ಎತ್ತಿನಹೊಳೆ: ಜನಪ್ರತಿನಿಧಿಗಳಿಗೆ ಕರೆ ಮಾಡಿ
ಮಂಗಳೂರು: ಎತ್ತಿನಹೊಳೆ ಯೋಜನೆಗೆ ಶಿಲಾನ್ಯಾಸ ನಡೆಸುವ ಮಾ.3ರಂದು ದ.ಕ.ಜಿಲ್ಲಾ ಬಂದ್ ಕರೆಗೆ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಈ ಮಧ್ಯೆ ಎತ್ತಿನಹೊಳೆ ಯೋಜನೆ ಕೈಬಿಡುವಂತೆ ಸರ್ಕಾರಕ್ಕೆ ಒತ್ತಡ ತರಲು ಜಿಲ್ಲೆಯ ಶಾಸಕರ, ಸಚಿವರನ್ನು ನೇರ ಸಂಪರ್ಕಿಸುವಂತೆ 'ದಾರಿ' (ಡೆಮಾಕ್ರಟಿಕ್ ಅಂಬಾಸಿಡರ್ ಫಾರ್ ಆಲ್ ಇಂಡಿಯಾ ರೂರಲ್ ಇಂಟೆಗ್ರೆಟಿ)ಸಂಘಟನೆ ಸಾರ್ವಜನಿಕರನ್ನು ಒತ್ತಾಯಿಸಿ ಹೊಸ ಆಂದೋಲನ ಹಮ್ಮಿಕೊಂಡಿದೆ.
ಜಿಲ್ಲೆಯ ಸ್ವಾಭಿಮಾನದ ಪ್ರತೀಕವಾದ ನೇತ್ರಾವತಿ ನದಿಯನ್ನು ಕಳೆದುಕೊಳ್ಳಲು ಜನತೆ ಸಿದ್ಧರಿಲ್ಲ. ಎತ್ತಿನಹೊಳೆ ಜಾರಿ ಜಿಲ್ಲೆಯ ನರ ನಾಡಿಗಳಿಗೆ ಹಾಕುವ ಕೊಡಲಿ ಏಟು. ಜನಜೀವನಕ್ಕೆ ತೊಂದರೆ ಉಂಟುಮಾಡುವ ಎತ್ತಿನಹೊಳೆ ಯೋಜನೆ ಕೈಬಿಡುವಂತೆ ಸಂವಿಧಾನ ವಾಕ್ ಸ್ವಾತಂತ್ರ್ಯ ಉಪಯೋಗಿ ನೇರ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಆಗ್ರಹಿಸುವಂತೆ ದಾರಿ ಸಂಘಟನೆಯ ಜಿಲ್ಲಾ ಘಟಕ ವಿನಂತಿ ಮಾಡಿದೆ. ಜನಪ್ರತಿನಿಧಿಗಳು ಕರೆ ಮಾಡಿದಾಗ ಸ್ವಿಚ್ ಆಫ್ ಮಾಡಿದರೆ ಜನರ ವಿರೋಧಕ್ಕೆ ಬೆದರಿದ್ದಾರೆ ಎಂದು ಸಂಘಟನೆ ಲೇವಡಿ ಮಾಡಿದೆ.
ಸಂಘಟನೆಗಳ ಬೆಂಬಲ: ಎತ್ತಿನಹೊಳೆ ವಿರುದ್ಧ ಜಿಲ್ಲಾ ಬಂದ್ಗೆ ವನ್ಯಚಾರಣ ಬಳಗ, ಕರಾವಳಿ ಯುವಸಿಂಚನ, ಸಿ ರೋಟರ್ಯಾಕ್ಟ್ ಮಂಗಳೂರು, ಕರಾವಳಿ ಚಿತ್ರಕಲಾ ಚಾವಡಿ, ಚುಟುಕು ಸಾಹಿತ್ಯ ಪರಿಷತ್ತು, ಅರೆಹೊಳೆ ಪ್ರತಿಷ್ಠಾನ, ಅರಿವು ಸಂವಾದ ಕೇಂದ್ರ ಬಂಟ್ವಾಳ, ನೇತ್ರಾವತಿ ಉಳಿಸಿ ಹೋರಾಟ ಸಮಿತಿ ಉಪ್ಪಿನಂಗಡಿ, ಟೀಮ್ ಮಂಗಳೂರು, ಆರ್ಎಕ್ಸ್ ಲೈಫ್, ಯೂತ್ ಹಾಸ್ಟೇಲ್ಸ್ ಎಸೋಸಿಯೇಷನ್, ಆದರ್ಶ್ ಫ್ರೆಂಡ್ಸ್ ಎಸೋಸಿಯೇಶನ್ ಚಿಲಿಂಬಿ, ಕುದುರೆಮುಖ ವೈಲ್ಡ್ಲೈಫ್ ಫೌಂಡೇಶನ್, ಮಲ್ನಾಡು ಯೂತ್ ಎಸೋಸಿಯೇಶನ್, ಬಾರ್ ಎಸೋಸಿಯೇಶನ್, ಸ್ವರೂಪ ಅಧ್ಯಯನ ಕೇಂದ್ರ, ಕನ್ನಡ ಕಟ್ಟೆ, ಕರ್ನಾಟಕ ರಕ್ಷಣಾ ವೇದಿಕೆ, ಕರಾವಳಿ ಕುಲಾಲ ಯುವ ವೇದಿಕೆ, ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ 317ಡಿ, ಎಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಆಫ್ ಇಂಡಿಯಾ, ಎಸ್ಡಿಪಿಐ, ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಷನ್, ಲಯನ್ಸ್ ಸಂಘಟನೆ, ಜಮಾತೆ ಇಸ್ಲಾಮಿ ಹಿಂದ್, ಕವಿತಾ ಟ್ರಸ್ಟ್, ಮಹಿಳಾ ಸಿಂಚನ, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಬಂದ್ಗೆ ಬೆಂಬಲ ವ್ಯಕ್ತಪಡಿಸಿದೆ ಎಂದು ಸಹ್ಯಾದ್ರಿ ಸಂರಕ್ಷಣಾ ಸಂಚಯ ಸಂಚಾಲಕ ದಿನೇಶ್ ಹೊಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದಲ್ಲದೆ ಸಂಯುಕ್ತ ಜನತಾದಳ ದ.ಕ.ಜಿಲ್ಲೆ, ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಷನ್ ಜಿಲ್ಲಾ ಸಮಿತಿ, ದ.ಕ.ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಬಂದ್ನಲ್ಲಿ ಸ್ವಯಂ ಪಾಲ್ಗೊಳ್ಳುವಂತೆ ಜನತೆಯಲ್ಲಿ ಮನವಿ ಮಾಡಿದೆ.
ಹೆದ್ದಾರಿ ತಡೆದು 'ಆಂಧ್ರ ಮಾದರಿ ಹೋರಾಟ' ಸರ್ಕಾರಕ್ಕೆ ನೇತ್ರಾವತಿ ರಕ್ಷಣಾ ಸಮಿತಿ ಎಚ್ಚರಿಕೆ
ಪುತ್ತೂರು: ನೇತ್ರಾವತಿ ತಿರುವು ಯೋಜನೆ ಮತ್ತು ಎತ್ತಿನ ಹೊಳೆ ಯೋಜನೆ ಶಿಲಾನ್ಯಾಸ ವಿರೋಧಿಸಿ ಸೋಮವಾರ ಜಿಲ್ಲಾ ಬಂದ್ಗೆ ಕರೆ ನೀಡಲಾಗಿದ್ದು, ಇದಕ್ಕೆ ಜಿಲ್ಲೆಯ ಸರ್ವರೂ ಬೆಂಬಲಿಸುವಂತೆ ಕರಾವಳಿ ಜೀವನದಿ- ನೇತ್ರಾವತಿ ರಕ್ಷಣಾ ಸಮಿತಿ ಉಪಾಧ್ಯಕ್ಷ ಎಂ.ಜಿ.ಹೆಗಡೆ ಕರೆ ನೀಡಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇತ್ರಾವತಿ ತಿರುವು ಯೋಜನೆಯ ಶಂಕುಸ್ಥಾಪನೆಯನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ಹೆದ್ದಾರಿ ಬಂದ್ ಮಾಡುವ ಮೂಲಕ ಆಂಧ್ರ ಮಾದರಿಯಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಯಾವ ಕಾರಣಕ್ಕೂ ನೇತ್ರಾವತಿ ನದಿಯನ್ನು ತಿರುಗಿಸಲು ಬಿಡುವುದಿಲ್ಲ ಎಂದರು.
ಭಾವನೆಗಳೊಂದಿಗೆ ಚೆಲ್ಲಾಟ: ಬಿಜೆಪಿ ಮತ್ತು ಕಾಂಗ್ರೆಸ್ ಈ ಯೋಜನೆಗೆ ನೇರ ಚಾಲನೆ ನೀಡಿ ಇಲ್ಲಿನ ಜನರ ಬಾವನೆಗಳ ಜೊತೆ ಚೆಲ್ಲಾಟವಾಡಿದೆ. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಈ ಯೋಜನೆ ಜಾರಿಗೆ ತಂದರೆ ಉಳಿದ ಎಲ್ಲ ಕೆಲಸವನ್ನು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮಾಡಿದರು. ಮೊಯ್ಲಿಯ ಪುತ್ರ ಪರೋಕ್ಷವಾಗಿ ಬೆಂಬಲಿಸಿದರು. ರಾಜಕೀಯವಾಗಿ ಲಾಭ ಪಡೆಯುವ ಉದ್ದೇಶದಿಂದ ಈ ಯೋಜನೆ ರೂಪಿಸಿದ್ದಾರೆ. ಜಿಲ್ಲೆಯ ಜನರು ನೀರಿಲ್ಲದೆ ಸತ್ತರೂ ಪರವಾಗಿಲ್ಲ, ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ನೀರು ಹೋಗಬೇಕು ಎಂಬುದು ಇವರ ಉದ್ದೇಶವಾಗಿದೆ ಎಂದು ಅವರು ಆರೋಪಿಸಿದರು.
ಪ್ರತಿಯೊಬ್ಬರೂ ಪ್ರತಿಭಟಿಸಿ: ನೇತ್ರಾವತಿ ನೀರು ಕುಡಿಯುವ ಇಲ್ಲಿನ ಪ್ರತಿ ಪ್ರಜೆಯೂ ಯೋಜನೆ ವಿರುದ್ಧ ಪ್ರತಿಭಟನೆ ಮಾಡಬೇಕು. ಪ್ರತಿಭಟನೆಗೆ ಯಾರನ್ನೂ ಕಾಯಬೇಡಿ, ರಾಜಕಾರಣಿಗಳನ್ನು ಕಾಯಬೇಡಿ. ನಿಮ್ಮ ಊರಿನ ಸಂಘ ಸಂಸ್ಥೆಗಳ ನೇತೃತ್ವದಲ್ಲೇ ಪ್ರತಿಭಟನೆ ಮಾಡುವ ಮೂಲಕ ನೇತ್ರಾವತಿ ನದಿ ಉಳಿಸಿ ಹೋರಾಟ ಜನರ ಹೋರಾಟವಾಗಿ ಮಾರ್ಪಾಡಾಗಬೇಕು ಎಂದು ಹೇಳಿದರು.
ಮಳೆ ನೀರು ಇಂಗಿಸಬೇಕು ಎಂದು ಹೈಕೋರ್ಟ್ ನಿರ್ದೇಶನ ಇದೆ. ಆದರೆ ಮಳೆ ನೀರು ಇಂಗಿಸುವ ಯೋಜನೆ ಎಲ್ಲಿಯೂ ಜಾರಿಯಾಗುತ್ತಿಲ್ಲ. ನೇತ್ರಾವತಿ ತಿರುವು ಯೋಜನೆಗೆ ರು. 12 ಸಾವಿರ ಕೋಟಿ ಖರ್ಚು ಮಾಡಲಾಗುತ್ತದೆ. ಇದೇ ಹಣವನ್ನು ಕೆರೆಗಳ ಹೂಳೆತ್ತಲು ಉಪಯೋಗಿಸಿದರೆ ಆ ಪ್ರದೇಶದಲ್ಲಿ ನೀರಿನ ವ್ಯವಸ್ಥೆ ಧಾರಾಳ ಮಾಡಬಹುದು ಎಂದು ಹೆಗಡೆ ವಿಶ್ಲೇಷಿಸಿದರು.
ಸಮಿತಿ ಪ್ರಮುಖರಾದ ಶಶಿರಾಜ್ ಶೆಟ್ಟಿ ಕೊಳಂಬೆ, ಪಿ.ಎ.ರಹೀಂ, ಸತೀಶ್ ರೈ ನಡುಬೈಲು, ಬಶೀರ್ ತಂಡೇಲ್ ಇದ್ದರು.
ವಾಣಿಜ್ಯ ಕೈಗಾರಿಕಾ ಸಂಘ ಬೆಂಬಲ: ಸೋಮವಾರ ನಡೆಯುವ ಜಿಲ್ಲಾ ಬಂದ್ಗೆ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಬೆಂಬಲ ನೀಡಲಿದೆ ಎಂದು ಸಂಘದ ಅಧ್ಯಕ್ಷ ಪದ್ಮನಾಭ ಶೆಟ್ಟಿ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹೋರಾಟಕ್ಕೆ ಪುತ್ತೂರಿನ ಎಲ್ಲಾ ವರ್ತಕರು ಬೆಂಬಲ ನೀಡಲಿದ್ದಾರೆ. ಜಿಲ್ಲೆಯ ಶಾಂತಿ ಪ್ರಿಯ ಜನರು ಪ್ರತಿಭಟನೆ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಾರೆ ಎಂದರು.
ಸಂಘದ ಪ್ರಮುಖರಾದ ಜಯಕುಮಾರ್ ರೈ ಎಂ. ಅರ್, ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್, ಕೇಶವ ಪೈ, ಮತ್ತು ಸದಾನಂದ ನಾಯ್ಕ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

