'ಕುಡಿಯುವ ನೀರು ಕೊರತೆ ನೀಗಿಸಲು ಸರ್ಕಾರ ಬದ್ಧ'
ಮಡಿಕೇರಿ: ಬೇಸಿಗೆ ಸಮೀಪಿಸುತ್ತಿರುವ ಈ ಸಂದರ್ಭ ಕುಡಿಯುವ ನೀರಿನ ಕೊರತೆ ನೀಗಿಸಲು ಸರ್ಕಾರ ಬದ್ಧವಾಗಿದೆ. ಕೊಡಗಿನ ಗ್ರಾಮೀಣ ಪ್ರದೇಶಕ್ಕೆ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಜಿ.ಪಂ. ಸದಸ್ಯ ಮೂಕಳೇರ ಎಸ್. ಕುಶಾಲಪ್ಪ ಹೇಳಿದ್ದಾರೆ.
ಜಿ.ಪಂ. ಅನುದಾನದಿಂದ ಕಿರುಗೂರು ಗ್ರಾ.ಪಂ. ವ್ಯಾಪ್ತಿಯ ಮತ್ತೂರು ಗ್ರಾಮಕ್ಕೆ ರು. 10 ಲಕ್ಷ ಅನುದಾನದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿರುವ ಕುಡಿಯುವ ನೀರಿನ ಯೋಜನೆ ಪೈಕಿ ಮತ್ತೂರಿನ ಶ್ರೀ ಅಯ್ಯಪ್ಪ ದೇವಸ್ಥಾನ ಸಮೀಪ ಗಿರಿಜನ ಅಭಿವೃದ್ಧಿ ಯೋಜನೆಯಡಿ ಕಿರು ನೀರು ಸರಬರಾಜು ಘಟಕದ ಮುಂದುವರಿದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
2010ರಲ್ಲಿ ಕಿರುಗೂರು ಗ್ರಾ.ಪಂ. ಪ್ರಸ್ತಾವನೆಯಂತೆ ಐ.ಟಿ.ಡಿ.ಪಿ. ಇಲಾಖೆ ಗಿರಿಜನ ಅಭಿವೃದ್ಧಿ ಯೋಜನೆಯಡಿ ಮತ್ತೂರಿನ ಗಿರಿಜನ ಕಾಲನಿ ರಸ್ತೆ ಅಭಿವೃದ್ಧಿಗೆ ರು. 10 ಲಕ್ಷ ಮತ್ತು ಕುಡಿಯುವ ನೀರಿನ ಯೋಜನೆಗೆ ರು. 8 ಲಕ್ಷ ಅನುದಾನ ಬಿಡುಗಡೆಗೊಳಿಸಿತು. ಆದರೂ ಕಳೆದ ಮೂರು ವರ್ಷಗಳಿಂದ ಕಾಮಗಾರಿ ಪೂರ್ಣಗೊಳ್ಳದೆ ಸ್ಥಳೀಯ ನಿವಾಸಿಗಳು ನೀರಿಗಾಗಿ ಸಮಸ್ಯೆ ಎದುರಿಸುತ್ತಿದ್ದರು. ಇದೀಗ ಮತ್ತೂರಿನ ಗಿರಿಜನ ಕಾಲನಿ ಮತ್ತು ಅಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನೀರು ಒದಗಿಸಲು ಜಿ.ಪಂ. ಅನುದಾನದಿಂದ ರು. 3 ಲಕ್ಷ ಮಂಜೂರಾಗಿದೆ ಎಂದರು.
ಈ ಅನುದಾನದಲ್ಲಿ ಸ್ಥಳೀಯರಾದ ಪುತ್ತಮನೆ ಮಾದಮಯ್ಯ ಪುತ್ರ ಶ್ರೀನಿವಾಸ್ ದಾನವಾಗಿ ನೀಡಲಾದ ಜಾಗದಲ್ಲಿ 10 ಅಡಿ ಸುತ್ತಳತೆಯ ತೆರೆದ ಬಾವಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಈ ಹಿಂದೆ ಮಂಜೂರಾಗಿದ್ದ ರು. 8 ಲಕ್ಷ ಮೊತ್ತದ ಕಿರು ನೀರು ಸರಬರಾಜು ಯೋಜನೆಯ ಮುಂದುವರಿದ ಕಾಮಗಾರಿಗೆ ಹೆಚ್ಚುವರಿಯಾಗಿ ರು. 3 ಲಕ್ಷ ಅನುದಾನ ದೊರೆತಂತಾಗಿದೆ ಎಂದು ವಿವರಿಸಿದರು.
ಇದೀಗ 20 ಕುಟುಂಬ ವಾಸಿಸುತ್ತಿರುವ ಮತ್ತೂರಿನ ಗಿರಿಜನ ಕಾಲನಿಯಲ್ಲಿ ಮತ್ತೆ 32 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ ಎಂದು ತಿಳಿಸಿದರು.
ಕಿರುಗೂರು ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕೆ.ಎಂ. ಸರಾ ಚಂಗಪ್ಪ, ಸದಸ್ಯೆ ಬಿ.ಕೆ. ಸುಮ, ಮಾಜಿ ಸದಸ್ಯ ಪಿ.ಕೆ. ಗಿರೀಶ್, ಸ್ಥಳ ದಾನಿ ಪುತ್ತಮನೆ ಎಂ. ಶ್ರೀನಿವಾಸ್, ಸ್ಥಳೀಯ ನಾಗರಿಕ ಮುಖಂಡ ಬೇಬಿ ನಂಜಪ್ಪ, ಕೆ.ಕೆ ರವಿ, ಗುತ್ತಿಗೆದಾರರಾದ ಕೃಷ್ಣ, ಅಣ್ಣಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

