ದಕ್ಷಿಣ ಕನ್ನಡ

ರಾಜಕಾರಣಕ್ಕಿಂತ ಅಭಿವೃದ್ಧಿ ಕಾರ್ಯತಂತ್ರ

Published On :

-ದಿನೇಶ್ ಹೆಗಡೆ
ಕನ್ನಡಪ್ರಭ ವಾರ್ತೆ, ಹೊನ್ನಾವರ, ಮಾ. 24
ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ವತಂತ್ರವಾಗಿ ಕಣಕ್ಕಿಳಿದು ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಅರ್ಹ ಗೆಲುವು ಸಾಧಿಸಿ ಹೊಸ ಇತಿಹಾಸ ಬರೆದ ಶಾಸಕ ಮಂಕಾಳ ಎಸ್. ವೈದ್ಯ ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಯಾವೊಂದು ಪಕ್ಷ ರಾಜಕಾರಣಕ್ಕಿಂತ ತಮ್ಮ ಕ್ಷೇತ್ರದ ಅಭಿವೃದ್ಧಿ, ಜನಹಿತಕ್ಕಾಗಿ ಕಾರ್ಯತಂತ್ರ ಅನುಸರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಈ ವರೆಗೂ ಯಾವುದೇ ಒಂದು ಪಕ್ಷಕ್ಕೆ ಅಧಿಕೃತವಾಗಿ ಸೇರಿ ಗುರುತಿಸಿಕೊಳ್ಳದೇ ಇರುವ ಮಂಕಾಳ ಎಸ್. ವೈದ್ಯ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಒಲವು, ಕಾರ್ಯತಂತ್ರದ ನಿಲುಗಳೇನು ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ. ನನಗೆ ರಾಜಕೀಯ ಪಕ್ಷಗಳಿಗಿಂತ ನನ್ನ ಮತಕ್ಷೇತ್ರದ ಅಭಿವೃದ್ಧಿ ಮತ್ತು ಮತದಾರರ ಹಿತ ಮುಖ್ಯವಾಗಿದೆ. ಭಟ್ಕಳ, ಮುರ್ಡೇಶ್ವರ, ಇಡಗುಂಜಿಯಂಥ ಹೆಸರಾಂತ ಊರುಗಳು ನನ್ನ ಕ್ಷೇತ್ರದಲ್ಲಿದ್ದಂತೆ, ಇನ್ನೂ ವಿದ್ಯುತ್ ಕಾಣದ, ರಸ್ತೆಯಿಲ್ಲದ ಹಲವು ಹಳ್ಳಿಗಳು ನನ್ನ ಕ್ಷೇತ್ರದಲ್ಲಿವೆ. ಅಂತಹ ಕುಗ್ರಾಮ ನಿವಾಸಿಗಳ ನಿರೀಕ್ಷೆಗೆ ಸ್ಪಂದಿಸಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಜವಾಬ್ದಾರಿ ತನ್ನ ಮೇಲಿದೆ. ಸರ್ಕಾರಕ್ಕೆ ಉತ್ತಮ ಆದಾಯ ತರುವ ಅರಣ್ಯ, ನದಿ, ಅಣೆಕಟ್ಟು, ಕಡಲತೀರ ನನ್ನ ಕ್ಷೇತ್ರದಲ್ಲಿವೆ. ಇವುಗಳನ್ನು ಬಳಸಿಕೊಂಡು ಉದ್ಯೋಗ ಸೃಷ್ಟಿಸಬೇಕಾಗಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸಾಮರಸ್ಯ ಉಳಿಸಿಕೊಳ್ಳಬೇಕಾಗಿದೆ. ಅವಶ್ಯಕವಾಗಿರುವ ನೀರಾವರಿ ಯೋಜನೆ ಮೊದಲಾದ ಮೂಲಭೂತ ಸೌಲಭ್ಯಗಳನ್ನು ನನ್ನ ಕ್ಷೇತ್ರಕ್ಕೆ ಒದಗಿಸಿಕೊಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಾಯ ಬೇಕಾಗಿದೆ. ಒಂದು ಪಕ್ಷ ಅಥವಾ  ಪಂಗಡಕ್ಕೆ ಮೀಸಲಾಗುವ ಬದಲು ಒಟ್ಟಾರೆ ಜನಹಿತಕ್ಕಾಗಿ ಸ್ವತಂತ್ರವಾಗಿ ಸದ್ಯ ಉಳಿಯ ಬಯಸಿದ್ದೇನೆ. ಇದಕ್ಕಿಂತ ಮಿಗಿಲಾಗಿ ಎಲ್ಲ ಪಕ್ಷದವರೂ ದೊಡ್ಡ ಸಂಖ್ಯೆಯಲ್ಲಿ ನನಗೆ ಬೆಂಬಲ ನೀಡಿದ ಕಾರಣ ಭಾರಿ ಬಹುಮತ ದೊರೆತು ಗೆಲುವು ಪಡೆಯುವಂತಾಯಿತು. ಇನ್ನೂ ಒಂದು ವರ್ಷವಾಗಿಲ್ಲ. ರಾಜ್ಯ ಸರ್ಕಾರದ ಮತ್ತು ಜಿಲ್ಲಾ ಮಂತ್ರಿಗಳ ಸಹಾಯ, ಸಹಕಾರದಿಂದ ಅಭಿವೃದ್ಧಿ ಕೆಲಸ ಆರಂಭವಾಗಿದೆ.
ಕೇಂದ್ರ ಸರ್ಕಾರದ ಸಹಾಯ ಪಡೆಯಲು ಯೋಜನೆ ಸಿದ್ಧಪಡಿಸಿದ್ದು ಚುನಾವಣೆ ಮುಗಿದ ಮೇಲೆ ಅದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇನೆ. ನನಗೆ ಮತ ಹಾಕಿದವರಲ್ಲಿ ಅಭಿಮಾನಿಗಳು, ಎಲ್ಲ ಪಕ್ಷದ ಮತದಾರರು, ಕಾರ್ಯಕರ್ತರೂ ಇದ್ದಾರೆ. ಆದ್ದರಿಂದ ರಾಜಕೀಯ ಒಲವನ್ನು ಹೇಗೆ ಹೇಳಲಿ? ವಿಧಾನಸಭಾ ಚುನಾವಣೆಯಲ್ಲಿ ನಿಮಗೆ ಮತ ಹಾಕಿದ್ದೇವೆ. ಮತ್ತೆ ಚುನಾವಣೆ ಬಂದರೆ ನಿಮಗೆ ಮತ ಹಾಕುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ನಮಗೆ ಬೇಕಾದವರಿಗೆ ಮತ ಹಾಕುತ್ತೇವೆ ಅನ್ನುವವರಿದ್ದಾರೆ. ಅಭ್ಯರ್ಥಿ, ಪಕ್ಷ, ಕೆಲಸ ಮಾಡಬಲ್ಲವರನ್ನು ನೋಡಿ ಮತದಾರರ ಸಾಮಾನ್ಯ ಅಭಿಪ್ರಾಯವನ್ನು ಅರಿತು ಮುಂದುವರಿಯಬೇಕಾದ ಸಂದಿಗ್ಧತೆ ಇದೆ. ಇವೆಲ್ಲವುಗಳೊಂದಿಗೆ ನನಗೆ ಕ್ಷೇತ್ರದ ಅಭಿವೃದ್ಧಿ ಮತ್ತು ಮತದಾರರ ಹಿತಮುಖ್ಯ. ಕ್ಷೇತ್ರದ ಜನತೆಯ ಆಶಯಕ್ಕೆ ಮನ್ನಣೆ ನೀಡುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.