ದಕ್ಷಿಣ ಕನ್ನಡ

ಕ್ಷೇತ್ರ ಸುಳ್ಯದಲ್ಲಿ.. ಪಾತ್ರ ಪುತ್ತೂರಿನಲ್ಲಿ

Published On :

ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಗಿರುವುದರಿಂದ ವಿವಿಧ ಪಕ್ಷಗಳ ಘಟಾನುಗಟಿ ನಾಯಕರಿಗೆ ಶಾಸನಸಭೆ ಪ್ರವೇಶಿಸುವ ಅವಕಾಶ ತಪ್ಪಿದೆ. ಹೀಗಾಗಿಯೇ ಇಲ್ಲಿನ ನಾಯಕರು ಬೇರೆ ಬೇರೆ ಕ್ಷೇತ್ರಗಳಲ್ಲಿ ಟಿಕೆಟ್ ಗಿಟ್ಟಿಸಲು ಪ್ರಯತ್ನ ಮತ್ತು ಲಾಬಿ ನಡೆಸುತ್ತಲೇ ಇದ್ದಾರೆ.
 ಈ ಪೈಕಿ ನೆರೆಯ ಕ್ಷೇತ್ರ ಪುತ್ತೂರನ್ನು ದೃಷ್ಟಿಯಲ್ಲಿಟ್ಟುಕೊಂಡು ನಾಯಕರು ವಿವಿಧ ಹಂತಗಳಲ್ಲಿ, ವಿವಿಧ ಟ್ರಂಪ್‌ಕಾರ್ಡ್‌ಗಳನ್ನು ಮುಂದಿಟ್ಟು ತಮ್ಮ ಹಕ್ಕೊತ್ತಾಯ ಮಂಡಿಸುತ್ತಲೇ ಇರುವುದು ನಡೆದುಕೊಂಡು ಬಂದಿದೆ.
ಮೀಸಲು ಕ್ಷೇತ್ರವಾದುದರಿಂದ ಇಲ್ಲಿನ ನಾಯಕರಿಗೆ ಅವಕಾಶ ಕೈ ತಪ್ಪುತ್ತಲೇ ಹೋಯಿತು. ಪರಿಣಾಮ ಅನ್ಯ ಕ್ಷೇತ್ರದತ್ತ ದೃಷ್ಟಿ ಹರಿಸುವುದು ಅನಿವಾರ್ಯವೂ ಆಯಿತು.
ಮಿಂಚಿದ ಡಿವಿಎಸ್: ಸುಳ್ಯ ಕ್ಷೇತ್ರದವರಾಗಿ ಶಾಸಕರಾಗಿಯೂ, ವಿಧಾನಸಭೆಯ ಉಪ ನಾಯಕರಾಗಿಯೂ, ಸಂಸದರಾಗಿಯೂ, ಕೊನೆಗೆ ರಾಜ್ಯದ ಮುಖ್ಯಮಂತ್ರಿಯೂ ಆಗಿ ಮಿಂಚಿದವರೆಂದರೆ ಬಿಜೆಪಿ ನಾಯಕ ಡಿ.ವಿ. ಸದಾನಂದ ಗೌಡ.
 ಸುಳ್ಯ ಕೇಂದ್ರವನ್ನಾಗಿಟ್ಟುಕೊಂಡು ರಾಜಕೀಯ ಪಡಸಾಲೆಯಲ್ಲಿದ್ದ ಸದಾನಂದ ಗೌಡರಿಗೆ 1989ರಲ್ಲಿ ಪುತ್ತೂರಿನಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ಮಾಡಿಕೊಡಲಾಯಿತು. ಮೊದಲ ಚುನಾವಣೆಯಲ್ಲೇ ವಿನಯ ಕುಮಾರ್ ಸೊರಕೆ ಎದುರು ಸೋಲುಂಡ ಡೀವಿ 1994 ಮತ್ತು 1999ರ ಚುನಾವಣೆಯಲ್ಲಿ ವಿಜಯಿಯಾದರು. ಬಳಿಕ ಮಂಗಳೂರು ಸಂಸದರಾಗಿ, ನಂತರ ಉಡುಪಿ ಸಂಸದರಾಗಿ, ಮುಖ್ಯಮಂತ್ರಿಯಾಗಿ ಆಯ್ಕೆಯಾದ್ದು ಈಗ ಇತಿಹಾಸ.
ಇದು ಬಿಟ್ಟರೆ 1985ರಲ್ಲಿ ಜನತಾ ಪಕ್ಷ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯು.ಪಿ. ಶಿವರಾಮ್ ಮತ್ತು ಅದೇ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಡಾ. ಯು.ಪಿ. ಶಿವಾನಂದರು ಮೂಲತಃ ಸುಳ್ಯದವರಾಗಿದ್ದರು. 2004ರಲ್ಲಿ ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಗೆದ್ದು ಶಾಸಕರಾಗಿದ್ದ ಶಕುಂತಲಾ ಶೆಟ್ಟಿ ಸುಳ್ಯ ತಾಲೂಕಿನವರಲ್ಲದಿದ್ದರೂ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟವರಾಗಿದ್ದರು.
ಕಾಂಗ್ರೆಸ್‌ನಲ್ಲಿ ಅವಕಾಶವಿಲ್ಲ: ಆದರೆ ಇಷ್ಟು ವರ್ಷಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಸುಳ್ಯ ಕ್ಷೇತ್ರದವರು ಸ್ಪರ್ಧಿಸಿದ ಉದಾಹರಣೆಗಳಿಲ್ಲ. ಪ್ರತೀ ಬಾರಿಯ ಚುನಾವಣಾ ಸಂದರ್ಭದಲ್ಲೂ ಕಾಂಗ್ರೆಸ್ ಆಕಾಂಕ್ಷಿಗಳಾಗಿ ಸುಳ್ಯದ ಅನೇಕ ನಾಯಕರು, ಅದರಲ್ಲೂ ಗೌಡ ಸಮುದಾಯದ ನಾಯಕರು ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುತ್ತಾರೆ. ಆದರೆ ಎಲ್ಲ ಸಂದರ್ಭಗಳಲ್ಲೂ ಟಿಕೆಟ್ ಕೈ ತಪ್ಪಿದೆ.
 ಕಳೆದ ಬಾರಿಯಂತೂ ಕಾಂಗ್ರೆಸ್‌ನ ಪ್ರಭಾವಿ ನಾಯಕ ಭರತ್ ಮುಂಡೋಡಿಯವರ ಹೆಸರು ಅಂತಿಮ ಕ್ಷಣದವರೆಗೂ ಚಲಾವಣೆಯಲ್ಲಿತ್ತು. ಆದರೆ ಕೊನೆ ಕ್ಷಣದ ಬದಲಾವಣೆಯಲ್ಲಿ ಅವರು ಬೊಂಡಾಲ ಜಗನ್ನಾಥ ಶೆಟ್ಟಿಯವರಿಗೆ ದಾರಿ ಮಾಡಿ ಕೊಡಬೇಕಾಯಿತು.
ಈಗಲೂ ಹೆಸರು ಚಾಲ್ತಿಯಲ್ಲಿ: ಈ ಬಾರಿಯ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲೂ ಭರತ್ ಮುಂಡೋಡಿಯವರ ಹೆಸರು ಮುಂಚೂಣಿಯಲ್ಲಿದೆ. ಜತೆಗೆ ಸುಳ್ಯದ ಕಾಂಗ್ರೆಸ್‌ನ ಗೌಡ ಸಮುದಾಯದ ಮುಖಂಡರಾದ ಧನಂಜಯ ಅಡ್ಪಂಗಾಯ, ಎಂ. ವೆಂಕಪ್ಪ ಗೌಡ, ಕೆ.ಎಸ್. ದೇವರಾಜ್ ಮತ್ತು ದಿವ್ಯಪ್ರಭಾ ಚಿಲ್ತಡ್ಕ ಅವರ ಹೆಸರು ಕೂಡಾ ಇದೆ.
 ಸುಳ್ಯ ಬ್ಲಾಕ್ ಕಾಂಗ್ರೆಸ್ ಕೂಡ ಸುಳ್ಯದಿಂದ ಟಿಕೆಟ್ ಆಕಾಂಕ್ಷಿಗಳಾಗಿ ಬೇರೆ ಕಡೆ ಅರ್ಜಿ ಸಲ್ಲಿಸಿದ ಒಬ್ಬರಿಗೆ ಅವಕಾಶ ಮಾಡಿಕೊಡಬೇಕೆಂದು ನಿರ್ಣಯ ಕೈಗೊಂಡಿದೆ. ಕೇಂದ್ರ ನಾರು ಮಂಡಳಿ ಸದಸ್ಯ ಟಿ.ಎಂ. ಶಹೀದ್ ಮಂಗಳೂರು ಕ್ಷೇತ್ರದಿಂದ ಟಿಕೆಟ್‌ಗಿಟ್ಟಿಸಲು ಲಾಬಿ ನಡೆಸುತ್ತಿದ್ದಾರೆ.
ಜೆಡಿಎಸ್ ಈ ಬಾರಿ ಪುತ್ತೂರಿನಲ್ಲಿ ಸುಳ್ಯ ಕ್ಷೇತ್ರದವರಿಗೆ ಅವಕಾಶ ಮಾಡಿಕೂಟ್ಟಿದೆ. ಡೀವಿ ಸಂಬಂಧಿಯೂ ಆಗಿರುವ ಬಿ.ಎನ್. ದಿನೇಶ್ ಜೆಡಿಎಸ್ ಅಭ್ಯರ್ಥಿ ಎಂದು ಬಿಂಬಿಸಲ್ಪಟ್ಟು ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಇವರು ಸುಬ್ರಹ್ಮಣ್ಯದವರು.
 ಒಟ್ಟಿನಲ್ಲಿ ಸುಳ್ಯದಲ್ಲಿ ಸ್ಪರ್ಧೆಗೆ ಅವಕಾಶವಿಲ್ಲದಿದ್ದರೂ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಅರ್ಜಿ ಸಲ್ಲಿಸಿ ಅದಕ್ಕಾಗಿ ತೆರೆ ಮರೆಯ ಕಸರತ್ತು ನಡೆಸುತ್ತಿರುವುದು ರಾಜಕೀಯ ರಂಗದ ಕುತೂಹಲದ ವಿದ್ಯಮಾನ.
- ದುರ್ಗಾಕುಮಾರ್ ನಾಯರ್‌ಕೆರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.