ಚಿನ್ನ ಸಂಗ್ರಹಿಸಿ 7 ವರ್ಷ, ಇನ್ನೂ ಆಗಿಲ್ಲ ರಥ!
ಮಂಗಳೂರು: ಭಕ್ತರು ಕೊಟ್ಟರೂ ಸರ್ಕಾರ ಬಿಡ! ಪುಣ್ಯಕ್ಷೇತ್ರಗಳು ಸರ್ಕಾರಿಕರಣಗೊಂಡರೆ ದೇವರ ಕೆಲಸ ಎಷ್ಟು ವಿಳಂಬವಾಗುತ್ತದೆ ಎನ್ನುವುದಕ್ಕೆ ಅರ್ಧಕ್ಕೆ ನಿಂತ ಕಟೀಲು ಚಿನ್ನದ ರಥ ಕಾಮಗಾರಿಯೇ ಸಾಕ್ಷಿ.
ಕಟೀಲು ಶ್ರೀದುರ್ಗಾಪರಮೇಶ್ವರಿಗೆ ಚಿನ್ನ ರಥ ನಿರ್ಮಾಣಕ್ಕೆ ಬೇಕಾಗುವ ಚಿನ್ನ, ದೇಣಿಗೆ ಸಂಗ್ರಹವಾಗಿ 7 ವರ್ಷ ಕಳೆದಿದೆ. ಮರ, ಬೆಳ್ಳಿ ಕವಚ ಸಿದ್ಧವಾಗಿದೆ. ಚಿನ್ನ ಹೊದಿಸಲು ಮಾತ್ರ ಸರ್ಕಾರಿ ಅಧಿಕಾರಿಗಳಿಗೆ ಮುಹೂರ್ತ ಸಿಕ್ಕಿಲ್ಲ!
ರಥ ನಿರ್ಮಾಣಕ್ಕೆ 2001ರಲ್ಲಿ ಬ್ಯಾಂಕ್ ಖಾತೆ ತೆರೆದು ಭಕ್ತರಿಂದ ದೇಣಿಗೆ ಮತ್ತು ಚಿನ್ನ ಸಂಗ್ರಹ ಆರಂಭವಾಯಿತು. 2006ರಲ್ಲಿ ಬೇಕಾದ ಚಿನ್ನ ಸಂಗ್ರಹವಾಯಿತು. ಆದರೆ ಆಡಳಿತಾಧಿಕಾರಿ ರಥ ಕಾಮಗಾರಿಗೆ ಚಾಲನೆ ನೀಡಲಿಲ್ಲ.
2008ರಲ್ಲಿ ಆಡಳಿತಾಧಿಕಾರಿ ಪ್ರಭುಲಿಂಗ ಕಾವಳಿಕಟ್ಟಿ ಧಾರ್ಮಿಕ ದತ್ತಿ ಆಯುಕ್ತರ ಬಳಿ ಚರ್ಚಿಸಿದರು. ರಥಕ್ಕೆ ಚಿನ್ನದ ಲ್ಯಾಮಿನೇಶನ್ ಬದಲು ಎಲೆಕ್ಟ್ರೋಫ್ರೇಮ್ ಹಾಕಿದರೆ ಉತ್ತಮ ಎಂದು ಆಯುಕ್ತರು ಸಲಹೆ ಮಾಡಿದರು.
ಎಲೆಕ್ಟ್ರೋಫ್ರೇಮ್ನಲ್ಲಿ ವಾಪಸ್ ಚಿನ್ನ ಸಿಗುವುದು ಶೇ.60ರಿಂದ 70. ಇದನ್ನು ಆಡಳಿತ ಮೊಕ್ತೇಸರರು ಪ್ರತಿಪಾದಿಸಿದರು. ಹಾಗಾದರೆ ಲ್ಯಾಮಿನೇಶನ್ ಮತ್ತು ಎಲೆಕ್ಟ್ರೋಫ್ರೇಮ್ ಎರಡಕ್ಕೂ ಟೆಂಡರ್ ಮಾಡಿ ಎಂದು ಆಯುಕ್ತರು ಹೇಳಿದರು.
ಮುಜರಾಯಿ ಇಲಾಖೆ ಕಾರ್ಯದರ್ಶಿಗಳು ಎರಡೂ ಟೆಂಡರ್ ನೋಡಿ, ನಾವು ಯಾವುದಕ್ಕೆ ಅನುಮೋದನೆ ನೀಡಬೇಕು ಎಂದು ಗದರಿದರು. ಎನ್ಐಟಿಕೆ ಎಂಜಿನಿಯರಿಂಗ್ ಕಾಲೇಜ್ ತಜ್ಞರ ಸಲಹೆ ಪಡೆದು ಮರು ಟೆಂಡರ್ ಮಾಡಿ ಎಂದು ಸೂಚಿಸಿದರು.
ತಜ್ಞರು ಲ್ಯಾಮಿನೇಶನ್ ಸಲಹೆ ಮಾಡಿದರು. ಅದರಂತೆ ಲ್ಯಾಮಿನೇಶನ್ ಟೆಂಡರ್ ಮಾಡಿ ಕಳುಹಿಸಲಾಯಿತು. 12 ಕಿಲೊ ಚಿನ್ನ ಬಳಸಿ ರಥ ನಿರ್ಮಿಸುವ ಟೆಂಡರ್ 2010ರಲ್ಲಿ ಮಂಜೂರು ಆಯಿತು.
ದೇವಸ್ಥಾನದಲ್ಲಿ 8 ಕಿಲೊ ಚಿನ್ನ ಮತ್ತು 2.5 ಕೋಟಿ ದೇಣಿಗೆ ಇದೆ. 7 ವರ್ಷಗಳ ಹಿಂದೆ ಚಿನ್ನ 10 ಗ್ರಾಮ್ಗೆ 8 ಸಾವಿರ, ಈಗ 30 ಸಾವಿರ ದಾಟಿದೆ. ಈಗ ಚಿನ್ನ ಖರೀದಿಸಿದರೂ ಹಣ ಉಳಿಕೆಯಾಗುತ್ತದೆ.
ಎನ್ಐಟಿಕೆ ಉಸ್ತುವಾರಿ: ರಥ ನಿರ್ಮಾಣ ಮೇಲುಸ್ತುವಾರಿ ಎನ್ಐಟಿಕೆಗೆ ನೀಡುವಂತೆ ಹಿಂದಿನ ಆಡಳಿತಾಧಿಕಾರಿ ಹರೀಶ್ ಕುಮಾರ್ ಸೂಚಿಸಿದರು. ಟೆಂಡರ್ ವಹಿಸಿಕೊಂಡ ಸ್ವರ್ಣ ಜುವೆಲ್ಲರಿಗೆ ನಿರ್ಮಾಣದ ವೇಳೆ ಗ್ಯಾರಂಟಿ ನೀಡುವಂತೆ ಆಡಳಿತಾಧಿಕಾರಿ ಸೂಚಿಸಿದರು. ಒಂದು ಕಿಲೊ ಚಿನ್ನದ ಕುಸುರಿ ಮಾಡಿಕೊಡುತ್ತೇವೆ. ತಕ್ಷಣ ನೀವು ಅಷ್ಟೇ ಚಿನ್ನ ನೀಡಿ ಎಂದು ಸ್ವರ್ಣ ಜುವೆಲ್ಲರಿ ಮಾಲೀಕರು ಷರತ್ತು ಹಾಕಿದರು. ಅದೂ ಒಪ್ಪಿಗೆಯಾಗಲಿಲ್ಲ.
ಈಗಿನ ಆಡಳಿತಾಧಿಕಾರಿ ದೈವಭಕ್ತರೂ ಆಗಿರುವ ಅಜಿತ್ ಕುಮಾರ್ ಶಾನಾಡಿ ಆ.25ಕ್ಕೆ ಚಿನ್ನದ ರಥ ಕಾಮಗಾರಿ ಆರಂಭಕ್ಕೆ ಎರಡೂ ಜಿಲ್ಲೆಯ ನಾಲ್ವರು ಸಚಿವರ ಉಪಸ್ಥಿತಿಯಲ್ಲಿ ಬೃಹತ್ ಸಮಾರಂಭ ನಡೆಸಿದರು. ಕಾರ್ಯಕ್ರಮ ಮುಗಿದು ಎರಡುವರೆ ತಿಂಗಳು ಕಳೆದರೂ ಕಾಮಗಾರಿ ಶುರುವಾಗಿಲ್ಲ.
ದಂಡಂ ದಶಗುಣಂ!
6 ತಿಂಗಳ ಒಳಗೆ ರಥ ಮಾಡಿಕೊಡದಿದ್ದರೆ 5 ಲಕ್ಷ ದಂಡ ವಿಧಿಸುವುದಾಗಿ ಆಡಳಿತಾಧಿಕಾರಿ ಜುವೆಲ್ಲರಿಗೆ ಷರತ್ತು ವಿಧಿಸಿದರು. 'ಚಿನ್ನದ ಕೆಲಸ ಮಾಡಿಕೊಡುತ್ತೇವೆ. ಎನ್ಐಟಿಕೆ ತಜ್ಞರು ಪರಿಶೀಲಿಸಿದ ತಕ್ಷಣ ಅಷ್ಟೇ ಚಿನ್ನ ನೀಡಬೇಕು, ವಿಳಂಬ ಮಾಡಿದರೆ ದಿನಕ್ಕೆ 2 ಸಾವಿರದಂತೆ ನೀವೇ ದಂಡ ನೀಡಬೇಕು' ಎಂದು ಜುವೆಲ್ಲರಿ ಮಾಲೀಕರು ಷರತ್ತು ವಿಧಿಸಿದರು. ಅಲ್ಲಿಗೆ ಒಪ್ಪಂದಕ್ಕೆ ಮತ್ತೆ ಕಲ್ಲು ಬಿತ್ತು.
'ಸಮಯ ಮಿತಿ ಮೀರಿದರೆ ದಂಡ ವಿಧಿಸುವ ಬಗ್ಗೆ ಒಪ್ಪಂದದಲ್ಲಿ ಪ್ರಸ್ತಾಪ ಮಾಡಿದ್ದೆವು ಅದಕ್ಕೆ ಅವರು ಕೂಡಾ ಷರತ್ತು ವಿಧಿಸಿದ್ದಾರೆ. ಎಲ್ಲ ಸರಿಪಡಿಸಿಕೊಂಡು ಶೀಘ್ರದಲ್ಲಿ ಚಿನ್ನ ರಥ ಕಾಮಗಾರಿ ಶುರು ಮಾಡುತ್ತೇವೆ' ಎನ್ನುತ್ತಾರೆ ಆಡಳಿತಾಧಿಕಾರಿ ಅಜಿತ್ ಕುಮಾರ್ ಹೆಗ್ಡೆ.
'ರಥ 13 ಮುಕ್ಕಾಲು ಅಡಿ ಎತ್ತರ, ದೇಶದಲ್ಲಿ ಬಹುಶಃ ದೇಶದಲ್ಲಿ ಅತಿ ಎತ್ತರದ ಚಿನ್ನದ ರಥ ಇದಾಗಿದೆ. ತಾಮ್ರಕ್ಕೆ ಚಿನ್ನ ಹೊದಿಸುವುದು ವಾಡಿಕೆ. ಆದರೆ, ಇಲ್ಲಿ ಬೆಳ್ಳಿ ಮೇಲೆ ಚಿನ್ನ ಹೊದಿಸಲಾಗುತ್ತದೆ' ಎಂದು ಆನುವಂಶಿಕ ಮೊಕ್ತೇಸರ ಹರಿ ಆಸ್ರಣ್ಣ ಹೇಳುತ್ತಾರೆ.
ಮೊಯ್ಲಿ ಚಿನ್ನ ಬಂದ ಬಗೆ!
ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮಗಳ, ಮೊಮ್ಮಕ್ಕಳ ಹೆಸರಲ್ಲಿ ಅರ್ಧ ಕಿಲೊ ಬಂಗಾರ ನೀಡಿದ್ದಾರೆ. 15 ವರ್ಷ ಹಿಂದೆ ಅಮೆರಿಕಕ್ಕೆ ಹೋದಾಗ ಸನ್ಮಾನ ಸಂದರ್ಭ ಬಿಲ್ಲೆ ಕೊಟ್ಟಿದ್ದರು. ಇತ್ತೀಚೆಗೆ ಮನೆ ನವೀಕರಿಸಿದಾಗ ಬಿಲ್ಲೆ ಸಿಕ್ಕಿತು. ಉಜ್ಜಿ ನೋಡಿದಾಗ ಚಿನ್ನ ಎಂಬುದು ಮನದಟ್ಟಾಯಿತು. 15 ವರ್ಷಗಳ ಬಳಿಕ ಚಿನ್ನ ಸುರಕ್ಷಿತವಾಗಿ ಸಿಕ್ಕಿದೆ. ಕಟೀಲು ದೇವಿಗೆ ನೀಡಿ ಎಂಬ ಮಗಳ ಕೋರಿಕೆಯಂತೆ ದೇಣಿಗೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

