ರಾಜ್ಯದಲ್ಲಿ ಹೊಸ ವಿದ್ಯುನ್ಮಾನ ಮತಯಂತ್ರ
ಸುಲಭದಲ್ಲಿ ಬ್ಯಾಟರಿ ಬದಲಾವಣೆ, ಮತದಾನ, ಮತ ಪ್ರಮಾಣದ ಪ್ರಿಂಟ್ ಸಾಧ್ಯ
ಮಂಗಳೂರು: ಈ ಬಾರಿಯ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಪ್ರಥಮವಾಗಿ ನವೀನ ಮಾದರಿಯ ಹೊಸ ವಿದ್ಯುನ್ಮಾನ ಮತಯಂತ್ರ ಬಳಕೆಯಾಗಲಿದೆ. ಈ ಮತಯಂತ್ರದಲ್ಲಿ ಏಕಕಾಲಕ್ಕೆ 368 ಮಂದಿ ಅಭ್ಯರ್ಥಿಗಳ ಬ್ಯಾಲೆಟ್ ಜೋಡಿಸಬಹುದು. ಅಲ್ಲದೆ ಮತಯಂತ್ರದ ಬ್ಯಾಟರಿ ಕೈಕೊಟ್ಟರೆ, ಬರೇ ಬ್ಯಾಟರಿಯನ್ನು ಸುಲಭದಲ್ಲಿ ಬದಲಾಯಿಸಬಹುದು. ಅವಶ್ಯವಿದ್ದಾಗ ಮತದಾನ ಪ್ರಮಾಣ, ಯಾರಿಗೆ ಎಷ್ಟೆಷ್ಟು ಮತ ಲಭಿಸಿದೆ ಎಂಬುದರ ಪ್ರತಿಯನ್ನೂ ತೆಗೆಯಬಹುದು.
ಶನಿವಾರ ಮಂಗಳೂರು ತಾಲೂಕು ಪಂಚಾಯ್ತಿಯಲ್ಲಿ ನಡೆದ ರಾಜಕೀಯ ಪಕ್ಷಗಳ ಪ್ರಮುಖರು ಹಾಗೂ ಮಾಧ್ಯಮ ಪ್ರತಿನಿಧಿಗಳ ಸಭೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಎ.ಬಿ. ಇಬ್ರಾಹಿಂ ಮತಯಂತ್ರ ಕಾರ್ಯನಿರ್ವಹಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ಬಿಎಚ್ಇಎಲ್ ಅಭಿವೃದ್ಧಿಪಡಿಸಿದ ಈ ಮತಯಂತ್ರ ಹಳೆಯದಕ್ಕಿಂತ ತುಸು ದೊಡ್ಡದು. ಈ ಬಾರಿ ಬ್ಯಾಲೆಟ್ ಯುನಿಟ್(ಮತಯಂತ್ರ) ಮತ್ತು ಕಂಟ್ರೋಲ್ ಯುನಿಟ್ ಎಂದು ಪ್ರತ್ಯೇಕ ವಿಭಾಗ ಇದೆ.
ಹಿಂದಿನಂತೆ ಈ ಮತಯಂತ್ರದಲ್ಲಿ 16 ಅಭ್ಯರ್ಥಿಗಳ ಹೆಸರು ನಮೂದಿಸಬಹುದು. ಅವರ ಹೆಸರಿನ ಎದುರು ಪಕ್ಷದ ಚಿನ್ನೆ ಇರುತ್ತದೆ. ಅಲ್ಲೇ ಮತದಾನ ಮಾಡಲು ಒತ್ತುವ ಬಟನ್ ಇರುತ್ತದೆ. ಕೊನೆ ಬಟನ್ ನೋಟಾ(ಮತ ನಿರಾಕರಣೆ ಬಟನ್) ಆಗಿರುತ್ತದೆ. 16ಕ್ಕಿಂತ ಜಾಸ್ತಿ ಅಭ್ಯರ್ಥಿಗಳಿದ್ದರೆ ಈ ಮತಯಂತ್ರಕ್ಕೆ ಒಟ್ಟು 23 ಮತಯಂತ್ರ ಸೇರಿಸಬಹುದು. ಅಂದರೆ ಅಷ್ಟು ಮತಯಂತ್ರಕ್ಕೆ ಸಂಪರ್ಕ ಕಲ್ಪಿಸಬಹುದು. ಸುಮಾರು 368 ಅಭ್ಯರ್ಥಿಗಳವರೆಗೆ ಬ್ಯಾಲೆಟ್ನಲ್ಲಿ ಅಳವಡಿಸಲು ಅವಕಾಶವಿದೆ. ಅಭ್ಯರ್ಥಿಗಳ ಸಂಖ್ಯೆಯನ್ನು ಮತಯಂತ್ರದಲ್ಲೇ ಜೋಡಿಸುವ ವ್ಯವಸ್ಥೆ ಇದೆ.
ಈ ಹಿಂದೆ ಬ್ಯಾಟರಿ ದೋಷ ತಲೆದೋರಿದರೆ ಮತಯಂತ್ರವನ್ನೇ ಬದಲಾಯಿಸಬೇಕಿತ್ತು. ಈ ಬಾರಿ ಆ ತೊಂದರೆಯೂ ಇಲ್ಲ. ಮತಯಂತ್ರದ ಜತೆ ಪ್ರತ್ಯೇಕವಾಗಿ ಕಂಟ್ರೋಲ್ ಯುನಿಟ್ ಬರುವುದರಿಂದ ಅದರಲ್ಲಿನ ಬ್ಯಾಟರಿ ಬದಲಾಯಿಸಿದರೆ ಸಾಕು. ಬ್ಯಾಟರಿ ದೋಷ ಕಂಡುಬಂದರೂ ಹಾಕಿದ ಮತಕ್ಕೆ ತೊಂದರೆಯಾಗದು.
ಮತಯಂತ್ರದಿಂದ ಮತದಾನ ಪ್ರಮಾಣವಲ್ಲದೆ, ಮತಎಣಿಕೆ ವೇಳೆ ಅಭ್ಯರ್ಥಿಗೆ ಲಭಿಸಿದ ಮತ ಲೆಕ್ಕಾಚಾರದ ಪ್ರಿಂಟ್ ಸುಲಭದಲ್ಲಿ ಪಡೆಯಬಹುದು.
ಈ ಮತಯಂತ್ರ ಹಗುರವಾಗಿದ್ದು, ಇದರ ಪೆಟ್ಟಿಗೆ ಲ್ಯಾಪ್ಟಾಪ್ ಬ್ಯಾಗ್ನಂತೆ ಚಿಕ್ಕದಾಗಿದೆ. ಸುಲಭವಾಗಿ ಕೊಂಡೊಯ್ಯಬಹುದು. ಜಿಲ್ಲೆಗೆ ಒಟ್ಟು 1945 ಮತಯಂತ್ರ ಮತ್ತು ಕಂಟ್ರೋಲ್ ಯುನಿಟ್ಗೆ ಬೇಡಿಕೆ ಸಲ್ಲಿಸಲಾಗಿದೆ. ಎಲ್ಲ ಮತಗಟ್ಟೆಗಳಿಗೆ 1,766 ಮತಯಂತ್ರ ಹಾಗೂ ಶೇ.10 ಜಾಸ್ತಿ ಅಂದರೆ 179 ಹೆಚ್ಚುವರಿ ಮತಯಂತ್ರ ಇರುತ್ತದೆ. ಮತಯಂತ್ರದ ಜತೆ ಕಂಟ್ರೋಲ್ ಯುನಿಟ್ ಇರುತ್ತದೆ. ಜಿಲ್ಲೆಗೊಂದು ಕಂಫರ್ಟೆಬಲ್ ಯುನಿಟ್ ಇದ್ದು, ಇದರಿಂದ ಮತದಾನದ ಸಮಗ್ರ ವಿವರ ಪ್ರಿಂಟ್ ತೆಗೆಯಬಹುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

