ಉಸ್ಸಪ್ಪಾ...! ಇದು ಉಪ್ಪಿನಂಗಡಿ ಬಸ್ ನಿಲ್ದಾಣ
ಉಪ್ಪಿನಂಗಡಿ: ಗರಿಷ್ಠ ಸ್ವಂತ ಆದಾಯ ಹೊಂದಿರುವ ಉಪ್ಪಿನಂಗಡಿಯ ಬಸ್ ನಿಲ್ದಾಣದ ದುಸ್ಥಿತಿ ಕಂಡವರಿಗೆ ದುಖದ ಕಣ್ಣೀರು ಸುರಿಸುವಂತಿದೆ. ಅನುಭವಿಸಿದವರಿಗೆ ನೋವಿನ ಕಣ್ಣೀರು ಸುರಿಸುವಂತಿದೆ. ಆದರೆ ಪಂಚಾಯ್ತಿ ಆಡಳಿತಗಾರರಿಗೆ ಮಾತ್ರ ವರನಟ ರಾಜ್ ಕುಮಾರ್ ಹಾಡಿದ ಗೀತೆಯಂತೆ ಯಾರೇ ಕೂಗಾಡಲಿ, ಊರೇ ಹೋರಾಡಲಿ... ನಮಗೇನೂ ಚಿಂತಿಲ್ಲ ಎಂಬಂತೆ ಸುಖ ನಿದ್ರೆಯಲ್ಲಿದೆ.
ಹೌದು ಪುತ್ತೂರು ತಾಲೂಕಿನ ಎರಡನೇ ಅತೀ ದೊಡ್ಡ ಪಟ್ಟಣವೆಂಬ ಖ್ಯಾತಿಯ ಗರಿಷ್ಠತಮ ಸ್ವಂತ ಆದಾಯವುಳ್ಳ ಉಪ್ಪಿನಂಗಡಿ ಗ್ರಾಪಂ ಅಧೀನದ ಬಸ್ ನಿಲ್ದಾಣದ ದುಸ್ಥಿತಿ ಕಂಡಾಗ, ಈ ಬಗ್ಗೆ ಈಗಾಗಲೇ ಎಲ್ಲಾ ಮಾಧ್ಯಮಗಳು ಸವಿವರ ವರದಿ ಪ್ರಕಟಿಸಿ ಸಮಸ್ಯೆಯ ಗಂಭೀರತೆಯನ್ನು ಎಚ್ಚರಿಸಿದರೂ ಉಪ್ಪಿನಂಗಡಿ ಗ್ರಾಪಂ ಮಾತ್ರ ಎಚ್ಚೆತ್ತುಕೊಂಡಿಲ್ಲ. ಎಲ್ಲೆಡೆಯ ಬಸ್ ನಿಲ್ದಾಣದಲ್ಲಿ ಮಾಡಿರುವ ಡಾಂಬರೀಕರಣ ಸುಸ್ಥಿತಿಯಲ್ಲಿದ್ದರೆ, ಉಪ್ಪಿನಂಗಡಿಯ ಬಸ್ ನಿಲ್ದಾಣದಲ್ಲಿ ಮಾಡಲಾದ ಡಾಂಬರೀಕರಣ ನಾಲ್ಕೈದು ತಿಂಗಳಿಗಿಂತ ಹೆಚ್ಚು ಬಾಳಿಕೆ ಬಂದಂತಿಲ್ಲ.
ಗ್ರಾಪಂ ನಿರ್ಲಕ್ಷ್ಯ: ಡಾಂಬರೀಕರಣ ಮಳೆಗಾಲದಲ್ಲಿ ಅಸಾಧ್ಯವೆಂದು ಪಂಚಾಯ್ತಿ ಆಡಳಿತ ಜಲ್ಲಿ ಕಲ್ಲು ಬೆರೆತ ಜಲ್ಲಿ ಹುಡಿಯನ್ನು ಹೊಂಡ ಗುಂಡಿಗಳಲ್ಲಿ ತುಂಬಿ ತನ್ನ ಕರ್ತವ್ಯ ಪೂರೈಸಿತ್ತು. ಮಳೆಗಾಲ ಮುಗಿದು, ಮೂರು ತಿಂಗಳಾಗುತ್ತಾ ಬಂದರೂ, ಬಸ್ ನಿಲ್ದಾಣದ ದುಸ್ಥಿತಿ ಸುಧಾರಣೆಯಾಗಿಲ್ಲ.
ನೋವನ್ನು ಕೇಳುವವರಿಲ್ಲ: ಹಾಕಲಾದ ಜಲ್ಲಿ ಕಲ್ಲುಗಳು ಮೇಲೆದ್ದು ಬಂದಿದ್ದು, ಬಸ್ಸಿನ ಚಕ್ರಕ್ಕೆ ಸಿಲುಕಿ ಎಸೆಯಲ್ಪಡುವ ಈ ಕಲ್ಲುಗಳು ತಗುಲಿ ದಿನಂಪ್ರತಿ ಬಹಳಷ್ಟು ಪ್ರಯಾಣಿಕರು ಗಾಯಗೊಳ್ಳುತ್ತಿದ್ದಾರೆ. ವೇದನೆಗೆ ಸಿಲುಕುತ್ತಿದ್ದಾರೆ. ಪುಟಾಣಿ ಮಕ್ಕಳಿಗೆ, ಎಳೆಯ ಪ್ರಾಯದ ವಿದ್ಯಾರ್ಥಿಗಳಿಗೆ ತಗುಲುವ ಈ ಕಲ್ಲೇಟಿನಿಂದ ರಕ್ತ ಸೋರುವ ಗಾಯಗಳಾಗುತ್ತಿದ್ದರೂ ಹೊಣೆಹೊರುವ ಮಂದಿ ಇಲ್ಲಿಲ್ಲ. ಯಾರ ಮೇಲೆ ದೂರು ನೀಡಬೇಕೆಂಬ ಅರಿವು ಗಾಯಾಳುಗಳಿಗೆ ಇದ್ದಂತಿಲ್ಲ.
ಧೂಳು ನಿತ್ಯದ ಗೋಳು ಎಂಬಂತಿದೆ. ಪ್ರತಿಯೊಂದು ಬಸ್ಸು ಬಂದಾಗಲೂ ಏಳುವ ಧೂಳು ಪ್ರಯಾಣಿಕರ ಮತ್ತು ಪರಿಸರದ ಅಂಗಡಿ ಮಾಲಕರ ಹಾಗೂ ಗ್ರಾಹಕರಿಗೆ ಪಂಚಾಯ್ತಿ ಆಡಳಿತದ ಅನಪೇಕ್ಷಿತ ಕೊಡುಗೆಯಾಗಿದೆ.
ಬಸ್ ನಿಲ್ದಾಣದ ಅಷ್ಟ ದಿಕ್ಕುಗಳಲ್ಲಿಯೂ ವಾಣಿಜ್ಯ ಮಳಿಗೆ ನಿರ್ಮಿಸಿ, ಗರಿಷ್ಠಾತಿ ಗರಿಷ್ಠ ಮೊತ್ತಕ್ಕೆ ಏಲಂ ಮಾಡಿರುವ ಪಂಚಾಯಿತಿ ಬಹಳ ಆದಾಯ ಗಳಿಸುತ್ತಿದೆ. ಆದರೆ ನಾಗರಿಕರ ಹಿತ ಕಾಯುವ ಕಾಳಜಿ ತೋರುತ್ತಿಲ್ಲ.
ರು. 20 ಲಕ್ಷ ವಿನಿಯೋಗಿಸಬೇಕೆಂದಿದ್ದೆವು: ಉಪ್ಪಿನಂಗಡಿ ಬಸಸ್ನಿಲ್ದಾಣದ ಸಮಸ್ಯೆಯ ಬಗ್ಗೆ ಪತ್ರಿಕೆ ಉಪ್ಪಿನಂಗಡಿ ಗ್ರಾಪಂ ಅಧ್ಯಕ್ಷೆ ನಳಿನಾಕ್ಷಿ ಶೆಟ್ಟಿ ಯವರನ್ನು ಸಂಪರ್ಕಿಸಿದಾಗ, ಬಸ್ ನಿಲ್ದಾಣದ ಸಮಸ್ಯೆಯ ಬಗ್ಗೆ ಪೂರ್ಣ ಅರಿವಿದೆ. ಬಸ್ ನಿಲ್ದಾಣದ ಅಭಿವೃದ್ಧಿಗಾಗಿ 20 ಲಕ್ಷ ಮೀಸಲಿರಿಸುವ ಬಗ್ಗೆ ನಾನು ಪಂಚಾಯ್ತಿ ಸಭೆಯಲ್ಲಿ ಪ್ರಸ್ತಾಪಿಸಿದ್ದೆ.
ಈ ಸಂದರ್ಭದಲ್ಲಿ ಸದಸ್ಯರಿಬ್ಬರು, ಅದನ್ನು ನಾವು ಶಾಸಕರಿಂದ ಒದಗಿಸಿಕೊಡುತ್ತೇವೆ. ಈಗ ಇರುವ ಪಂಚಾಯ್ತಿ ಹಣವನ್ನು ವಾರ್ಡ್ಗಳ ಅಭಿವೃದ್ಧಿಗೆ ಬಳಸೋಣ ಎಂದು ಸಲಹೆ ನೀಡಿದರು. ಈ ಸಲಹೆಗೆ ಬಹುಮತ ಲಭಿಸಿದ ಕಾರಣ, ನನ್ನ ನಿಲುವು ಅನುಷ್ಠಾನಗೊಳ್ಳಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಗಮನಕ್ಕೆ ತಂದಿಲ್ಲ- ಶಾಸಕಿ: ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ಪತ್ರಿಕೆಗೆ ಪ್ರತಿಕ್ರಿಯಿಸಿ, ಉಪ್ಪಿನಂಗಡಿ ಗ್ರಾಪಂ ಯಾವುದೇ ಅಗತ್ಯತೆಯ ಬಗ್ಗೆ ಯಾವುದೇ ಪ್ರಸ್ತಾಪವನ್ನು ಈ ವರೆಗೆ ಯಾರೂ ನನ್ನ ಗಮನಕ್ಕೆ ತಂದಿರುವುದಿಲ್ಲ.
ಬಸ್ ನಿಲ್ದಾಣದ ಅಭಿವೃದ್ಧಿಗೆ ಶಾಸಕರ ಅನುದಾನ ನೀಡುವಂತಿಲ್ಲದಿದರೂ, ಸಂಬಂಧಪಟ್ಟ ಇಲಾಖೆಯಿಂದ ಮಾಡಿಸಬಹುದು. ಜಿಪಂ ಮೂಲಕ ಪಂಚಾಯ್ತಿ ಬಸ್ ನಿಲ್ದಾಣಗಳ ಅಭಿವೃದ್ಧಿಗೆ ಅನುದಾನ ದೊರಕಿಸಿಕೊಡಬಹುದಾಗಿದೆ ಎಂದರು.
ಬರೋಬ್ಬರಿ ವರ್ಷ ದಾಟಿದ ಸಮಸ್ಯೆಯನ್ನು ಬಗೆ ಹರಿಸಲು ಆಡಳಿತ ವ್ಯವಸ್ಥೆಗೆ ಅಸಾಧ್ಯವಾಗಿರುವುದು ನಾಗರಿಕರ ದುರಂತವೆನ್ನಬಹುದು. ಇದನ್ನು ಬಸ್ ನಿಲ್ದಾಣವೆನ್ನಲು ನಾಚಿಕೆಯಾಗುತ್ತಿದೆ.
ಸಿರಾಜ್ ನೆಕ್ಕಿಲಾಡಿ, ಯುವ ಸಾಮಾಜಿಕ ಕಾರ್ಯಕರ್ತ, ನೆಕ್ಕಿಲಾಡಿ
ಇಲ್ಲಿ ನಡೆದಾಡಲೂ ಅಸಾಧ್ಯವಾದಂತಹ, ಧೂಳಿನಿಂದಾಗಿ ನಿಲ್ಲಲೂ ಅಸಾಧ್ಯವಾದಂತಹ ವಿಷಮ ಪರಿಸ್ಥಿತಿ ಇದೆ. ಪಂಚಾಯತ್ ವ್ಯಾಪ್ತಿಯ ಈ ಬಸ್ ನಿಲ್ದಾಣವನ್ನು ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ತುರ್ತು ದುರಸ್ತಿ ಪಡಿಸುವ ಹೊಣೆಗಾರಿಕೆ ಜನಪ್ರತಿನಿಧಿಗಳದ್ದಾಗಿದೆ.
ಪ್ರಶಾಂತ್ ಡಿಕೋಸ್ಟ,
ಅಧ್ಯಕ್ಷ, ವರ್ತಕ ಸಂಘ, ಉಪ್ಪಿನಂಗಡಿ
ದಿನಂಪ್ರತಿ ಸಾವಿರಾರು ಜನ ಬಂದು ಹೋಗುವ ಬಸ್ ನಿಲ್ದಾಣವನ್ನು ಅಪಾಯಕಾರಿಯಾಗಿ ಉಳಿಸಿಕೊಂಡು ಬರುತ್ತಿರುವುದು ಯಾಕೆ ಎನ್ನುವುದೇ ತಿಳಿಯದ ವಿಚಾರ.
ಕೃತಿ ಕೈಲಾರ್, 5ನೇ ತರಗತಿ ವಿದ್ಯಾರ್ಥಿನಿ, ಇಂದ್ರಪ್ರಸ್ಥ ವಿದ್ಯಾಲಯ, ಉಪ್ಪಿನಂಗಡಿ
- ಉಲುಕ್ ಉಪ್ಪಿನಂಗಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

