವು ಕಡೆಗಳಲ್ಲಿ ಕಸ ವಿಲೇವಾರಿಗೆ ಶುಲ್ಕ ನೀಡಲು ನಿರಾಕರಿಸುತ್ತಿದ್ದಾರೆ. ಆದಷ್ಟು ಜನತೆಗೆ ತಿಳುವಳಿಕೆ ನೀಡಲಾಗುತ್ತಿದೆ. ಶುಲ್ಕ ನಿರಾಕರಿಸುವ ಹಿನ್ನಲೆಯಲ್ಲಿ ಮುಂದಿನ ವರ್ಷಾರಂಭದಿಂದ ಪ್ರತಿ ಮನೆಯಿಂದ ಸ್ವಯಂಘೋಷಿತ ಆಸ್ತಿ ತೆರಿಗೆ ಸಂಗ್ರಹ ವೇಳೆ ಕಸವಿಲೇವಾರಿ ಶುಲ್ಕ ವಸೂಲಿ ಮಾಡಲಾಗುವುದು ಎಂದು ಆಯುಕ್ತ ಡಾ.ಹರೀಶ್ ಕುಮಾರ್ ಹೇಳಿದರು.
ಮುಂದಿನ ಶೈಕ್ಷಣಿಕ ವರ್ಷದಿಂದ ನಗರ ವ್ಯಾಪ್ತಿಯ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾದರಿಯಲ್ಲಿ ಕಸದ ಬಗ್ಗೆ ತಿಳುವಳಿಕೆ ಮೂಡಿಸಲಾಗುವುದು. ಪ್ರತಿ ವಾರ್ಡ್ಗೆ ಎನ್ಜಿಒ ತೆರಳಿ ಕಸ ವಿಲೇವಾರಿ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ಇನ್ನೆರಡು ಬಯೋಪ್ಲಾಂಟ್ ತೆರೆಯಲು ಪಾಲಿಕೆ ನಿರ್ಧರಿಸಿದೆ ಎಂದರು.
ಉಚಿತ ಚೀಲ ಇಲ್ಲ: ಸಾರ್ವಜನಿಕರಿಗೆ ಉಚಿತವಾಗಿ ಕೈಚೀಲ ವಿತರಿಸಬಾರದು. ಹಾಗೆ ವಿತರಿಸಿದರೆ ಅದರ ಮಹತ್ವ ಗೊತ್ತಾಗುವುದಿಲ್ಲ. ಆದ್ದರಿಂದ ಕೈಚೀಲಗಳಿಗೆ ನಿರ್ದಿಷ್ಟ ಮೊತ್ತ ನಿಗದಿಪಡಿಸಿ ಸಾರ್ವಜನಿಕರಿಗೆ ನೀಡಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ ಬ್ಯಾನರ್, ಬಂಟಿಂಗ್ಸ್ಗೆ ನಿಷೇಧವಿದ್ದು, ಅದರ ದುರ್ಬಳಕೆ ವ್ಯಾಪಕವಾಗಿ ಆಗುತ್ತಿದೆ ಎಂದರು.
ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಂದಾಯ ನಿರೀಕ್ಷಕರಿಗೆ ಅಧಿಕಾರ ನೀಡಲಾಗಿದೆ. ಪಾಲಿಕೆಯಿಂದಲೂ ಪ್ರತ್ಯೇಕ ವಾಹನ, ಮೊಬೈಲ್ ನಂಬರು ನೀಡಿ ಕಾರ್ಯಾಚರಣೆ ನಡೆಸಲಾಗುವುದು ಎಂದರು.
ಪಾಲಿಕೆ ವ್ಯಾಪ್ತಿಯಲ್ಲಿ ಬೀದಿನಾಯಿ ತೊಂದರೆ ತಪ್ಪಿಸಲು ಅವುಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲು ಟೆಂಡರ್ ಕರೆಯಲಾಗಿದೆ. ನಗರದಲ್ಲಿ ಭಿಕ್ಷುಕರು ಕಂಡುಬಂದರೆ ಅವರನ್ನು ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಲಾಗುತ್ತಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

