ದಕ್ಷಿಣ ಕನ್ನಡ

ಸಾಲಮೇಳ ನಡೆಸಿದ ಪೂಜಾರಿಗೆ ಸಾಲ ಇಲ್ಲ!

Published On :

ಸ್ಥಿರಾಸ್ತಿ, ಚರಾಸ್ತಿಯಲ್ಲಿಯೂ ಐದು ಪಟ್ಟು ಪತ್ನಿಯೇ ಶ್ರೀಮಂತೆ
ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಬಿ.ಜನಾರ್ದನ ಪೂಜಾರಿ ವಾರ್ಷಿಕ ತಲಾ ಆದಾಯ ರು. 6 ಲಕ್ಷ. ಕೇಂದ್ರ ಸಚಿವರಾಗಿದ್ದಾಗ ಸಾಲ ಮೇಳ ನಡೆಸಿ ಸುದ್ದಿಯಾಗಿದ್ದ ಜನಾರ್ದನ ಪೂಜಾರಿ ಯಾವ ಬ್ಯಾಂಕ್‌ನಲ್ಲಿಯೂ ಸಾಲ ಇಲ್ಲ. ಚರಾಸ್ತಿಯಲ್ಲಿ ಪತ್ನಿಯೇ ಶ್ರೀಮಂತೆ.
 ಬಿ.ಸಿ.ರೋಡ್ ಭಂಡಾರಿಬೆಟ್ಟು ಚೆನ್ನಮ್ಮ ಕುಟೀರ ನಿವಾಸಿ ಜರ್ನಾದನ ಪೂಜಾರಿ ಬಿಕಾಂ ಎಲ್‌ಎಲ್‌ಬಿ ಪದವೀಧರು. ವಾರ್ಷಿಕ ಆದಾಯ ತೆರಿಗೆ ಲೆಕ್ಕಕ್ಕೆ 6 ಲಕ್ಷ ಆದಾಯ ತೋರಿಸಿದ್ದಾರೆ. ಜನಾರ್ದನ ಪೂಜಾರಿ ಒಟ್ಟು ಚರಾಸ್ತಿ 2,89,084. ಕೈಯಲ್ಲಿ ನಗದು 10 ಸಾವಿರ, ಪತ್ನಿ ಬಳಿ 10 ಸಾವಿರ, ಪತ್ನಿ ಬಳಿ ಎಲ್‌ಐಸಿ ಪಾಲಿಸಿ 50 ಸಾವಿರ.
 ಪತ್ನಿ ಬಳಿ 7.8 ಲಕ್ಷ ಮೌಲ್ಯದ 300 ಗ್ರಾಂ ಚಿನ್ನಾಭರಣ, ಚರಾಸ್ತಿ 50 ಸಾವಿರ. ಪತ್ನಿಯ ಒಟ್ಟು ಚರಾಸ್ತಿ 16,53,200. ಪೂಜಾರಿ ಖರೀದಿಸಿದ ಸ್ಥಿರಾಸ್ತಿ ಮೌಲ್ಯ 1,80,00, ಪತ್ನಿ ಖರೀದಿಸಿದ ಸ್ಥಿರಾಸ್ತಿ ಮೌಲ್ಯ 6,31,500. ಪೂಜಾರಿ ಬಳಿ 8 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದ್ದರೆ, ಪತ್ನಿ ಬಳಿ 25 ಲಕ್ಷದ ಸ್ಥಿರಾಸ್ತಿ ಇದೆ. ಎಸ್‌ಬಿಐ ಬ್ಯಾಂಕ್‌ನಲ್ಲಿ 2,29,084 ನಗದು, ಭಾರತ್ ಕೊ ಅಪರೇಟಿವ್ ಬ್ಯಾಂಕ್ ಮುಂಬಯಿಯಲ್ಲಿ 50 ಸಾವಿರ ನಗದು. ತಮಿಳ್ನಾಡು ಮರ್ಕೈಂಟೈಲ್ ಬ್ಯಾಂಕ್‌ನಲ್ಲಿ 2,60,400, ಭಾರತ್ ಕೊ ಅಪರೇಟಿವ್ ಬ್ಯಾಂಕ್‌ನಲ್ಲಿ 5 ಲಕ್ಷ ಫಿಕ್ಸೆಡ್ ಠೇವಣಿ. ಈಗಿನ ಮಾರುಕಟ್ಟೆ ಮೌಲ್ಯದಲ್ಲಿ 24 ಲಕ್ಷದ ಬೆಲೆ ಖರೀದಿಸಿದ ಆಸ್ತಿ. 1960ರಿಂದ ಬಾಡಿಗೆದಾರನಾಗಿ ಇದ್ದ ಖರೀದಿಸಿದ ಮನೆ ಈಗ 8 ಲಕ್ಷ. ಪತ್ನಿ ಒಟ್ಟು ಸ್ಥಿರಾಸ್ತಿ 31.31 ಲಕ್ಷ.

ಜನಾರ್ದನ ಪೂಜಾರಿ ನಾಮಪತ್ರ ಸಲ್ಲಿಕೆ
ಮಂಗಳೂರು: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಬಿ.ಜನಾರ್ದನ ಪೂಜಾರಿ ಬುಧವಾರ ಜಿಲ್ಲಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆರೋಗ್ಯ ಸಚಿವ ಯು.ಟಿಖಾದರ್, ಶಾಸಕರಾದ ಜೆ.ಆರ್.ಲೋಬೊ ಮತ್ತು ವಸಂತ ಬಂಗೇರ ಜತೆಗೆ ಇದ್ದರು.
 ಈ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿ ಪೂಜಾರಿ, ಪಕ್ಷದ ಕಾರ್ಯಕರ್ತರಿಂದ ಹಿಡಿದು ಸಚಿವರ ವರೆಗೆ ನಮ್ಮ ಪಾದಯಾತ್ರೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ನಾವು ಕೋಮು ಸೌಹಾರ್ದ ಮೂಲಕ ದೇಶವನ್ನು ಕಟ್ಟಬೇಕು. ವಿಭಜಿಸುವ ರಾಜಕೀಯ ಮಾಡಬಾರದು. ಹುಮ್ಮಸ್ಸಿನಿಂದ ಪ್ರಚಾರ ಮಾಡುತ್ತಿದ್ದಾರೆ. ಶಾಸಕರು, ಸಚಿವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇಷ್ಟು ಹುಮ್ಮಸ್ಸಿನಿಂದ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದನ್ನು ನಾನು ನೋಡಿಲ್ಲ. ಹಿರಿಯರ ಸಲಹೆ ಯಂತೆ ಆಡಂಬರ ಇಲ್ಲದೆ ಯಾರಿಗೂ ತೊಂದರೆ ಆಗದಂತೆ ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ್ದೇವೆ. ನಾಲ್ಕು ಸೆಟ್‌ಗಳಲ್ಲಿ ನಾಮಪತ್ರ ಸಲ್ಲಿಸಿದ್ದೇನೆ ಎಂದರು.
ಧೈರ್ಯ ಇಲ್ಲ: ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಮೋದಿ ಹೆಸರಲ್ಲಿ ಮತ ಯಾಚಿಸುತ್ತಿದೆ. ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಕೇಳುತ್ತಿಲ್ಲ. ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ತನ್ನ ಪರವಾಗಿ ಮತ ಕೇಳಿ ಗೆಲ್ಲುವ ಧೈರ್ಯ ಇಲ್ಲ. ಉಳಿದ ಪಕ್ಷಗಳು ಸ್ಪರ್ಧೆ ಇಲ್ಲ, ಅವರಿಗೆ ಸ್ಪರ್ಧಿಸುವ ಹಕ್ಕಿದೆ. ಸ್ಪರ್ಧೆ ಮಾತ್ರ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಎಂದು ವಿಶ್ಲೇಷಿಸಿದರು. ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಹೋಮ, ಹವನ ಬಳಿಕ ಉಳ್ಳಾಲ ದರ್ಗಾ ಮತ್ತು ಮಿಲಾಗ್ರಿಸ್ ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಡೀಸಿ ಕಚೇರಿಯಲ್ಲಿ ಪ್ರಚಾರ!: ಜಿಲ್ಲಾಧಿಕಾರಿ ಕಚೇರಿಯ ಮೂರು ಅಂತಸ್ತುಗಳಲ್ಲಿರುವ ಎಲ್ಲ ಕಚೇರಿಗಳಿಗೂ ಹೊಕ್ಕ ಜನಾರ್ದನ ಪೂಜಾರಿ, ಎಲ್ಲ ಉದ್ಯೋಗಿಗಳ ಜತೆ ಮಾತುಕತೆ ನಡೆಸಿದರು. ಹೇಗಿದ್ದೀರಿ? ಚೆನ್ನಾಗಿದ್ದೀರಾ ಎಂದು ಕುಶಲೋಪರಿ ಮಾಡುವ ಮೂಲಕ ಅಲ್ಲಿಯೂ ಚುನಾವಣೆ ಪ್ರಚಾರ ನಡೆಸಿಬಿಟ್ಟರು.

ಪಿಸಿಪಿಐಆರ್ ಪರ ಪೂಜಾರಿ: ಟ್ರಸ್ಟ್
ಬೆಳ್ತಂಗಡಿ: ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ವಿರೋಧಿಸಿತ್ತಿರುವ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಸಾವಿರಾರು ಎಕ್ರೆ ಭೂಮಿ ಕಬಳಿಸುವ ಪೆಟ್ರೋಲಿಯಂ, ಕೆಮಿಕಲ್, ಪೆಟ್ರೋಕೆಮಿಕಲ್ ಇನ್‌ವೆಸ್ಟ್‌ಮೆಂಟ್ ರೀಜನ್ (ಪಿಸಿಪಿಐಆರ್) ಯೋಜನೆ ಅನುಷ್ಠಾನಗೊಳಿಸುವುದಾಗಿ ಹೇಳಿರುವುದು ದಿಗ್ಭ್ರಮೆ ಮೂಡಿಸಿದೆ ಎಂದು ನಾಗರಿಕ ಸೇವಾ ಟ್ರಸ್ಟ್ ಮತ್ತು  ಸಹಸಂಘಟನೆಗಳು ಪ್ರತಿಕ್ರಿಯಿಸಿವೆ. ಈ ಯೋಜನೆಗೆ ಮಂಗಳೂರು, ಬಂಟ್ವಾಳ, ಉಡುಪಿ ತಾಲೂಕಿನ 74 ಸಾವಿರ ಎಕ್ರೆ ಭೂಮಿ ಸ್ವಾಧೀನ ಪಡಿಸಬೇಕಾಗುತ್ತದೆ. ಸುಮಾರು 3 ಲಕ್ಷ ಕೋಟಿ ರುಪಾಯಿ ಈ ಯೋಜನೆಗೆ ತಗಲಲಿದೆ. ಇದರಿಂದ ಜಿಲ್ಲೆಯ ಕೃಷಿ ಭೂಮಿ ನಾಶವಾಗುವುದಲ್ಲದೆ ಮೀನುಗಾರಿಕೆ, ಪಶ್ಚಿಮಘಟ್ಟಕ್ಕೆ ಭಾರಿ ಅನಾಹುತ ಸಂಭವಿಸಲಿದೆ ಎಂದು ಹೇಳಿದ್ದಾರೆ.

ಪೂಜಾರಿಯಿಂದ ಬಿಲ್ಲವ ಕಾರ್ಡ್ ಬಳಕೆ: ಆರೋಪ
ಮಂಗಳೂರು: ನಳಿನ್ ಕುಮಾರ್ ಕಟೀಲ್‌ರನ್ನು ನಳಿನ್ ಕುಮಾರ್ ಶೆಟ್ಟಿ ಎಂದು ಸಂಬೋಧಿಸುವ ಮೂಲಕ ಸೋಲಿನ ಭಯದಿಂದ ಜನಾರ್ದನ ಪೂಜಾರಿ ಬಿಲ್ಲವ ಕಾರ್ಡ್ ಬಳಸುತ್ತಿದ್ದಾರೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಲೇವಡಿ ಮಾಡಿದ್ದಾರೆ.
ಮಂಗಳೂರು ನಗರ ಡಿವೈಎಫ್‌ಐ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಈ ಚುನಾವಣೆಯಲ್ಲಿ ಬಿಲ್ಲವ, ಬಂಟ ಜಾತಿ ವಿಭಾಗಿಸಿ ಜಾತಿ ಅಧಾರದಲ್ಲಿ ಗೆಲ್ಲುವ ನಿರ್ಲಜ್ಜ ರಾಜಕಾರಣವನ್ನು ಪೂಜಾರಿ ಮಾಡುತ್ತಿದ್ದಾರೆ. ಬಿಜೆಪಿಯ ಮತೀಯ ರಾಜಕೀಯದಿಂದ ಜಿಲ್ಲೆಯ ಸೌಹಾರ್ದ ಬದುಕಿಗೆ ಧಕ್ಕೆ ಉಂಟಾಗಿದೆ. ಕಾಂಗ್ರೆಸ್ ಕೂಡ ಅದೇ ಹಾದಿ ತುಳಿಯುತ್ತಿದೆ. ಆದ್ದರಿಂದ ಸಿಪಿಎಂ ಅಭ್ಯರ್ಥಿ ಯಾದವ ಶೆಟ್ಟಿ ಅವರನ್ನು ಬೆಂಬಲಿಸುವಂತೆ ನಿರ್ಧರಿಸಲಾಯಿತು. ಇಮ್ತಿಯಾಜ್, ಸಂತೋಷ್ ಬಜಾಲ್, ಸಾದಿಕ್ ಕಣ್ಣೂರು, ಮನೋಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.