ಸುದ್ದಿ ಸಂಕ್ಷೇಪ
ವೃದ್ಧರೇ ಎಚ್ಚರ
ಮಂಗಳೂರು: ವೃದ್ಧರನ್ನೇ ಗುರಿಯಾಗಿ ಆತ್ಮೀಯರಂತೆ ನಟಿಸಿ ಚಿನ್ನಾಭರಣ ಕೇಳಿಪಡೆದು ಪರಾರಿಯಾಗುವು ವಂಚಕರು ನಗರದಲ್ಲಿ ಕಾಲಿಟಿದ್ದಾರೆ. ನಗರದಲ್ಲಿ ಈ ರೀತಿ ಎರಡು ಪ್ರಕರಣ ಬಂದರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬಂಟ್ಸ್ ಹಾಸ್ಟೆಲ್ ಬಳಿಯ ನಿವಾಸಿಗಳು ಹಿರಿಯ ನಾಗರಿಕರಾದ ಉಮ್ಮರ್ ಮತ್ತು ಫಾತಿಮಾ ಅವರು ಕಣ್ಣಿನ ಆಸ್ಪತ್ರೆಯಲ್ಲಿದ್ದಾಗ ಅಪರಿಚಿತನೊಬ್ಬ ಸಮಾಜಸೇವಕ ಎಂದು ಪರಿಚಯಿಸಿಕೊಂಡು ತೀರಾ ನಂಬಿಕಸ್ತನಂತೆ ಮಾತನಾಡಿದ. ಆಗ ದಂಪತಿ ತಮಗೆ ಮಗಳಿರುವ ವಿಚಾರ ತಿಳಿದ ಅಪರಿಚಿತ ತಾನು ಉತ್ತಮ ವರ ಹುಡುಕಿಕೊಡುವುದಾಗಿ ಹೇಳಿದ.
ಈ ಬಗ್ಗೆ ದಂಪತಿ ಆಸಕ್ತಿ ತೋರಿದ ಹಿನ್ನೆಲೆಯಲ್ಲಿ ನವಭಾರತ ವೃತ್ತಕ್ಕೆ ಕರೆದುಕೊಂಡು ಹೋದ ಅಪರಿಚಿತ, ಉಮ್ಮರ್ಗೆ ಮಾತ್ರ ಹಂಪನಕಟ್ಟೆವರೆಗೆ ಬರುವಂತೆ ಹೇಳಿದ.
ಹಳೆ ಬಸ್ನಿಲ್ದಾಣ ಬಳಿಯಲ್ಲಿ ಉಮ್ಮರ್ಗೆ ನಿಲ್ಲುವಂತೆ ಸೂಚಿಸಿ, ವರನನ್ನು ಕರೆತರುವುದಾಗಿ ಹೇಳಿದ. ಈತ ಮರಳಿ ನವಭಾರತ ವೃತ್ತಕ್ಕೆ ಹೋಗಿ ಅಲ್ಲಿ ನಿಂತಿದ್ದ ಫಾತಿಮಾ ಬಳಿ ನಿಮ್ಮ ಗಂಡ ಒಡವೆ ನೀಡಲು ತಿಳಿಸಿದ್ದಾರೆ ಎಂದು ಹೇಳಿದ.
ಇದನ್ನು ನಂಬಿದ ಫಾತಿಮ ಚಿನ್ನದ ಸರ, ಬಳೆಯನ್ನು ತೆಗೆದು ಅಪರಿಚಿತನ ಕೈಗೆ ನೀಡಿದ್ದಾರೆ. ಇದರ ಮೌಲ್ಯ 75 ಸಾವಿರ ಅಂದಾಜಿಸಲಾಗಿದೆ.
ಬಹಳ ಹೊತ್ತು ಕಾದ ಬಳಿಕ ಉಮ್ಮರ್ ಮತ್ತು ಫಾತಿಮಾಗೆ ತಾವು ಮೋಸ ಹೋಗಿರುವುದು ಗೊತ್ತಾಗಿದೆ.
ಗೆಳೆಯ ಆಸ್ಪತ್ರೆಯಲ್ಲಿದ್ದಾನೆ !
ಮಂಗಳೂರು: ಆಸ್ಪತ್ರೆಯಲ್ಲಿರುವ ಗೆಳೆಯನ ಚಿಕಿತ್ಸೆಗೆ ನೆರವಾಗುವ ಸೋಗಿನಲ್ಲಿ ಅಪರಿಚಿತನೊಬ್ಬ ವೃದ್ಧ ಮಹಿಳೆಯಿಂದ ಚಿನ್ನಾಭರಣ ತೆಗೆದುಕೊಂಡು ಪರಾರಿಯಾಗಿದ್ದಾನೆ.
ಬಂಟ್ವಾಳದ ಸಾರಮ್ಮ ಮತ್ತು ಮಗ ಇಬ್ರಾಹಿಂ ಬಲ್ಮಠ ಬಳಿ ಆಸ್ಪತ್ರೆಗೆ ಬಂದಿದ್ದರು. ಇದೇ ವೇಳೆ ಆಶ್ರಫ್ ಎಂದು ಪರಿಚಯಿಸಿಕೊಂಡ ವ್ಯಕ್ತಿ ಗಲ್ಫ್ನಲ್ಲಿರುವ ಗೆಳೆಯ ಇಲ್ಲಿನ ಆಸ್ಪತ್ರೆಯಲ್ಲಿ ದಾಖಲಾಗಿತ್ತು, ಆತನಿಗೆ ನೆರವಿನ ಅಗತ್ಯ ಇದೆ ಎಂದು ವಿನಂತಿಸಿದ. ಮಗ ಇಬ್ರಾಹಿಂನನ್ನು ಜತೆಗೆ ಕರೆದುಕೊಂಡು ಹೋದ ಆತ ತಾಯಿಯನ್ನು ಆಸ್ಪತ್ರೆಯಲ್ಲಿಯೇ ಇರುವಂತೆ ಹೇಳಿದ.
ಸ್ವಲ್ಪ ಹೊತ್ತಿನಲ್ಲಿ ವಾಪಸ್ ಬಂದ ಅಶ್ರಫ್, ಒಡವೆ ತರುವಂತೆ ಮಗ ಹೇಳಿದ್ದಾನೆ ಎಂದು ಸುಳ್ಳು ಹೇಳಿ ಆಕೆಯ ಕೈಗಳಿಂದಲೇ ಚಿನ್ನಾಭರಣ ಪಡೆದು ಪರಾರಿಯಾಗಿದ್ದಾನೆ. ಬಂದರು ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
ಕ್ರೇನ್ ಡಿಕ್ಕಿ: ವೈದ್ಯ ವಿದ್ಯಾರ್ಥಿ ಸಾವು
ಮಂಗಳೂರು: ತಣ್ಣೀರುಬಾವಿ ಬಳಿ ಹಿಮ್ಮುಖವಾಗಿ ಚಲಿಸುತ್ತಿದ್ದ ಕ್ರೇನ್ ಡಿಕ್ಕಿಯಾಗಿ ಬೈಕ್ ಸವಾರ ವೈದ್ಯ ವಿದ್ಯಾರ್ಥಿ ಎಬಿನ್ ಜಾನ್ (21) ದಾರುಣವಾಗಿ ಮೃತಪಟ್ಟಿದ್ದಾರೆ. ಎಜೆ ದಂತವೈದ್ಯಕೀಯ ಆಸ್ಪತ್ರೆ ಅಂತಿಮ ವರ್ಷ ವಿದ್ಯಾರ್ಥಿ ಜಾನ್ ಬೈಕ್ನಲ್ಲಿ ಕೂಳೂರಿನತ್ತ ತೆರಳುತ್ತಿದ್ದರು. ಇದೇ ವೇಳೆಗೆ ಕ್ರೇನ್ ರಿವರ್ಸ್ ಚಲಿಸಿದ್ದು, ಬೈಕ್ಗೆ ಡಿಕ್ಕಿಯಾಗಿದೆ. ಗಂಭೀರ ಗಾಯಗೊಂಡ ಜಾನ್ನನ್ನು ಆಸ್ಪತ್ರೆಗೆ ಕರೆದೊಯ್ದರು ದಾರಿ ಮಧ್ಯೆ ಮೃತಪಟ್ಟರು. ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರಿಕ್ಷಾ ಕಳವು: ಮೂವರ ಸೆರೆ
ಮಂಗಳೂರು: ಆಟೋ ರಿಕ್ಷಾ ಕಳವು ಮಾಡಿದ ಮೂವರು ಆರೋಪಿಗಳನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಪಚ್ಚನಾಡಿ ಲಕ್ಷ್ಮಣ್ (49), ಮರಕಡ ನಝೀರ್ (30), ಜೋಕಟ್ಟೆಯ ಮೊಹಮ್ಮದ್ ಹನೀಫ್ (30) ಬಂಧಿತರು. ಕುಲಶೇಖರ ಕೋಟಿಮುರ ಬಳಿ ಸೆ.28ರಂದು ಪಾರ್ಕ್ ಮಾಡಿದ ರಿಕ್ಷಾ ಕಳವಾಗಿತ್ತು. ಲಕ್ಷ್ಮಣ್ ಮತ್ತು ನಝೀರ್ ರಿಕ್ಷಾ ಕದ್ದಿದ್ದರು. ಬಳಿಕ ರಿಕ್ಷಾದ ನೋಂದಣಿಯನ್ನು ಬದಲಾಯಿಸಲು ಹನೀಫ್ ನೆರವು ನೀಡಿದ್ದ. ಪೊಲೀಸರು ಆರೋಪಿಗಳನ್ನು ಆಟೋ ರಿಕ್ಷಾ ಸಹಿತ ಬಂಧಿಸಿದ್ದಾರೆ.
ಕೆರೆಯಲ್ಲಿ ಗಂಡಸಿನ ಮೃತದೇಹ ಪತ್ತೆ
ಹೆಬ್ರಿ: ಮುದ್ರಾಡಿ ಗ್ರಾಮದ ಜಕ್ನಾಡಿ ಎಂಬಲ್ಲಿ ಕೆರೆಯಲ್ಲಿ ಅನಾಥ ಗಂಡಸಿನ ಶವ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ. ಮುದ್ರಾಡಿ ಗ್ರಾ.ಪಂ.ಗೆ ಬಂದ ಮಾಹಿತಿಯಂತೆ ಪಂಚಾಯಿತಿಯ ಕಾರ್ಯದರ್ಶಿ ಸದಾಶಿವ ಅವರು ಹೋಗಿ ನೋಡಿದಾಗ ಜಕ್ನಾಡಿ ಮದಗದ ಕೆರೆಯಲ್ಲಿ ಈ ಶವ ಪತ್ತೆಯಾಗಿದೆ. ಮೃತರಿಗೆ 50-60 ವರ್ಷ ಪ್ರಾಯವಿರಬಹುದು. ಸಾವಿಗೆ ಕಾರಣ ತಿಳಿದಿಲ್ಲ ಎಂದು ಅವರು ಹೆಬ್ರಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆ, ಬೆದರಿಕೆ: ದೂರು
ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಗಾಂಧಿ ನಗರ ನಿವಾಸಿ ಮೈಮುನಾ ಎಂಬವರ ಮನೆಗೆ ಬುಧವಾರ ನುಗ್ಗಿದ ಕಕ್ಕಿಂಜೆ ನಿವಾಸಿ ದೇಜಪ್ಪ ಪೂಜಾರಿ ಎಂಬಾತ ಬೆದರಿಕೆಯೊಡ್ಡಿರುವುದಾಗಿ ಬೆಳ್ತಂಗಡಿ ಪೊಲೀಸರಿಗೆ ಶುಕ್ರವಾರ ದೂರು ನೀಡಲಾಗಿದೆ. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹತ್ಯೆಗೆ ಸಂಚು ಶಂಕೆ: ದೂರು
ಬೆಳ್ತಂಗಡಿ: ದಲಿತ ಸಂಘರ್ಷ ಸಮಿತಿ ಮುಖಂಡ ಬಿ.ಕೆ. ವಸಂತ್ ಅವರ ಪೂರ್ವಾಪರಗಳನ್ನು ವಿಚಾರಿಸುತ್ತಾ ಅವರನ್ನು ಹಿಂಬಾಲಿಸಿ ಭಯ ಮೂಡಿಸುತ್ತಿರುವ ಬಗ್ಗೆ ಗುರುವಾಯನಕೆರೆಯ ವ್ಯಕ್ತಿ ಹಾಗೂ ಇತರರ ವಿರುದ್ಧ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದೆ. ಕಳೆದ ಎರಡು ದಿನಗಳಿಂದ ತನ್ನನ್ನು ಹಿಂಬಾಲಿಸುತ್ತಿರುವ ಈ ವ್ಯಕ್ತಿ ಮತ್ತು ತಂಡ ನಮ್ಮನ್ನು ಹತ್ಯೆ ಮಾಡಲು ಸಂಚು ರೂಪಿಸುತ್ತಿರುವ ಬಗ್ಗೆ ಅನುಮಾನವಿದೆ ಎಂದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.
ಬೆಂಕಿ ತಗುಲಿ ತೆಂಗು, ಅಡಕೆ ನಾಶ
ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಏಳಿಂಜೆ ಸಮೀಪದ ಶುಂಠಿಪಾಡಿಯೆಂಬಲ್ಲಿ ಹರೀಶ್ ಪೂಜಾರಿ ಮನೆಗೆ ಶುಕ್ರವಾರ ಸಂಜೆ ಆಕಸ್ಮಿಕವಾಗಿ ಬೆಂಕಿ ತಗಲಿ ಹೆಂಚಿನ ಮನೆಯನ್ನು ಸಂಪೂರ್ಣ ಆವರಿಸಿಕೊಂಡಿದ್ದು ಸ್ಥಳೀಯರು ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು. ಮನೆಯ ಸಂಗ್ರಹಣಾ ಕೋಣೆಯಲ್ಲಿದ್ದ ತೆಂಗಿನಕಾಯಿ, ಕೊಬ್ಬರಿ ಹಾಗೂ ಅಡಕೆ ಸೇರಿದಂತೆ ಇತರ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು ಸುಮಾರು ಲಕ್ಷಕ್ಕೂ ಹೆಚ್ಚು ನಷ್ಟವುಂಟಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

