ದಕ್ಷಿಣ ಕನ್ನಡ

ಸರ್ಕಾರಿ ನಿಲ್ದಾಣದಲ್ಲಿ ಖಾಸಗಿ ವಾಹನ ದರ್ಬಾರ್!

Published On :

ಬೆಳ್ತಂಗಡಿ: ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಬಸ್ ನಿಲ್ದಾಣಗಳೇನೋ ಇವೆ. ಆದರೆ, ಪ್ರಯಾಣಿಕೋಪಯೋಗಿ ಅಗಿರುವುದು ವಿರಳ.
ಗ್ರಾಮೀಣ ಪ್ರದೇಶಗಳಲ್ಲಿ ಬಸ್ ನಿಲ್ದಾಣದವರೆಗೆ ಬಸ್‌ಗಳು ಬರುವುದೇ ಇಲ್ಲ. ಅನತಿ ದೂರದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತವೆ. ಮಳೆಗಾಲದಲ್ಲಂತೂ ಪ್ರಯಾಣಿಕರಿಗೆ ಅದರೊಳಗೆ ನಿಲ್ಲುವುದೇ ಸಾಧ್ಯವಿಲ್ಲ. ಬೇಸಗೆಯಲ್ಲಿ ಬೆಳಗ್ಗೆ ಒಂದು ಕಡೆಯಿಂದ ಬಿಸಿಲು ಹೊಡೆದರೆ ಸಂಜೆ ಇನ್ನೊಂದು ಕಡೆಯಿಂದ ಬಿಸಿಲು ತಟ್ಟುತ್ತದೆ. ಹೀಗಾಗಿ ಜನರು ಹೆಚ್ಚಾಗಿ ಪಕ್ಕದಲ್ಲಿರುವ ವೃಕ್ಷಗಳಡಿಯನ್ನೇ ಆಶ್ರಯಿಸಬೇಕಾಗುತ್ತದೆ.
ಖಾಸಗಿ ಕಾರುಬಾರು: ಬೆಳ್ತಂಗಡಿ ಪಟ್ಟಣದಲ್ಲಿ ಸುಸಜ್ಜಿತ ಬಸ್ ನಿಲ್ದಾಣವನ್ನು ಪಟ್ಟಣ ಪಂಚಾಯಿತಿ ಕಟ್ಟಿದೆ. ನಿಲ್ದಾಣಕ್ಕೆ ಕಾಂಕ್ರಿಟ್ ಹಾಸಲಾಗಿದೆ. ಕಟ್ಟಡದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ, ಶೌಚಾಲಯ ಇದೆ. ಆದರೆ, ನಿಲ್ದಾಣದಲ್ಲಿ ಸರ್ಕಾರಿ ಬಸ್‌ಗಳನ್ನು ನಿಲ್ಲಿಸಲು ಚಾಲಕರು, ನಿರ್ವಾಹಕರು ಹರಸಾಹಸ ಮಾಡಬೇಕಾಗುತ್ತದೆ. ಯಾಕೆಂದರೆ ನಿಲ್ದಾಣದ ಸುತ್ತಲೂ ಖಾಸಗಿ ವಾಹನಗಳ ಮಾಲೀಕರು ಇದು ಸ್ವಂತ ಸ್ಥಳವೆಂಬಂತೆ ವಾಹನಗಳನ್ನು ನಿಲ್ಲಿಸಿ ನೆಟ್ಟಗೆ ತಮ್ಮ ವ್ಯವಹಾರಕ್ಕೆ ತೆರಳುತ್ತಾರೆ. ಸರ್ಕಾರಿ ಬಸ್‌ಗಳನ್ನು ನಿಲ್ದಾಣದಲ್ಲಿ ವ್ಯವಸ್ಥಿತವಾಗಿ ನಿಲ್ಲಿಸಲು ಎಷ್ಟೋ ಬಾರಿ ಸಾರಿಗೆ ನಿಯಂತ್ರಕರೇ ದ್ವಿಚಕ್ರ ವಾಹನಗಳನ್ನು ಸರಿಸಿ ಜಾಗ ಮಾಡಿದ್ದೂ ಉಂಟು.
ಸಾರಿಗೆ ನಿಯಂತ್ರಕರು ಇಲ್ಲಿನ ಪಟ್ಟಣ ಪಂಚಾಯಿತಿಗೆ ನಿಲ್ದಾಣಕ್ಕೆ ಖಾಸಗಿ ವಾಹನಗಳ ನಿಲುಗಡೆ ನಿರ್ಬಂಧಿಸಬೇಕೆಂದು ಮನವಿ ಮಾಡಿದ್ದರೂ ಅದು ಕಸದ ಬುಟ್ಟಿಗೆ ಸೇರಿದೆ. ಸರ್ಕಾರಿ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳು ನಿಲುಗಡೆ ಮಾಡಿವೆ ಎಂದು ಪಂ.ಮುಖ್ಯಾಧಿಕಾರಿಗೆ ಗೊತ್ತಾಗಿ ಅವರು ಬರುವ ಹೊತ್ತಿಗೆ ವಾಹನಗಳು ಜಾಗ ಖಾಲಿ ಮಾಡಿರುತ್ತವೆ.
ಇದರಿಂದಾಗಿ ಬಸ್‌ಗಳನ್ನು ನಿಲ್ಲಿಸುವ ವೇಳೆ ಖಾಸಗಿ ವಾಹನಗಳಿಗೆ ಡಿಕ್ಕಿಯಾಗಿ ಜಗಳದ ಸನ್ನಿವೇಶ ನಿರ್ಮಾಣ ಎಷ್ಟೋ ಬಾರಿ ಆಗಿದೆ.
ನಿಲ್ಲಲು ಜಾಗವಿಲ್ಲ: ಉಜಿರೆಯಲ್ಲಿ ಚಾರ್ಮಾಡಿ ಕಡೆ ಹೋಗುವ ಪ್ರಯಾಣಿಕರಿಗೆ ನಿಲ್ಲಲು ಬಸ್ ನಿಲ್ದಾಣವೇ ಇಲ್ಲ. ಬಸ್‌ಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತವೆ.
ಧರ್ಮಸ್ಥಳ ಕಡೆಗೆ ಹೋಗುವವರಿಗೆ ಕಾಲೇಜು ರಸ್ತೆಯಲ್ಲಿ ರೋಟರಿ ಕ್ಲಬ್‌ನವರು ಕಟ್ಟಿಸಿದ ಬಸ್ ನಿಲ್ದಾಣವಿದ್ದರೂ ಅಲ್ಲಿ ಖಾಸಗಿ ಜೀಪು, ರಿಕ್ಷಾಗಳು ನಿಂತಿರುತ್ತವೆ ಅಥವಾ ಕಸ ತುಂಬಿರುತ್ತದೆ (ಈ ಬಗ್ಗೆ 'ಕನ್ನಡಪ್ರಭ' ಈ ಹಿಂದೆ ವರದಿ ಮಾಡಿತ್ತು.) ಇಲ್ಲಿಯೂ ಬಸ್‌ಗಳು ರಸ್ತೆಯಲ್ಲಿಯೇ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕಾಗುತ್ತದೆ.
ಗುರುವಾಯನಕೆರೆ: ಗುರುವಾಯನಕೆರೆ ಬಸ್ ನಿಲ್ದಾಣದ್ದು ಸ್ಥಿತಿಯೇ ಬೇರೆ. ಪ್ರಯಾಣಿಕರಿಗೆ ಕುಳಿತುಕೊಳ್ಳಲು ಕಟ್ಟಡವಿದ್ದರೂ ಅದರ ಸುತ್ತಲೂ ಆಟೋ ರಿಕ್ಷಾಗಳು ಘೇರಾವ್ ಹಾಕಿ ನಿಂತಿರುತ್ತವೆ. ಬಸ್ ಬಂದಾಕ್ಷಣ ಪ್ರಯಾಣಿಕರು ರಿಕ್ಷಾಗಳ ಎಡೆಯಿಂದ ಝಿಗ್‌ಝಾಗ್ ರೀತಿಯಲ್ಲಿ ಬಂದು ಬಸ್ ಏರಬೇಕಾಗುತ್ತದೆ.
ಇದರ ಉಸಾಬರಿಯೇ ಬೇಡೆವೆಂದು ಪ್ರಯಾಣಿಕರು ರಸ್ತೆಯಲ್ಲಿಯೇ ನಿಂತು ಬಸ್ ಬರುವಿಕೆ ಕಾಯುತ್ತಾ ನಿಲ್ಲುತ್ತಾರೆ. ಇನ್ನು ಮಂಗಳೂರು, ಉಪ್ಪಿನಂಗಡಿ ಹೋಗುವ ಪ್ರಯಾಣಿಕರಿಗೆ ಬಸ್ ನಿಲ್ದಾಣವೇ ಇಲ್ಲ. ಅಂಗಡಿಗಳ ಎದುರು ಕಾಯುತ್ತಾ ನಿಲ್ಲಬೇಕಾದ ಪರಿಸ್ಥಿತಿ ಇಲ್ಲಿದೆ.
ಧರ್ಮಸ್ಥಳ ಸುಸಜ್ಜಿತ: ಧರ್ಮಸ್ಥಳದಲ್ಲಿ ಕ್ಷೇತ್ರದ ಮಹಾದ್ವಾರದ ಒಳಗೆ ಒಂದು ವಿಶಾಲ ಬಸ್ ನಿಲ್ದಾಣವಿದ್ದು, ಪ್ರಯಾಣಿಕರಿಗೆ ಅನುಕೂಲಕರವಾಗಿಯೇ ಇದೆ. ಅಲ್ಲದೆ ಬಹು ದೂರದ ಪ್ರಯಾಣಿಸುವವರಿಗೆ ಕ್ಷೇತ್ರದಿಂದ ಒಂದು ಕಿ.ಮೀ .ದೂರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲಾಗಿದೆ.

 ದೀಪಕ್ ಅಳದಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.