ಸಂಸ್ಥೆ ನಷ್ಟಕ್ಕೆ ಸಾವಿರಾರು ಕಾರ್ಮಿಕರು ಬಲಿ
ಬಾಲಕೃಷ್ಣ ಭೀಮಗುಳಿ
ಸುಬ್ರಹ್ಮಣ್ಯ: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬ ನೀತಿಯನ್ನು ಬಿಎಸ್ಎನ್ಎಲ್ ಅನುಸರಿಸುತ್ತಿದೆ.
ಸಂಸ್ಥೆ ನಷ್ಟಕ್ಕೆ ಸಿಬ್ಬಂದಿ ವೇತನ ಹೊರೆ ಕಾರಣ ಎಂದು ಹೇಳಿ ಒಂದು ಲಕ್ಷ ಸಿಬ್ಬಂದಿ ಕಡಿತಕ್ಕೆ ನಿರ್ಧರಿಸಿದೆ. ಇದರಿಂದ ಈ ಸಂಸ್ಥೆ ನೌಕರರು ಆತಂಕಕ್ಕೆ ಒಳಗಾಗಿದ್ದಾರೆ. ಮಾತ್ರವಲ್ಲದೆ ಸಂಸ್ಥೆಯಲ್ಲಿ ಇಪ್ಪತ್ತಕ್ಕೂ ಅಧಿಕ ವರ್ಷಗಳಿಂದ ದುಡಿಯುತ್ತಿರುವ ಸಾವಿರಾರು ತಾತ್ಕಾಲಿಕ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಗೊಳಗಾಗಿದ್ದು, ಇವರ ಬದುಕು ಅತಂತ್ರಗೊಂಡು ಸದ್ಯದಲ್ಲೇ ಬೀದಿಗೆ ಬೀಳುವುದು ಖಚಿತವಾಗಿದೆ.
ರಾಜ್ಯದಲ್ಲಿನ ಬಿಎಸ್ಎನ್ಎಲ್ನ ಕೇಂದ್ರ ಕಚೇರಿ, ಎಕ್ಸ್ಚೇಂಜ್ಗಳಲ್ಲಿ ಸುಮಾರು ನಾಲ್ಕು ಸಾವಿರ ಕಾರ್ಮಿಕರು ಗುತ್ತಿಗೆ, ದಿನಗೂಲಿ ನೆಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ದ.ಕ. ಜಿಲ್ಲೆಯೊಂದರಲ್ಲೇ 300 ಇಂತಹ ಕಾರ್ಮಿಕರಿದ್ದಾರೆ.
ಟೆಲಿಕಾಂ ಇಲಾಖೆ ಇದ್ದಾಗ ದಿನಗೂಲಿ ಕಾರ್ಮಿಕರಾಗಿ, ನಿಗಮವಾಗಿ ಪರಿವರ್ತನೆಗೊಂಡಂದಿನಿಂದ ಗುತ್ತಿಗೆ ಕಾರ್ಮಿಕರಾಗಿ ಸೇವೆ ನೀಡುತ್ತಿರುವ ಈ ಕಾರ್ಮಿಕರು ಬಿಎಸ್ಎನ್ಎಲ್ನ ಬಹುತೇಕ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಕೇಬಲ್ ಜೋಡಣೆ, ಲೈನ್ ದುರಸ್ತಿ, ಎಕ್ಸ್ಚೇಂಜ್ ನಿರ್ವಹಣೆ, ಭದ್ರತೆ ಮುಂತಾದ ಕೆಲಸ ನಿರ್ವಹಿಸುತ್ತಿರುವ ಈ ಕಾರ್ಮಿಕರು 20 ವರ್ಷಗಳಿಂದ ಕಾರ್ಮಿಕರಾಗಿದ್ದಾರೆ.
ಕಾರ್ಯ ಸಿಬ್ಬಂದಿಯೇ ಮನೆಗೆ: ಕನಿಷ್ಠ ವೇತನವಿಲ್ಲದೆ, ಕಾನೂನು ಬದ್ಧ ಸವಲತ್ತು ನೀಡದೆ ನೌಕರಿ ಭದ್ರತೆ ಇಲ್ಲದೆ ಈ ತನಕ ದುಡಿದ ಕಾರ್ಮಿಕರು ಸಂಸ್ಥೆ ನಷ್ಟದಿಂದ ಇದೀಗ ಕೆಲಸ ಕಳೆದುಕೊಳ್ಳುವ ಭೀತಿಗೆ ಒಳಗಾಗಿದ್ದಾರೆ. 1 ಲಕ್ಷ ಕಾಯಂ ನೌಕರರರೊಂದಿಗೆ ಇವರ ಕೆಲಸಕ್ಕೂ ಸನಿಹದಲ್ಲೇ ಕತ್ತರಿ ಬೀಳುವುದು ಬಹುತೇಕ ಖಚಿತವಾಗಿದೆ. ಸಾವಿರಾರು ಕಾರ್ಮಿಕರ ಸ್ಥಿತಿ ಅತಂತ್ರವಾಗಿದೆ. ಕಾಯಂ ಸಿಬ್ಬಂದಿಯೇ ಮನೆ ಸೇರುತ್ತಾರೆ ಎಂದಾದರೇ ನಾವು ಮಸಣ ಸೇರಬೇಕೆ ಎಂದು ಈ ಕಾರ್ಮಿಕರು ಅಹವಾಲು ತೋಡಿಕೊಂಡಿದ್ದಾರೆ.
ಕಾಯಂ ಕನಸು ಭಗ್ನ: ಸುದೀರ್ಘ ಅವಧಿ ಸೇವೆ ಸಲ್ಲಿಸಿದ ಕಾರ್ಮಿಕರನ್ನು ಕಾಯಂಗೊಳಿಸುವ ಪದ್ಧತಿ ಇತರ ಇಲಾಖೆಗಳಲ್ಲಿ ಜಾರಿಯಲ್ಲಿದೆ. ಆದರೆ, ಪ್ರತಿಷ್ಠಿತ ಸಂಸ್ಥೆ ಬಿಎಸ್ಎನ್ಎಲ್ ದೀರ್ಘಕಾಲ ದುಡಿದ ಕಾರ್ಮಿಕರನ್ನು ಕಿತ್ತು ಹಾಕುವ ತಂತ್ರದಲ್ಲಿದೆ.
1981ರ ನಂತರ ಇಲಾಖೆಯಲ್ಲಿ ಯಾವುದೇ ನೇಮಕಾತಿ ಆಗಿಲ್ಲ. ಈ ಧೋರಣೆ ನಮ್ಮ ಆಡಳಿತ ವ್ಯವಸ್ಥೆಯ ದುರಾವಸ್ಥೆಯೇ ಅಲ್ಲ ಕಾರ್ಮಿಕರ ದೌರ್ಭಾಗ್ಯವೋ ಎಂಬುದು ಯಕ್ಷ ಪ್ರಶ್ನೆ.
ನಷ್ಟಕ್ಕೆ ಕಾರಣ ಏನು...?: ಬಿಎಸ್ಎನ್ಎಲ್ ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆ. ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಈ ಸಂಸ್ಥೆ ನಷ್ಟಕ್ಕೆ ಒಳಗಾಗಿರುವುದು ದೊಡ್ಡ ದುರಂತ.
ದುರಾಡಳಿತ ಮತ್ತು ಸರ್ಕಾರದ ಖಾಸಗಿಯವರಿಗೆ ಅನುಕೂಲ ಮಾಡಿಕೊಡುವ ನೀತಿ ನಷ್ಟಕ್ಕೆ ಕಾರಣ ಎಂಬುದರಲ್ಲಿ ಸಂದೇಹವೇ ಇಲ್ಲ.
ಇದೊಂದು ಗಂಭೀರ ಚಿಂತನೆಯ ವಿಚಾರ. ಈ ದಿಸೆಯಲ್ಲಿ ಬಿಎಸ್ಎನ್ಎಲ್ ಪುನರುಜ್ಜೀವನಗೊಳಿಸಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು.
ಬೇರು ಮಟ್ಟದಲ್ಲಿ ದುಡಿಯುತ್ತಿರುವ ಕಾರ್ಮಿಕರ ಶ್ರಮ ಪರಿಗಣನೆಗೆ ತೆಗೆದುಕೊಂಡು ಅವರಿಗೆ ತರಬೇತಿ ನೀಡಿ ಸಂಸ್ಥೆ ಉನ್ನತಿಗೆ ಕ್ರಮ ಕೈಗೊಳ್ಳುವುದು ಕೇಂದ್ರ ಸರ್ಕಾರಕ್ಕೆ ಕಷ್ಟವಾಗಲಾರದು. ಉತ್ತಮ ಮೂಲ ಸೌಕರ್ಯ ಹೊಂದಿರುವ ಬಿಎಸ್ಎನ್ಎಲ್ ಗ್ರಾಮೀಣ ಮಟ್ಟದಲ್ಲಿ ಉತ್ತಮ ಸೇವೆ ನೀಡುವಲ್ಲಿ ಸಫಲತೆ ಕಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

