ದಕ್ಷಿಣ ಕನ್ನಡ

ಮೂಲಸೌಕರ್ಯ ಶೇ.ನೂರು, ಕನ್ನಡ ವ್ಯಾಮೋಹ ಚೂರು!

Published On :

-ಆತ್ಮಭೂಷಣ್
ಮಂಗಳೂರು: ಜಿಲ್ಲೆಯಲ್ಲಿರುವ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮೂಲಸೌಕರ್ಯಕ್ಕೇನೂ ಕೊರತೆ ಇಲ್ಲ. ಆದರೂ ಆಂಗ್ಲ ಮಾಧ್ಯಮ ವ್ಯಾಮೋಹ ಶೈಕ್ಷಣಿಕ ಜಿಲ್ಲೆಯ ತವರೂರು ಎನಿಸಿದ ದಕ್ಷಿಣ ಕನ್ನಡವನ್ನೂ ಬಿಟ್ಟಿಲ್ಲ.
ಜಿಲ್ಲೆಯಲ್ಲಿ 1,367 ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು 313 ಆಂಗ್ಲ ಮಾಧ್ಯಮ ಶಾಲೆಗಳಿವೆ. ಇವುಗಳಲ್ಲಿ 2 ಸರ್ಕಾರಿ ಹಾಗೂ 3 ಅನುದಾನಿತ, 6 ಖಾಸಗಿ ಶಾಲೆಗಳು ಮುಚ್ಚಿವೆ. ಕಳೆದ 5 ವರ್ಷದ ಲೆಕ್ಕ ತೆಗೆದುಕೊಂಡರೆ ಸರ್ಕಾರಿ ಶಾಲೆ ಮುಚ್ಚಿದ್ದು ಐದು ಮಾತ್ರ. ಅನುದಾನಿತ 15 ಹಾಗೂ ಅನುದಾನ ರಹಿತ 35 ಶಾಲೆಗಳು ಬಂದ್ ಆಗಿವೆ.
ಬಹಳಷ್ಟು ಕಡೆಗಳಲ್ಲಿ ಮೂಲಸೌಕರ್ಯ ಕೊರತೆಯಿಂದ ಶೈಕ್ಷಣಿಕವಾಗಿ ಶಾಲೆ, ಮಕ್ಕಳು ಹಿಂದುಳಿಯುವುದುಂಟು. ಆದರೆ ಜಿಲ್ಲೆಯಲ್ಲಿ ಎಲ್ಲ ಸರ್ಕಾರಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿ ಹೆಣ್ಮಕ್ಕಳಿಗೆ ಶೌಚಾಲಯ, ಶಾಲೆಗಳಿಗೆ ವಿದ್ಯುತ್, ಗ್ರಂಥಾಲಯ, ನೀರಿನ ವ್ಯವಸ್ಥೆಯಲ್ಲಿ ಶೇ.ನೂರು ಪರಿಪೂರ್ಣ.
ಸರಾಸರಿ 18 ಮಕ್ಕಳಿಗೊಂದು ಕೊಠಡಿ, 30 ಮಕ್ಕಳಿಗೊಬ್ಬರು ಶಿಕ್ಷಕ, ಶೇ.87 ಶಾಲೆಗಳಲ್ಲಿ ಆಟದ ಮೈದಾನ ಇದೆ. ಶೇ.90 ಶಾಲೆಗಳಲ್ಲಿ ಕಾಂಪೌಂಡ್ ನಿರ್ಮಿಸಲಾಗಿದೆ. ಬಾಕಿ ಕೊರತೆಯನ್ನು ಹಂತ ಹಂತವಾಗಿ ನೀಗಿಸಬೇಕಾಗಿದೆ. ಆಂಗ್ಲಮ ಮಾಧ್ಯಮ ಹಾವಳಿಯಲ್ಲಿಯೂ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಲಾಗುತ್ತಿದ್ದು, ಇದರಿಂದ ಕನ್ನಡ ಮಾಧ್ಯಮ ಶಾಲೆಗಳು ಸ್ವಲ್ಪ ಮಟ್ಟಿಗೆ ಉಸಿರಾಡುವಂತಾಗಿದೆ.
ಜಿಲ್ಲೆಯ ಒಂದಿಲ್ಲೊಂದು ಸರ್ಕಾರಿ ಶಾಲೆಗಳಲ್ಲಿ ಗ್ರಾಪಂ ಸದಸ್ಯರಿಂದ ತೊಡಗಿ ಶಾಸಕ, ಸಂಸದರವರೆಗೆ ಅನುದಾನ ಒದಗಿಸುವವರೇ. ಮೂಲಸೌಕರ್ಯ, ಪೀಠೋಪಕರಣ ಒದಗಿಸುವಲ್ಲಿ ತಾಪಂ, ಜಿಪಂ ಸದಸ್ಯರು ಶ್ರಮಿಸುತ್ತಾರೆ. ಅಂಡಿಂಜೆ ಸರ್ಕಾರಿ ಶಾಲೆಗೆ ವಿಶೇಷ ಮಾದರಿಯ ಗ್ರಂಥಾಲಯ, ಶೌಚಾಲಯ ನಿರ್ಮಾಣ ರಾಜ್ಯಸಭಾ ಸದಸ್ಯೆ ಜಯಶ್ರೀ ನೀಡಿದ 22 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡಿದೆ. ಒಟ್ಟಿನಲ್ಲಿ ಮೂಲ ಸೌಕರ್ಯ ವಿಷಯದಲ್ಲಿ ಖಾಸಗಿ ಶಾಲೆಗಳಿಗೆ ಸಮಾನವಾಗಿ ಸರ್ಕಾರಿ ಶಾಲೆಗಳಿವೆ. ಜಿಲ್ಲೆಯ ಉಪ್ಪಿನಂಗಡಿ, ಮಂಗಳೂರು ಕಸಬಾ ಬೆಂಗರೆ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 500 ದಾಟಿದೆ. ಉಳಿದಂತೆ ಇತರೆ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೇಳುವಷ್ಟು ಇಲ್ಲ.
ಖಾಸಗಿ ಶಾಲೆಗೆ ವರ್ಗ: ಎಲ್ಲ ಸೌಕರ್ಯವಿದ್ದರೂ ಕನ್ನಡ ಮಾಧ್ಯಮ ಶಾಲೆಯನ್ನು ತೊರೆದು ಹೋದ ಮಕ್ಕಳು ಪೋಷಕರ ಒತ್ತಾಸೆಗೆ ಒಳಗಾಗಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ದಾಖಲಾದ ಉದಾಹರಣೆಗಳಿವೆ. ಹೀಗೆ 1ರಿಂದ 8ನೇ ತರಗತಿವರೆಗಿನ ಮಕ್ಕಳು ವಾರ್ಷಿಕ ಸುಮಾರು 3ರಿಂದ 5 ಸಾವಿರ ಖಾಸಗಿ ಶಾಲೆಗೆ ಹೋಗುತ್ತಾರೆ. ಖಾಸಗಿ ಆಂಗ್ಲ ಮಾಧ್ಯಮ ಸರಿಯಾಗದೆ ವಾಪಸ್ ಸರ್ಕಾರಿ ಶಾಲೆಗೆ ಬರುವವರು ವಿರಳ.
ಶತಕ ದಾಟಿದ ಶತಮಾನ ಶಾಲೆ: ಜಿಲ್ಲೆಯಲ್ಲಿ ಒಟ್ಟು 133 ಶತಮಾನ ದಾಟಿದ ಕನ್ನಡ ಮಾಧ್ಯಮ ಶಾಲೆಗಳಿವೆ. ಇವುಗಳಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ 68, ಪ್ರೌಢ ಶಾಲೆ 2, ಅನುದಾನಿತ ಶಾಲೆ 55, ಅನುದಾನಿತ ಪ್ರೌಢ ಶಾಲೆ 8.

ಕವಿ, ಶಾಸಕ ದಿ.ಇದಿನಬ್ಬ ಕಲಿತ ಶಾಲೆ
ಶತಮಾನ ಕಂಡ ಉಪ್ಪಿನಂಗಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕವಿ ಹೃದಯದ ಶಾಸಕ ದಿ.ಬಿ.ಎಂ.ಇದಿನಬ್ಬ ಕಲಿತಿದ್ದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಎಂ.ಬಿ.ಅಬ್ದುಲ್ ರಹಿಮಾನ್ ಕೂಡ ಇದೇ ಶಾಲೆಯ ವಿದ್ಯಾರ್ಥಿ. ಈ ಶಾಲೆಯಲ್ಲಿ ಕಲಿತ ಅನೇಕ ಮಂದಿ ದೇಶ, ವಿದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. ಉಪ್ಪಿನಂಗಡಿ ಬೆಳ್ಮುಡ ಮಠ ನಿವಾಸಿಯಾದ ಇದಿನಬ್ಬ ತರಕಾರಿ ಬೆಲೆ ಏರಿಕೆಯಾದಾಗ ವಿಧಾನಸಭೆಯಲ್ಲಿ ಸ್ವರಚಿತ ಕವನ ವಾಚಿಸಿ ಸರ್ಕಾರಕ್ಕೆ ಚಾಟಿ ಬೀಸುತ್ತಿದ್ದರು. ನಾಡೋಜ ಕಯ್ಯಾರ ಕಿಂಞಣ್ಣ ರೈಗಳ ಕವನವನ್ನು 6 ಸಾವಿರ ಬಾರಿ ವಾಚಿಸಿದ್ದಾರೆ. ಉಳ್ಳಾಲ ರಾಣಿ ಅಬ್ಬಕ್ಕ ಉತ್ಸವದ ರೂವಾರಿ. 'ಕಾವ್ಯಪುಂಜ' ಕೃತಿ ರಚಿಸಿದ್ದಾರೆ. ಮೂರು ಬಾರಿ ಶಾಸಕರಾದ ಇವರು ಕಾಂಗ್ರೆಸ್‌ನಲ್ಲಿದ್ದುಕೊಂಡು ಖಾದಿ ಬೋರ್ಡ್ ಅಧ್ಯಕ್ಷರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.