ದಕ್ಷಿಣ ಕನ್ನಡ

ಹೃದಯಾಂತರಾಳದ ಅಭಿಮಾನದಿಂದ ಮಾತೃಭಾಷೆ ಉನ್ನತಿ: ಅಂಗಾರ

Published On :

ಸುಬ್ರಹ್ಮಣ್ಯ: ಸುಸಂಸ್ಕೃತ ಜೀವನ ನಡೆಸಲು ಭಾಷೆಯು ಪ್ರಾಮುಖ್ಯವಾಗಿದೆ. ಹೃದಯಾಂತರಾಳದ ಅಭಿಮಾನದಿಂದ ನಮ್ಮ ಮಾತೃಭಾಷೆ ಉನ್ನತಿಯಾಗುತ್ತದೆ ಎಂದು ಶಾಸಕ ಎಸ್. ಅಂಗಾರ ಅಭಿಪ್ರಾಯಪಟ್ಟಿದ್ದಾರೆ.
ಏನೆಕಲ್‌ನ ಅರ್ಪಣಾ ಕ್ರೀಡಾಂಗಣದಲ್ಲಿ ದಿ. ಕುಮಾರ ನಾಯರ್ ಸಭಾ ಮಂಟಪದ ದಿ.ಪಿ.ಎಸ್. ರಾಮಣ್ಣ ಮಾಸ್ತರ್ ಪರಮಲೆ ವೇದಿಕೆಯಲ್ಲಿ ಭಾನುವಾರ ಸುಳ್ಯ ತಾಲೂಕು ಮಟ್ಟದ 18ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ನಮ್ಮ ಭಾಷೆ, ಅದನ್ನು ಉಳಿಸಿ ಬೆಳೆಸುವಲ್ಲಿ ಪೋಷಕರು ಹೆಚ್ಚಿನ ಪಾತ್ರವನ್ನು ವಹಿಸಬೇಕಾಗಿದೆ ಎಂದು ಅಂಗಾರ ಹೇಳಿದರು.
ಸುಳ್ಯದಲ್ಲಿ ಕನ್ನಡಭವನಕ್ಕೆ ಅನುದಾನ:  ಸುಳ್ಯದಲ್ಲಿ ಸಾಹಿತ್ಯ ಪರಿಷತ್ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಸರ್ಕಾರದಿಂದ ರು. 10 ಲಕ್ಷ ಅನುದಾನ ಬಿಡುಗಡೆಗೊಂಡಿದೆ. ಕಟ್ಟಡದ ಸಂಪೂರ್ಣ ಕಾಮಗಾರಿಗೆ ರು. 18 ಲಕ್ಷ ಬೇಕಾಗಿರುವುದರಿಂದ ಶಾಸಕರ ಅನುದಾನದಲ್ಲಿ ರು. 8 ಲಕ್ಷ ಅನುದಾನವನ್ನು ನೀಡುವುದಾಗಿ ಹೇಳಿದ ಅವರು, ತಾಲೂಕು ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಶೀಘ್ರವೇ ಕಟ್ಟಡ ಕಾಮಗಾರಿ ಪೂರ್ತಿಗೊಳಿಸುವಲ್ಲಿ ಯೋಜನೆ ರೂಪಿಸಬೇಕು ಎಂದರು.
ಸಾಹಿತ್ಯ ತೇರು ಎಂಬ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಮಂಗಳೂರು ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಡಾ.ವಸಂತಕುಮಾರ ಪೆರ್ಲ, ಸಾಹಿತ್ಯ ಜನಜೀವನಕ್ಕೆ ಶಿಖರಪ್ರಾಯವಾದುದು. ಇದರಿಂದ ಬದುಕಿನಲ್ಲಿ ಶಿಸ್ತು ಅಳವಡಿಸಲ್ಪಟ್ಟು ಸುಸಂಸ್ಕೃತ ಬದುಕೆಂಬ ಪುಷ್ಪ ಅರಳುತ್ತದೆ. ಅಲ್ಲದೆ, ಆ ಮೂಲಕ ಸಮಾಜದಲ್ಲಿ ಶ್ರೇಷ್ಠ ಸ್ಥಾನ ಲಭ್ಯವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಎಚ್.ಎಂ. ಕುಮಾರಸ್ವಾಮಿ ಮಾತನಾಡಿ, ಸಾಹಿತಿಯಾದವನು ತನ್ನ ಮನೋಲೋಕವನ್ನು ದಿಗ್ದಿಗಂತದಾಚೆಗೆ ವಿಸ್ತರಿಸಿದಾಗ ಸಾಹಿತ್ಯ ಸಮಾಜಮುಖಿಯಾಗುವುದು. ಸತ್ವಯುತವಾದ ಸಾಹಿತ್ಯವು ದೇಶ, ಕಾಲ, ಧರ್ಮ, ಜಾತಿ, ಮತದ ಎಲ್ಲೆ ಮೀರಿ ಉತ್ತುಂಗಕ್ಕೇರುತ್ತದೆ. ಅಂತರಂಗದ ಸಾಹಿತ್ಯ ಸತ್ವಯುತವಾಗಿರುತ್ತದೆ ಎಂದರು.
ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಜಿ.ಪಂ. ಸದಸ್ಯ ಕೆ.ಎಸ್. ದೇವರಾಜ್ ಉದ್ಘಾಟಿಸಿದರು. ಕನ್ನಡ ಧ್ವಜಾರೋಹಣವನ್ನು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ನೆರವೇರಿಸಿದರು. ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಎಂ. ಮೀನಾಕ್ಷಿ ಗೌಡ ಪರಿಷತ್‌ನ ಧ್ವಜಾರೋಹಣ ಮಾಡಿದರು.
ವಸ್ತು ಪ್ರದರ್ಶನವನ್ನು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು ಉದ್ಘಾಟಿಸಿದರು. ಪುಸ್ತಕ ಪ್ರದರ್ಶನವನ್ನು ನಿಕಟಪೂರ್ವ ಸಾಹಿತ್ಯ ಸಮ್ಮೇನಾಧ್ಯಕ್ಷ ಜಿ.ಎಸ್. ಉಬರಡ್ಕ ಅನಾವರಣಗೊಳಿಸಿದರು.
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ, ಚೆನ್ನೈ ಕನ್ನಡ ಸಂಘ ಅಧ್ಯಕ್ಷ ಕೆ.ಪಿ. ಆಚಾರ್, ನಂದಾ ಕುಮಾರಸ್ವಾಮಿ ಮುಖ್ಯ ಅತಿಥಿಗಳಾಗಿದ್ದರು. ಸವಣೂರು ಸೀತಾರಾಮ ರೈ, ಜಿಲ್ಲಾ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಟ್, ಪುತ್ತೂರು ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷ ವರದರಾಜ್ ಚಂದ್ರಗಿರಿ, ತಾಲೂಕು ಸಾಹಿತ್ಯ ಸಮ್ಮೇಳನ ಕಾರ್ಯದರ್ಶಿ ಗಣೇಶ್ ಭಟ್ ಪಿ., ಗೌರವ ಕಾರ್ಯದರ್ಶಿ ಮಹಾಲಕ್ಷ್ಮೀ ಕೊರಂಬಡ್ಕ, ಕೋಶಾಧಿಕಾರಿ ಆಶಾ ತಿಮ್ಮಪ್ಪ, ಏನೆಕಲ್ ಸಾಹಿತ್ಯ ಸಮ್ಮೇಳನ ಗೌರವಾಧ್ಯಕ್ಷ ದೇವರಾಜ್ ಕೆ.ಎಸ್, ಅಧ್ಯಕ್ಷ ಕಾರ್ಯಪ್ಪ ಗೌಡ, ಪೋಷಕಾಧ್ಯಕ್ಷ ಗಣೇಶ್ ಪ್ರಸಾದ್ ಎನ್, ಪ್ರಧಾನ ಕಾರ್ಯದರ್ಶಿ ಶಿವರಾಂ ಏನೆಕಲ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.