ದಕ್ಷಿಣ ಕನ್ನಡ

ಉಪ್ಪಿನಂಗಡಿ, ವಿಟ್ಲದಲ್ಲಿ ಭಾರಿ ಗಾಳಿ, ಮಳೆ

Published On :

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಗುರುವಾರ ಸಂಜೆಯಿಂದ ರಾತ್ರಿವರೆಗೆ ಬೀಸಿದ ಭಾರಿ ಗಾಳಿ ಮಳೆಗೆ ಹಾಗೂ ವಿಟ್ಲದಲ್ಲಿ ಶುಕ್ರವಾರ ಸಂಜೆ ಬೀಸಿದ ಗಾಳಿ ಮಳೆಗೆ ಅಪಾರ ಹಾನಿ ಸಂಭವಿಸಿದೆ.
ಸುಬ್ರಹ್ಮಣ್ಯ ಪರಿಸರದಲ್ಲಿ ತುಂತುರು ಮಳೆಯಾದರೆ, ಬೆಳ್ತಂಗಡಿಯಲ್ಲಿ ಉತ್ತಮ ಮಳೆಯಾಗಿದೆ. 34ನೇ ನೆಕ್ಕಿಲಾಡಿ, ಪೆರ್ನೆ, ಬಿಳಿಯೂರು ಪ್ರದೇಶಗಳಲ್ಲಿ ಹಲವು ಮನೆಗಳು ಹಾನಿಗೀಡಾಗಿ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ. ಆದರ್ಶ ನಗರದ ಸುನಂದ, ರಾಜು ಎಂಬವರ ಮನೆಗಳಿಗೆ ತೆಂಗಿನ ಮರ ಬಿದ್ದು ಮನೆ ಹಾನಿಗೀಡಾಗಿದೆ. ಹಲವೆಡೆ ಮರಗಳು ಬಿದ್ದು ಮನೆಗಳಿಗೆ ಹಾನಿಯುಂಟಾಗಿದ್ದರೆ, ಸುಭಾಸ್ ನಗರದಲ್ಲಿ ಸಿಡಿಲು ಬಡಿದು ಮನೆಗಳು ಹಾನಿಗೀಡಾಗಿವೆ. ಸುಭಾಸ್ ನಗರದ ನಿವಾಸಿ ಅಮಿಯಮ್ಮ ಎಂಬವರ ಮನೆಗೆ ಸಿಡಿಲು ಬಡಿದು ಮನೆ ಹಾನಿಗೀಡಾಗಿದೆ. ವಿಟ್ಲದ ಸುತ್ತಮುತ್ತಲಿನ ಪ್ರದೇಶದಲ್ಲಿ ಮಿಂಚು, ಗುಡುಗು, ಸಿಡಿಲಿನ ಅಬ್ಬರದ ಜತೆ ಗಾಳಿಗೆ 20ಕ್ಕೂ ಅಧಿಕ ಮನೆಗಳಿಗೆ ಹಾನಿಯುಂಟಾಗಿದೆ. ವಿಟ್ಲ- ಪುತ್ತೂರು ರಸ್ತೆಯ ಕಂಬಳಬೆಟ್ಟಿ, ಬೊಳಂತಿಮೊಗರು ಸಮೀಪದ ನೆಲ್ಲಿಗುಡ್ಡೆ, ನವಗ್ರಾಮ, ಮಾಮೇಶ್ವರ ಕಟ್ಟೆ ಮೊದಲಾದ ಕಡೆಗಳಲ್ಲಿ ಹಾನಿಯುಂಟಾಗಿದೆ. ಈ ಪರಿಸರದಲ್ಲಿರುವ ಮನೆಗಳು, ಮರಗಳು, ಅಡಿಕೆ-ತೆಂಗಿನ ಮರಗಳು ಹಾನಿಗೊಳಗಾಗಿವೆ. ಪುತ್ತೂರಿನ ಅರಿಯಡ್ಕ ಗ್ರಾಮದ ಎಂಡೆಸಾಗು ಜನತಾ ಕಾಲೋನಿ ನಿವಾಸಿ ಸಾರಮ್ಮ ಸಿಡಿಲಿನ ಅಘಾತಕ್ಕೆ ಗಾಯಗೊಂಡಿದ್ದಾರೆ.

ಕಬ್ಬು ದರ ನಿಗದಿಗೆ 15 ಜನರ ಸಮಿತಿ: ಸಚಿವ ಹುಕ್ಕೇರಿ
ಹಾವೇರಿ:
ಕಬ್ಬು ದರ ನಿಗದಿ ಸಂಬಂಧ ಸರ್ಕಾರ 15 ಸದಸ್ಯರ ಸಮಿತಿ ರಚಿಸಿದೆ. ಈ ತಿಂಗಳ ಕೊನೆಯೊಳಗೆ ಬೆಳೆಗಾರರು ಹಾಗೂ ಕಾರ್ಖಾನೆ ಮಾಲೀಕರು ಇಬ್ಬರಿಗೂ ಅನುಕೂಲ ಆಗುವ ರೀತಿಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಣ್ಣ ಕೈಗಾರಿಕೆ, ಮುಜರಾಯಿ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಹೇಳಿದರು. ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶುಕ್ರವಾರ ನಗರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, 15 ಜನರ ಸಮಿತಿ ಕೃಷಿ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡು ಪರಿಶೀಲನೆ ನಡೆಸಲಿದೆ. ದರ ನಿಗದಿ ಸಂಬಂಧ ಈ ತಿಂಗಳ ಅಂತ್ಯದಲ್ಲಿ ಸಭೆ ನಡೆಸಿ, ರೈತರು ಹಾಗೂ ಕಾರ್ಖಾನೆ ಮಾಲೀಕರಿಗೆ ಅನುಕೂಲವಾಗುವ ತೀರ್ಮಾನ ಕೈಗೊಳ್ಳಲಾಗುವುದು. ಬಿಜೆಪಿ, ಕೆಜೆಪಿ ಮೈತ್ರಿ ಅಥವಾ ವಿಲೀನ ಲೋಕಸಭಾ ಚುನಾವಣೆಯಲ್ಲಿ ಪ್ರಭಾವ ಬೀರುವುದಿಲ್ಲ. ಇದರಿಂದ ಕಾಂಗ್ರೆಸ್‌ಗೆ ನಷ್ಟವಿಲ್ಲ. ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.