ಪ್ರೊಜೆಕ್ಟರ್ನಲ್ಲಿ ಮೋದಿ ಹಾದಿ, ನಮೋ ರೇಡಿಯೊ!
ಮಂಗಳೂರು: ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಇನ್ನು ಕೆಲವೇ ದಿನಗಳಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹವಾ ಕಾಣಿಸಲಿದೆ. ಚುನಾವಣೆ ಘೋಷಣೆಯಾಗದಿದ್ದರೂ ಚುನಾವಣಾ ಪ್ರಚಾರ ಮಾದರಿಯಲ್ಲಿ ಮೋದಿ ಸಾಧನೆಯನ್ನು ಬಿತ್ತರಿಸುವ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿಯೇ ದೊಡ್ಡ ಸ್ಕ್ರೀನ್ನ ಪ್ರೊಜೆಕ್ಟರ್, ಎಲ್ಇಡಿ ಟಿವಿ ಸೆಟ್ ಹಳ್ಳಿ ಹಳ್ಳಿಗೆ ಸಂಚರಿಸಲಿದೆ. ಅಲ್ಲದೆ ನಮೋ ರೇಡಿಯೊದಲ್ಲಿ ಮೋದಿ ಭಾಷಣ ತುಣುಕು ಪ್ರಸಾರವಾಗಲಿದೆ.
ಈಗಾಗಲೇ ನರೇಂದ್ರ ಮೋದಿ ಪರ ಬ್ಯಾಟಿಂಗ್ ಆರಂಭಿಸಿರುವ 'ನಮೋ ಬ್ರಿಗೇಡ್' ಸಂಘಟನೆ ಅಕ್ಟೋಬರ್ 20ರ ನಂತರ ಪ್ರಚಾರ ಅಭಿಯಾನ ಕೈಗೊಳ್ಳಲಿದೆ. ಲೋಕಸಭಾ ಚುನಾವಣೆ ಘೋಷಣೆ ವೇಳೆ ರಾಜ್ಯವ್ಯಾಪಿ ಮೋದಿ ಪರ ವಾತಾವರಣ ಸೃಷ್ಟಿಸುವುದು ಇದರ ಹಿಂದಿರುವ ತಂತ್ರ.
ಹಳ್ಳಿಗೆ ಪ್ರೊಜೆಕ್ಟರ್ ಎಲ್ಇಡಿ: ಈಗಾಗಲೇ ಸ್ಕ್ರೀನ್ ಸಹಿತ ಪ್ರೊಜೆಕ್ಟರ್ನ್ನು ತರಿಸಿದ್ದು, ದೊಡ್ಡ ಎಲ್ಇಡಿ ಟಿವಿ ಕೂಡ ಬರಲಿದೆ. ಇದನ್ನು ಮೊದಲ ಹಂತದಲ್ಲಿ ಜಿಲ್ಲೆಯ ಎಲ್ಲ 1,700 ಗ್ರಾಮಗಳಲ್ಲಿ ಪ್ರದರ್ಶಿಸಲಾಗುವುದು. ಪ್ರತಿ ಹಳ್ಳಿಗೆ ಮೋದಿ ಸಾಧನೆ ತಲುಪಿಸಬೇಕು ಎನ್ನುವುದು ನಮೋ ಬ್ರಿಗೇಡ್ ಇರಾದೆ. ಗುಜರಾತ್ನಲ್ಲಿ ಮೋದಿ ಕೈಗೊಂಡ ಕೃಷಿ, ಸೋಲಾರ್ ಸೇರಿದಂತೆ ವಿವಿಧ ರೀತಿಯ ಸಾಧನೆಗಳನ್ನು ವಿಡಿಯೋ ಮುಖೇನ ಪ್ರದರ್ಶಿಸಲಿದೆ. ಮೂಲ ವಿಡಿಯೋ ಇಂಗ್ಲಿಷ್ನಲ್ಲಿ ಇದ್ದು, ಕನ್ನಡಕ್ಕೆ ಭಾಷಾಂತರಿಸಲಾಗಿದೆ. 15 ನಿಮಿಷಗಳ ಈ ವಿಡಿಯೋದಲ್ಲಿ ಮೋದಿ ಸಾಧನೆಯನ್ನು ಸಾಕ್ಷ್ಯಚಿತ್ರಗಳಲ್ಲಿ ತೋರಿಸಲಾಗುತ್ತದೆ. ಪ್ರೊಜೆಕ್ಟರ್ನ್ನು ಒಳಾಂಗಣದಲ್ಲಿ ಪ್ರದರ್ಶಿಸಲು ಸಾಧ್ಯವಿರುವುದರಿಂದ ದೇವಸ್ಥಾನ, ಭಜನಾ ಮಂದಿರ, ಸಂಘ ಸಂಸ್ಥೆಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಪ್ರದರ್ಶಿಸಲಾಗುವುದು. ಇಷ್ಟರಲ್ಲೇ ಎಲ್ಲೆಲ್ಲಿ ಪ್ರದರ್ಶನ ನೀಡಬೇಕು ಎಂಬ ಬಗ್ಗೆ ವೇಳಾಪಟ್ಟಿ ತಯಾರಾಗುತ್ತಿದೆ. ಇದಲ್ಲದೆ ಚಕ್ರವರ್ತಿ ಸೂಲಿಬೆಲೆ ಅವರು ಮೋದಿ ಕುರಿತು ಸಮಗ್ರ ಮಾಹಿತಿಯುಳ್ಳ 20 ನಿಮಿಷಗಳ ಕನ್ನಡ ಅವತರಣಿಕೆ ಸಿದ್ಧಪಡಿಸುತ್ತಿದ್ದು, ಇದು ಎಲ್ಇಡಿ ಟಿವಿಯಲ್ಲಿ ಪ್ರದರ್ಶನಗೊಳ್ಳಲಿದೆ.
ನಮೋ ರೇಡಿಯೊದಲ್ಲಿ ಮೋದಿ ಸ್ವರ!: ನಮೋ ರೇಡಿಯೊ-ಇದು ನಮೋ ಬ್ರಿಗೇಡ್ನ ಹೊಸ ಕಲ್ಪನೆ. ಮಿಸ್ಡ್ ಕಾಲ್ ಮಾದರಿಯಲ್ಲಿ ನಿರ್ದಿಷ್ಟ ಸಂಖ್ಯೆಗೆ ಕಾಲ್ ನೀಡಬೇಕು. ಆಗ ಮಹಿಳಾ ಸಬಲೀಕರಣ, ಕೃಷಿ, ಕೈಗಾರಿಕೆ, ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಸಾಧನೆ ಹೀಗೆ 10 ರಂಗದಲ್ಲಿ ಮೋದಿ ಸಾಧನೆಯ ಅವರ ಹಿಂದಿ ಭಾಷಣದ ಆಯ್ದ ತುಣುಕನ್ನು ಸಂಕಲನಗೊಳಿಸಿದ್ದು, ಮೊಬೈಲ್ನಿಂದ ಕಾಲ್ ಮಾಡಿದಾಗ, ಸಾಧನೆ ತುಣುಕು ಪ್ರಸಾರವಾಗುತ್ತದೆ. 10 ನಿಮಿಷದ ಈ ಭಾಷಣ ಕೇಳಬಹುದು. ಆದರೆ ಇದಕ್ಕೆ ಕರೆ ದರ ಅನ್ವಯವಾಗುತ್ತದೆ. ಬೆಂಗಳೂರಿನ ಐಟಿ ವಿದ್ಯಾರ್ಥಿ ಸುನೀಲ್ ಪಾಟೀಲ್ ಇದನ್ನು ಸಿದ್ಧಪಡಿಸಿದ್ದಾರೆ. ಅಕ್ಟೋಬರ್ ಅಂತ್ಯಕ್ಕೆ ನಮೋ ರೇಡಿಯೊಗೆ ಚಾಲನೆ ಸಿಗಲಿದೆ. ದಾವಣಗೆರೆಯಲ್ಲಿ 'ನಮೋ ಸಂಚಾರ' ಹೆಸರಿನ ವಾಹನ ಹಳ್ಳಿಗೆ ಸಂಚರಿಸಿ ಮೋದಿ ಪರ ಕರಪತ್ರ ಅಭಿಯಾನ ನಡೆಸಲಿದೆ. ಮುಂಬೈನಲ್ಲಿ ವಾಹನ ರ್ಯಾಲಿ, ರಾಜ್ಯದ ನಾನಾ ಜಿಲ್ಲೆಗಳಲ್ಲಿ ವಿವಿಧ ರೀತಿಯ ಮೋದಿ ಪರ ಕಾರ್ಯಕ್ರಮವನ್ನು ನಮೋ ಬ್ರಿಗೇಡ್ ಹಮ್ಮಿಕೊಂಡಿದೆ.
-ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

