ಅರಣ್ಯ ಹಕ್ಕುಪತ್ರ ಸಮಿತಿಗೆ ಕೇಂದ್ರ ತಿದ್ದುಪಡಿ
ಆತ್ಮಭೂಷಣ್
ಮಂಗಳೂರು: ಬಹುವರ್ಷಗಳಿಂದ ಸ್ವಂತ ನೆಲೆಯ ದಾಖಲೆಪತ್ರಕ್ಕೆ ಕಾಯುತ್ತಿರುವ, ಅರಣ್ಯದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದವರಿಗೆ ಸುಲಭದಲ್ಲಿ ಹಕ್ಕುಪತ್ರ ಸಿಗುವಂತಾಗಲು ಕೇಂದ್ರ ಅರಣ್ಯ ಹಕ್ಕುಗಳ ಕಾಯ್ದೆಗೆ ತಿದ್ದುಪಡಿ ತಂದಿದೆ.
ಅರಣ್ಯಭೂಮಿಯಲ್ಲಿ ನೆಲೆಸಿರುವವರ ಜಾಗವನ್ನು ಸಕ್ರಮಗೊಳಿಸಲು ಕೇಂದ್ರ ನಿರ್ದೇಶನದಂತೆ ರಚಿಸಲಾದುದು ಗ್ರಾಮ ಅರಣ್ಯ ಹಕ್ಕುಪತ್ರ ಸಮಿತಿ. ಕೇಂದ್ರ ಅರಣ್ಯ ಕಾಯ್ದೆ 2008ರ ಪ್ರಕಾರ, ಈ ಸಮಿತಿಯಲ್ಲಿ ಮೂರನೇ ಒಂದಂಶ ಪರಿಶಿಷ್ಟ ಪಂಗಡ(ಎಸ್ಟಿ)ಇರುತ್ತಿದ್ದರು. ಈಗ ಎಸ್ಟಿ ಪ್ರಾತಿನಿಧ್ಯವನ್ನು ಮೂರನೇ ಎರಡಂಶಕ್ಕೆ ಹೆಚ್ಚಿಸಲಾಗಿದೆ. ಇದಲ್ಲದೆ ಅರ್ಜಿದಾರ ಎಸ್ಟಿ ಸಮಕ್ಷಮವೇ ಅರ್ಜಿ ಇತ್ಯರ್ಥಗೊಳಿಸುವಂತೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದು ಎಸ್ಟಿಗಳಿಗೆ ವರದಾನವಾಗಿ ಪರಿಣಮಿಸಿದೆ. ಈ ಕುರಿತ ಆದೇಶವನ್ನು ಎಲ್ಲ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆ, ಅರಣ್ಯ ಹಾಗೂ ಕಂದಾಯ ಇಲಾಖೆಗೆ ಕೇಂದ್ರ ಕಳುಹಿಸಿದೆ.
ತಿದ್ದುಪಡಿ ಯಾಕಾಗಿ?: ಇದುವರೆಗೆ ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ(ಅರಣ್ಯ ಹಕ್ಕು ಮಾನ್ಯ ಮಾಡುವ)ಅಧಿನಿಯಮ 2006(2007ರ2)ಮತ್ತು ನಿಯಮಗಳು 2008 ಪ್ರಕಾರ ಗ್ರಾಮ ಅರಣ್ಯ ಸಮಿತಿಗಳು ಹಕ್ಕುಪತ್ರಕ್ಕೆ ಶಿಫಾರಸ್ಸು ಮಾಡುತ್ತಿತ್ತು.
ಹೀಗೆ ಶಿಫಾರಸ್ಸು ಮಾಡಬೇಕಾದರೆ, ಸಮಿತಿಯಲ್ಲಿರುವ ಎಸ್ಟಿಗಳ ಸಂಖ್ಯೆ ಮೂರನೇ ಒಂದಂಶ ಮಾತ್ರ. ಸಮಿತಿಯಲ್ಲಿ ಇತರರ ಪ್ರಮಾಣವೇ ಜಾಸ್ತಿ ಇರುತ್ತಿತ್ತು. ಎಸ್ಟಿಗಳು ನೀಡಿದ ಅರ್ಜಿಯನ್ನು ಸಮಿತಿ ಇತ್ಯರ್ಥಪಡಿಸುವಲ್ಲೇ ಲೋಪ ಆಗುತ್ತಿತ್ತು. ಒಂದು ವೇಳೆ ಇತ್ಯರ್ಥಪಡಿಸಿದರೂ ಉಪವಿಭಾಗಾಧಿಕಾರಿಗೆ ಶಿಫಾರಸ್ಸು ಮಾಡಿದಾಗ, ಅಲ್ಲಿ ಅರ್ಜಿ ತಾಂತ್ರಿಕ ಕಾರಣಕ್ಕೆ ತಿರಸ್ಕೃತಗೊಳ್ಳುತ್ತಿತ್ತು. ಇದರಿಂದ ಅರ್ಹರಿದ್ದರೂ ಎಸ್ಟಿಗಳು ಹಕ್ಕುಪತ್ರದಿಂದ ವಂಚಿತಗೊಳ್ಳುತ್ತಿದ್ದರು. ಈ ತೊಂದರೆಯನ್ನು ತಪ್ಪಿಸಲು ಕೇಂದ್ರ ನಿಯಮಾವಳಿಗಳ ತಿದ್ದುಪಡಿ ಕಾಯ್ದೆ 2012 ಜಾರಿಗೆ ತಂದಿತ್ತು.
ಅರಣ್ಯ ಅಧಿಕಾರಿಗಳ ಅಡ್ಡಗಾಲು: ಹೀಗಿದ್ದೂ ಹಲವು ಕಡೆಗಳಲ್ಲಿ ಅರಣ್ಯ ಇಲಾಖೆ, ವನ್ಯಜೀವಿ ವಿಭಾಗ ಅಧಿಕಾರಿಗಳು ಹಕ್ಕುಪತ್ರ ಸಿಗಲು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಎಸ್ಟಿ ಫಲಾನುಭವಿಗಳು ಆರೋಪಿಸುತ್ತಾರೆ. ಮುಖ್ಯವಾಗಿ ನಕ್ಸಲ್ ಬಾಧಿತ ಕುದುರೆಮುಖ ಪ್ರದೇಶದಲ್ಲಿ ವನ್ಯಜೀವಿ ವಿಭಾಗ, ಇತರೆ ಕಡೆಗಳಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳು ಅರ್ಜಿಗೆ ಮಂಜೂರು ಹಂತದಲ್ಲಿ ತಡೆ ಒಡ್ಡುತ್ತಾರೆ. ಇದರಿಂದ ಕಾಡಿನಲ್ಲಿ ಸ್ವಂತ ಜಾಗಹೊಂದಿ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತಾರೆ ಎನ್ನುತ್ತಾರೆ.
ಈ ವಿಚಾರದಲ್ಲಿ ಏಪ್ರಿಲ್ನಲ್ಲಿ ಶಿವಮೊಗ್ಗದಲ್ಲಿ ಕರ್ನಾಟಕ ಆದಿವಾಸಿ ಬುಡಕಟ್ಟುಗಳ ಸಮಾವೇಶ ಆಯೋಜಿಸಲಾಗಿದೆ. ಅರಣ್ಯವಾಸಿಗಳಿಗೆ, ಆದಿವಾಸಿಗಳಿಗೆ ಹಕ್ಕುಪತ್ರ ನೀಡಿ ಅವರ ಬದುಕು ಹಸನಾಗಲು ಅವಕಾಶ ಕಲ್ಪಿಸುವಂತೆ ಹಕ್ಕೊತ್ತಾಯ ಮಾಡಲಾಗುವುದು ಎಂದು ದಕ್ಷಿಣ ಭಾರತ ಆದಿವಾಸಿ ಒಕ್ಕೂಟ ಸಂಚಾಲಕ ಮತ್ತಡಿ ಬುಧವಾರ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಹಕ್ಕುಪತ್ರ ಯಾರ್ಯಾರಿಗೆ?: ಅರಣ್ಯದಲ್ಲಿ ವಾಸಿಸುತ್ತಿರುವ ಎಸ್ಟಿಗಳಿಗೆ ಮಾತ್ರವಲ್ಲ, ಇತರೆ ಜಾತಿಯವರಿಗೂ ಹಕ್ಕುಪತ್ರವನ್ನು ಗ್ರಾಮ ಅರಣ್ಯ ಸಮಿತಿ ಮುಖೇನ ಕೊಡಲಾಗುತ್ತದೆ. ಅರಣ್ಯದಲ್ಲಿರುವ ಸಮುದಾಯಕ್ಕೆ ಸೇರಿದ ಅಂಗನವಾಡಿ, ಶಾಲೆ, ಕೆರೆ ಇತ್ಯಾದಿ ರಚನೆಗಳಿಗೂ ಹಕ್ಕುಪತ್ರ ನೀಡುತ್ತಾರೆ. ಎಸ್ಟಿಗಳು 2005ಕ್ಕೂ ಮೊದಲು ಅರಣ್ಯದಲ್ಲಿ ವಾಸವಿರುವ ಬಗ್ಗೆ ಪಡಿತರ, ತೆರಿಗೆ ಪಾವತಿ ಚೀಟಿಯನ್ನು ದಾಖಲೆಯಾಗಿ ತೋರಿಸಬೇಕು. ಇತರೆ ಜಾತಿಯವರು(ಎಸ್ಸಿ ಸೇರಿ) 75 ವರ್ಷದಿಂದ ಅರಣ್ಯದಲ್ಲಿ ವಾಸಿಸುತ್ತಿರುವ ಬಗ್ಗೆ ದಾಖಲೆ ಕೊಡಬೇಕು.
6389 ಎಸ್ಟಿಗಳಿಗೆ ಹಕ್ಕುಪತ್ರ
2013 ಜನವರಿ ಅಂತ್ಯದವರೆಗೆ ರಾಜ್ಯದ 8 ಜಿಲ್ಲೆಗಳ ಅರಣ್ಯದಲ್ಲಿರುವ 20604 ಎಸ್ಟಿಗಳ ಅರ್ಜಿ ಪೈಕಿ ಹಕ್ಕುಪತ್ರ ನೀಡಿದ್ದು 6389 ಅರ್ಜಿಗಳಿಗೆ. ಮೈಸೂರಿನಲ್ಲಿ 555, ಶಿವಮೊಗ್ಗ 160, ಚಿಕ್ಕಮಗಳೂರು 1713, ಉತ್ತರ ಕನ್ನಡ 766, ಚಾಮರಾಜನಗರ 1516, ಕೊಡಗು 1112, ದಕ್ಷಿಣ ಕನ್ನಡ 72 ಮತ್ತು ಉಡುಪಿ 495. ಸಲ್ಲಿಕೆಯಾದ ಅರ್ಜಿ-ಮೈಸೂರು 5387, ಶಿವಮೊಗ್ಗ 4158, ಚಿಕ್ಕಮಗಳೂರು 2704, ಉತ್ತರ ಕನ್ನಡ 2687, ಚಾಮರಾಜನಗರ 2146, ಕೊಡಗು 2314, ದಕ್ಷಿಣ ಕನ್ನಡ 506 ಹಾಗೂ ಉಡುಪಿ 702. ಈ 8 ಜಿಲ್ಲೆಗಳಲ್ಲಿ ಇತರರು ಸಲ್ಲಿಸಿದ 139870 ಅರ್ಜಿಯಲ್ಲಿ ಮಂಜೂರಾದ್ದು ಕೇವಲ 75.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

