ದಕ್ಷಿಣ ಕನ್ನಡ

ಇಂದು ನಮೋ ಯುವ ಸಂಗಮ

Published On :

ಮೂಲ್ಕಿ: ನಮೋ ಬ್ರಿಗೇಡ್ ಹಳೆಯಂಗಡಿ ಘಟಕದ ವತಿಯಿಂದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯನ್ನು ಬೆಂಬಲಿಸಿ ಶುಕ್ರವಾರ ಸಂಜೆ ಹಳೆಯಂಗಡಿ ಬಸ್ ನಿಲ್ದಾಣದ ಬಳಿ ನಮೋ ಯುವ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಸುಮುಖ ಬೆಟಗೇರಿ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದು ಬ್ರಿಗೇಡ್ ಪ್ರಕಟಣೆ ತಿಳಿಸಿದೆ.
ಜಿಲ್ಲೆಯ ಬಗ್ಗೆ ವಿಚಾರ ಸಂಕಿರಣ
ಮಂಗಳೂರು: ಸಂತ ಅಲೋಶಿಯಸ್ ಕಾಲೇಜಿನ ಇತಿಹಾಸ ವಿಭಾಗದಿಂದ 'ಸ್ವಾತಂತ್ರ್ಯೋತ್ತರ ದಕ್ಷಿಣ ಕನ್ನಡ' ವಿಚಾರದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಫೆ.14 ಮತ್ತು 15ರಂದು ಕಾಲೇಜಿನ ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಜರುಗಲಿದೆ.   14ರಂದು ಬೆಳಗ್ಗೆ 9ಕ್ಕೆ ವಿಚಾರ ಸಂಕಿರಣ ಉದ್ಘಾಟನೆಯಾಗಲಿದೆ. ಕಾಲೇಜು ಕುಲಸಚಿವ ಡಾ.ಎಂ.ನರಹರಿ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಂಗಳೂರು ವಿ.ವಿಋ.ಇತಿಹಾಸ ಮತ್ತು ಸಂಶೋಧನಾ ವಿಭಾಗದ ಮಾಜಿ ಮುಖ್ಯಸ್ಥ ಡಾ.ಸುರೇಂದ್ರ ರಾವ್ ದಿಕ್ಸೂಚಿ ಭಾಷಣ ಮಾಡುವರು ಎಂದು ಪ್ರಾಂಶುಪಾಲ ರೆ.ಫಾ. ಸ್ವೀಬರ್ಟ್ ಡಿಸಿಲ್ವ ಬುಧವಾರ ಸುದ್ದಿಗೋಷ್ಠಿಯಲ್ಲಿ  ಹೇಳಿದರು. ಮರುದಿನ ಸಂಜೆ 5ಕ್ಕೆ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ರೆ.ಫಾ. ಡೆನ್ಜಿಲ್ ಲೋಬೋ ಭಾಷಣ ಮಾಡಲಿದ್ದು, ನಿಟ್ಟೆ ಕೆ.ಎಸ್.ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮೆನೇಜ್‌ಮೆಂಟ್‌ನ ಪ್ರಾಧ್ಯಾಪಕ ಡಾ.ಜಿ.ವಿ.ಜೋಶಿ ಅತಿಥಿಯಾಗಿ ಆಗಮಿಸುವರು ಎಂದರು.
ದ.ಕ. ಆಪ್ ಇಬ್ಭಾಗ
ಮಂಗಳೂರು: ಜಿಲ್ಲೆಯಲ್ಲಿ ಆಮ್ ಆದ್ಮಿ ಪಾರ್ಟಿ ಇಬ್ಭಾಗವಾಗಿದೆ. ಇಬ್ಬರೂ ಪ್ರತ್ಯೇಕ ಸುದ್ದಿಗೋಷ್ಠಿ ಕರೆದಿದ್ದಾರೆ. ಧರ್ಮೇಂದ್ರ ನೇತೃತ್ವದ ಆಮ್ ಆದ್ಮಿ ಪಾರ್ಟಿ ಸುದ್ದಿಗೋಷ್ಠಿ ಕರೆದಿರುವುದನ್ನು ಗಮನಿಸಿದ ಆಪ್ ಜಿಲ್ಲಾ ಸಂಚಾಲಕ ರೋಬರ್ಟ್ ರೊಸಾರಿಯೊ ಬುಧವಾರವೇ ಸುದ್ದಿಗೋಷ್ಠಿ ಕರೆದು ತನ್ನದೇ ನಿಜವಾದ ಆಪ್ ಎಂದಿದ್ದಾರೆ.  ಜಿಲ್ಲೆಯ ಆಪ್‌ನ ಗೊಂದಲವನ್ನು ಆಪ್  ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಪೃಥ್ವಿ ರೆಡ್ಡಿಯ ಗಮನಕ್ಕೆ ತರಲಾಗಿದೆ. ಈ ವಿಚಾರದಲ್ಲಿ ಮಂಗಳೂರಿಗೆ ಆಗಮಿಸುವುದಾಗಿ ತಿಳಿಸಿದ್ದರೂ ಇದುವರೆಗೆ ಬಂದಿಲ್ಲ, ಸಂಪರ್ಕಕ್ಕೂ ಸಿಗುತ್ತಿಲ್ಲ. ಈ ಗೊಂದಲಕ್ಕೆ ರಾಜ್ಯ ಸಮಿತಿ ಸಹ ಸಂಚಾಲಕ ಸಿದ್ಧಾರ್ಥ ಶರ್ಮ ಕಾರಣ ಎಂದು ರೊಸಾರಿಯೊ ಆರೋಪಿಸಿದರು. ಪಕ್ಷ ಸಂಘಟಿಸುವ ಸಲುವಾಗಿ 23ರಂದು ಸದಸ್ಯರ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ಇಂದು 'ಬರ್ಕೆ' ತುಳು ಚಿತ್ರ ಬಿಡುಗಡೆ
ಮಂಗಳೂರು: ಶ್ರೀ ರೇಣುಕಾ ಚಿತ್ರ ನಿರ್ಮಾಣದ ತುಳು ಚಿತ್ರ 'ಬರ್ಕೆ' ಫೆ. 14 ರಂದು ಜಿಲ್ಲೆಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರ ನಿರ್ಮಾಪಕ ಸುರೇಶ್ ರೆಡ್ಡಿ ಹೇಳಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರವು ಮಂಗಳೂರು ನಗರದ ಶೇ. 60 ಭಾಗಗಳಲ್ಲಿ ಚಿತ್ರೀಕರಣಗೊಂಡಿದೆ. ವಿ. ಮನೋಹರ್ ಸಾಹಿತ್ಯ ರಚಿಸಿದ್ದು, ಯಶೋವರ್ಧನ ಸಂಗೀತ ನಿರ್ದೇಶನ ಮಾಡಿದ್ದಾರೆ. ದ.ಕ. ಜಿಲ್ಲೆಯ 6 ಚಿತ್ರಮಂದಿರಗಳಲ್ಲಿ ಬರ್ಕೆ ಬಿಡುಗಡೆಗೊಳ್ಳಲಿದೆ ಎಂದರು. ನಟ ನಾಗರಾಜ್, ನಟಿ ಮೇಘನಾ, ನಿರ್ದೇಶಕ ಭರತ್ ಕೃಷ್ಣ ಇದ್ದರು.
ಕಾರ್ಯಕ್ರಮ ಆಯೋಜನೆಗೆ ಆಕ್ಷೇಪ
ಉಪ್ಪಿನಂಗಡಿ: ಪದೇ ಪದೇ ಹಳೆ ಬಸ್ ನಿಲ್ದಾಣದ ರಿಕ್ಷಾ ತಂಗುದಾಣದಲ್ಲಿ ಮತೀಯ ಸಂಘಟನೆಗಳ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಕಾರಣದಿಂದ ಅಟೋ ಚಾಲಕರ ಗುರುವಾರ ನಡೆಸಿದ ಪ್ರತಿಭಟನೆಯಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಕಳೆದ ಕೆಲ ಸಮಯಗಳಿಂದ ಉಪ್ಪಿನಂಗಡಿಯ ಹಳೆ ಬಸ್ ನಿಲ್ದಾಣದ ಪರಿಸರದಲ್ಲಿ ಮತೀಯ ಸಂಘಟನೆಗಳಿಂದ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಟೋ ಚಾಲಕರನ್ನು ಅಲ್ಲಿಂದ ತೆರವುಗೊಳಿಸುವ ಪ್ರಕ್ರಿಯೆಯೂ ನಡೆಯುತ್ತಿತ್ತು. ಇದರಿಂದಾಗಿ ತಮಗೆ ತೊಂದರೆಯಾಗುತ್ತಿದೆ, ಹಳೆ ಬಸ್ ನಿಲ್ದಾಣ ಪರಿಸರದಲ್ಲಿ ಮತೀಯ ಸಂಘಟನೆಗಳ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ರಿಕ್ಷಾ ಚಾಲಕರು ಜಿಲ್ಲಾಡಳಿತಕ್ಕೆ ಲಿಖಿತ ಮನವಿ ಸಲ್ಲಿಸಿದ್ದರು.  ಗುರುವಾರ ಸಂಘಟನೆಯೊಂದು ಭ್ರಷ್ಟಾಚಾರ, ಕೋಮುವಾದ, ಭಯೋತ್ಪಾದನೆಯ ಬಗ್ಗೆ ಸಭೆಯನ್ನು ಇದೇ ಬಸ್ ನಿಲ್ದಾಣದಲ್ಲಿ ಆಯೋಜಿಸಿ, ವೇದಿಕೆ ನಿರ್ಮಿಸಲು ರಿಕ್ಷಾ ಚಾಲಕರನ್ನು ತೆರವುಗೊಳಿಸಲು ಸೂಚಿಸಿದಾಗ ರಿಕ್ಷಾ ಚಾಲಕರು ಪ್ರತಿಭಟನೆ ನಡೆಸಿದರು. ಮಾತಿನ ಚಕಮಕಿ ಏರ್ಪಟ್ಟು, ಪೊಲೀಸರು ಮಧ್ಯಪ್ರವೇಶಿಸಿದರು. ಮುಂದೆ ಅನುಮತಿ ನೀಡುವಾಗಲೇ ಆಕ್ಷೇಪ ಮಾನ್ಯ ಮಾಡಲಾಗುವುದು ಎಂದು ತಿಳಿಸಿದ ಪೊಲೀಸರು, ರಿಕ್ಷಾ ತೆರವಿಗೆ ಚಾಲಕರ ಮನವೊಲಿಸಿದರು.
'ಕಾರುಗಳಿಗೆ ಬಾಡಿಗೆ ಸೂಕ್ತ ನೀಡದೆ ವಂಚನೆ'
ಬಂಟ್ವಾಳ: ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಪ್ರವಾಸಿ ಕಾರುಗಳನ್ನು ಬಲತ್ಕಾರವಾಗಿ ಪಡೆದುಕೊಳ್ಳುವ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಸೂಕ್ತ ಬಾಡಿಗೆ ನೀಡದೆ ವಂಚಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ದ.ಕ. ಜಿಲ್ಲಾ ಪ್ರವಾಸಿ ಕಾರು ಮತ್ತು ವ್ಯಾನ್ ಚಾಲಕರ ಸಂಘ ಆರೋಗ್ಯ ಸಚಿವ ಯು.ಟಿ. ಖಾದರ್ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದೆ.  ದಿನವಿಡೀ ಓಡಾಡುವ ಕಾರುಗಳಿಗೆ 1 ಸಾವಿರದಷ್ಟು ಇಂಧನ ಬೇಕಾಗುತ್ತದೆ. ಚಾಲಕರಿಗೆ ಸಂಬಳ 300 ಕೊಡಬೇಕ. ಆದರೆ ಆರೋಗ್ಯ ಇಲಾಖೆಯವರು ನೀಡುವುದು ಕೇವಲ 750 ಬಾಡಿಗೆ ಮಾತ್ರ ಎಂದು ಸಂಘಟನೆಯ ಸದಸ್ಯರು ಆರೋಪಿಸಿದ್ದಾರೆ.  ಸಂಘಟನೆ ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡುವಂತೆ ಕೋರಿದ್ದಾರೆ.
ಇಂದು ಬಿಜೆಪಿ ಬೈಕ್ ರ್ಯಾಲಿ
ಮಂಗಳೂರು: ನರೇಂದ್ರ ಮೋದಿಯವರ 'ಭಾರತ ಗೆಲ್ಲಿಸಿ' ಬೃಹತ್ ಸಮಾವೇಶ ಪ್ರಯುಕ್ತ ಫೆ. 14 ರಂದು 16 ರಂದು ನಗರದಲ್ಲಿ ಒಂದು ಸಾವಿರ ದ್ವಿಚಕ್ರ ವಾಹನಗಳ ರ್ಯಾಲಿ ನಡೆಯಲಿದೆ ಎಂದು ಬಿಜೆಪಿ ನಗರ ದಕ್ಷಿಣ ಅಧ್ಯಕ್ಷ ರವಿಶಂಕರ ಮಿಜಾರ್ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ 6ಕ್ಕೆ ಅಶೋಕನಗರ ಶೇಡಿಗುರಿಯಿಂದ ಬೈಕ್ ರ್ಯಾಲಿ ಪ್ರಾರಂಭವಾಗಲಿದ್ದು, ಉರ್ವಸ್ಟೋರಿನಲ್ಲಿ ಸಮಾಪನಗೊಳ್ಳಲಿದೆ. ಈ ಸಂದರ್ಭ ಫೆ. 18 ರಂದು ನೆಹರೂ ಮೈದಾನದಲ್ಲಿ ನಡೆಯುವ ಭಾರತ ಗೆಲ್ಲಿಸಿ ಬೃಹತ್ ಸಮಾವೇಶದ ಆಮಂತ್ರಣ ಹಂಚಲಾಗುವುದು. ಫೆ. 15ರವರೆಗೆ ಮಂಗಳೂರು ನಗರದ ಜನನಿಬಿಡ ಪ್ರದೇಶದಲ್ಲಿ ಜಾಥಾ ಮುಖಾಂತರ ಸಾರ್ವಜನಿಕ ಮತ್ತು ವ್ಯಾಪಾರಸ್ಥರಿಗೆ ಆಮಂತ್ರಣ ನೀಡಲಾಗುತ್ತದೆ ಎಂದರು. ಮುಖಂಡರಾದ ಸುಧೀರ್ ಶೆಟ್ಟಿ ಕಣ್ಣೂರು, ಡಿ. ವೇದವ್ಯಾಸ ಕಾಮತ್ ಇದ್ದರು.
ಪಣಂಬೂರಿನಲ್ಲಿ ಹೋವರ್ ಕ್ರಾಫ್ಟ್ ನೌಕೆ
ಮಂಗಳೂರು: ಇಂಡಿಯನ್ ಕೋಸ್ಟ್‌ಗಾರ್ಡ್ ನೌಕೆ ಹೋವರ್ ಕ್ರಾಫ್ಟ್(ಎಚ್-194)ಕಾರವಾರದಿಂದ ಶುಕ್ರವಾರ ಪಣಂಬೂರು ಕಡಲತೀರಕ್ಕೆ ಮಧ್ಯಾಹ್ನ 2.30ಕ್ಕೆ ಆಗಮಿಸಲಿದೆ. ಫೆ.19ರ ವರೆಗೆ ಪಣಂಬೂರಿನಲ್ಲಿ ತಂಗಲಿದೆ ಎಂದು ಕೋಸ್ಟ್‌ಗಾರ್ಡ್ ಪ್ರಕಟಣೆ ತಿಳಿಸಿದೆ.
ಡ್ರಾಪ್ ಕೊಡುವುದಾಗಿ ನಂಬಿಸಿ ಯುವಕನ ಅಪಹರಣ, ಅತ್ಯಾಚಾರ
ಉಪ್ಪಿನಂಗಡಿ: ಯುವಕನಿಗೆ ಡ್ರಾಪ್ ಕೊಡುವುದಾಗಿ ನಂಬಿಸಿ ಅಪಹರಿಸಿ, ಅತ್ಯಾಚಾರ ನಡೆಸಿದ ಘಟನೆ ಗುರುವಾರ ಉಪ್ಪಿನಂಗಡಿಯಲ್ಲಿ ನಡೆದಿದೆ.
 ಮೂಲತಃ ಪುತ್ತೂರು ಸಮೀಪದ ಕಲ್ಪಣೆ ನಿವಾಸಿ ಸಂತೋಷ್ (22) ದೌರ್ಜನ್ಯಕ್ಕೊಳಗಾದ ಯುವಕ.
 ಈತ ಉಪ್ಪಿನಂಗಡಿಯಲ್ಲಿ ವಾಹನಗಳಿಗೆ ಗ್ರೀಸ್ ಅಳವಡಿಸುವ ಕಾರ್ಯ ನಿರ್ವಹಿಸುತ್ತಿದ್ದ. ಗುರುವಾರ ಬೆಳಗ್ಗೆ  ಕೂಟೇಲು ಎಂಬಲ್ಲಿಗೆ ಹೋಗುವ ಸಲುವಾಗಿ ವಾಹನಕ್ಕಾಗಿ ಉಪ್ಪಿನಂಗಡಿಯ ಹೆದ್ದಾರಿಯಲ್ಲಿ ಕಾಯುತ್ತಿದ್ದ.  ಅಲ್ಲಿಗೆ ಬಂದ  ಓಮ್ನಿ ಕಾರಿನ ಚಾಲಕ ಡ್ರಾಪ್ ಕೊಡುವ ಭರವಸೆಯಲ್ಲಿ ಕಾರು ಏರುವಂತೆ ಸೂಚಿಸಿದ. ಕಾರನ್ನೇರಿದ ಸಂತೋಷ್ ಬಾಯಿಗೆ ಬಟ್ಟೆ ಕಟ್ಟಿ ಕಾರಿನಲ್ಲೇ ಸುತ್ತಾಡಿಸಿದ ಬಳಿಕ, ಸಹಕರಿಸದಿದ್ದರೆ ಕೊಂದು ಹಾಕುವುದಾಗಿ ಬೆದರಿಕೆಯೊಡ್ಡಿ ಉಪ್ಪಿನಂಗಡಿಯ ಲಾಡ್ಜ್‌ವೊಂದಕ್ಕೆ ಕರೆತಂದ ಎನ್ನಲಾಗಿದೆ.
 ಲಾಡ್ಜ್‌ನಲ್ಲಿ ಸಂತೋಷನಿಗೆ ಮದ್ಯ ನೀಡಿದ ಬಳಿಕ ಬಲವಂತದ ಸಲಿಂಗ ಕಾಮ ನಡೆಸಿದ್ದ. ತಾನೋರ್ವ ಗಾಂಜಾ ಮಾರಾಟಗಾರನಾಗಿದ್ದು, ಗಾಂಜಾ ವಸ್ತುಗಳನ್ನು ಮಾರಾಟಕ್ಕೆ ಸಹಕರಿಸುವಂತೆ ಒತ್ತಾಯಿಸಿದನೆಂದು ದೂರಿನಲ್ಲಿ ತಿಳಿಸಲಾಗಿದೆ.
ವಸ್ತುವೊಂದನ್ನು ತರುವ ನೆಪದಲ್ಲಿ ಲಾಡ್ಜ್ ಕೊಠಡಿಯಿಂದ ಹೊರಬಂದ ಸಂತೋಷ ಓಡಿ ಪರಾರಿಯಾಗಿ ಉಪ್ಪಿನಂಗಡಿ ಠಾಣೆಗೆ ಬಂದು ದೂರು ನೀಡಿದ್ದಾನೆ. ಲಾಡ್ಜ್‌ನಲ್ಲಿ ರೂಂ ಬುಕ್ ಮಾಡುವ ವೇಳೆ ಆರೋಪಿ ತನ್ನ ಹೆಸರನ್ನು ನಾರಾಯಣ ಎಂದು ದಾಖಲಿಸಿದ್ದು, ತಾನೋರ್ವ ಬೇಕರಿ ತಿಂಡಿ ಮಾರಾಟಗಾರನೆಂದು ಬಿಂಬಿಸಿದ್ದಾನೆ. ಪ್ರಕರಣದ ಬಗ್ಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರಸ್ತೆ ದುರಂತ: ಓರ್ವ ಸಾವು
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75 ಪಡೀಲಿನಲ್ಲಿ ಮಾರುತಿ ಒಮ್ನಿ ರಸ್ತೆ ಬದಿಯ ತಡೆಬೇಲಿಗೆ ಡಿಕ್ಕಿಯಾಗಿ ಪುತ್ತೂರಿನ ವೆಂಕಟ್ರಮಣ ಭಟ್(75) ಸ್ಥಳದಲ್ಲೇ ಸಾವಿಗೀಡಾದ ಘಟನೆ ಗುರುವಾರ ಸಂಭವಿಸಿದೆ.  ಚಾಲಕನ ನಿಯಂತ್ರಣ ತಪ್ಪಿದ ಕಾರು ತಡೆಬೇಲಿಗೆ ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗದಲ್ಲಿದ್ದ ಭಟ್ಟರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು. ಕಾರಿನಲ್ಲಿದ್ದ ಮಾಲತಿ, ವಿಮಲಾ ಮತ್ತು ವಿನಯ ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.