ಎಲ್ಲ ಖಾಸಗಿ ಶಾಲೆಗಳಲ್ಲಿ ಎಸ್ಎಂಸಿ ರಚನೆ
ಮಂಗಳೂರು: ಎಲ್ಲ ಖಾಸಗಿ ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಕಡ್ಡಾಯವಾಗಿ ಎಸ್ಎಂಸಿ(ಸ್ಕೂಲ್ ಮೊನಿಟರಿಂಗ್ ಕಮಿಟಿ)ರಚಿಸುವಂತೆ ಸರ್ಕಾರ ನಿರ್ದೇಶನ ನೀಡುವಂತೆ ಮಂಗಳೂರಿನಲ್ಲಿ ಮಂಗಳವಾರ ನಡೆದ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ-2009 ಕುರಿತ ಸಾರ್ವಜನಿಕ ಸಂವಾದದಲ್ಲಿ ಆಗ್ರಹ ವ್ಯಕ್ತಗೊಂಡಿದೆ.
ವಿಶೇಷ ಮಕ್ಕಳನ್ನು ಸಾಮಾನ್ಯ ಶಾಲೆಗಳಲ್ಲೂ ದಾಖಲು ಮಾಡುವ ಸಲುವಾಗಿ ವಿಶೇಷ ಶಿಕ್ಷಕರ ನೇಮಕ ಆಗಬೇಕು. ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಬಗ್ಗೆ ಶಿಕ್ಷಕರ ಜತೆಗೆ ಎಸ್ಡಿಎಂಸಿ ಸದಸ್ಯರಿಗೆ ವಿಸ್ತೃತ ಮಾಹಿತಿ ನೀಡಲು ಕಾರ್ಯಾಗಾರ ಆಯೋಜಿಸಬೇಕು ಎಂದು ಮಕ್ಕಳ ಹಕ್ಕುಗಳ ಹೋರಾಟಗಾರ ವಾಸುದೇವ ಶರ್ಮಾ ಹೇಳಿದರು.
ಜಿಲ್ಲೆಯಲ್ಲಿ ನಿಯಮ ಉಲ್ಲಂಘಿಸಿದ 30 ಶಾಲೆಗಳಿಗೆ ಅನುಮತಿ ನೀಡದಂತೆ ಜಿಲ್ಲಾ ವಿದ್ಯಾಂಗ ಇಲಾಖೆ ಸೂಚಿಸಿದರೂ, ಶಾಲಾ ಮುಖ್ಯಸ್ಥರು ಬೆಂಗಳೂರಿನಿಂದಲೇ ಅನುಮತಿ ಪತ್ರ ತರುತ್ತಾರೆ. ಹಾಗಾಗಿ ನಾವೇನು ಮಾಡುವಂತಿಲ್ಲ ಎಂದು ಶಿಕ್ಷಣ ಇಲಾಖಾ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು.
8ನೇ ತರಗತಿ ವರೆಗೆ ಪರೀಕ್ಷೆ ಬೇಡ ಎಂದು ಆರ್ಟಿಇ ಹೇಳಿದೆ. ಹಾಗಾದರೆ ವಿಶೇಷ ಮಕ್ಕಳಿಗೆ ಯಾಕೆ ಪರೀಕ್ಷೆ ನಡೆಸಬೇಕು. ಖಾಸಗಿ ಶಾಲೆಗಳು ಆರ್ಟಿಇ ಸರಿಯಾಗಿ ಅನುಷ್ಠಾನಕ್ಕೆ ತರುತ್ತಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ವಾಸುದೇವ ಶರ್ಮಾ ಹೇಳಿದರು.
1992ರಿಂದ ಆಂಗ್ಲ ಮಾಧ್ಯಮ ಶಾಲೆ ತೆರೆಯಲು ಸರ್ಕಾರ ಅನುಮತಿ ನೀಡಿಲ್ಲ. ಹಾಗಿರುವಾಗ ಕನ್ನಡ ಮಾಧ್ಯಮ ಶಾಲೆಗಳಿಗೆ ಆಂಗ್ಲ ಮಾಧ್ಯಮ ಫಲಕ ಅಳವಡಿಸಿ ಹೆತ್ತವರನ್ನು, ವಿದ್ಯಾರ್ಥಿಗಳನ್ನು ವಂಚಿಸಲಾಗುತ್ತಿದೆ.
ಹಾಗಾಗಿ ಶಾಲೆಗೆ ಸೇರ್ಪಡೆ ಮೊದಲು ಅನುಮತಿ ಪತ್ರ ವಿಚಾರಿಸುವುದು ಉತ್ತಮ ಎಂದು ಶಿಕ್ಷಣ ತಜ್ಞ ಸಿ.ಎಚ್.ಕೃಷ್ಣ ಶಾಸ್ತ್ರಿ ಬಾಳಿಲ ಹೇಳಿದರು.
ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಪಾಠ ಮಾಡುವ ಶಿಕ್ಷಕರು ಡಿಎಡ್ ಶಿಕ್ಷಣ ಪೂರೈಸಬೇಕಾದ್ದು ಕಡ್ಡಾಯ. ಬಹುತೇಕ ಶಾಲೆಗಳಲ್ಲಿ ಈ ನಿಯಮ ಉಲ್ಲಂಘಿಸಲಾಗುತ್ತಿದೆ. ಶಿಕ್ಷಣ ಇಲಾಖೆ ಈ ಬಗ್ಗೆ ಗಮನ ಹರಿಸಬೇಕು ಎಂದು ವಾಸುದೇವ ಶರ್ಮಾ ಹೇಳಿದರು.
ಆತೂರು ಪ್ರಕರಣ: ರಾಮಕುಂಜದ ಆತೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ ಅಕ್ಟೋಬರ್ ರಜೆಯಲ್ಲಿ 7ನೇ ತರಗತಿ ವಿದ್ಯಾರ್ಥಿಗಳಿಗೆ ಇಬ್ಬರು ಶಿಕ್ಷಕಿಯರು ಮಧ್ಯಾವಧಿ ಪರೀಕ್ಷೆ ನಂತರ ಪ್ರಶ್ನೆಗಳ ಉತ್ತರವನ್ನು 1321 ಬಾರಿ ಬರೆಯಲು ಸೂಚಿಸಿದ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಎರಡು ಬಾರಿ ನೋಟಿಸ್ ಮಾಡಿದೆ. ಇನ್ನೊಂದು ಬಾರಿ ನೋಟಿಸ್ ಮಾಡಿದ ಬಳಿಕ ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಆಶಾ ನಾಯಕ್ ಹೇಳಿದರು.
ಶಾಲೆ ಬಿಟ್ಟ ವಿದ್ಯಾರ್ಥಿ: ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ಕಳೆದ ವರ್ಷ ಶಾಲಾ ಕೊಠಡಿಯ ಬಲ್ಭ್ ಒಡೆದಿತ್ತು. ಇದನ್ನು ವಿದ್ಯಾರ್ಥಿಗಳು ಯಾರೂ ಒಪ್ಪಿಕೊಂಡಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಶಿಕ್ಷಕರು ತರಗತಿಯ ಎಲ್ಲ ವಿದ್ಯಾರ್ಥಿಗಳಿಂದ ರು. 250 ವಸೂಲಿ ಮಾಡಿದರು.
ಕೊನೆಗೆ ಎಲ್ಲರೂ ಕೈಎತ್ತಿ ತಪ್ಪಾಯ್ತು ಎಂದು ಹೇಳುವಂತೆ ಸೂಚಿಸಿದರು. ಇದಕ್ಕೆ ಒಬ್ಬ ದಲಿತ ವಿದ್ಯಾರ್ಥಿ ಒಲ್ಲೆ ಎಂದ. ಆಗ ಆತನನ್ನು ಶಿಕ್ಷಕರು ಅವಮಾನಿಸಿದರು. ಇದರಿಂದ ನೊಂದ ಆತ ಎಸ್ಎಸ್ಎಲ್ಸಿ ಪರೀಕ್ಷೆಗೂ ಹಾಜರಾಗದೆ ಮನೆಯಲ್ಲೇ ಕಾಲಕಳೆಯುತ್ತಿದ್ದಾನೆ.
ಶಿಕ್ಷಕರ ವರ್ತನೆಯಿಂದ ವಿದ್ಯಾರ್ಥಿಯ ಭವಿಷ್ಯದ ಮೇಲೆ ಪರಿಣಾಮ ಬೀರಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಭಾನುಚಂದ್ರ ಕೃಷ್ಣಾಪುರ ಆಗ್ರಹಿಸಿದರು.
15 ದಿನಕ್ಕೊಮ್ಮೆ ಕಾರ್ಯಾಚರಣೆ: ವಲಸೆ ಬಂದ ಕಾರ್ಮಿಕರ ಮಕ್ಕಳಿಗೆ ಪ್ರತ್ಯೇಕ ಟೆಂಟ್ ಶಾಲೆ ತೆರೆಯಲಾಗುತ್ತದೆ. ವಲಸೆ ಮಕ್ಕಳ ಪತ್ತೆಗೆ 15 ದಿನಕ್ಕೊಮ್ಮೆ ಕಾರ್ಯಾಚರಣೆ ನಡೆಸಲಾಗುತ್ತದೆ.
ಚೈಲ್ಡ್ಲೈನ್ ಮುಖೇನ ದೂರು ನೀಡಿದರೂ ಅಂಥ ಮಕ್ಕಳು ಕಂಡುಬಂದರೆ ಅವರನ್ನು ಶಾಲೆಗೆ ಸೇರಿಸಲಾಗುವುದು. ಇದಕ್ಕಾಗಿ ಪ್ರತ್ಯೇಕ ಡಾಟಾ ಇದ್ದು, ವೆಬ್ಸೈಟ್ನಲ್ಲಿ ಹಾಕಲಾಗುತ್ತಿದೆ ಎಂದು ಸರ್ವ ಶಿಕ್ಷಣ ಅಭಿಯಾನ ಜಿಲ್ಲಾ ಸಂಯೋಜಕ ಶಿವಪ್ರಕಾಶ್ ತಿಳಿಸಿದರು.
ಸಂವಾದದಲ್ಲಿ ವಿವಿಧ ಪ್ರಕರಣಗಳ ಬಗ್ಗೆ ಚರ್ಚೆ ನಡೆಸಲಾಯಿತು. ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಡಾ.ಉಮೇಶ್ ಆರಾಧ್ಯ ಸಂವಾದ ಉದ್ಘಾಟಿಸಿದರು. ಬಾಲ ನ್ಯಾಯ ಮಂಡಳಿ ಸದಸ್ಯೆ ರಮೀಳಾ, ಪಡಿ ವೆಲೊರೆಡ್ ಸಂಚಾಲಕ ರೆನ್ನಿ ಡಿಸೋಜ, ಸಿಕ್ರಂ ಸಂಸ್ಥೆ ಸಂಯೋಜಕ ಗಂಗಾಧರ್ ರೆಡ್ಡಿ ಹಾಜರಿದ್ದರು. ಈ ಸಂವಾದ ನಗರದ ಎಸ್ಡಿಎಂ ಕಾಲೇಜಿನಲ್ಲಿ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

