ಅಂದು ಪ್ರಭಾವಿ ನಾಯಕರು, ಇಂದು ಠೇವಣಿ ಕಳಕೊಂಡವರು!
- ಜಿತೇಂದ್ರ ಕುಂದೇಶ್ವರ
ಮಂಗಳೂರು: ಅಂದು ಘಟಾನುಘಟಿ ನಾಯಕರು, ಕ್ಯಾಬಿನೆಟ್ ಸಚಿವರು... ಆದರೆ ಇಂದು ಇಡುಗಂಟು ಕಳೆದುಕೊಂಡವರು...
ಈ ಬಾರಿಯ ಚುನಾವಣೆಯಲ್ಲಿ ಉಡುಪಿ, ದಕ್ಷಿಣಕನ್ನಡ ಜಿಲ್ಲೆಯ ಮೂವರು ಪ್ರಭಾವಿ ನಾಯಕರು ಮತ್ತು ಸಚಿವರಾಗಿ ಕೆಲಸ ಮಾಡಿದವರು ಠೇವಣಿ ಕಳೆದುಕೊಂಡಿರುವುದು ವಿಶೇಷ.
ಜೆಡಿಎಸ್ನಿಂದ ಮೂಡುಬಿದಿರೆಯಿಂದ ಸ್ಪರ್ಧಿಸಿದ್ದ ಮಾಜಿ ಮುಜರಾಯಿ ಸಚಿವ ಅಮರನಾಥ ಶೆಟ್ಟಿ, ಮಾಜಿ ಶಾಸಕ, ಈ ಬಾರಿ ಪಕ್ಷೇತರನಾಗಿ ಸ್ಪರ್ಧಿಸಿದ್ದ ಸುಳ್ಯದ ಕೆ.ಕುಶಲ ಮತ್ತು ಕಾಪು ಕ್ಷೇತ್ರದಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿದ ಮಾಜಿ ಸಚಿವ ವಸಂತ ವಿ.ಸಾಲ್ಯಾನ್ ದೊಡ್ಡ ಅಂತರದಿಂದ ಪರಾಭವಗೊಂಡ ಪ್ರಮುಖರು.
ಕೊನೆ ಸ್ಪರ್ಧೆ ಘೋಷಣೆ: ಇವರಲ್ಲಿ ಸಾಲ್ಯಾನ್ ಮತ್ತು ಶೆಟ್ಟರು ಇದು ತಮ್ಮ ಕೊನೆ ಚುನಾವಣೆ ಎಂದು ಘೋಷಿಸಿಯೇ ಕುರುಕ್ಷೇತ್ರಕ್ಕೆ ಇಳಿದಿದ್ದರು. ಇಬ್ಬರ ಮೇಲೂ ಮತದಾರ ಕರುಣೆ ತೋರಿಲ್ಲ. ಸುಳ್ಯದಲ್ಲಿ ಕುಶಲ ಕೆಜೆಪಿಗೆ ಸೇರಿ ಕೊನೆ ಕ್ಷಣದಲ್ಲಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಕನಿಷ್ಠ ಮತಗಳನ್ನು ಪಡೆದಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಜನತಾ ಪರಿವಾರ ಪ್ರಭಾವಿ ನಾಯಕರಾದ ಅಮರನಾಥ ಶೆಟ್ಟಿ ಕೆ., 1983, 85 ಮತ್ತು 1994ರಲ್ಲಿ ಗೆದ್ದಿದ್ದರು. ಬಂಟ ಸಮುದಾಯದ ಪ್ರಭಾವಿ ನಾಯಕರಾಗಿದ್ದ ಅಮರನಾಥ ಶೆಟ್ಟರು 1985ರಲ್ಲಿ ಧಾರ್ಮಿಕ ಮತ್ತು ದತ್ತಿ ಇಲಾಖೆ ಸಚಿವರಾಗಿಯೂ ಕೆಲಸ ಮಾಡಿದ್ದರು. ಮುಜರಾಯಿ ಸಚಿವರಾದವರು ಮತ್ತೆ ಗೆಲ್ಲುವುದಿಲ್ಲ ಎಂಬ ದಾಖಲೆ ಮುರಿಯಲೋ ಎಂಬಂತೆ 1994ರಲ್ಲಿ ಒಮ್ಮೆ ಗೆದ್ದರು. ಬಳಿಕ ಮಾತ್ರ ಸತತ ಸೋಲು. 1972, 78 89ರಲ್ಲಿ ಸೋತಿದ್ದ ಶೆಟ್ಟರು, 1999ರಿಂದ ಸ್ಪರ್ಧಿಸಿದ ಎಲ್ಲ ಚುನಾವಣೆಯಲ್ಲಿ ಸೋತಿದ್ದಾರೆ. ಆದರೆ ಈಬಾರಿ ಮಾತ್ರ 20471 ಮತ ಪಡೆದು ಹೀನಾಯ ಸೋಲು ಠೇವಣಿ ಕೂಡಾ ಕಳೆದುಕೊಂಡಿದ್ದು, ಅತಿ ಹೆಚ್ಚು ಬಾರಿ ಸೋತು ದಾಖಲೆ ಮಾಡಿದ್ದಾರೆ.
ಸಚಿವರಾಗಿದ್ದ ಸಾಲ್ಯಾನ್: ಕಾಪು ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸತತ ಐದು ಬಾರಿ ಗೆದ್ದು ದಾಖಲೆ ಮಾಡಿದ್ದ ಬಿಲ್ಲವ ಸಮುದಾಯದ ಪ್ರಭಾವಿ ನಾಯಕ ವಸಂತ್ ವಿ.ಸಾಲ್ಯಾನ್ ಬಂದರು ಮತ್ತು ಮೀನುಗಾರಿಕೆ ಸಚಿವರೂ ಕೂಡಾ ಆಗಿದ್ದರು. ಆದರೆ ಅದೇ ಸಾಲ್ಯಾನ್ ಹ್ಯಾಟ್ರಿಕ್ ಸೋಲು ಅನುಭವಿಸಿರುವುದು ವಿಚಿತ್ರ. ಎರಡು ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋತರೆ, ಈ ಬಾರಿ ಟಿಕೆಟ್ ಲಭಿಸಿಲ್ಲ ಎಂಬ ಕಾರಣಕ್ಕೆ ಜೆಡಿಎಸ್ ಸೇರಿ ಕೇವಲ 4327 ಮತಗಳಿಸುವ ಮೂಲಕ ಠೇವಣಿ ಕೂಡಾ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಹೊರತಾದ ಸಾಲ್ಯಾನ್ರನ್ನು ಕಾಪು ಜನತೆ ಒಪ್ಪಿಕೊಳ್ಳಲೇ ಇಲ್ಲ.
1985 ಮತ್ತು 89ರಲ್ಲಿ ಕಾಂಗ್ರೆಸ್ನಿಂದ ಸುಳ್ಯ ಮೀಸಲು ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿದ್ದ ಕೆ.ಕುಶಲ ದಲಿತ ಸಮಾಜದ ನಾಯಕರಾಗಿದ್ದರು. ಆದರೆ 1994, 99ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋಲುಂಡ ಕುಶಲ, ಬಳಿಕ 2004ರಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ ಸೋತರು.
ಈ ಬಾರಿ ಟಿಕೆಟ್ಗಾಗಿ ಕೆಜೆಪಿಗೆ ಸೇರಿದ್ದರು, ಆದರೆ ಟಿಕೆಟ್ ಸಿಗದೆ ಪಕ್ಷೇತರನಾಗಿ ಸ್ಪರ್ಧಿಸಿದ್ದರು. ವಿಪರ್ಯಾಸ ಎಂದರೆ ಶಾಸಕ ಎಸ್.ಅಂಗರ ಹೆಸರಿನ ಪಕ್ಷೇತರ ಅಭ್ಯರ್ಥಿ ಎ.ಅಂಗರ ಎಂಬವರು 725 ಮತಗಳು ಪಡೆದುಕೊಂಡಿದ್ದು, ಮಾಜಿ ಶಾಸಕ ಕುಶಲರಿಗೆ ಬಂದದ್ದು 705 ಮತಗಳು ! ಮಾಜಿ ಶಾಸಕರೊಬ್ಬರಿಗೆ ಬಂದ ಕನಿಷ್ಠ ಮತ ಕೂಡಾ ಹೌದು.
ಠೇವಣಿ ಇಲ್ಲದ ಪಕ್ಷಗಳು: ಜೆಡಿಎಸ್, ಕೆಜೆಪಿ, ಎಸ್ಡಿಪಿಐ, ಬಿಎಸ್ಪಿ, ಪಕ್ಷೇತರರು ಸಹಿತ ಠೇವಣಿ ಕಳೆದುಕೊಂಡಿದ್ದಾರೆ. ಕುಂದಾಪುರದಲ್ಲಿ ಬಿಜೆಪಿ ಠೇವಣಿ ಕಳೆದುಕೊಂಡಿದ್ದು, ಅಲ್ಲಿ ಪಕ್ಷೇತರ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಗೆದ್ದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

