ದಕ್ಷಿಣ ಕನ್ನಡ

ಹಾಲು ಒಕ್ಕೂಟ ಅಧ್ಯಕ್ಷ ರವಿರಾಜ್ ಹೆಗ್ಡೆ ಆಯ್ಕೆ

Published On :

ಮಂಗಳೂರು: ದಕ್ಷಿಣ ಕನ್ನಡ ಹಾಲು ಒಕ್ಕೂಟ ಅಧ್ಯಕ್ಷರಾಗಿ ರವಿರಾಜ್ ಹೆಗ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
 ಜೂ.9ಕ್ಕೆ ಚುನಾವಣೆ ನಿರ್ಧರಿಸಲಾಗಿದ್ದು, ರವಿರಾಜ್ ಹೆಗ್ಡೆ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ನಡೆಯಿತು.
ಕುಲಶೇಖರದ ಆಡಳಿತ ಕಚೇಯರಿಯಲ್ಲಿ ಚುನಾವಣಾಧಿಕಾರಿ ಹಿಂದುಳಿದ ವರ್ಗಗಳ ಜಿಲ್ಲಾ ಕಲ್ಯಾಣ ಅಧಿಕಾರಿ ಎ.ಸಿ.ರೇಣುಕಾ ಪ್ರಸಾದ್ ಆಯ್ಕೆ ಘೋಷಿಸಿದರು. ಇವರ ಜತೆ 15 ನಿರ್ದೇಶಕರನ್ನು ಮುಂದಿನ 5 ವರ್ಷಗಳಿಗೆ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು.
 ಈ ಸಂದರ್ಭ ಮಾಧ್ಯಮ ಜತೆ ಮಾತನಾಡಿದ ರವಿರಾಜ್ ಹೆಗ್ಡೆ, ಒಕ್ಕೂಟವು ಪ್ರತಿ ದಿನ 60 ಸಾವಿರ ಫ್ಲೆಕ್ಸಿ ಪ್ಯಾಕ್ ಹಾಲು ಉತ್ಪಾದನೆಗೆ 32 ಕೋಟಿ ವೆಚ್ಚದ ಯೋಜನೆ ಹಾಕಿದೆ. ಉಡುಪಿ ಉಪ್ಪೂರಲ್ಲಿ 2.25 ಕೋಟಿ ಮೌಲ್ಯದ ಜಾಗ ಖರೀದಿಸಲಾಗಿದೆ. ಮಣಿಪಾಲದಲ್ಲಿರುವ ಡೈರಿಯನ್ನು ಉಪ್ಪೂರಿಗೆ ಕ್ರಮೇಣ ವರ್ಗಾಯಿಸಲಾಗುವ 35 ಕೋಟಿ ವೆಚ್ಚದ ಯೋಜನೆ ನಮ್ಮ ಮುಂದಿದೆ ಎಂದರು. 2.9 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದ್ದು, 3 ಲಕ್ಷ ಲೀ. ಮಿಕ್ಕಿ ಹಾಲು ಸಂಗ್ರಹವಾಗುತ್ತಿದೆ. 80 ಸಾವಿರ ಲೀ. ಹಾಲು ಹೊರ ಜಿಲ್ಲೆಯಿಂದ ಖರೀದಿಸುತ್ತೇವೆ, 40 ಸಾವಿರ ಲೀ. ಮೊಸರು ಮಾರಾಟವಾಗುತ್ತದೆ. ಉಳಿದ ಹಾಲು ಇತರ ಉತ್ಪನ್ನಗಳಿಗೆ ಬಳಕೆಯಾಗುತ್ತದೆ ಎಂದರು.
 ಪಶು ಸಂಗೋಪನೆಗೆ ಉತ್ತೇಜನ ನೀಡುತ್ತಿದ್ದು, 5ಕ್ಕಿಂತ ಹೆಚ್ಚು ದನ ಸಾಕುವವರಿಗೆ, ಮೇವು ಉತ್ಪಾದಿಸುವವರಿಗೆ ಸಹಾಯಧನ ನೀಡುತ್ತಿದ್ದೇವೆ. ಪಶು ವೈದ್ಯರ ಕೊರತೆ ಇದೆ. ಈ ಕೋರ್ಸ್ ಸೇರುವ ವಿದ್ಯಾರ್ಥಿಗಳ ಎಲ್ಲ ಶಿಕ್ಷಣ ಖರ್ಚು ಭರಿಸಲಾಗುವುದು. ಆದರೆ ಅವರು ನಮ್ಮ ಸಂಸ್ಥೆಗೆ ಆರಂಭದ ಐದು ವರ್ಷ ಕೆಲಸ ಮಾಡುವ ಷರತ್ತು ವಿಧಿಸಲಾಗುತ್ತದೆ ಎಂದರು.
ಸರ್ಕಾರದ ನೀತಿಗೆ ಆಕ್ಷೇಪ: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ವರ್ಗದ ಹಾಲು ಉತ್ಪಾದಕರಿಗೆ ನೀಡುವ ಸಹಾಯಧನ ದುರುಪಯೋಗ ಆಗುವ ಸಾಧ್ಯತೆ ಇದೆ. ಪರಿಶಿಷ್ಟರಿಗೆ ಹಾಲು ಉತ್ಪಾದನೆಗೆ ಸಬ್ಸಿಡಿ ನೀಡಿ, ಉಚಿತ ದನಗಳನ್ನು ನೀಡಬಹುದು. ಆದರೆ ಹಾಲು ಕೊಳ್ಳುವಾಗ ಎಲ್ಲರಿಂದಲೂ ಒಂದೇ ದರ ವಸೂಲಿ ಮಾಡುವುದು ಉತ್ತಮ ಎಂದು ರವಿರಾಜ್ ಹೆಗ್ಡೆ ಸಲಹೆ ನೀಡಿದರು.
 ಹಸು ಕಳವು ವ್ಯಾಪಕವಾಗಿದ್ದು, ಅನೇಕ ದೂರುಗಳು ಬಂದಿವೆ. ಪೊಲೀಸರಿಗೆ ಗೊತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಹಾಲು ಉತ್ಪಾದನೆ ಮೇಲೂ ಪರಿಣಾಮ ಬೀರುತ್ತದೆ ಎಂದರು. ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ. ಸತ್ಯನಾರಾಯಣ, ನಿರ್ದೇಶಕರಾದ ರವೀಂದ್ರ ಕಂಬಳಿ, ಹರೀಶ್ ಆಚಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.