ದಕ್ಷಿಣ ಕನ್ನಡ

ಜೈನ ವಿಗ್ರಹ ಕಳವು ಪ್ರಮುಖನ ಬಂಧನ

Published On :

ಮಂಗಳೂರು: ಮೂಡುಬಿದಿರೆ ಜೈನ ಬಸದಿಯಿಂದ ಕೋಟ್ಯಂತರ ಮೌಲ್ಯದ ತೀರ್ಥಂಕರರ ವಿಗ್ರಹ ಕಳವು ಮಾಡಿದ ಪ್ರಮುಖ ಆರೋಪಿ ಸಂತೋಷ್ದಾಸ(34)ನನ್ನು ಆಂಧ್ರಪ್ರದೇಶ ವಿಶಾಖಪಟ್ಟಣಂನ ಶ್ರೀಕಾಕುಳಂ ಎಂಬಲ್ಲಿ ಭಾನುವಾರ ಬಂಧಿಸಲಾಗಿದೆ. ಆಂಧ್ರ ಪೊಲೀಸರು ಸಂತೋಷ್ದಾಸ್ನನ್ನು ಶನಿವಾರ ವಸತಿಗೃಹವೊಂದರಲ್ಲಿ ಬಂಧಿಸಿದ್ದು, ಬಳಿಕ ಮಂಗಳೂರು ಪೊಲೀಸರು ಬಾಡಿ ವಾರಂಟ್ ನ್ಯಾಯಾಲಯಕ್ಕೆ ಸಲ್ಲಿಸಿ ಆರೋಪಿಯನ್ನು ಮಂಗಳೂರಿಗೆ ಕರೆತರುತ್ತಿದ್ದಾರೆ. ಆರೋಪಿ ಬಗ್ಗೆ ಮಹತ್ವದ ಸುಳಿವು ಲಭಿಸಿದ್ದು, ಇನ್ನರೆಡು ದಿನದಲ್ಲಿ ತನಿಖೆ ಪೂರ್ಣಗೊಂಡ ಬಳಿಕ ಎಲ್ಲ ಮಾಹಿತಿ ನೀಡುವುದಾಗಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಮನೀಷ್ ಕರ್ಭೀಕರ್ ತಿಳಿಸಿದ್ದಾರೆ. ಮೂಡುಬಿದಿರೆ ಬಸದಿ ದರೋಡೆ ಪ್ರಕರಣವನ್ನು ಕ್ಷಿಪ್ರವಾಗಿ ಭೇದಿಸಿದ ಪೊಲೀಸರ ಕ್ರಮಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅಭಿನಂದಿಸಿದ್ದಾರೆ.

ಚಿಕ್ಕಪ್ಪನಿಂದಲೇ ಬಾಲಕಿ ಮೇಲೆ ಅತ್ಯಾಚಾರ
ದಾವಣಗೆರೆ: ಸ್ವಂತ ಚಿಕ್ಕಪ್ಪನೇ ತನ್ನ ಸ್ವಂತ ಅಣ್ಣನ 14 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ಹೊರ ವಲಯದಲ್ಲಿ ಶನಿವಾರ ನಡೆದಿದೆ. ಭಾನುವಳ್ಳಿ ಗ್ರಾಮದ 20 ವರ್ಷದ ಯುವಕನೇ ಅತ್ಯಾಚಾರ ಆರೋಪಿ. ಈತನನ್ನು ಮಲೆಬೆನ್ನೂರು ಪೊಲೀಸುರ ಬಂಧಿಸಿದ್ದಾರೆ. ಬಹಿರ್ದೆಸೆಗೆ ಹೋಗಿದ್ದ ಬಾಲಕಿಯನ್ನು ಪಾನಮತ್ತನಾಗಿದ್ದ ಈ ಯುವಕ ಏನೋ ಪ್ರಮುಖ ವಿಷಯವನ್ನು ಮಾತನಾಡ ಬೇಕಾಗಿದೆ ಎಂಬ ನೆಪದಲ್ಲಿ ಮೆಕ್ಕೆಜೋಳಕ್ಕೆ ಕರೆದೊಯ್ದಿದ್ದಾನೆ. ಸ್ವಂತ ಚಿಕ್ಕಪ್ಪನಾಗಿದ್ದರಿಂದ ಬಾಲಕಿ ಆತನ ಜತೆಗೆ ಹೋಗಿದ್ದಾಳೆ. ಆಗ ಚಿಕ್ಕಪ್ಪ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಚಿಕ್ಕಪ್ಪನ ಪೈಶಾಚಿಕ ಕೃತ್ಯದಿಂದ ಕಕ್ಕಾಬಿಕ್ಕಿಯಾದ ಬಾಲಕಿ ಮನೆಗೆ ಬಂದು ವಿಷಯ ತಿಳಿಸಿದ್ದಾಳೆ. ತಕ್ಷಣ ಬಾಲಕಿಯ ಪೋಷಕರು ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಸ್ವಸ್ಥಳಾಗಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆರೆಗೆ ಬಿದ್ದು ಗರ್ಭಿಣಿ ಆನೆ ಸಾವು
ಸಿದ್ದಾಪುರ: ಇಲ್ಲಿಗೆ ಸಮೀಪದ ಚೌಡಿಕಾಡು ಕಾಫಿ ತೋಟದಲ್ಲಿ ಕೆರೆಗೆ ಬಿದ್ದು ಮೃತಪಟ್ಟಿದ್ದ ಹೆಣ್ಣಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟು ಕೆರೆಯಿಂದ ಮೇಲೆತ್ತಿ ಶವ ಪರೀಕ್ಷೆ ನಡೆಸಿದ್ದಾರೆ. ಮೃತ ಹೆಣ್ಣಾನೆ ತುಂಬು ಗರ್ಭಿಣಿಯಾಗಿದ್ದು, ಹೊಟ್ಟೆಯಲ್ಲಿದ್ದ ಗಂಡಾನೆ ಮರಿಯೂ ಅಸುನೀಗಿದೆ. ಎರಡು ದಿನಗಳ ಹಿಂದೆ ಚೌಡಿಕಾಡು ಕಾಫಿ ತೋಟದ ಕೆರೆಯೊಂದರಲ್ಲಿ ನೀರು ಕುಡಿಯಲು ಬಂದ ಆನೆ ಕೆರೆಗೆ ಜಾರಿ ಬಿದ್ದು ಕೆಸರಿನಲ್ಲಿ ಸಿಲುಕಿ ಮೃತಪಟ್ಟಿತ್ತು. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಕೆರೆಯಲ್ಲಿ ತೇಲುತ್ತಿದ್ದ ಆನೆಯನ್ನು ಮೇಲೆತ್ತಲು ಹರಸಾಹಸ ಪಡಬೇಕಾಯಿತು.

ತೈಲ ಸಂಗ್ರಹ: 15 ದಿನದಲ್ಲಿ ಟೆಂಡರ್ ಕರೆಯಲು ಸೂಚನೆ
ಮಂಗಳೂರು: ಮಂಗಳೂರಿನ ಪೆರ್ಮುದೆಯಲ್ಲಿ ಸಿದ್ಧಗೊಳ್ಳುತ್ತಿರುವ ಐಎಸ್ಪಿಆರ್ಎಲ್ (ಇಂಡಿಯನ್ ಸ್ಟ್ರೆಟಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್) ಭೂಗತ ತೈಲ ಸಂಗ್ರಹ ಯೋಜನೆಗೆ ಪೈಪ್ಲೈನ್ ಅಳವಡಿಕೆಗೆ 15 ದಿನದಲ್ಲಿ ಟೆಂಡರ್ ಕರೆಯುವಂತೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಡಾ. ವೀರಪ್ಪ ಮೊಯ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ದೆಹಲಿಯಲ್ಲಿ ಶುಕ್ರವಾರ ನಡೆದ ಸಚಿವಾಲಯದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ. 3 ಕಂಪನಿಗಳು ಬಿಡ್ಗೆ ಮುಂದೆ ಬಂದಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಪೈಪ್ಲೈನ್ ಅಳವಡಿಕೆ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಐಎಸ್ಪಿಆರ್ಎಲ್ ಮುಖ್ಯ ಅಧಿಕಾರಿ ವಿಜಯಾನಂದ್ ತಿಳಿಸಿದ್ದಾರೆ. 'ಭೂಗತ ತೈಲ ಸಂಗ್ರಹ ಯೋಜನೆಗೆ ಪೈಪ್ಲೈನ್ ವಿಳಂಬ' ಕುರಿತು ಜು.22ರಂದು 'ಕನ್ನಡಪ್ರಭ'ದಲ್ಲಿ ವಿಶೇಷ ವರದಿ ಪ್ರಕಟವಾಗಿ ಸಚಿವರ ಗಮನ ಸೆಳೆದಿತ್ತು. ಈ ಬಗ್ಗೆ ಸಚಿವ ಡಾ.ಮೊಯ್ಲಿ, ಸಚಿವಾಲಯ ಅಧಿಕಾರಿಗಳ ಜತೆ ಯೋಜನೆಯ ಪ್ರಸ್ತುತ ಹಂತದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರಲ್ಲದೆ, ತ್ವರಿತವಾಗಿ ಪೈಪ್ಲೈನ್ ಕಾಮಗಾರಿ ಮುಕ್ತಾಯಕ್ಕೆ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.