ದಕ್ಷಿಣ ಕನ್ನಡ

'ಯುವಕರಿಗೆ ಆದ್ಯತೆ ನೀಡುವವರ ಬೆಂಬಲಿಸಿ'

Published On :

ಮಂಗಳೂರು: ಚುನಾವಣೆ ಪ್ರಣಾಳಿಕೆ ತಯಾರಿಸುವಾಗ ಯುವಕರ ಸಲಹೆ ಯಾಕೆ ಪಡೆಯುತ್ತಿಲ್ಲ? ಚುನಾವಣೆ ಸ್ಪರ್ಧೆಗೆ ಯುವಕರಿಗೆ ಯಾಕೆ ಆದ್ಯತೆ ನೀಡುತ್ತಿಲ್ಲ? ಕೋಮು ಸಂಘರ್ಷದಿಂದ ಯುವಕರನ್ನು ದೂರ ಇಡಬೇಕು. ಈ ಬೇಡಿಕೆಗೆ ಸ್ಪಂದಿಸುವ ಪಕ್ಷವನ್ನು ಮಾತ್ರ ಬೆಂಬಲಿಸಬೇಕು...
ಇವು, ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ನಡೆದ ರಾಜಕೀಯ ಪಕ್ಷಗಳ ಮುಖಂಡರೊಂದಿಗಿನ ಸಂವಾದದಲ್ಲಿ ಕೇಳಿಬಂದ ಮಾತು. ಕ್ರಸ್ಟ್ ಸಂಘಟನೆ, ರೋಟರಿ ಕ್ಲಬ್ ಮಂಗಳೂರು ಹಾಗೂ ಯೂತ್‌ನಿಯಾ ಡಾಟ್ ಕಾಮ್ ಸೇರಿ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ ಸಂವಾದದಲ್ಲಿ ಯುವಜನತೆಯ ಬೇಕು, ಬೇಡಗಳ ಬಗ್ಗೆ ರಾಜಕೀಯ ಪಕ್ಷಗಳು ಅಷ್ಟಾಗಿ ದೃಷ್ಟಿ ಹರಿಸದಿರುವ ಅಂಶ ವ್ಯಕ್ತಗೊಂಡಿತು.
ಬಿಜೆಪಿಯಿಂದ ವಿ.ಪ. ಸದಸ್ಯ ಗಣೇಶ್ ಕಾರ್ಣಿಕ್, ಕಾಂಗ್ರೆಸ್‌ನಿಂದ ಐವನ್ ಡಿಸೋಜ, ಜೆಡಿಎಸ್‌ನಿಂದ ಯುವ ಜೆಡಿಎಸ್ ಅಧ್ಯಕ್ಷ ಶ್ರೀಕಾಂತ್ ರೈ, ಆಮ್‌ಆದ್ಮಿ ಪಕ್ಷದಿಂದ ಎಂ.ಆರ್.ವಾಸುದೇವ, ಸಾಮಾಜಿಕ ಸಂಘಟನೆಯಿಂದ ಎಂ.ಜಿ.ಹೆಗಡೆ ಆಗಮಿಸಿದ್ದು, ಮಂಗಳೂರು ವಿವಿ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಪಿ.ಎಲ್. ಧರ್ಮ ಸಮನ್ವಯಕಾರರಾಗಿದ್ದರು.
ಬಿಜೆಪಿ ಕೋಮವಾದ ಯಾಕೆ ಬೆಳೆಸುತ್ತಿದೆ? ಬಿಜೆಪಿಯಲ್ಲಿ ಮುಸ್ಲಿಂ, ಕ್ರೈಸ್ತರಿಗೆ ಸ್ಥಾನಮಾನ ಯಾಕಿಲ್ಲ? ರಾಜಕಾರಣಿಗಳು 60 ವರ್ಷದ ಬಳಿಕವೂ ಯಾಕೆ ನಿವೃತ್ತಿಯಾಗುತ್ತಿಲ್ಲ? ರಾಜಕೀಯ ಪಕ್ಷಗಳಿಗೆ ಸಮಾಜ ಅಭಿವೃದ್ಧಿಯ ಕಳಕಳಿ ಯಾಕಿಲ್ಲ? ಹೀಗೆ ವಿದ್ಯಾರ್ಥಿಗಳಿಂದ ಪ್ರಶ್ನೆಗಳ ಸುರಿಮಳೆಯೇ ಇತ್ತು. ಈ ಎಲ್ಲ ಪ್ರಶ್ನೆಗಳಿಗೆ ರಾಜಕೀಯ ಮುಖಂಡರು ಸಮರ್ಪಕವಾಗಿ ಉತ್ತರಿಸಿದರೂ, ರಾಜಕೀಯದಲ್ಲಿ ಯುವಕರಿಗೆ ಹೆಚ್ಚಿನ ಪ್ರಾಧಾನ್ಯತೆ ಸಿಗುತ್ತಿಲ್ಲ ಎಂಬುದನ್ನು ಒಪ್ಪಿಕೊಂಡರು. ಆದರೆ ಯಾರೂ ತಮ್ಮ ಪಕ್ಷದಲ್ಲಿ ಯುವಕರಿಗೆ ಪ್ರಾಧಾನ್ಯತೆ ನೀಡುತ್ತೇವೆ ಎಂದು ಭರವಸೆ ನೀಡಲು ಮುಂದಾಗಲಿಲ್ಲ.

ಕೋಮು ಸಂಘಟನೆ ನಿಷೇಧಿಸುತ್ತೀರಾ?
ಕರಾವಳಿಯಲ್ಲಿ ಕೋಮು ಸಂಘಟನೆಗಳನ್ನು ನಿಷೇಧಿಸುವ ಹಾಗೂ ಯುವಕರಲ್ಲಿ ಮನಃಪರಿವರ್ತನೆ ಭರವಸೆ ನೀಡಲು ರಾಜಕೀಯ ಪಕ್ಷಗಳು ಸಿದ್ಧವಿದೆಯೇ ಎಂಬ ಎಂ.ಜಿ.ಹೆಗಡೆ ಪ್ರಶ್ನೆಗೆ ವೇದಿಕೆಯಲ್ಲಿದ್ದ ಪಕ್ಷದ ಮುಖಂಡರ ಮೌನವೇ ಉತ್ತರವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.