ದಕ್ಷಿಣ ಕನ್ನಡ

ಮುಸಲಧಾರೆ: ಅಪಾರ ಹಾನಿ

Published On :

ಮಂಗಳೂರು: ಜಿಲ್ಲೆಯಾದ್ಯಂತ ಮುಂಗಾರು ಅಬ್ಬರ ಮಂಗಳವಾರ ಮುಂದುವರಿದಿದೆ. ಮಂಗಳೂರಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಕೆಲವು ಕಡೆಗಳಲ್ಲಿ ಪ್ರಾಕೃತಿಕ ಹಾನಿ ಉಂಟಾಗಿದೆ. ವರ್ಷಧಾರೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.
 ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಗುಡ್ಡಕುಸಿತ ಹಾನಿ ಸಂಭವಿಸಿದೆ. ಕುಂಜತ್ತಬೈಲ್‌ನ ಜ್ಯೋತಿ ನಗರದಲ್ಲಿ ಶೇಖರ ಎಂಬವರ ಗೋಡೆ ಕುಸಿದುಬಿದ್ದು ನಾರಾಯಣ ಸಾಲ್ಯಾನ್ ಮತ್ತು ಸೀತಾ ಅವರ ಮನೆಗೆ ಹಾನಿಗೊಂಡಿದೆ. ಸಾಲ್ಯಾನ್‌ರ ಮನೆ ಪೂರ್ತಿ ಹಾನಿಗೊಂಡಿದ್ದು, ಸುಮಾರು ರು. 5 ಲಕ್ಷ ನಷ್ಟ ಅಂದಾಜಿಸಲಾಗಿದೆ. ಸೀತಾರ ಮನೆ ಭಾಗಶಃ ಹಾನಿಕಂಡಿದೆ. ಇವರಿಗೆ ಸುಮಾರು ರು. 50 ಸಾವಿರ ನಷ್ಟ ಹೇಳಲಾಗಿದೆ. ಪದವಿನಂಗಡಿಯ ಗಂಧಕಾಡು ಎಂಬಲ್ಲಿ ಗುಡ್ಡ ಕುಸಿದು ಕಂಪೌಂಡ್ ಮೇಲೆ ಬಿದ್ದಿದ್ದು, ಕಂಪೌಂಡ್ ಹಾನಿಗೀಡಾಗಿದೆ. ಬಿಜ್ಜೋಡಿಯಲ್ಲಿ ಲೀನಾ ಪಿಂಟೋ ಮತ್ತು ಮರೀನಾ ಕುಟೀನಾ ಮನೆಗೆ ಗೋಡೆ ಜರಿದು ಹಾನಿ ಉಂಟಾಗಿದೆ. 30 ಅಡಿ ಎತ್ತರದಿಂದ ಗೋಡೆ ಕುಸಿದಿದ್ದು, ಮನೆಯ ಹಿಂಭಾಗಕ್ಕೆ ಅಪಾರ ಹಾನಿ ಕಂಡುಬಂದಿದೆ. ರಾಯಿಕಟ್ಟೆಯಲ್ಲಿ ಗುಡ್ಡ ಕುಸಿದುಬಿದ್ದಿದೆ.
ಅಲ್ಲಲ್ಲಿ ನುಗ್ಗಿದ ನೀರು: ಮಂಗಳೂರು ನಗರದ ಅಲ್ಲಲ್ಲಿ ರಸ್ತೆಗೆ ಚರಂಡಿ ನೀರು ನುಗ್ಗಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕಂಕನಾಡಿ ಮಾರುಕಟ್ಟೆಯಲ್ಲಿ ನೀರು ನಿಂತು ವಹಿವಾಟಿಗೆ, ಸಂಚಾರಕ್ಕೆ ತೊಂದರೆಯಾಯಿತು. ರಾಷ್ಟ್ರೀಯ ಹೆದ್ದಾರಿ 66 ಪಡೀಲಿನಲ್ಲಿ ರಾತ್ರಿ ಮರ ಬಿದ್ದು ಹೆದ್ದಾರಿ ಸಂಚಾರಕ್ಕೆ ಆತಂಕ ಉಂಟಾಗಿತ್ತು. ಕೂಳೂರು ಬಳಿಯ ಮೇಲುಕೊಪ್ಪಳದಲ್ಲಿ ರಸ್ತೆಗೆ ನೀರು ನುಗ್ಗಿದೆ. ಕಾವೂರಿನ ಪಂಜಿಮೊಗರಿನಲ್ಲಿ ಚರಂಡಿ ನೀರು ರಸ್ತೆಗೆ ಹರಿದು ಸಮೀಪದ ಮನೆಗಳಿಗೆ ನುಗ್ಗಿದೆ. ಸುಭಾಸ್‌ನಗರದಲ್ಲಿ ರಸ್ತೆಬದಿ ಮಣ್ಣು ಪೇರಿಸಿದ್ದರಿಂದ ಚರಂಡಿ ನೀರು ಸರಾಗವಾಗಿ ಹೋಗಲು ಅಡ್ಡಿಯುಂಟಾಗಿತ್ತು. ಪಾಲಿಕೆ ಪ್ರಭಾರ ಆಯುಕ್ತ ಶ್ರೀಕಾಂತ್ ರಾವ್ ಸೂಚನೆ ಮೇರೆಗೆ ಪಾಲಿಕೆ ತಂಡ ಆಗಮಿಸಿ ಮಣ್ಣನ್ನು ತೆರವುಗೊಳಿಸಿತು.
75 ಮಿ.ಮೀ ಮಳೆ: ಜಿಲ್ಲೆಯಲ್ಲಿ ಮಂಗಳವಾರ 75 ಮಿಮೀ ಮಳೆ ದಾಖಲಾಗಿದೆ. ಕಳೆದ ವರ್ಷ ಇದೇ ದಿನ 0.5 ಮಿ.ಮೀ ಮಳೆಯಾಗಿತ್ತು. ಇದುವರೆಗೆ ಜೂನ್‌ನಲ್ಲಿ 326.5 ಮಿ.ಮೀ ಮಳೆಯಾಗಿದ್ದು, ಕಳೆದ ವರ್ಷ ಇದೇ ವೇಳೆಗೆ 130.4 ಮಿ.ಮೀ ಮಳೆ ದಾಖಲಾಗಿತ್ತು. ಬಂಟ್ವಾಳ 97.9 ಮಿ.ಮೀ, ಬೆಳ್ತಂಗಡಿ 75 ಮಿ.ಮೀ, ಮಂಗಳೂರು 102.1 ಮಿ.ಮೀ, ಪುತ್ತೂರು 56.7 ಮಿ.ಮೀ, ಸುಳ್ಯ 43.2 ಮಿ.ಮೀ ಮಳೆ ದಾಖಲಾಗಿದೆ. ಬಂಟ್ವಾಳ ನೇತ್ರಾವತಿ ನದಿ, ಉಪ್ಪಿನಂಗಡಿ ನೇತ್ರಾವತಿ ನದಿ ಹಾಗೂ ಉಪ್ಪಿನಂಗಡಿ ಕುಮಾರಧಾರಾ ನದಿಗಳಲ್ಲಿ ನೀರಿನ ಮಟ್ಟ ತಲಾ 3 ಮೀಟರ್ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.