ದಕ್ಷಿಣ ಕನ್ನಡ

ನರೇಗ ಅವ್ಯವಹಾರ: ಪ್ರಕರಣ ಇತ್ಯರ್ಥದಲ್ಲಿ ದ.ಕ. ಹ್ಯಾಟ್ರಿಕ್

Published On :

ಮಂಗಳೂರು: ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ(ನರೇಗ)ಅವ್ಯವಹಾರದ ಎಲ್ಲ ಪ್ರಕರಣ ಇತ್ಯರ್ಥಪಡಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಒಂಬುಡ್ಸ್‌ಮನ್ ಸತತ 3 ವರ್ಷದಿಂದ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ. ಚಿಕ್ಕಮಗಳೂರು ಒಂಬುಡ್ಸ್‌ಮನ್‌ಗೆ ದ್ವಿತೀಯ ಹಾಗೂ ಬಿಜಾಪುರ ತೃತೀಯ ಸ್ಥಾನ. ಇದೇ ವೇಳೆ ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲಿ ಒಂಬುಡ್ಸ್‌ಮನ್ ಹುದ್ದೆ ಭರ್ತಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.
 2010 ಆಗಸ್ಟ್‌ನಿಂದ 2013 ಜುಲೈ ವರೆಗೆ ಎಲ್ಲ 115 ಪ್ರಕರಣ ಇತ್ಯರ್ಥಪಡಿಸಿ ರು. 21.88 ಲಕ್ಷ ದಂಡ ವಸೂಲಿಗೆ ಶಿಫಾರಸು ಮಾಡಿದೆ. 2011ರಲ್ಲಿ 37 ಪ್ರಕರಣ, 12ರಲ್ಲಿ 51 ಪ್ರಕರಣ, 13ರಲ್ಲಿ 27 ಪ್ರಕರಣ ಇತ್ಯರ್ಥಗೊಳಿಸಿ ಎರಡು ವರ್ಷವೂ ದ.ಕ. ಅಗ್ರಸ್ಥಾನ ಕಾಯ್ದುಕೊಂಡಿತ್ತು. ಚಿಕ್ಕಮಗಳೂರು ಒಂಬುಡ್ಸ್‌ಮನ್ 244 ಪ್ರಕರಣಗಳಲ್ಲಿ 237 ಪ್ರಕರಣ ಇತ್ಯರ್ಥಪಡಿಸಿ ರು. 50.30 ಲಕ್ಷ ಪಾವತಿಗೆ ಶಿಫಾರಸು ಮಾಡಿದ್ದು, ಬಿಜಾಪುರದಲ್ಲಿ 41 ಪ್ರಕರಣಗಳಲ್ಲಿ 32 ಪ್ರಕರಣ ಮುಕ್ತಾಯವಾಗಿದ್ದು, ರು. 19 ಲಕ್ಷ ವಸೂಲಿಗೆ ಸೂಚಿಸಲಾಗಿದೆ.
ಒಂಬುಡ್ಸ್‌ಮನ್ ಅವಧಿ ವಿಸ್ತರಣೆ: 2010 ಆ.8 ರಂದು ದ.ಕ. ಒಂಬುಡ್ಸ್‌ಮನ್ ಆಗಿ ಶೀನ ಶೆಟ್ಟಿ ಅಧಿಕಾರ ಸ್ವೀಕರಿಸಿದ್ದರು. 2 ವರ್ಷ ಅಧಿಕಾರಾವಧಿ ಬಳಿಕ 2012 ಆಗಸ್ಟ್‌ನಲ್ಲಿ ಮತ್ತೆ ಒಂದು ವರ್ಷಕ್ಕೆ ಮುಂದುವರಿಸಲಾಯಿತು. ಈಗ ಜು.30ಕ್ಕೆ ಅಧಿಕಾರಾವಧಿ ಮುಕ್ತಾಯವಾಗಿದ್ದು, ಮತ್ತೆ ಒಂದು ವರ್ಷ ಮುಂದುವರಿಯುವ ಅವಕಾಶವಿದೆ. ಚಿಕ್ಕಮಗಳೂರು ಒಂಬುಡ್ಸ್‌ಮನ್ ರಾಮಸ್ವಾಮಿ ಅವರನ್ನೂ ಇನ್ನೊಂದು ವರ್ಷ ಮುಂದುವರಿಸುವಂತೆ ಇಲಾಖೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಒಂಬುಡ್ಸ್‌ಮನ್ ಭರ್ತಿಗೆ ಕ್ರಮ: ನರೇಗ ಯೋಜನೆಯ ಕಾಮಗಾರಿ ದುರುಪಯೋಗ ತಡೆಗೆ ಕೇಂದ್ರ ಸರ್ಕಾರ 2010ರಲ್ಲಿ ಒಂಬುಡ್ಸ್‌ಮನ್ ನೇಮಕವನ್ನು ಜಾರಿಗೆ ತಂದಿತ್ತು. ಈ ಕ್ರಮ ಜಾರಿಗೆ ಬಂದು 2 ವರ್ಷವಾದರೂ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಂಬುಡ್ಸ್‌ಮನ್ ನೇಮಕ ನಡೆದಿರಲಿಲ್ಲ.
ಈವರೆಗೆ 30 ಜಿಲ್ಲೆ ಪೈಕಿ 20 ಜಿಲ್ಲೆಗಳಲ್ಲಿ ಒಂಬುಡ್ಸ್‌ಮನ್ ಇದ್ದಾರೆ. ಈಗ ಹೊಸದಾಗಿ ಬಳ್ಳಾರಿ, ಬೀದರ್, ಗುಲ್ಬರ್ಗ, ಕೊಡಗು, ಕೋಲಾರ, ಮಂಡ್ಯ ಹಾಗೂ ತುಮಕೂರು ಈ 7 ಜಿಲ್ಲೆಗೆ ಒಂಬುಡ್ಸ್‌ಮನ್ ನೇಮಕ ಮಾಡಲಾಗುತ್ತಿದೆ. ನೇಮಕ ಪ್ರಕ್ರಿಯೆ ಮುಗಿದಿದ್ದು, ಗಜೆಟ್ ಪ್ರಕಟಣೆ ಮಾತ್ರ ಬಾಕಿ. ಇನ್ನು ಉಳಿದ 3 ಜಿಲ್ಲೆ ರಾಯಚೂರು, ಹಾಸನ, ದಾವಣಗೆರೆಗಳಿಗೆ ಒಂಬುಡ್ಸ್‌ಮನ್ ನೇಮಕ ಆಹ್ವಾನಿಸಲಾಗಿದ್ದು, ಜು.30 ಅರ್ಜಿ ಸಲ್ಲಿಕೆಗೆ ಕೊನೆಯಾಗಿತ್ತು. ರಾಯಚೂರು, ದಾವಣಗೆರೆಗೆ ಅರ್ಜಿ ಸಲ್ಲಿಕೆಯಾದರೂ ಮುಖ್ಯಕಾರ್ಯದರ್ಶಿ ನೇತೃತ್ವದ ಆಯ್ಕೆ ಸಮಿತಿ ಅರ್ಹರು ಸಿಗದ ಕಾರಣ ನೇಮಕ ಮಾಡಿರಲಿಲ್ಲ. ಹಾಸನದಲ್ಲಿ ಒಂಬುಡ್ಸ್‌ಮನ್ ನೇಮಕಗೊಂಡಿದ್ದರೂ ಕರ್ತವ್ಯಕ್ಕೆ ಹಾಜರಾಗದ ಕಾರಣ ಮತ್ತೆ ನೇಮಕ ಮಾಡಲಾಗುತ್ತಿದೆ. ಬಿಜಾಪುರದ ಒಂಬುಡ್ಸ್‌ಮನ್ ಅವಧಿ ಮುಗಿದಿರುವುದರಿಂದ ಹೊಸದಾಗಿ ನೇಮಕ ಮಾಡಲಾಗುತ್ತಿದೆ.
ಕಾನೂನು ಪದವಿ ಹೊರಕ್ಕೆ: ಒಂಬುಡ್ಸ್‌ಮನ್ ನೇಮಕವಾಗಬೇಕಾದರೆ ಈ ಹಿಂದೆ ಕಾನೂನು ಪದವಿ ಅರ್ಹತೆ ಬೇಕಾಗಿತ್ತು. ಈ ವರ್ಷದಿಂದ ಕಾನೂನು ಪದವಿ ಅರ್ಹತೆಯನ್ನು ಮಾನದಂಡ ಪಟ್ಟಿಯಿಂದ ಕೇಂದ್ರ ಸರ್ಕಾರ ಕೈಬಿಟ್ಟಿದೆ. ಇದರ ಬದಲು ಶೈಕ್ಷಣಿಕ, ಸಾರ್ವಜನಿಕ ಆಡಳಿತ, ಸಾಮಾಜಿಕ ಮತ್ತು ನಿರ್ವಹಣೆ ರಂಗದಲ್ಲಿ ಕನಿಷ್ಠ 20 ವರ್ಷ ಅನುಭವವನ್ನು ಒಂಬುಡ್ಸ್‌ಮನ್ ನೇಮಕಕ್ಕೆ ಮಾನದಂಡವಾಗಿ ಉಳಿಸಿಕೊಳ್ಳಲಾಗಿದೆ.
 - ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.