ಯುಪಿಸಿಎಲ್ ಯೋಜನಾ ಪ್ರದೇಶದಲ್ಲಿ ಸಿಮೆಂಟ್ ಘಟಕ ಆರಂಭ
ಪಡುಬಿದ್ರಿ: ಎಲ್ಲೂರು ಬಳಿ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದಿಸುತ್ತಿರುವ ಯುಪಿಸಿಎಲ್ ಯೋಜನಾ ಪ್ರದೇಶದಲ್ಲಿ ಅದರ ಹಾರುಬೂದಿ ಬಳಸಿ ಸಿಮೆಂಟ್ ತಯಾರಿಸುವ ಎಸಿಸಿ ಸಿಮೆಂಟ್ ಲೆಂಡಿಂಗ್ ಘಟಕ ಭಾನುವಾರ ಆರಂಭಗೊಂಡಿದೆ.
ಎಸಿಸಿ ಕಂಪನಿಯ ದಕ್ಷಿಣ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಪಿ.ಎನ್. ಅಯ್ಯರ್ ಘಟಕಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಯುಪಿಸಿಎಲ್ 1200 ಮೆ.ವ್ಯಾ ವಿದ್ಯುತ್ ಉತ್ಪಾದಿಸುತ್ತಿದ್ದು ಅದಕ್ಕೆ ಬಳಸುವ ಕಲ್ಲಿದ್ದಲಿನ ಬೂದಿ ಬಳಸಿ ಸಿಮೆಂಟ್ ತಯಾರಿಸಲು ಎಸಿಸಿ ಈ ಹಿಂದೆಯೇ ಆಸಕ್ತಿ ವಹಿಸಿದ್ದು, ಯೋಜನಾ ಪ್ರದೇಶದ ಹೊರಭಾಗ (ಪಾದೆಬೆಟ್ಟು ಬಳಿ)ದಲ್ಲಿ ಸಿಮೆಂಟ್ ಘಟಕ ಸ್ಥಾಪನೆಗೆ ಮುಂದಡಿ ಇಟ್ಟಿತ್ತು. ಆದರೆ ಸ್ಥಳೀಯರ ತೀವ್ರ ವಿರೋಧ ಕಂಡು ಬಂದ ಹಿನ್ನೆಲೆಯಲ್ಲಿ ಯೋಜನೆ ಕೈಬಿಡಲಾಗಿತ್ತು. ಬಳಿಕ ಯುಪಿಸಿಎಲ್ ಆಸಕ್ತಿವಹಿಸಿ ಯೋಜನಾ ಘಟಕದ ಒಳ ಭಾಗದಲ್ಲಿ ಲಭ್ಯವಿರುವ ಸ್ಥಳಾವಕಾಶ ಒದಗಿಸಿ ಎಸಿಸಿ ಸಿಮೆಂಟ್ ಕಂಪನಿಗೆ ಘಟಕ ಆರಂಭಿಸಲು ಹಸಿರು ನಿಶಾನೆ ತೋರಿಸಿತ್ತು.
ಈ ಹಿನ್ನೆಲೆಯಲ್ಲಿ ಸುಮಾರು 50 ಕೋಟಿ ವೆಚ್ಚದ ಎಸಿಸಿ ಸಿಮೆಂಟ್ ತಯಾರಿಕಾ ಘಟಕ ಆರಂಭಗೊಂಡಿದೆ. ಎಸಿಸಿ ಗ್ಯಾಶ್ ಟೆಕ್ ಕಂಪೆನಿ ಈ ಘಟಕದ ಉಸ್ತುವಾರಿ ವಹಿಸಿಕೊಂಡಿದ್ದು, ಪ್ರತಿ ದಿನ 1500 ಟನ್ ಸಿಮೆಂಟ್ ತಯಾರಿಕೆಗೆ ಸಿದ್ಧತೆ ನಡೆಸಿದೆ. 50 ಕೆಜೆಯ ಬ್ಯಾಗ್ ಮೂಲಕ ಅವಿಭಜಿತ ದ.ಕ. ಜಿಲ್ಲೆಯಾದ್ಯಂತ 90ಕ್ಕೂ ಅಧಿಕ ವಿತರಕರಿಗೆ ಸಿಮೆಂಟ್ ವಿತರಣೆಗೆ ಕಂಪೆನಿ ಸಿದ್ಧತೆ ನಡೆಸಿದೆ.
ಇದೇ ಸಂದರ್ಭ ಯೋಜನೆಯ ಎರಡನೇ ಘಟಕ ಪಾದೆಬೆಟ್ಟುವಿನ ಎನ್ಟಿಪಿಸಿಗಾಗಿ ಕಾದಿರಿಸಿದ ಜಾಗದಲ್ಲಿ ಆರಂಭಗೊಳ್ಳಲಿದ್ದು, ಈ ಬಗ್ಗೆ ಯೋಜನೆ ಸಿದ್ಧಗೊಂಡಿದೆ ಎಂದು ಎಸಿಸಿ ಮೂಲಗಳು ತಿಳಿಸಿವೆ. ಪ್ರಸ್ತುತ ಯುಪಿಸಿಎಲ್ ಮುಖ್ಯ ದ್ವಾರದಿಂದಲೇ ಎಸಿಸಿ ಘಟಕಕ್ಕೆ ಒಳ- ಹೊರ ಹೋಗಬೇಕಿದ್ದು ಕಾರ್ಗೋ ಗೇಟ್ನಿಂದ ನೇರ ದಾರಿ ನಿರ್ಮಿಸಲೂ ಕಂಪನಿ ಸಿದ್ಧತೆ ನಡೆಸಿದೆ.
ಉದ್ಘಾಟನೆ ವೇಳೆ ಎಸಿಸಿ ಅಧಿಕಾರಿಗಳಾದ ರಾಜೀವ್ ಕುಮಾರ್, ಸಿ.ಆರ್. ಬೈಂದೂರು, ಸತೀಶ್ಚ್ಂದ್ರನ್, ರಾಜೀವ್ ಠಾಕೂರ್, ಕೆ.ಕೆ. ರಾಜೀವ್, ರಜತ್, ಎಸ್.ಬಿ. ಸಿಂಗ್, ಬಿಜು ಜಾಕಬ್, ಘಟಕದ ರೆಸಿಡೆಂಟ್ ಮ್ಯಾನೇಜರ್ ವೆಂಕಟೇಶ್ ಕುಲಕರ್ಣಿ, ಪ್ಲಾಂಟ್ ಉಸ್ತುವಾರಿ ನರೇಶ್ ಶರ್ಮಾ ಇದ್ದರು.
ಘಟಕದಲ್ಲಿ 145 ಕಾರ್ಮಿಕರಿದ್ದು 30 ಸ್ಥಳೀಯರಿಗೆ ಅವಕಾಶ ಕಲ್ಪಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

