ದಕ್ಷಿಣ ಕನ್ನಡ

ಸುದ್ದಿ ಸಂಕ್ಷೇಪ

Published On :

ಕಾರಂತ ಪ್ರಬಂಧ ಸ್ಪರ್ಧೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಮತ್ತು ಕಲ್ಕೂರ ಪ್ರತಿಷ್ಠಾನ ವತಿಯಿಂದ ಕೋಟ ಶಿವರಾಮ ಕಾರಂತರ ಜನ್ಮದಿನೋತ್ಸವ ಅಂಗವಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಎಸ್ಸೆಸ್ಸೆಲ್ಸಿವರೆಗಿನ, ಕಾಲೇಜ್ ಮತ್ತು ಮುಕ್ತ ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಮೂರು ಪುಟಕ್ಕೆ ಮೀರದ ಪ್ರಬಂಧವನ್ನು ಅ.5ರೊಳಗೆ ಸ್ವ ವಿಳಾಸ ಮತ್ತು ದೂರವಾಣಿ ಸಂಪರ್ಕ ಸಂಖ್ಯೆಯೊಂದಿಗೆ 'ಕಲ್ಕೂರ ಪ್ರತಿಷ್ಠಾನ, ಶ್ರೀಕೃಷ್ಣ ಸಂಕೀರ್ಣ, ಮಹಾತ್ಮಾ ಗಾಂಧಿ ರಸ್ತೆ, ಕೊಡಿಯಾಲಬೈಲ್‌' ವಿಳಾಸಕ್ಕೆ ತಲುಪಿಸಬಹುದು ಎಂದು ಕಸಾಪ ಜಿಲ್ಲಾಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದ್ದಾರೆ.
ಗೂಂಡಾಗಿರಿ ಮಾಡಿ ತಲೆಮರೆಸಿಕೊಂಡರು
ಮಂಗಳೂರು: ಮುಡಿಪು ಪರಿಸರದಲ್ಲಿ ಸಾರ್ವಜನಿಕರ ಸಮ್ಮುಖ ನಮೋ ಬ್ರಿಗೇಡ್ ಬ್ಯಾನರ್ ಹರಿದು, ವಾಹನ, ಚಾಲಕ, ನಿರ್ವಾಹಕರಿಗೆ ಹಲ್ಲೆ ನಡೆಸಿದ ನವಾಜ್ ನೇತೃತ್ವದ ದುಷ್ಕರ್ಮಿಗಳನ್ನು ಕೊಣಾಜೆ ಪೊಲೀಸರಿಗೆ ಬಂಧಿಸಲು ಸಾಧ್ಯವಾಗಿಲ್ಲ. ಗಾಂಜಾ ಸೇವಿಸಿದ ದುಷ್ಕರ್ಮಿಗಳು ಬುಧವಾರ ಸಂಜೆ 2 ಗಂಟೆಗಳ ಕಾಲ ಗೂಂಡಾಗಿರಿ ಪ್ರದರ್ಶಿಸಿದ್ದರು.
ಕದ್ರಿ ಗೋಪಾಲ ಆಚಾರ್ಯ ನಿಧನ
ಮಂಗಳೂರು: ವಿಶ್ವಕರ್ಮ ಸಹಕಾರ ಬ್ಯಾಂಕಿನ ಮಾಜಿ ಅಧ್ಯಕ್ಷ ಕದ್ರಿ ಎಂ. ಗೋಪಾಲ ಆಚಾರ್ಯ(65) ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನ ಹೊಂದಿದರು. ಸರಳ, ನೇರ ನಡೆನುಡಿಯವರಾಗಿದ್ದು, ವಿಶಅವ ಬ್ರಾಹ್ಮಣ ಸಮಾಜದ ಅನೇಕ ಸಂಘಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ದ.ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷರಾಗಿ, ಮಂಗಳೂರು ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
  ಮೃತರಿಗೆ ಪತ್ನಿ, ಇಬ್ಬರು ಪುತ್ರ, ಓರ್ವ ಪುತ್ರಿ ಇದ್ದಾರೆ. ಕಾಳಿಕಾ ಕ್ರಿಯೇಶನ್ಸ್‌ನ ಸುಜೀರ್ ವಿನೋದ್, ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಕೇಶವ ನಾಯಕ್, ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ ಹರೀಶ್ ಆಚಾರ್, ಜಿಲ್ಲಾ ಚಿನ್ನದ ಕೆಲಸಗಾರರ ಸಂಘ, ವಿಶ್ವ ಬ್ರಾಹ್ಮಣ ಮಹಿಳಾ ಸಮಿತಿ, ಶ್ರೀ ಕಾಳಿಕಾಂಬ ಸೇವಾ ಸಮಿತಿ ಸಂತಾಪ ಸೂಚಿಸಿದೆ.

ಮನೆಗೆ ನುಗ್ಗಿ 10 ಲಕ್ಷ ಕಳವು
ಮಂಗಳೂರು: ಉಳ್ಳಾಲ ವಿದ್ಯಾರಣ್ಯ ನಗರ ಮನೆಗೆ ನುಗ್ಗಿದ ಕಳ್ಳರು 10 ಲಕ್ಷ ಮೌಲ್ಯದ ನಗ, ನಗದು ಕಳವು ಮಾಡಿದ್ದಾರೆ. ತಂಬಾಕು ವ್ಯಾಪಾರಿ ರಮಣೇಶ್ ಪಟೇಲ್ ಎಂಬವರ ಮನೆಗೆ ಬುಧವಾರ ತಡರಾತ್ರಿ ನುಗ್ಗಿದ ಕಳ್ಳರು 10 ಪವನ್ ಚಿನ್ನಾಭರಣ, ದುಬಾರಿ ರ್ಯಾಡೊ ವಾಚ್, 25 ಸಾವಿರ ಕಳವು ಮಾಡಿದ್ದಾರೆ.  ಪೊಲೀಸರು ತನಿಖೆ ಆರಂಭಿಸಿದ್ದು ಪಕ್ಕದ ಮನೆ ಮುಂಭಾಗದಲ್ಲಿರುವ ಸಿಸಿ ಟಿವಿ ದೃಶ್ಯಾವಳಿ ಬಳಸಿಕೊಂಡು ತನಿಖೆ ಮಾಡುತ್ತಿದ್ದಾರೆ. 40 ವರ್ಷಗಳಲ್ಲಿ ಈ ಪರಿಸರದಲ್ಲಿ ಕಳ್ಳತನ ನಡೆದಿಲ್ಲ ಎಂದು ಮನೆ ಮಾಲೀಕ ರಮಣೇಶ್ ಹೇಳಿದ್ದಾರೆ.

ಅಳಿವೆಬಾಗಿಲು ಬಳಿ ದೋಣಿ ಮಗುಚಿ ಮೀನುಗಾರ ಸಾವು
ಮಂಗಳೂರು:   ಅಳಿವೆಬಾಗಿಲು ಬಳಿ ದೋಣಿ ಮಗುಚಿ ನಾಪತ್ತೆಯಾಗಿದ್ದ ತಮಿಳ್ನಾಡು ನಿವಾಸಿ ಸೆಲ್ವಂ ಅವರ ಮೃತದೇಹ ಗುರುವಾರ ಸಂಜೆ ಪತ್ತೆಯಾಗಿದೆ. ಬುಧವಾರ ಸಂಜೆ ಮೂವರು ಮೀನುಗಾರಿಕೆ ತೆರಳಿದ್ದರು. ಅಳಿವೆಬಾಗಿಲು ಬಳಿ ದೋಣಿ ಮಗುಚಿತ್ತು. ಸುನಿಲ್, ಎಳುಮಲೈ ಕ್ಯಾನ್ ಸಹಕಾರದಿಂದ ದಡ ಸೇರಿದ್ದರು. ಆದರೆ ಸೆಲ್ವಂ ನಾಪತ್ತೆಯಾಗಿದ್ದರು. ಗುರುವಾರ ಸಂಜೆ 6 ಗಂಟೆ ವೇಳೆಗೆ ಉಳ್ಳಾಲ ಮೊಗವೀರ ಪಟ್ಣ ಬಳಿ ಮೃತದೇಹ ಪತ್ತೆಯಾಯಿತು. ಬೋಟ್ ಮಾಲೀಕ ಸುಭಾಶ್ಚಂದ್ರ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ.

ಬೈಕ್ ಮುಖಾಮುಖಿ; ಇಬ್ಬರಿಗೆ ಗಾಯ
ಕುಂದಾಪುರ: ಕೋಟೇಶ್ವರದಿಂದ ಕುಂದಾಪುರ ಕಡೆಗೆ ಬೈಕಿನಲ್ಲಿ ಹೋಗುತ್ತಿದ್ದ ಕಿಶೋರ್ ಎಂಬವರಿಗೆ ಇಲ್ಲಿನ ಕೊಟೇಶ್ವರ ಗ್ರಾಮದ ಕಾಮತ್ ಪೆಟ್ರೋಲ್ ಬಂಕ್ ಬಳಿ ಎದುರಿನಿಂದ ಬೈಕ್‌ನಲ್ಲಿ ಬರುತ್ತಿದ್ದ ಅಬ್ದುಲ್ ಮಜೀದ್ ಎಂಬವರು ಡಿಕ್ಕಿ ಹೊಡೆದ ಘಟನೆ ಬುಧವಾರ ನಡೆದಿದೆ. ಗಾಯಗೊಂಡ ಕಿಶೋರ್, ಅಬ್ದುಲ್ ಮಜೀದ್  ಇಬ್ಬರೂ ಎನ್.ಆರ್. ಆಚಾರ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಡಿಕ್ಕಿ; ಪಾದಚಾರಿ ಗಾಯ
ಉಡುಪಿ: ಪಾದಚಾರಿಯೊಬ್ಬರಿಗೆ ಬೈಕ್ ಡಿಕ್ಕಿಯಾಗಿ ಗಾಯಗೊಂಡ ಘಟನೆ ಶಂಕರಪುರ ಚರ್ಚ್ ಬಳಿ ಬುಧವಾರ ನಡೆದಿದೆ. ಗಾಯಗೊಂಡವರನ್ನು ಸುಭಾಸ್ ನಗರದ ಇಮ್ಯಾನುವೆಲ್ ಜತ್ತನ್ನ ಎಂದು ಗುರುತಿಸಲಾಗಿದೆ. ಇವರು ಶಂಕರಪುರ ಪೇಟೆಯಿಂದ ಸಾಮಗ್ರಿಗಳನ್ನು ಖರೀದಿಸಿ ವಾಪಾಸ್ ಸುಭಾಸ್ ನಗರದತ್ತ ಬರುವಾಗ ಈ ಘಟನೆ ಸಂಭವಿಸಿದೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಕ್ಕಳೊಂದಿಗೆ ಗೃಹಿಣಿ ನಾಪತ್ತೆ;  ಪೊಲೀಸರು ದಾವಣಗೆರೆಗೆ
ಮೂಲ್ಕಿ: ಸೆ.13ರಂದು ನಾಪತ್ತೆಯಾದ ಕೊಳಚಿಕಂಬಳದಲ್ಲಿ ಬಾಡಿಗೆಗೆ ವಾಸವಿರುವ ದಾವಣಗೆರೆ ಮೂಲದ ಮಂಜು ಅವರ ಪತ್ನಿ ಚಂದ್ರಮ್ಮ (28) ಹಾಗೂ ಮಕ್ಕಳಾದ ಅನುಷಾ (10) ಮತ್ತು ಅಂಜು (8) ದಾವಣಗೆರೆಯಲ್ಲಿದ್ದಾರೆಂದು ಮೂಲ್ಕಿ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಹೆಚ್ಚಿನ ತನಿಖೆಗಾಗಿ ಮೂಲ್ಕಿ ಪೊಲೀಸ್ ಠಾಣಾ ಸಹಾಯಕ ಉಪ ನಿರೀಕ್ಷಕ ಚಂದ್ರಹಾಸ್ ನೇತೃತ್ವದಲ್ಲಿ ಮೂಲ್ಕಿ ಪೊಲೀಸರು ದಾವಣಗೆರೆಗೆ ಪ್ರಯಾಣ ಬೆಳೆಸಿದ್ದಾರೆ. ದಾವಣಗೆರೆ ಜಿಲ್ಲೆಯ ಸಂತೆಹೊನ್ನೂರು ಅರಳಿಕಟ್ಟೆ ನಿವಾಸಿ ಚಂದ್ರಮ್ಮ ಮೂಲ್ಕಿಯ ಕೊಳಚಿಕಂಬಳದಲ್ಲಿ ಬಾಡಿಗೆಯ ಮನೆಯಲ್ಲಿ ವಾಸಿಸುತ್ತಿದ್ದು ಅಲ್ಲಿಗೆ ವ್ಯಕ್ತಿಯೊಬ್ಬ ಬರುತ್ತಿದ್ದು ಆತನೊಂದಿಗೆ ಚಂದ್ರಮ್ಮ ಸಲಿಗೆಯಿಂದ ವರ್ತಿಸುತ್ತಿದ್ದುದಾಗಿ ಸ್ಥಳೀಯರು ತಿಳಿಸಿದ್ದಾರೆ. ಆತನೊಂದಿಗೆ ಪರಾರಿಯಾಗಿರಬೇಕೆಂದು ಪೊಲೀಸರು ಶಂಕಿಸಿದ್ದು ಖಚಿತ ಮಾಹಿತಿ ಮೇರೆಗೆ ದಾವಣಗೆರೆಗೆ ಹೆಚ್ಚಿನ ತನಿಖೆಗೆ ಹೋಗಿದ್ದಾಗಿ ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.