ದಕ್ಷಿಣ ಕನ್ನಡ

ನಾಳೆ ಡಾ. ಹೆಗ್ಗಡೆ ಪಟ್ಟಾಭಿಷೇಕ ವರ್ಧಂತ್ಯುತ್ಸವ

Published On :


ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ 46ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಗುರುವಾರ ವೈಭವದಿಂದ ನಡೆಯಲಿದೆ.
 ಧರ್ಮಾಧಿಕಾರಿಯಾಗಿರುವ ಡಾ.ಡಿ. ವೀರೇಂದ್ರ ಹೆಗ್ಗಡೆ ಧರ್ಮಸ್ಥಳದ ಆಡಳಿತ ಪರಂಪರೆಯಲ್ಲಿ 21ನೇಯವರು. 1968 ಅ.24ರಂದು ಪಟ್ಟಾಭಿಷಿಕ್ತರಾದ ಡಾ. ಹೆಗ್ಗಡೆ, ಧರ್ಮಸ್ಥಳದ ಪರಂಪರೆಯನ್ನು ಪುನರ್ ವ್ಯಾಖ್ಯಾನ ಮಾಡಿ ಜಗತ್ತಿಗೆ ಹೊಸ ಬೆಳಕನ್ನು, ಹೊಸ ಹೊಳಪನ್ನು ತಂದಿತ್ತರು.
ಕಳೆದ 45 ವರ್ಷಗಳಲ್ಲಿ ತಲೆಮಾರಿನಿಂದ ಬಂದಿರುವ ಅನ್ನ, ವಿದ್ಯೆ, ಔಷಧ ಹಾಗೂ ಅಭಯಗಳೆಂಬ ಚತುರ್ದಾನಗಳು, ಸ್ಥಳದ ಪೂಜೆ- ಪುನಸ್ಕಾರಗಳು, ರಥೋತ್ಸವ, ಜಾತ್ರೆ, ಉತ್ಸವ, ವಾರ್ಷಿಕಾವರ್ತನೆಯ ಹಬ್ಬಗಳು ಹಾಗೂ ಕ್ಷೇತ್ರದ ಪರಂಪರೆಗಳನ್ನು ಪರಿಷ್ಕರಿಸಿದ್ದೇ ಅಲ್ಲದೆ ಸಮಕಾಲೀನಗೊಳಿಸಿ ಯಸ್ಸನ್ನೂ ಕಂಡಿದ್ದಾರೆ. ಕಾಲ, ದೇಶಗಳ ಅಗತ್ಯಕ್ಕೆ ಅನುಗುಣವಾಗಿ ಧರ್ಮಸ್ಥಳದ ಪರಂಪರೆಗೆ ಹೊಸ ನೋಟ, ಹೊಸ ದಿಕ್ಕು ನೀಡಿದ್ದು ಇವರ ಸಾಧನೆ.
ವಿವಿಧ ಯೋಜನೆಗಳು: 1982ರಲ್ಲಿ ಪ್ರಾರಂಭವಾದ ಗ್ರಾಮಭಿವೃದ್ಧಿ ಯೋಜನೆಯಲ್ಲಿ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳು, ಕೃಷಿ ವಿಸ್ತರಣೆ ಚಟುವಟಿಕೆಗಳು, ಕೃಷಿ ಮೇಳಗಳು, ನೀರಾವರಿ ಹಾಗೂ ಬಂಜರು ಭೂಮಿ ಅಭಿವೃದ್ಧಿ ಯೋಜನೆ, ಜೀವನಧಾಮ ವಸತಿ ಯೋಜನೆ, ಸುರಕ್ಷಾ ಆರೋಗ್ಯ ಮತ್ತು ನೈರ್ಮಲ್ಯ ಯೋಜನೆ, ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮ, ಸಿರಿ ಗ್ರಾಮೋದ್ಯೋಗ ಸಂಸ್ಥೆ, ಪ್ರಗತಿಬಂಧು ಸ್ವಸಹಾಯ ಸಂಘಗಳು, ಸಮುದಾಯ ಅಭಿವೃದ್ಧಿ ಯೋಜನೆ, ಜ್ಞಾನದೀಪ ಶಿಕ್ಷಣ ಕಾರ್ಯಕ್ರಮ, ಪರಿಸರ ಸಂರಕ್ಷಣಾ ಅಭಿಯಾನ, ರುದ್ರಭೂಮಿ ಪುನರ್ ನಿರ್ಮಾಣ ಯೋಜನೆ, ನಗರಾಭಿವೃದ್ಧಿ ಯೋಜನೆ, ಬದಲಿ ಇಂಧನ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ.
 ಜನಜಾಗೃತಿ ಕಾರ್ಯಕ್ರಮಗಳಲ್ಲಿ ಮದ್ಯ ವ್ಯಸನಿಗಳ ಮನ ಪರಿವರ್ತನೆ ಹಾಗೂ ಚಿಕಿತ್ಸೆ, ಅನಧಿಕೃತ ಕಳ್ಳಭಟ್ಟಿ ದಂಧೆ ಹಾಗೂ ಶರಾಬು ಮಾರಾಟದ ನಿಯಂತ್ರಣ, ಕೋಳಿ ಅಂಕ, ಜೂಜುಗಾರಿಕೆಗಳ ವಿರುದ್ಧ ಹೋರಾಟ, ನವಜೀವನ ಸಮಿತಿಗಳು ಯಶಸ್ಸು ಕಂಡಿವೆ. ರುಡ್ಸೆಟ್ ಮೂಲಕ ಕೃಷಿ ಸಂಬಂಧಿ, ತಾಂತ್ರಿಕ ತರಬೇತಿಗಳ ಜೊತೆಗೆ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಗಳು ನಡೆಯುತ್ತಿದ್ದು, ಸಾವಿರಾರು ಮಂದಿ ಸ್ವ ಉದ್ಯೋಗಿಗಳಾಗಿದ್ದಾರೆ.
 ಧರ್ಮಸ್ಥಳ ಮಂಜುನಾಥೇಶ್ವರ ಸಂಚಾರಿ ಆಸ್ಪತ್ರೆ ಜನಸೇವೆಯಲ್ಲಿ ತೊಡಗಿಸಿಕೊಂಡಿದೆ. ವಿದ್ಯಾದಾನ, ಸಾಮೂಹಿಕ ವಿವಾಹಗಳು ನಿರಂತರವಾಗಿ ನಡೆದುಕೊಂಡು ಬಂದಿವೆ. ಇವುಗಳಿಂದಾಗಿಯೇ ಧರ್ಮಸ್ಥಳ ಮಾದರಿ ಕ್ಷೇತ್ರವಾಗಿ ಪರಿಗಣಿಸಲ್ಪಟ್ಟಿದೆ.
ಸನಾತನ ಸಂಸ್ಕೃತಿ ರಕ್ಷಣೆ: ಸನಾತನ ಸಂಸ್ಕೃತಿಯ ಸಂರಕ್ಷಣೆಯಲ್ಲಿ ಧರ್ಮಸ್ಥಳದ ಪಾತ್ರ ಬಹುಮುಖ್ಯ. ಧರ್ಮೋತ್ಥಾನ ಟ್ರಸ್ಟ್, ಶಾಂತಿವನ ಟ್ರಸ್ಟ್, ಯೋಗ ಮತ್ತು ನೈತಿಕ ಶಿಕ್ಷಣ ಪ್ರಸಾರ, ಪುಸ್ತಕ ಪ್ರಕಟಣೆ, ಭಜನಾ ತರಬೇತಿ ಕಮ್ಮಟ, ಮಂಜೂಷಾ ವಸ್ತು ಸಂಗ್ರಹಾಲಯ, ಯಕ್ಷಗಾನ ಮೇಳ ಮತ್ತು ತರಬೇತಿ ಕೇಂದ್ರ, ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ, ಪ್ರತಿ ವರ್ಷ ನಡೆಯುವ ಸರ್ವಧರ್ಮ, ಸಾಹಿತ್ಯ ಸಮ್ಮೇಳನಗಳು ಮುಖ್ಯವಾದವುಗಳು.
ವಿಶೇಷ ಕಾರ್ಯಕ್ರಮಗಳು: ಪಟ್ಟಾಭಿಷೇಕ ದಿನವನ್ನು ಪ್ರತಿವರ್ಷ ಕ್ಷೇತ್ರದಲ್ಲಿ ಪಟ್ಟಾಭಿಷೇಕ ವರ್ಧಂತ್ಯುತ್ಸವವನ್ನಾಗಿ ಆಚರಿಸಲಾಗುತ್ತದೆ. ಉತ್ಸವದ ಅಂಗವಾಗಿ ಕ್ಷೇತ್ರದಲ್ಲಿ ಬೆಳಗ್ಗೆಯಿಂದಲೇ ಕಾರ್ಯಕ್ರಮಗಳು ಆರಂಭಗೊಳ್ಳುತ್ತವೆ. ಬೆಳಗ್ಗೆ ಹೆಗ್ಗಡೆಯವರಿಗೆ ಅಭಿಮಾನಿಗಳು, ಊರ- ಪರವೂರ ಗಣ್ಯರು, ನಾಗರಿಕರು ಪುಷ್ಪ ಸಮರ್ಪಣೆ ಮಾಡಿ ತಮ್ಮ ವಿಶ್ವಾಸ, ಗೌರವಗಳನ್ನು ಸಮರ್ಪಿಸುತ್ತಾರೆ. ಬಳಿಕ ಛದ್ಮವೇಷ ಸ್ಪರ್ಧೆ ನಡೆಯುತ್ತದೆ. ಮಧ್ಯಾಹ್ನದ ಬಳಿಕ ಸಭಾ ಕಾರ್ಯಕ್ರಮ ನಡೆಯುತ್ತದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಶುಭಾಶಂಸನೆಗೈಯಲಿದ್ದಾರೆ. ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದ ಸಿಬ್ಬಂದಿಯನ್ನು ಡಾ.ಹೆಗ್ಗಡೆ ಗುರುತಿಸಿ ಗೌರವಿಸುತ್ತಾರೆ.
 ದೀಪಕ್ ಅಳದಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.