ಕಳಪೆ ಗುಣಮಟ್ಟದ ಸಾವಯವ ಗೊಬ್ಬರ ವಿತರಣೆ; ರೈತರ ಆರೋಪ
ಕಾರ್ಕಳ: ತೋಟಗಾರಿಕಾ ಇಲಾಖೆಯಿಂದ ಕೊಕ್ಕೋ ಬೆಳೆಗಾರರಿಗೆ ಸಬ್ಸಿಡಿ ರೂಪದಲ್ಲಿ ನೀಡಬೇಕಾದ ಸಾವಯವ ಗೊಬ್ಬರ ಕಳಪೆ ಗುಣಮಟ್ಟದ್ದಾಗಿದೆ ಎಂದು ಆರೋಪಿಸಿ ರೈತರು ತೋಟಗಾರಿಕಾ ಸಹಾಯಕ ನಿರ್ದೇಶಕ ವಿಶ್ವನಾಥ ವಿರುದ್ಧ ಆಕ್ರೋಶಗೊಂಡ ಘಟನೆ ಅಜೆಕಾರಿನಲ್ಲಿ ನಡೆದಿದೆ. ಅಲ್ಲದೇ ವಿತರಿಸಲು ತಂದಿದ್ದ ಗೊಬ್ಬರವನ್ನು ರೈತರು ತಿರಸ್ಕರಿಸಿದ್ದಾರೆ.
ತೋಟಗಾರಿಕಾ ಇಲಾಖೆ ಕಳೆದ ವರ್ಷ ಗುಚ್ಚ ಗ್ರಾಮ ಯೋಜನೆಯಲ್ಲಿ ಮರ್ಣೆ ಗ್ರಾಮವನ್ನು ಕೊಕ್ಕೋ ಬೆಳೆಗೆ ಶಿಫಾರಸು ಮಾಡಿತ್ತು. ಅದರಂತೆ ಅಜೆಕಾರಿನಲ್ಲಿ ಕೊಕ್ಕೋ ಬೆಳೆಯುವ ರೈತರು ಸಂಘ ರಚನೆ ಮಾಡಿ ಬಳಿಕ ಇಲಾಖೆಯಿಂದ ನೀಡಿದ್ದ ಕೊಕ್ಕೋ ಸಸಿ ನಾಟಿ ಮಾಡಿದ್ದರು. ನಾಟಿ ಮಾಡಿದ ಸಸಿಗಳಿಗೆ ಗೊಬ್ಬರವನ್ನು ರೈತರೇ ಅಧಿಕೃತ ಗೊಬ್ಬರ ಮಾರಾಟಗಾರರಿಂದ ಖರೀದಿಸಿ ಬಳಿಕ ಅದರ ಹಣವನ್ನು ತೋಟಗಾರಿಕೆ ಇಲಾಖೆ ರೈತರಿಗೆ ಪಾವತಿಸಬೇಕಾಗುತ್ತದೆ. ಆದರೆ ತೋಟಗಾರಿಕಾ ಸಹಾಯಕ ನಿರ್ದೇಶಕ ವಿಶ್ವನಾಥ್ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ತಾವೇ ನೇರವಾಗಿ ಚಳ್ಳಕೆರೆಯ ಚಾರ್ಮನ್ ಬಯೋಟೆಕ್ ಎಂಬ ಕಂಪನಿಯಿಂದ ಕಳಪೆ ಬೇವಿನ ಸಾವಯವ ಗೊಬ್ಬರ ಖರೀದಿಸಿ ರೈತರಿಗೆ ಪೂರೈಸಿ ವಂಚಿಸಿದ್ದಾರೆ ಹಾಗೂ ಅವರೇ ಕಂಪನಿಯೊಂದಿಗೆ ಕೈಜೋಡಿಸಿದ್ದಾರೆ ಎಂದು ರೈತರು ಗಂಭೀರ ಆರೋಪ ಮಾಡಿದ್ದಾರೆ.
ಇಲಾಖೆಯ ನಿಯಮದಂತೆ ರೈತರಿಗೆ ತೋಟಗಾರಿಕಾ ಇಲಾಖೆಯಿಂದ ಯಾವುದೇ ರೀತಿಯ ಗೊಬ್ಬರ ಅಥವಾ ಸಲಕರಣೆಗಳನ್ನು ನೀಡಲಾಗುವುದಿಲ್ಲ. ಬದಲಾಗಿ ರೈತರೇ ಮಾನ್ಯತೆ ಪಡೆದ ಮಾರಾಟ ಮಳಿಗೆಗಳಿಂದ ಖರೀದಿಸಿ ಬಳಿಕ ಇಲಾಖೆ ಸಬ್ಸಿಡಿ ರೂಪದಲ್ಲಿ ಸಹಾಯಧನ ನೀಡುತ್ತದೆ. ಆದರೆ ಅಜೆಕಾರಿನ ವಿಷ್ಣು ಕೊಕ್ಕೋ ಬೆಳೆಗಾರ ಸಂಘಕ್ಕೆ ನೇರವಾಗಿ ವಿಶ್ವನಾಥ್ ನೇತೃತ್ವದಲ್ಲಿ ಸಾವಯವ ಗೊಬ್ಬರ ವಿತರಿಸುವ ಕಾರ್ಯಕ್ರಮವಿತ್ತು. ಆದರೆ ರೈತರಿಗೆ ಗೊಬ್ಬರದ ಗುಣಮಟ್ಟ ಹಾಗೂ ತೂಕದಲ್ಲಿ ವ್ಯತ್ಯಾಸದ ಬಗ್ಗೆ ಸಂಶಯಗೊಂಡು ಗೊಬ್ಬರವನ್ನು ಪರಿಶೀಲಿಸಿದಾಗ ಅದರಲ್ಲಿ ಬೇವಿನ ಹಿಂಡಿಯ ಗೊಬ್ಬರದಲ್ಲಿ ಕಲ್ಲುಮಣ್ಣು ಪತ್ತೆಯಾಗಿದೆ. ಅಲ್ಲದೆ ಈ ಮಿಶ್ರಣಕ್ಕೆ ನೀರನ್ನು ಬೆರೆಸಿ ರೈತರಿಗೆ ವಂಚಿಸಲಾಗಿದೆ. ಪ್ರತಿಯೊಂದು 50 ಕೆಜಿ ತೂಕ ಸಾವಯವ ಗೊಬ್ಬರದ ಚೀಲದಲ್ಲಿ ತೂಕ ಸರಿಯಿದೆಯೇ ಎಂದು ಪರಿಶೀಲಿಸಿದಾಗ ತೂಕದಲ್ಲಿ ಭಾರೀ ಮೋಸವಾಗಿದ್ದು ಬಹುತೇಕ ಎಲ್ಲ ಚೀಲಗಳು 45 ಕೆ.ಜಿ. ತೂಗುತ್ತಿವೆ. ಇಂತಹ ಕಳಪೆ ಗುಣಮಟ್ಟದ ಗೊಬ್ಬರ ಪೂರೈಸಿರುವ ಅಧಿಕಾರಿಯ ವಿರುದ್ಧ ತಕ್ಷಣವೇ ಕ್ರಮ ಜರುಗಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

