ಹಸುಳೆ ಶಾರಿಕ ಸಾವು ಪ್ರಕರಣ ಇನ್ನೂ ನಿಗೂಢ
ನ್ಯಾಯಕ್ಕಾಗಿ ಅಲೆಯುತ್ತಿರುವ ನಡುಗಲ್ಲು ಚಾರ್ಮತ ನಿವಾಸಿ ಮೋಹನದಾಸ- ಭವಾನಿ ದಂಪತಿ
-ಬಾಲಕೃಷ್ಣ ಭೀಮಗುಳಿ
ಸುಬ್ರಹ್ಮಣ್ಯ: ನಡುಗಲ್ಲು ಸಮೀಪದ ಚಾರ್ಮತ ಎಂಬಲ್ಲಿ ಹಸುಳೆ ಶಾರಿಕ ಕಾಣೆಯಾಗಿ ಬಳಿಕ ನಿಗೂಢವಾಗಿ ಮೃತಪಟ್ಟ ಘಟನೆ ನಡೆದು ಸುಮಾರು ಏಳು ತಿಂಗಳಾಗುತ್ತಿದೆ. ತನಿಖೆಯ ಹಾದಿ ಮಾತ್ರ ಇಂದಿಗೂ ಅಸ್ಪಷ್ಟ. ಈತನಕ ಸಾವಿನ ಹಿನ್ನೆಲೆ ಏನೂ ಎಂಬುದು ಗೊತ್ತಾಗಿಲ್ಲ. ಇದೀಗ ಮಗುವಿನ ನಿಗೂಢ ಸಾವಿನ ಹಿಂದೆ ಬಿದ್ದಿರುವ ಕುಟುಂಬ ಆರ್ಥಿಕ ತೊಂದರೆಯಿಂದ ಬಳಲುತ್ತಿದೆ. ಮಗು ಕಳೆದುಕೊಂಡ ಭಾರ ಒಂದೆಡೆಯಾದರೇ ಆರ್ಥಿಕ ಸಂಕಷ್ಟ ಇನ್ನೊಂದೆಡೆ ಈ ಕುಟುಂಬವನ್ನು ಹೈರಾಣಾಗಿಸಿದೆ.
ಅಂದು ಏನಾಯ್ತು?: ಸುಬ್ರಹ್ಮಣ್ಯ ಸಮೀಪದ ನಡುಗಲ್ಲಿನ ಚಾರ್ಮತದ ಮೋಹನದಾಸ- ಭವಾನಿ ದಂಪತಿ ಮಗಳಾದ 1 ವರ್ಷ ಹನ್ನೊಂದು ತಿಂಗಳ ಪ್ರಾಯದ ಶಾರಿಕ ಕಳೆದ ಆಗಸ್ಟ್ 11ರ ನಾಗರಪಂಚಮಿಯ ದಿನದಂದು ಮನೆಯಂಗಳದಲ್ಲಿ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದಳು. 13 ದಿನಗಳ ಬಳಿಕ ಆಕೆಯ ಶವ ಸಮೀಪದ ಜೇನು ಕೋಡಿ ಎಂಬಲ್ಲಿ ಹೊಳೆಯಲ್ಲಿ ದೊರಕಿತ್ತು. ಶವದಲ್ಲಿ ತಲೆ ಮತ್ತು ಕೈ ಇಲ್ಲದೆ ಕತ್ತರಿಸಿದ ಸ್ಥಿತಿಯಲ್ಲಿದ್ದು ಸಾರ್ವಜನಿಕರಲ್ಲಿ ಸಾಕಷ್ಟು ಅನುಮಾನಗಳನ್ನು ಸೃಷ್ಟಿಸಿತ್ತು. ಅಲ್ಲದೆ ತರಾತುರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದೂ ಅನುಮಾನವನ್ನು ಮತ್ತಷ್ಟು ಬಲಗೊಳಿಸಿತ್ತು. ಮಗುವನ್ನು ವಾಮಾಚಾರಕ್ಕೆ ಬಳಸಲಾಗಿದೆ ಎಂಬ ಶಂಕೆಯೂ ವ್ಯಾಪಕವಾಗಿ ಕೇಳಿಬಂದಿತ್ತು.
ಉನ್ನತ ತನಿಖೆ ಏನಾಯ್ತು?; ಈ ಪ್ರಕರಣ ಮಾಧ್ಯಮಗಳಲ್ಲಿ ಪ್ರಕಟಗೊಂಡು ರಾಜ್ಯವ್ಯಾಪಿ ಸದ್ದು ಮಾಡಿತ್ತು. ನಾನಾ ಸಂಶಯಗಳಿಗೆ ಎಡೆಮಾಡಿಕೊಟ್ಟಿದ್ದ ಈ ಪ್ರಕರಣದ ಮರು ತನಿಖೆಗೆ ಪೋಷಕರು ಹಾಗೂ ಸ್ಥಳೀಯರು ಆಗ್ರಹಿಸಿದರು. ಅದರಂತೆ ಗೃಹ ಸಚಿವರು ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಕಲ್ಯಾಣ ಇಲಾಖೆ ಸಚಿವರು ಉನ್ನತ ಮಟ್ಟದ ತನಿಖೆಗೆ ಸೂಚಿಸಿದ್ದರು. ಹಾಗಾಗಿ ಮತ್ತೊಮ್ಮೆ ಮಗುವಿನ ಮರಣೋತ್ತರ ಶವ ಪರಿಕ್ಷೆ ನಡೆಸಿ ದೇಹದ ಎಲುಬುಗಳ ತುಣುಕುಗಳನ್ನು ಪರಿಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆದರೆ ಈವರೆಗೂ ವರದಿ ಏನಾಗಿದೆ ಎಂಬ ಮಾಹಿತಿ ಇಲ್ಲ. ಪೊಲೀಸ್ ಇಲಾಖೆ ತನಿಖೆ ಕೈಗೆತ್ತಿಕೊಂಡಿದ್ದರೂ ಈವರೆಗೂ ತನಿಖೆ ಪ್ರಗತಿ ಗೋಚರಿಸುತ್ತಿಲ್ಲ. ಪೊಲೀಸರು ತನಿಖೆ ಪ್ರಗತಿ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಪ್ರಕರಣದ ತನಿಖೆಯನ್ನು ಅಪರಾಧ ದಳಕ್ಕೆ ನೀಡಲಾಗಿದೆ ಎನ್ನಲಾಗಿದೆಯಾದರೂ ಒಂದು ಮೂಲದ ಪ್ರಕಾರ ಕೇಸು ಇನ್ನೂ ಸ್ಥಳೀಯ ಠಾಣೆಯಲ್ಲೇ ಧೂಳು ತಿನ್ನುತ್ತಿದೆ ಎನ್ನಲಾಗುತ್ತಿದೆ.
ಅನುಮಾನಕ್ಕೆ ಕಾರಣವಾದ ಪೊಲೀಸ್ ನಡೆ: ಮರಣೋತ್ತರ ಪರಿಕ್ಷೆಗಾಗಿ ಮಗುವಿನ ದೇಹದ ತುಣುಕುಗಳನ್ನು ಮೂರು ಕಡೆ ಪರಿಕ್ಷೆಗಾಗಿ ಕಳುಹಿಸಲಾಗಿದೆ ಎನ್ನಲಾಗಿದೆ. ಇದರಲ್ಲಿ ಒಂದು ವರದಿ ಬಂದಿದ್ದು, ಇನ್ನೆರಡು ವರದಿ ಬರಬೇಕಿದೆ ಎಂದು ಪೊಲೀಸ್ ಮೂಲಗಳು ಮೃತ ಮಗುವಿನ ತಾಯಿಗೆ ತಿಳಿಸಿವೆ. ವರದಿಯಲ್ಲಿ ಹರಿತವಾದ ಕತ್ತಿಯಿಂದ ಕಡಿದ ಬಗ್ಗೆ ಮಾಹಿತಿ ಇಲ್ಲ ಎಂದು ಉಲ್ಲೇಖಿಸಲಾಗಿದೆ ಎಂದು ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಹೇಳಿಕೆ ನೀಡುತ್ತಿದ್ದಾರೆ. ಇನ್ನೊಂದು ಕಡೆ ಉನ್ನತ ಪೊಲೀಸ್ ಅಧಿಕಾರಿಯೊಬ್ಬರ ತನಿಖೆ ಪ್ರಗತಿಯಲ್ಲಿದೆ. ತನಿಖೆ ಪೂರ್ಣಗೊಳ್ಳದೆ ಬಹಿರಂಗ ಪಡಿಸಿದಲ್ಲಿ ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದಿದ್ದಾರೆ.
ಗಮನಿಸಬೇಕಾದ ಸಂಗತಿ ಎಂದರೆ ಮಗು ನೀರಿನಲ್ಲಿ ಕೊಚ್ಚಿ ಹೋಗಿ ಸಹಜವಾಗಿ ಮೃತಪಟ್ಟಿದೆ ಎಂದಾದಲ್ಲಿ ಆರೋಪಿಗಳು ಇರಲು ಸಾಧ್ಯವಿಲ್ಲ. ಹಾಗಿದ್ದರೆ ಪೊಲೀಸ್ ಅಧಿಕಾರಿಗಳು ಆರೋಪಿಗಳು ತಪ್ಪಿಸಿಕೊಳ್ಳಲು ಅನುಕೂಲ ಆಗುತ್ತದೆ ಎಂದು ಹೇಳುವ ಆ ಆರೋಪಿಗಳು ಯಾರು ಎಂಬುದು ನಿಗೂಢ. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂಬ ವಿಚಾರವನ್ನು ಪೊಲೀಸರೇ ಹೇಳಿದ್ದು ಈ ತನಕ ಯಾವುದೇ ಪ್ರಕ್ರಿಯೆ ನಡೆಸಿಲ್ಲ.
ಬಡ ಕುಟುಂಬ: ಮಗು ಕಳೆದುಕೊಂಡು ನ್ಯಾಯಕ್ಕಾಗಿ ಅಲೆಯುತ್ತಿರುವ ಬಡ ದಂಪತಿ ಕಣ್ಣೀರಿಗೆ ಅಂತ್ಯವೇ ಸಿಕ್ಕಿಲ್ಲ. ನ್ಯಾಯಕ್ಕಾಗಿ ಅಲೆದಾಡುತ್ತಿದ್ದು, ಇರುವ ಅತ್ಯಲ್ಪ ಜಾಗದಲ್ಲಿ ಕೃಷಿ ಮಾಡಲಾಗದೆ ಕುಟುಂಬ ಸಂಕಷ್ಟದಲ್ಲಿದೆ. ಮನೆಯಲ್ಲಿ ಇರುವ 80ರ ವಯಸ್ಸಿನ ಜೀವವೊಂದು ಹಾಸಿಗೆ ಹಿಡಿದಿದೆ, ಕುಟುಂಬ ನಿರ್ವಹಣೆಯ ಭಾರದೊಂದಿಗೆ ಆರ್ಥಿಕವಾಗಿ ಸೊರಗಿದೆ. ಮಗು ಕಳೆದುಕೊಂಡು ದುಃಖದಲ್ಲಿರುವ ಇವರಿಗೆ ಸಹಾಯಹಸ್ತ ಚಾಚುವ ಕೆಲಸ ಸಹೃದಯಿಗಳಿಂದ ಆಗಬೇಕಿದೆ. ಪೊಲೀಸ್ ಇಲಾಖೆ ಕೂಡ ಈ ಕುಟುಂಬಕ್ಕೆ ನ್ಯಾಯ ಒದಗಿಸಲು ತನಿಖೆಯನ್ನು ಚುರುಕುಗೊಳಿಸಬೇಕಿದೆ. ನೆರವು ನೀಡಲಿಚ್ಛಿಸುವವರು ಮೃತ ಮಗುವಿನ ತಾಯಿ ಖಾತೆಗೆ ಧನ ಸಹಾಯ ಮಾಡಬಹುದು.
ಮಗುವಿನ ತಾಯಿ ಭವಾನಿ ಕೆ., ಖಾತೆ ಸಂಖ್ಯೆ 02132200031374 ಸಿಂಡಿಕೇಟ್ ಬ್ಯಾಂಕ್ ಏನೆಕಲ್ಲು ಶಾಖೆ. ಮೊ.ಸಂಖ್ಯೆ- 9632627520.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

