ದಕ್ಷಿಣ ಕನ್ನಡ

ಮಾ.9 ಆಂತರಿಕ ಚುನಾವಣೆ: ಎಐಸಿಸಿ ವೀಕ್ಷಕರು ಆಗಮನ

Published On :

ಮಂಗಳೂರು: ಅಂತೂ ಇಂತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಆಂತರಿಕ ಚುನಾವಣೆಗೆ ಮಾ.9 ದಿನ ನಿಗದಿಯಾಗಿದೆ. ಪ್ರಮುಖ ಟಿಕೆಟ್ ಆಕಾಂಕ್ಷಿಗಳಾದ ಜನಾರ್ದನ ಪೂಜಾರಿ ಮತ್ತು ಹರ್ಷ ಮೊಯ್ಲಿ ಪ್ರಚಾರ ಭರದಿಂದ ಸಾಗಿದೆ.
 ಆದರೆ, ಅಂತಿಮ ಹಂತದಲ್ಲಿ ಹಿರಿಯ ನಾಯಕರಿಗೆ ಆಂತರಿಕ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಯಮ ರೂಪಿಸುತ್ತಾರೆಯೋ ಎಂಬ ಭಯ ಪೂಜಾರಿ ಹಿಂಬಾಲಕರಲ್ಲಿ ಮನ ಮಾಡಿದೆ. ಬೂತ್, ವಲಯ, ಬ್ಲಾಕ್, ಜಿಲ್ಲೆ ಮತ್ತು ರಾಜ್ಯ ಮಟ್ಟದಿಂದ ಆಯ್ಕೆಯಾದ ಏಕೈಕ ಹೆಸರು ಬಿ. ಜನಾರ್ದನ ಪೂಜಾರಿ. ಆದರೆ ಮೊಯ್ಲಿ ಕುಟುಂಬಕ್ಕಿದ್ದ ರಾಹುಲ್ ಗಾಂಧಿ ಸಂಪರ್ಕದ ಕಾರಣದಿಂದ ಮಂಗಳೂರಲ್ಲಿ ಆಂತರಿಕ ಚುನಾವಣೆ ನಡೆಯುವ ಆದೇಶ ಬಂದಿರುವುದು ಬಹಿರಂಗ ಸತ್ಯ.
 ಹರ್ಷ ಮೊಯ್ಲಿಗೆ ಟಿಕೆಟ್ ಸಿಗುವುದು ಕನಸು ಮನಸಲ್ಲಿ ಸಾಧ್ಯ ಇಲ್ಲ ಎಂದು ಹೇಳುತ್ತಿದ್ದ ಪೂಜಾರಿ ಬೆಂಬಲಿಗರಿಗೆ ಇದೀಗ ಹರ್ಷ ಮೊಯ್ಲಿ ಟಿಕೆಟ್ ಸ್ಪರ್ಧೆಯಲ್ಲಿ  ಹೈಕಮಾಂಡ್ ಸಂಪರ್ಕದಲ್ಲಿ ತೀರಾ ಮುಂದೆ ಇರುವುದು ಸಣ್ಣ ಮಟ್ಟಿನ ಆತಂಕಕ್ಕೂ ಕಾರಣವಾಗಿದೆ.
 ಹಿರಿಯ ನಾಯಕ ಜನಾರ್ದನ ಪೂಜಾರಿ ಮನಸ್ಸಿಗೆ ನೋವಾಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಪ್ರೈಮರೀಸ್ ಆಂತರಿಕ ಚುನಾವಣೆ ರದ್ದುಪಡಿಸುವಂತೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರೀಯ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಮನವಿ ಮಾಡಿದ್ದರು. ಇದಕ್ಕೆ ಮನ್ನಣೆ ಸಿಕಿಲ್ಲ ಎನ್ನುವುದು ಚುನಾವಣೆ ದಿನಾಂಕ ಘೋಷಣೆಯಾಗಿರುವುದರಿಂದ ಗೊತ್ತಾಗುತ್ತದೆ.
 ಎಐಸಿಸಿ ಅಧಿಕೃತ ವೆಬ್‌ಸೈಟ್ ಪ್ರೈಮರೀಸ್‌ಡಾಟ್‌ನಿಕ್‌ಇನ್‌ನಲ್ಲಿ ದಿನಾಂಕ ಪ್ರಕಟಿಸಲಾಗಿದೆ. ಫೆ.22, 23ರಂದು ಸದಸ್ಯರ ನೋಂದಣಿ. 27 ಮತ್ತು 28 ಮಧ್ಯಾಹ್ನ ವರೆಗೆ ಎಐಸಿಸಿ ವಿಶೇಷ ಪ್ರತಿನಿಧಿಗಳಿಂದ ಸದಸ್ಯ ನೋಂದಣಿ ಮರುಪರಿಶೀಲನೆ. ಫೆ.28ರ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ನಾಮಪತ್ರ ಸಲ್ಲಿಕೆ ಮತ್ತು ಚುನಾವಣೆ ಚಿಹ್ನೆ ನೀಡಿಕೆ. ಮಾ.9ರಂದು ಚುನಾವಣೆ ನಡೆಯಲಿದೆ.
ಆಂತರಿಕ ಚುನಾವಣೆ ನಡೆಸಲು ರಾಷ್ಟ್ರೀಯ ಕಾಂಗ್ರೆಸ್ ವತಿಯಿಂದ ವೀಕ್ಷಕರಾಗಿ ಪ್ರಮೋದ್ ನಾಯರ್ ಮಂಗಳೂರಿಗೆ ಆಗಮಿಸಿದ್ದಾರೆ. ಈ ನಡುವೆ ಹಿರಿಯ ನಾಯಕರು ಆಂತರಿಕ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡುವ ಪ್ರಯತ್ನ ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿದೆ ಎಂಬ ವದಂತಿ ದಟ್ಟವಾಗಿದೆ.
 ಆದರೆ ಇದನ್ನು ಜನಾರ್ದನ ಪೂಜಾರಿ ಮತ್ತು ಅವರ ಬೆಂಬಲಿಗರು ತಳ್ಳಿ ಹಾಕಿದ್ದಾರೆ. 'ಚುನಾವಣೆಗೆ ನಾನು ಸ್ಪರ್ಧಿಸುತ್ತೇನೆ, ಹಿಂಜರಿಯುವ ಪ್ರಶ್ನೆಯೇ ಇಲ್ಲ' ಎಂದು ಸ್ಪಷ್ಟ ಪಡಿಸಿದ್ದಾರೆ.
'ಜನರಿಗೆ ಹೊಸ ಮುಖ ಬೇಕೆಂದು ಅಭಿಪ್ರಾಯ ಪಡುತ್ತಿದ್ದಾರೆ. ಈಗ ಜಿಲ್ಲೆಗೆ ಯುವ ನಾಯಕತ್ವ ಮತ್ತು ಜನರ ಜತೆ ಸತತ ಸಂಪರ್ಕ ಇರುವವ ಜನಪ್ರತಿನಿಧಿ ಅಗತ್ಯ ಇದೆ. ನಾನು ಯಾರ ವಿರುದ್ಧವಾಗಿಯೂ ಪ್ರಚಾರ ಮಾಡುತ್ತಿಲ್ಲ. ಆಂತರಿಕ ಚುನಾವಣೆಯಲ್ಲಿ ನಾನು ಒಬ್ಬ ಅಭ್ಯರ್ಥಿ. ನನಗೆ ಗೆಲ್ಲುವ ವಿಶ್ವಾಸ ಇದೆ. ಅಂತಿಮವಾಗಿ ಲೋಕಸಭೆಗೆ ಕಾಂಗ್ರೆಸ್ ನಿಂದ ಯಾವ ಅಭ್ಯರ್ಥಿ ಸ್ಪರ್ಧಿಸುತ್ತಾರೆಯೋ ಅವರಿಗೆ ನಾನು ಬೆಂಬಲ ಇದ್ದೇ ಇದೆ' ಎಂದು ಟಿಕೆಟ್ ಆಕಾಂಕ್ಷಿ ಹರ್ಷ ಮೊಯ್ಲಿ ತಿಳಿಸಿದ್ದಾರೆ.
ಜನಾರ್ದನ
ಪೂಜಾರಿಯೇ ನಮ್ಮ ಅಭ್ಯರ್ಥಿ. ಒಂದು ವೇಳೆ ಅವರು ಸ್ಪರ್ಧಿಸುವುದಿಲ್ಲ ಹೇಳಿದರೆ ನಾನು ಕೂಡಾ ಸ್ಪರ್ಧೆ ಮಾಡುತ್ತೇನೆ.
 


-ವಿಶೇಷ ವರದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.