ದಕ್ಷಿಣ ಕನ್ನಡ

ಸುದ್ದಿ ಸಂಕ್ಷೇಪ

Published On :

ಫೇಸ್‌ಬುಕ್‌ನಲ್ಲಿ ಅಶ್ಲೀಲ ಫೋಟೋ ಪ್ರಕರಣ; ನಾಸೀರ್‌ಗೆ ಜಾಮೀನು
ಉಡುಪಿ: ಇತ್ತೀಚೆಗೆ ಕಾಲೇಜು ಯುವತಿ ಮತ್ತು ತನ್ನ ಅಶ್ಲೀಲ ರೀತಿಯ ಫೋಟೋಗಳನ್ನು ಫೇಸ್‌ಬುಕ್‌ಗೆ ಹಾಕಿ ಜಿಲ್ಲೆಯ ಕೋಮಸಾಮರಸ್ಯ ಕೆಡಿಸಿ ಬಂಧಿತನಾಗಿದ್ದ ಆರೋಪಿ ಮುಹಮ್ಮದ್ ನಾಸೀರ್‌ಗೆ ಜಿಲ್ಲಾ ನ್ಯಾಯಾಲ ಜಾಮೀನು ನೀಡಿದೆ. ಯುವತಿ ಆತ ತನ್ನ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಹಾಕುವುದಕ್ಕೆ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಳು. ಆತನ ಮೇಲೆ ಅತ್ಯಾಚಾರದ ಪ್ರಕರಣವನ್ನು ದಾಖಲಿಸಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿದ್ದರೂ, ಸ್ವತಹ ಯುವತಿಯೇ ಸ್ವ ಇಚ್ಛೆಯಿಂದ ಈ ರೀತಿಯ ಅಶ್ಲೀಲ ಫೋಟೋಗಳನ್ನು ತೆಗೆದುಕೊಂಡಿದ್ದಾಗಿಯೂ ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದಳು. ಆದ್ದರಿಂದ ಪೊಲೀಸರು ಆತನ ಮೇಲೆ ಕೇವಲ ಸೈಬರ್ ಕ್ರೈಂ ಪ್ರಕರಣವನ್ನಷ್ಟೇ ದಾಖಲಿಸಲು ಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಆತನಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿ ಬಿಡುಗಡೆ ಮಾಡಿದೆ.
ಬಾವಿಗೆ ಬಿದ್ದು ವಿದ್ಯಾರ್ಥಿನಿ ಸಾವು
ಸುಳ್ಯ: ಸುಳ್ಯ ಬೆಟ್ಟಂಪಾಡಿ ನಿವಾಸಿ ತಿಮ್ಮಪ್ಪ ಗೌಡ ಹಾಗೂ ಬೇಬಿ ದಂಪತಿ ಪುತ್ರಿ, ಸುಳ್ಯ ಸ.ಪ.ಪೂ.ಕಾಲೇಜಿನ 10ನೇ ತರಗತಿ ವಿದ್ಯಾರ್ಥಿನಿ ತಿಲಕ ಭಾನುವಾರ ರಾತ್ರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ರಾತ್ರಿ 7.45ರ ನಂತರ ಮಗಳು ಕಾಣದಿದ್ದಾಗ ತಾಯಿ ಹುಡುಕಿಕೊಂಡು ಹೋದರು. ಬಾವಿಯ ಬಳಿಯಲ್ಲಿ ಪುಸ್ತಕ ಹಾಗೂ ಚಪ್ಪಲಿ ಇರುವುದು ಕಂಡು ಅನುಮಾನಗೊಂಡು  ಬಾವಿಯಲ್ಲಿ ಹುಡುಕಿದಾಗ ಮೃತದೇಹ ಕಂಡು ಬಂತು ಎಂದು ತಿಳಿದು ಬಂದಿದೆ.
ತಮ್ಮನಿಗೆ ಗುಂಡು ಹಾರಿಸಿದ ಅಣ್ಣ
ಸುಳ್ಯ: ಅರಂತೋಡು ಗ್ರಾಮದ ಬಿಳಿಯಾರು ಬಳಿ ಅಣ್ಣನೇ ತಮ್ಮನಿಗೆ ಕೋವಿಯಿಂದ ಗುಂಡು ಹಾರಿಸಿ, ಗಂಭೀರ ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ. ಚಂದ್ರಶೇಖರ ಎಂಬವರ ಪುತ್ರ ಗಂಗಾಧರ ಎಂಬವರು ತನ್ನ ತಮ್ಮ ಭರತ್ ಎಂಬವರ ಮೇಲೆ ಗುಂಡು ಹಾರಾಟ ಮಾಡಿದ್ದಾರೆ. ಇಬ್ಬರೊಳಗೆ ಇದ್ದ ಹಣದ ವ್ಯವಹಾರಗಳೇ ಘಟನೆಗೆ ಕಾರಣ ಎನ್ನಲಾಗಿದೆ. ಗಂಭೀರ ಗಾಯಗೊಂಡ ಭರತ್ ಮಂಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕುಳಾಯಿ: ಯುವಕನ ಕೊಲೆ ಯತ್ನ
ಮಂಗಳೂರು: ಕುಳಾಯಿ ಹೊನ್ನಕಟ್ಟೆ ಬಳಿ ಯುವಕನ ಮೇಲೆ ತಂಡ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದೆ. ಶಕೀಲ್ ಕಲಂದರ್ (28) ಗಾಯಗೊಂಡವರು. ಇವರು ಹೊನ್ನಕಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಮಧ್ಯಾಹ್ನ 12.45ಕ್ಕೆ ಅಂಗಡಿ ಬಂದ್ ಮಾಡಿ ಕುಳಾಯಿಗುಡ್ಡೆ ಮನೆಗೆ ಹೋಗುವಾಗ ಓಣಿಯಲ್ಲಿ ಯುವಕರ ತಂಡ ಅಡ್ಡ ನಿಂತಿತ್ತು. ದಾರಿ ಬಿಡಿ ಎಂದಾಗ ಯುವಕರ ತಂಡ ರಾಡ್‌ನಿಂದ ಹಲ್ಲೆ ನಡೆಸಿದಾಗ ಕಲಂದರ್ ಕೈ ಅಡ್ಡ ಹಿಡಿದ್ದು, ಕೈ ಮುರಿದಿದೆ. ಬೆದರಿಂದ ಕಲಂದರ್ ಓಣಿಯಿಂದ ಹಾರಿ ತಪ್ಪಿಸಿಕೊಂಡಿದ್ದಾರೆ. ಕೋಮು ಸೂಕ್ಷ್ಮ ಪ್ರದೇಶ ಕುಳಾಯಿ, ಇತ್ತೀಚೆಗೆ ಸರಣಿ ಹಲ್ಲೆಗಳಿಂದ ಉದ್ವಿಗ್ನವಾಗಿಯೇ ಇದೆ.  ಎರಡು ವರ್ಷದ ಹಿಂದೆ  ಶಿವರಾಜ್ ಕೊಲೆ ಪ್ರಕರಣ ಸಂದರ್ಭ ಮರಣದ ಮೆರವಣಿಗೆ ಹೋಗುವಾಗ ಕಲಂದರ್ ಅಂಗಡಿ ಮುಂದೆ ನಿಂತು ನೋಡುತ್ತಿದ್ದ. ಈ ವೇಳೆಗೆ ಉದ್ರಿಕ್ತರು ಕಲಂದರ್ ಮೇಲೆ ಹಲ್ಲೆ ನಡೆಸಿದ್ದರು. ಸ್ಥಳದಲ್ಲಿಯೇ ಇದ್ದ ಇನ್‌ಸ್ಪೆಕ್ಟರ್ ಬೆಳ್ಳಿಯಪ್ಪ ಅನಾಹುತ ತಡೆದಿದ್ದರು. ಈ ಪ್ರಕರಣಧಲ್ಲಿ ಬೆದರದೆ ಸಾಕ್ಷಿ ಹೇಳಿರುವುದೇ ಈ ಹಲ್ಲೆಗೆ ಕಾರಣ ಎಂದು ಕಲಂದರ್ ಸುರತ್ಕಲ್ ಪೊಲೀಸರಿಗೆ ತಿಳಿಸಿದ್ದಾರೆ. ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಾವಿಗೆ ಹಾರಿ ಗೃಹಿಣಿ ಆತ್ಮಹತ್ಯೆ
ಬಂಟ್ವಾಳ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮಾಲಾಡಿ ಗ್ರಾಮದ ಕುರಿಯೋಡಿ ಎಂಬಲ್ಲಿ ಭಾನುವಾರ ಮಧ್ಯರಾತ್ರಿ ವೇಳೆ ನಡೆದಿದೆ. ಇಲ್ಲಿನ ನಿವಾಸಿ ಸುಬ್ರಹ್ಮಣ್ಯ ಪ್ರಸಾದ್ ಎಂಬವರ ಪತ್ನಿ ಶೋಭಾ (34) ಮೃತರು. ರಾತ್ರಿಯ ಊಟ ಮುಗಿಸಿ ಪತಿಯೊಂದಿಗೆ ಮಲಗಿದ್ದ ಈಕೆ 11.30ರ ವೇಳೆಗೆ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಕಳೆದ ಒಂದು ವರ್ಷದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಇವರಿಗೆ ಚಿಕಿತ್ಸೆ ನೀಡಲಾಗಿತ್ತಾದರೂ ಯಾವುದೇ ಪ್ರಯೋಜನವಾಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣಿಗೆ ಡಬ್ಬಿಯಿಂದ ಹಣ ಕಳವು
ಉಪ್ಪಿನಂಗಡಿ: ಆಲಂಕಾರು ಗ್ರಾಮದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಾಸ್ಥಾನಕ್ಕೆ ಭಾನುವಾರ ತಡ ರಾತ್ರಿ ಕಳ್ಳರು ನುಗ್ಗಿ ದೇವಾಲಯದ ಒಂದು ಕಾಣಿಕೆ ಡಬ್ಬಿಯಿಂದ ಹಣ ಕದ್ದೊಯ್ದಿದ್ದಾರೆ. ಏಣಿ ಮೂಲಕ ದೇವಾಲಯದ ಛಾವಣಿ ಹತ್ತಿ ಒಳನುಗ್ಗಿದ ಕಳ್ಳರು ದೇವಾಲಯದ ಗರ್ಭಗುಡಿಯ ಎದುರು ಇರುವ ಒಂದು ಕಾಣಿಕೆ ಡಬ್ಬಿಯನ್ನು ತೆರೆದು ಅದರ ನಗದನ್ನು ದೋಚಿದ್ದರು. ಗಣಪತಿ ಗುಡಿ ಹಾಗೂ ಗರ್ಭಗುಡಿಯ ಪಕ್ಕದಲ್ಲಿರುವ ಮತ್ತೆರಡು ಡಬ್ಬಿಯನ್ನು ತೆರೆಯಲು ವಿಫಲರಾಗಿದ್ದಾರೆ. ಕಳ್ಳತನದ ಬಳಿಕ ದೇವಾಲಯದ ಉತ್ತರ ಭಾಗದಲ್ಲಿರುವ ಬಾಗಿಲನ್ನು ತೆರೆದು ತಾವು ಬಳಸಿದ ಏಣಿಯನ್ನು ಮೊದಲಿದ್ದ ಜಾಗದಲ್ಲಿಯೇ ತಂದಿರಿಸಿ ಪರಾರಿಯಾಗಿತ್ತಾರೆ. ದೇವಾಲಯದ ಯಾವುದೇ ಆಭರಣ ಹಾಗೂ ಇನ್ನಿತರ ವಸ್ತುಗಳನ್ನು ಕಳ್ಳರು ಕಳವುಗೈದಿಲ್ಲ ಎಂದು ದೇವಾಲಯದ ಮೂಲಗಳು ತಿಳಿಸಿವೆ. ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಎಸ್. ಪೂವಪ್ಪ ನಾಯ್ಕ ನೀಡಿರುವ ದೂರಿನಂತೆ ಕಡಬ ಪೊಲೀಸರು ಕೇಸು ದಾಖಲಿಸಿದ್ದು, ಪರಿಶೀಲನೆ ನಡೆಸಿದರು.
ಯುವತಿ ನಾಪತ್ತೆ: ದೂರು
ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಮಜ್ಜೆ ಬನಾರಿ ಮನೆ ನಿವಾಸಿ ವನಿತಾ (21) ಎಂಬಾಕೆ ಜ.12 ರಿಂದ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಶೀನಪ್ಪ ನಾಯ್ಕ್ ಎಂಬವರ ಮಗಳಾಗಿರುವ ಈಕೆ ತಣ್ಣೀರುಪಂತ ಗ್ರಾಮದ ತನ್ನ ಅಜ್ಜಿ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದಾಕೆ, ಅಲ್ಲಿಗೂ ಹೋಗದೇ, ಮರಳಿ ಮನೆಗೂ ಬಾರದೇ ಕಾಣೆಯಾಗಿರುತ್ತಾಳೆಂದು ದೂರಿನಲ್ಲಿ ತಿಳಿಸಲಾಗಿದೆ. ಎಣ್ಣೆಕಪ್ಪು ಮೈ ಬಣ್ಣ, ಏಳನೇ ತರಗತಿಯ ಶಿಕ್ಷಣ ಪಡೆದಿರುವ ಈಕೆ ಕನ್ನಡ-ತುಳು ಭಾಷೆ ಮಾತನಾಡುತ್ತಾಳೆ. ಈಕೆಯ ಇರುವಿಕೆಯನ್ನು ಬಲ್ಲವರು ಉಪ್ಪಿನಂಗಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.
ಅತ್ಯಾಚಾರ ಪ್ರಕರಣ; ನಾಲ್ವರ ವಿಚಾರಣೆ
ಉಡುಪಿ: ಮಣಿಪಾಲದ ವೈದ್ಯಕೀಯ ವಿದ್ಯಾರ್ಥಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಮತ್ತೇ 4 ಮಂದಿ ಸಾಕ್ಷಿಗಳ ವಿಚಾರಣೆ ನಡೆಯಿತು. ಸರ್ಕಾರಿ ವಕೀಲ ಟಿ. ಎಸ್. ಜಿತೂರಿ ಅವರನ್ನು ಸವಾಲಿಗೆ ಒಳಪಡಿಸಿದರು. ಮಣಿಪಾಲ ವಿ.ವಿ. ಕಾವಲುಗಾರ ಸದಾನಂದ, ಮನೋಜ್ ಫಕ್ರಾನ್, ಪ್ರಕಾಶ್ ಮತ್ತು ಜಹಾಂಗೀರ್ ಅವರೇ ವಿಚಾರಣೆಗೆ ಒಳಗಾದ ಸಾಕ್ಷಿಗಳು. ಈ ಸಂದರ್ಭದಲ್ಲಿ ಆರೋಪಿಗಳಾದ ಯೋಗೀಶ್, ಹರಿಪ್ರಸಾದ್, ಆನಂದ ಉಪಸ್ಥಿತರಿದ್ದರು. ಇಂದು ಮತ್ತೇ 5 ಮಂದಿ ಸಾಕ್ಷಿಗಳ ವಿಚಾರಣೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.