ಪಕ್ಷ ಸೇರಿದ 8 ಗಂಟೆಯಲ್ಲಿ 'ಕೈ'ಕೊಟ್ರು!
-ಜಿತೇಂದ್ರ ಕುಂದೇಶ್ವರ
ಮಂಗಳೂರು: ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ಬಿಜೆಪಿ ಸೇರಿದ ಎರಡು ಗಂಟೆಯಲ್ಲಿ ಹೊರ ಬಿದ್ದರೆ, ಮಂಗಳೂರಲ್ಲಿ ಶ್ರೀರಾಮಸೇನೆ ಕಾನೂನು ಸಲಹೆಗಾರ ನ್ಯಾಯವಾದಿ ದಿನಕರ ಶೆಟ್ಟಿ ಕಾಂಗ್ರೆಸ್ ಸೇರಿದ 8 ಗಂಟೆ ಒಳಗೆ ಹೊರ ದಬ್ಬಿಸಿಕೊಂಡಿದ್ದಾರೆ.
ಸೋಮವಾರ ಮಧ್ಯಾಹ್ನ 12 ಗಂಟೆ ವೇಳೆಗೆ ನ್ಯಾಯವಾದಿ ದಿನಕರ ಶೆಟ್ಟಿ ಕಾಂಗ್ರೆಸ್ ಬಾವುಟ ಸ್ವೀಕರಿಸಿದ್ದರು. ರಾತ್ರಿ 7.52ಕ್ಕೆ ಸರಿಯಾಗಿ ಶಾಸಕ ಜೆ.ಆರ್.ಲೋಬೊ ಅವರ ಇಮೇಲ್ ಮೂಲಕ 'ಕನ್ನಡಪ್ರಭ' ಕಚೇರಿಗೆ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಇಮೇಲ್ ಮಾಡಿದ್ದಾರೆ.
ಪಬ್ ದಾಳಿಯ ಆರೋಪಿ ಆಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಮುಜುಗರ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಈ ತೀರ್ಮಾನ ಕೈಗೊಂಡಿದೆ. ಕಾಂಗ್ರೆಸ್ನಲ್ಲಿರುವ ಪೂಜಾರಿ ನಿಷ್ಠ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಬಣ ದಿನಕರ ಶೆಟ್ಟಿಯನ್ನು ಪಕ್ಷಕ್ಕೆ ಕರೆತರುವಲ್ಲಿ ಯತ್ನಿಸಿದ್ದು, ಇದೀಗ ಪೂಜಾರಿಯನ್ನು ಪರೋಕ್ಷವಾಗಿ ವಿರೋಧಿಸುತ್ತಿರುವ ಐವನ್ ಡಿಸೋಜ ಬಣ ದಿನಕರ ಶೆಟ್ಟಿ ಸೇರ್ಪಡೆಗೆ ಕಟು ವಿರೋಧ ವ್ಯಕ್ತಪಡಿಸಿದೆ.
ಅಲ್ಪಸಂಖ್ಯಾತರ ಮತಗಳು ಕೈತಪ್ಪಬಹುದು ಎಂಬ ಆತಂಕ ಮುಂದಿಟ್ಟು ದಿನಕರ ಶೆಟ್ಟಿ ಅವರನ್ನು 8 ಗಂಟೆ ಒಳಗೆ ಹೊರ ಹಾಕುವಲ್ಲಿ ಯಶಸ್ವಿಯಾಗಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ನೀಡಿರುವ ಪತ್ರಿಕಾ ಪ್ರಕಟಣೆ ಈ ರೀತಿ ಇದೆ.
'ಮಾ.24ರಂದು ಪುರಭವನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ನ್ಯಾಯವಾದಿ ದಿನಕರ ಶೆಟ್ಟಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದರ ಬಗ್ಗೆ ಗೊಂದಲ ಉಂಟಾಗಿದ್ದು, ಅವರನ್ನು ಪಕ್ಷದ ಸದಸ್ಯರನ್ನಾಗಿ ಸೇರ್ಪಡೆಗೊಳಿಸದಿರಲು ತೀರ್ಮಾನಿಸಲಾಗಿದೆ'
ಐವನ್ ಬಣದ ಆಕ್ಷೇಪ: ನ್ಯಾಯವಾದಿ ದಿನಕರ ಶೆಟ್ಟಿ ಕಾಂಗ್ರೆಸ್ ಸೇರ್ಪಡೆಗೊಂಡ ವಿಚಾರದಲ್ಲಿ ಸೋಮವಾರ ಸಂಜೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಈ ಕುರಿತು ಕೆಪಿಸಿಸಿ ಕಾರ್ಯದರ್ಶಿ ಐವನ್ ಡಿಸೋಜ, ಯುವಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ ಮೊದಲಾದವರು ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಮತ್ತು ಮುಖಂಡರ ಬಳಿ ಆಕ್ಷೇಪ ವ್ಯಕ್ತಪಡಿಸಿದರು.
'ಹಿಂದೂ ಸಂಘಟನೆಗಳ ಕಾರ್ಯಕರ್ತರ ಎಲ್ಲ ಪ್ರಕರಣಗಳ ವಿಚಾರಣೆ ನಡೆಸುವ ವಕೀಲರನ್ನು ಕಾಂಗ್ರೆಸ್ ಪಕ್ಷಕ್ಕೆ ಹೇಗೆ ಸೇರಿಸಿಕೊಂಡಿರಿ. ನೀವು ಮುಸ್ಲಿಂ ಮತದಾರರ ಮತಗಳು ಬೇಕು, ಇನ್ನು ನೀವು ಅವರಿಗೆ (ಮುಸ್ಲಿಮರಿಗೆ)ಹೇಗೆ ಉತ್ತರಿಸುತ್ತೀರಿ' ಎಂದು ಪ್ರಶ್ನಿಸಿದರು. ವಾದ, ವಿವಾದ ನಡೆದ ಬಳಿಕ ಪಕ್ಷದ ಪ್ರಾಥಮಿಕ ಸದಸ್ಯತ್ವ ನೀಡದಿರಲು ನಿರ್ಧರಿಸಿ, ತುರ್ತಾಗಿ ಪತ್ರಿಕೆಗೆ ಇಮೇಲ್ ಸಂದೇಶ ರವಾನಿಸಿದ್ದಾರೆ.
ಪಬ್ ದಾಳಿ ಪ್ರಕರಣ: ಪಬ್ ದಾಳಿಯಲ್ಲಿ ಮೊತ್ತ ಮೊದಲ ಬಾರಿಗೆ ರಾಷ್ಟ್ರೀಯ ಚಾನೆಲ್ಗಳಲ್ಲಿ ಸಮರ್ಥಿಸಿ ಹೇಳಿಕೆ ನೀಡಿದರು. ಇದೇ ಕಾರಣಕ್ಕೆ ಪಬ್ ದಾಳಿ ಆರೋಪ ಪಟ್ಟಿಯಲ್ಲಿ ದಿನಕರ ಶೆಟ್ಟಿ ಅವರನ್ನು 31ನೇ ಆರೋಪಿಯನ್ನಾಗಿ ಹೆಸರಿಸಲಾಗಿತ್ತು. ಪಬ್ ದಾಳಿ ಘಟನೆ ಬಳಿಕ ದಿನಕರ ಶೆಟ್ಟರಿಗೆ ವೃತ್ತಿಯಲ್ಲಿಯೂ ಹೆಸರು ತಂದುಕೊಟ್ಟಿತ್ತು.
ಶ್ರೀರಾಮ ಸೇನೆ ಸಂಘಟನೆಯಲ್ಲಿ ದಿನಕರ ಶೆಟ್ಟಿ ಅಧಿಕೃತವಾಗಿ ಗುರುತಿಸಿಕೊಂಡಿರಲಿಲ್ಲ. ಆದರೆ ಶ್ರೀರಾಮ ಸೇನೆ ಕಾರ್ಯಕರ್ತರ ಎಲ್ಲ ಪ್ರಕರಣಗಳಿಗೆ ವಕೀಲರಾಗಿದ್ದರು. ಪಬ್ ದಾಳಿ ನಡೆದಾಗ ಶ್ರೀರಾಮ ಸೇನೆ ಪರವಾಗಿ ಇಂಗ್ಲಿಷ್ನಲ್ಲಿ ಹೇಳಿಕೆ ನೀಡಲು ಯಾರೂ ಲಭ್ಯರಿಲ್ಲದ ಹಿನ್ನೆಲೆಯಲ್ಲಿ ವಕೀಲನ ನೆಲೆಯಲ್ಲಿ ಸುದ್ದಿವಾಹಿನಿಗಳಿಗೆ ಹೇಳಿಕೆ ನೀಡಿದ್ದರು. 'ಪಬ್ನಲ್ಲಿ ಮದ್ಯ ಸೇವಿಸಿ ಯುವತಿಯರು ಹಾಳಾಗುತ್ತಿದ್ದಾರೆ. ಪಬ್ ಸಂಸ್ಕೃತಿ ಹೆಚ್ಚಾದರೆ ಇದೇ ರೀತಿ ದಾಳಿಗಳು ನಡೆಯುತ್ತವೆ' ಎಂಬ ಹೇಳಿಕೆ ನೀಡಿದ್ದರು. ಸುದ್ದಿವಾಹಿನಿಗಳು ಹೇಳಿಕೆ ನೀಡಿದ ದಿನಕರ ಶೆಟ್ಟಿಯನ್ನೇ ಆರೋಪಿ, ಬಂಧಿಸುವಂತೆ ಪೊಲೀಸರ ಮೇಲೆ ಒತ್ತಡ ಹೇರಿದ್ದವು. ಇದೇ ಒತ್ತಡ ಹಿನ್ನೆಲೆ ಆರೋಪಪಟ್ಟಿಯಲ್ಲಿ ದಿನಕರ ಶೆಟಿಯನ್ನು 31ನೇ ಆರೋಪಿಯನ್ನಾಗಿ ದಾಖಲಿಸಿದ್ದರು.
ಹಿಂದುತ್ವಕ್ಕಿಂತ ನೇತ್ರಾವತಿ ಹೆಚ್ಚು: ನೇತ್ರಾವತಿ ನದಿ ಉಳಿವಿಗಾಗಿ, ಎತ್ತಿನಹೊಳೆ ಯೋಜನೆ ವಿರೋಧಿಸಲು ಕಾಂಗ್ರೆಸ್ ಸೇರಿದ್ದೇನೆ. ಜನಾರ್ದನ ಪೂಜಾರಿ ಮಾತ್ರ ರಾಜಕೀಯವಾಗಿ ಎತ್ತಿನಹೊಳೆ ಜಾರಿ ಮಾಡದಿರಲು ಸಾಧ್ಯ. ನನಗೆ ಈಗ ಹಿಂದುತ್ವ ವಿಚಾರಕ್ಕಿಂತ ನೇತ್ರಾವತಿ ನದಿ ವಿಚಾರವೇ ಹೆಚ್ಚು ಎಂದು ದಿನಕರ ಶೆಟ್ಟಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಹೊಳೆಯಲ್ಲಿ ಬಂದರು!: ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ನೇತೃತ್ವದಲ್ಲಿ ನಡೆದ ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟದ ವೇದಿಕೆಗಳಲ್ಲಿ ದಿನಕರ ಶೆಟ್ಟಿ ಸರ್ವಕಾಲೇಜ್ ಸಂಘದ ಪರವಾಗಿ ಕಾಣಿಸಿಕೊಂಡಿದ್ದರು. ಹೋರಾಟದ ಸಂಬಂಧ ಕ್ರಮೇಣ ಇದು ರಾಜಕೀಯ ಸಂಬಂಧವಾಗಿ ಬೆಳೆಯಲು ಪೂಜಾರಿ ಕಟ್ಟಾ ಬೆಂಬಲಿಗ ವಿಜಯಕುಮಾರ್ ಶೆಟ್ಟಿ ಕಾರಣ.
ತಡೆಯಾಜ್ಞೆ!: ಆದರೆ ಹೈಕೋರ್ಟ್ನಲ್ಲಿ ಇದನ್ನು ಪ್ರಶ್ನಿಸಿದ ದಿನಕರ ಶೆಟ್ಟಿ ಪ್ರಕರಣ ವಿಚಾರಣೆಗೆ ತಡೆಯಾಜ್ಞೆ ತಂದಿದ್ದರು. ತಾನು ಪಬ್ ದಾಳಿಯಲ್ಲಿ ಭಾಗವಹಿಸಿಲ್ಲ ನನ್ನ ಹೆಸರು ಸೇರ್ಪಡೆಗೊಳಿಸಿದ್ದು ಸರಿ ಇಲ್ಲ ಎಂದು ವಾದಿಸಿದ್ದರು. ಹೀಗಾಗಿ ಪಬ್ ದಾಳಿ ನಡೆದು 5 ವರ್ಷ ಆದರೂ ವಿಚಾರಣೆ ಇನ್ನೂ ಆರಂಭವಾಗಿಲ್ಲ.
ಕಾದು ನೋಡೋಣ
ನಮ್ಮನ್ನು ಕಂಡರೆ ಆಗದ ಕಾಂಗ್ರೆಸ್ನಲ್ಲಿರುವ ವಿರೋಧಿ ಬಣವೇ ಸೇರ್ಪಡೆಗೆ ವಿರೋಧಿಸುತ್ತಿದೆ. ನೋಡೋಣ ಮುಂದೆ ಏನಾಗುತ್ತದೆ, ನೇತ್ರಾವತಿ ನದಿ ತಿರುವು ವಿರುದ್ಧ ಹೋರಾಟ ಮುಂದುವರಿಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

